ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OnePlus 11: ಕಾರ್ಯಾಚರಣೆ ಉತ್ತಮ- ಕ್ಯಾಮೆರಾ ಸುಧಾರಣೆಗಿದೆ ಅವಕಾಶ

Last Updated 8 ಏಪ್ರಿಲ್ 2023, 18:05 IST
ಅಕ್ಷರ ಗಾತ್ರ

ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಮುಂಚೂಣಿಯಲ್ಲಿ ಇರುವ ಒನ್‌ಪ್ಲಸ್ ಕಂಪನಿ ಈಚೆಗೆ ಬಿಡುಗಡೆ ಮಾಡಿರುವ ಒನ್‌ಪ್ಲಸ್‌ 11 5ಜಿ (OnePlus 11 5G) ಸ್ಮಾರ್ಟ್‌ಫೋನ್‌ ಹೊಸ ವಿನ್ಯಾಸ, ವೇಗದ ಕಾರ್ಯಾಚರಣೆ, ಆಡಿಯೊ ಕ್ಲಾರಿಟಿ, ಬ್ಯಾಟರಿ ಬಾಳಿಕೆಯ ನಿಟ್ಟಿನಲ್ಲಿ ಗಮನ ಸೆಳೆಯುತ್ತದೆ.

ವಿನ್ಯಾಸದ ದೃಷ್ಟಿಯಿಂದ ಆಕರ್ಷಕವಾಗಿದೆ. ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಭಿನ್ನವಾಗಿದೆ. 6.7 ಇಂಚು 120 ಹರ್ಟ್ಸ್‌ ಸೂಪರ್‌ ಫ್ಲ್ಯೂಯಿಡ್‌ ಅಮೊ ಎಲ್‌ಇಡಿ ಪರದೆ ಇದೆ. ಸೆಲ್ಫಿ ಕ್ಯಾಮೆರಾ ಸ್ಕ್ರೀನ್‌ನ ಎಡಭಾಗದ ತುದಿಯಲ್ಲಿ ಅಳವಡಿಸಲಾಗಿದೆ. ಎಡಭಾಗದ ಸೈಡ್‌ನಲ್ಲಿ ವಾಲ್ಯುಂ ಬಟನ್‌ಗಳಿವೆ. ಬಲಭಾಗದ ಸೈಡ್‌ನಲ್ಲಿ ಪವರ್‌ ಆಫ್‌ ಬಟನ್‌ ಮೇಲ್ಭಾಗದಲ್ಲಿ ಮೊಬೈಲ್‌ ಅನ್ನು ರಿಂಗ್‌, ವೈಬ್ರೆಟ್‌, ಸೈಲೆಂಟ್‌ ಮೋಡ್‌ಗೆ ಇಡಲು ಅನುಕೂಲ ಆಗುವಂತೆ ‘ಅಲರ್ಟ್‌ ಸ್ಲೈಡರ್‌’ ಬಟನ್‌ ನೀಡಲಾಗಿದೆ. ಒನ್‌ಪ್ಲಸ್‌ 10ಟಿ ಸ್ಮಾರ್ಟ್‌ಫೋನ್‌ನಲ್ಲಿ ಈ ಬಟನ್‌ ನೀಡಿರಲಿಲ್ಲ. ತಕ್ಷಣಕ್ಕೆ ಮೊಬೈಲ್‌ ಅನ್ನು ಸೈಲೆಂಟ್‌ ಮೋಡ್‌ಗೆ ಹಾಕಲು ಈ ಬಟನ್‌ ಹೆಚ್ಚು ಉಪಯುಕ್ತವಾಗಿದೆ. ಹ್ಯಾಂಡ್‌ಸೆಟ್‌ನ ಹಿಂಭಾಗದಲ್ಲಿ ವೃತ್ತಾಕಾರದ ವಿನ್ಯಾಸದ ಒಳಗೆ ಮೂರು ಕ್ಯಾಮೆರಾ ಮತ್ತು ಒಂದು ಫ್ಲ್ಯಾಷ್‌ ಅನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ ಬಳಿಕ ಮೊದಲಿಗೆ ಬಳಸುವಾಗ ಕ್ಯಾಮೆರಾ, ಕಾರ್ಯಾಚರಣೆ ವೇಗ ಅಂದುಕೊಂಡ ಹಾಗೆ ಇಲ್ವಲ್ಲ ಅಂತ ನಿಮಗೆ ನಿರಾಸೆ ಮೂಡಿದರೆ ಅದರಲ್ಲಿ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ ಇದರ ನೈಜ ಕಾರ್ಯವಿಧಾನ ಅನುಭವಕ್ಕೆ ಬರಬೇಕಾದರೆ ಎರಡು ಬಾರಿ ಒಎಸ್‌ ಅಪ್‌ಡೇಟ್‌ ಆಗಲೇ ಬೇಕು. ಈ ಹಿಂದಿನ ಕೆಲವು ಸರಣಿಗಳಲ್ಲಿಯೂ ಇದೇ ರೀತಿ ಆಗಿತ್ತು.

ಆಂಡ್ರಾಯ್ಡ್‌ 13 ಆಧಾರಿತ ಆಕ್ಸಿಜನ್‌ ಒಎಸ್‌ 13.0 ಹೊಂದಿದೆ. 8ನೇ ಪೀಳಿಗೆಯ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 2 ಪ್ರೊಸೆಸರ್‌ ಹೊಂದಿದೆ. ಗೇಮಿಂಗ್‌ ಮತ್ತು ಮಲ್ಟಿಟಾಸ್ಕ್‌ಗೆ ಹೆಚ್ಚು ಸೂಕ್ತವಾಗಿದೆ. ಗರಿಷ್ಠ ರೆಸಲ್ಯೂಷನ್‌ ಇರುವ ಗೇಮ್‌ಗಳನ್ನು ಆಡಲು ಯಾವುದೇ ಅಡ್ಡಿ ಆಗುವುದಿಲ್ಲ.

ಕ್ಯಾಮೆರಾ: ಹಿಂಬದಿಯಲ್ಲಿ ಮೂರು ಕ್ಯಾಮೆರಾ ಇವೆ. 50 ಮೆಗಾ ಪಿಕ್ಸಲ್‌, ಅಲ್ಟ್ರಾವೈಡ್‌ ಕ್ಯಾಮೆರಾ 48 ಎಂಪಿ, ಟೆಲೆ ಕ್ಯಾಮೆರಾ 32 ಎಂಪಿ ಒಳಗೊಂಡಿದೆ. ಮುಂಬದಿಯಲ್ಲಿ 16 ಎಂಪಿ ಕ್ಯಾಮೆರಾ ಇದೆ. ಕ್ಯಾಮೆರಾದ ಗುಣಮಟ್ಟಕ್ಕೆ ಪ್ರೀಮಿಯಂ ಟಚ್ ನೀಡಲು ಕಂಪನಿಯು ವೃತ್ತಿಪರ ಕ್ಯಾಮೆರಾ ತಯಾರಿಸುವ ಹ್ಯಾಸೆಲ್‌ಬ್ಲಾಡ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೊದಲಿಗೆ ಒನ್‌ಪ್ಲಸ್‌ 9 ಸರಣಿಯಲ್ಲಿ ಹ್ಯಾಸಲ್‌ಬ್ಲಾಡ್‌ ಕ್ಯಾಮೆರಾ ಅಳವಡಿಸಲಾಯಿತು. ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಹ್ಯಾಸಲ್‌ಬ್ಲಾಡ್‌ ಕ್ಯಾಮೆರಾ ನೀಡಲಾಗುತ್ತಿದೆ. ಈ ಕ್ಯಾಮೆರಾ ಅಳವಡಿಸಿಕೊಂಡ ಬಳಿಕ ಸಹಜ ಬೆಳಕಿನಲ್ಲಿ ಅಷ್ಟೇ ಅಲ್ಲದೆ, ಮಂದ ಬೆಳಕಿನಲ್ಲಿ, ದೀಪದ ಬೆಳಕಿನಲ್ಲಿಯೂ ಚಿತ್ರದ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾದ ಗುಣಮಟ್ಟ ಚೆನ್ನಾಗಿ ಇದೆಯಾದರೂ ಈ ಹಿಂದಿನ ಸರಣಿಯಲ್ಲಿ ಇರುವುದಕ್ಕಿಂತ ಅತ್ಯುತ್ತಮ ಎನ್ನುವಂತೆ ಇಲ್ಲ. ಕಿಟಕಿಗೆ ಬೆನ್ನು ಹಾಕಿ ಕೂತಿದ್ದಾಗ ಸೆಲ್ಫಿ ತೆಗೆದರೆ ಫೋಟೊ ಬ್ಲರ್‌ ಆಗುತ್ತದೆ. ಇಷ್ಟೇ ಅಲ್ಲ, ಮನೆಯೊಳಗೆ ಲೈಟ್‌ ಬೆಳಕಿನಲ್ಲಿ ಸೆಲ್ಫಿ ತೆಗೆದ ಚಿತ್ರವೂ ಮಸುಕಾಗಿದೆ. ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತದೆ.

ಪೋರ್ಟ್ರೇಟ್‌ ಮೋಡ್ ಅಷ್ಟೇನೂ ಚೆನ್ನಾಗಿಲ್ಲ. 2ಎಕ್ಸ್‌ ಜೂಮ್‌ ಮಾತ್ರವೇ ಇದೆ. ಬ್ಲರ್‌ ಆಯ್ಕೆ ಬಹಳ ಚೆನ್ನಾಗಿದೆ. ಮ್ಯಾಕ್ರೊ ಮೋಡ್‌ನಲ್ಲಿ ಸೆರೆಹಿಡಿದ ಚಿತ್ರದಲ್ಲಿ ಸೂಕ್ಷ್ಮ ಅಂಶಗಳು ಬಹಳ ಚೆನ್ನಾಗಿ ಕಾಣುತ್ತವೆ. ರಾತ್ರಿ ವೇಳೆ ತೆಗೆದ ಚಿತ್ರದಲ್ಲಿ ಬ್ರೈಟ್‌ನೆಸ್‌ ಉತ್ತಮವಾಗಿದೆ.

5000 ಎಂಎಎಚ್‌ ಬ್ಯಾಟರಿ ಇದ್ದು, ಯುಎಸ್‌ಬಿ 2.0, ಟೈಪ್‌ ಸಿ ಚಾರ್ಜರ್‌ ಹೊಂದಿದೆ. 100 ವ್ಯಾಟ್ ಫಾಸ್ಟ್‌ ಚಾರ್ಜಿಂಗ್ ಆಯ್ಕೆ ಇರುವುದರಿಂದ 25 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಸರಾಸರಿ ಬಾಳಿಕೆ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡರೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಒಂದು ದಿನಕ್ಕಂತೂ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಚಾರ್ಜ್ ಆಗುವಾಗ ಫೋನ್‌ ಬಿಸಿ ಆಗುತ್ತದೆ. ಇದರಿಂದಾಗಿ ಬ್ಯಾಟರಿ ಬಾಳಿಕೆ ಅವಧಿ ಕಡಿಮೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಡಾಲ್ಬಿ ಅಟ್ಮೋಸ್ ಸ್ಪೀಕರ್ ಹೊಂದಿದ್ದು, ಆಡಿಯೊ ಗುಣಮಟ್ಟ ಉತ್ತಮವಾಗಿದೆ.

ಆಡಿಯೊ ಕ್ಲಾರಿಟಿ, ವೇಗದ ಕಾರ್ಯಾಚರಣೆ, ಗೇಮಿಂಗ್‌, ಬ್ಯಾಟರಿ ಬಾಳಿಕೆ ನಿಟ್ಟಿನಲ್ಲಿ ಈ ಸ್ಮಾರ್ಟ್‌ಫೋನ್‌ ಉತ್ತಮವಾಗಿದೆ. ಆದರೆ, ಕ್ಯಾಮೆರಾ ವಿಷಯದಲ್ಲಿ ಹ್ಯಾಸಲ್‌ಬ್ಲಾಡ್ ಇರುವ ಕಂಪನಿಯ ಹಿಂದಿನ ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ ಇದರಲ್ಲಿ ಸುಧಾರಣೆಗೆ ಇನ್ನಷ್ಟು ಅವಕಾಶಗಳು ಖಂಡಿತಾ ಇವೆ. ಬೆಲೆ 8+128ಜಿಬಿಗೆ ₹56,999. 16+256ಜಿಬಿಗೆ ₹61,999.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT