ಮಂಗಳವಾರ, ಸೆಪ್ಟೆಂಬರ್ 17, 2019
25 °C

ಟೆಕ್ನೊ ಕ್ಯಾಮನ್‌ ಐ4

Published:
Updated:
Prajavani

ಹಾಂಕಾಂಗ್‌ನ ಟ್ರಾನ್ಸೀಷನ್‌ ಹೋಲ್ಡಿಂಗ್ಸ್‌ ಒಡೆತನದ ಟೆಕ್ನೊ ಕಂಪನಿ ಹೊಸತನಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ಗ್ರಾಹಕರ ಬೇಡಿಕೆ ಮತ್ತು ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಹ್ಯಾಂಡ್‌ಸೆಟ್‌ಗಳನ್ನು ಸಿದ್ಧಪಡಿಸುತ್ತಿದೆ.

ಕಂಪನಿಯು ತನ್ನ ಕ್ಯಾಮನ್ ಐ ಸರಣಿಯಲ್ಲಿ ಈಚೆಗಷ್ಟೇ ‘ಕ್ಯಾಮನ್‌ ಐ4’ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆಯ ವಿಭಾಗದಲ್ಲಿ ಅಂದರೆ ₹10 ಸಾವಿರದಿಂದ ₹20 ಸಾವಿರದ ಒಳಗಿನ ಫೋನ್‌ಗಳಲ್ಲಿ ಖರೀದಿಗೆ ಉತ್ತಮ ಎನ್ನಬಹುದಾದ ಸೌಲಭ್ಯಗಳನ್ನು ಇದು ಹೊಂದಿದೆ.

ಕ್ಯಾಮನ್‌ ಐ ಸರಣಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿರುವ ಮೊದಲ ಫೋನ್‌ ಇದಾಗಿದೆ. 13 ಎಂಪಿ ಪ್ರೈಮರಿ ಕ್ಯಾಮೆರಾ ಎಫ್‌1.8 ಅಪಾರ್ಚರ್‌ ಹೊಂದಿದೆ. ಇದರ ಜತೆಗೆ ವೈಡ್‌ ಫ್ರೇಮ್‌ನಲ್ಲಿ ಚಿತ್ರಗಳನ್ನು ಸೆರೆಹಿಡಿಯಲು 120ಒ ಅಲ್ಟ್ರಾ ವೈಡ್‌ ಲೆನ್ಸ್‌ನೊಂದಿಗೆ 8 ಎಂಪಿ ಕ್ಯಾಮೆರಾ ಮತ್ತು 2 ಎಂಪಿ ಲೈವ್‌ ಪೋಕಸ್‌ ಲೆನ್ಸ್‌ ಹೊಂದಿದೆ. ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಲು ಅನುಕೂಲ ಆಗುವಂತೆ ಮಾಡುವುದು ಇದರ ಉದ್ದೇಶ ಎಂದು ಕಂಪನಿ ಹೇಳಿಕೊಂಡಿದೆ.

ಮಂದಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ತೆಗೆಯಬಹುದು. ಎಐ, ಬ್ಯೂಟಿಫೈ, ಬೊಕೆ ಮೋಡ್‌ ಆಯ್ಕೆಗಳು ನಮಗೆ ಬೇಕಾದಂತೆ ಚಿತ್ರಗಳನ್ನು ತೆಗೆಯಲು ನೆರವಾಗುತ್ತವೆ. ವಿಡಿಯೊ ಚಿತ್ರೀಕರಣವೂ ತೃಪ್ತಿದಾಯಕ. ಎಚ್‌ಡಿ, 4ಕೆ ವಿಡಿಯೊಗಳನ್ನೂ ವೀಕ್ಷಿಸಬಹುದು.

ಗೇಮಿಂಗ್‌ ಮೋಡ್‌ ಮಜ ಕೊಡುತ್ತದೆ. ಆದರೆ, asphalt 9 ಇನ್‌ಸ್ಟಾಲ್‌ ಮಾಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ತುಸು ನಿರಾಸೆ ಮೂಡಿಸಿದೆ.

ತಾಂತ್ರಿಕ ಅಂಶಗಳು

ಮುಖ್ಯವಾಗಿ ಫೇಸ್‌ ಅನ್‌ಲಾಕ್‌ ಆಯ್ಕೆ ಉತ್ತಮವಾಗಿದೆ. ಈ ಆಯ್ಕೆಯು ಪ್ರಿಮಿಯಂ ಫೋನ್‌ಗೆ ಸರಿಸಾಟಿಯಾಗಿದೆ. ಫೋನ್‌ ಪರದೆ ಮುಖ ಚಹರೆಯನ್ನು ಗ್ರಹಿಸಿದಾಕ್ಷಣವೇ ಅನ್‌ಲಾಕ್‌ ಆಗಿಬಿಡುತ್ತದೆ. ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಆಯ್ಕೆಯೂ ತೃಪ್ತಿದಾಯಕವಾಗಿದೆ.

Anti-oil fingerprint sensor: ನೀವು ಬಜ್ಜಿ ಅಥವಾ ಇನ್ಯಾವುದೇ ಎಣ್ಣೆ ಪದಾರ್ಥವನ್ನು ತಿನ್ನುತ್ತಿದ್ದಾಗಲೂ ಫೋನ್‌ ಬಳಸಬಹುದು. ಕೈಬೆರಳು ಎಣ್ಣೆಯಾಗಿದ್ದರೂ ಫೋನ್‌ ಅನ್‌ಲಾಕ್‌ ಮಾಡಬಹುದು. ವಿಶೇಷವಾಗಿ ಭಾರತದ ಗ್ರಾಹಕರಿಗಾಗಿಯೇ ತನ್ನ ಫೋನ್‌ಗಳಲ್ಲಿ ಈ ಆಯ್ಕೆ ನೀಡಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಫೋನ್‌ ವಿನ್ಯಾಸ ಆಕರ್ಷಕವಾಗಿದೆ. 6.2 ಎಚ್‌ಡಿಪ್ಲಸ್‌ ಪರದೆ ಹೊಂದಿದೆ. ಪರದೆ ಮತ್ತು ದೇಹದ ಅನುಪಾತ 19.5:9 ಇದೆ. ಸ್ಕ್ರೀನ್‌ ಟು ಬಾಡಿ ರೇಶಿಯೊ ಶೇ 88.6ರಷ್ಟಿದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಸೆಲ್ಫಿ ಕ್ಯಾಮೆರಾ ನೀಡುವ ಮೂಲಕ ಡಾಟ್‌ ನಾಚ್‌ (Notch) ವ್ಯವಸ್ಥೆ ಬಳಸಿಕೊಂಡಿದೆ. ಡಾಟ್‌ ನಾಚ್‌ ಪರದೆ ಹೊಂದಿರುವ ಕಂಪನಿಯ ಮೊದಲ ಹ್ಯಾಂಡ್‌ಸೆಟ್ ಇದಾಗಿದೆ. ನಾಚ್‌ ಬೇಡ ಎಂದಾದರೆ ಸೆಟ್ಟಿಂಗ್ಸ್‌ನಲ್ಲಿ ಅದನ್ನು ಹೈಡ್‌ ಮಾಡಿಕೊಳ್ಳಬಹುದು. 

ಮನೆಯ ಒಳಗಿದ್ದಾಗ ಮತ್ತು ಹೊರಗಿದ್ದಾಗ ಫೋನ್‌ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣುತ್ತದೆ. ಸೂರ್ಯನ ಬೆಳಕು ತೀಕ್ಷ್ಣವಾಗಿದ್ದಾಗಲೂ ಬಳಸಲು ಯಾವುದೇ ಸಮಸ್ಯೆ ಆಗುವುದಿಲ್ಲ. ಐ ಪ್ರೊಟೆಕ್ಟ್‌ ಆಯ್ಕೆ ಇರುವುದು ಕಣ್ಣಿಗೆ ಹಿತ ಎನಿಸುತ್ತದೆ. 

ಗಾತ್ರದ ದೃಷ್ಟಿಯಿಂದ ತುಸು ದೊಡ್ಡದೆನಿಸುತ್ತದೆ. ಒಂದು ಕೈಯಲ್ಲಿ ಹೆಚ್ಚು ಹೊತ್ತು ಹಿಡಿದುಕೊಳ್ಳುವುದು ಕಷ್ಟವಾಗುತ್ತದೆ. ಮೊಬೈಲ್‌ ಜತೆಗೇ ಒಂದು ಬ್ಯಾಕ್‌ ಕವರ್‌ ನೀಡಲಾಗಿದೆ. ಸ್ಪೀಕರ್‌, ಆಡಿಯೊ ಜಾಕ್‌ ಜಾಗವನ್ನು ದೂಳು ಮತ್ತು ನೀರಿನಿಂದ ರಕ್ಷಿಸಲು ಮುಚ್ಚುವಂತೆ ಮಾಡಲಾಗಿದೆ. ಇದು ಕಿರಿಕಿರಿ ಎನಿಸುತ್ತದೆ. ಚಾರ್ಜ್‌ ಮಾಡುವಾಗ, ಇಯರ್‌ ಫೋನ್‌ ಸಿಕ್ಕಿಸಲು ರಗಳೆಯಾಗುತ್ತದೆ. ಹಾಗಾಗಿ ಅದನ್ನು ಬಳಸದೇ ಇರುವುದೇ ಒಳ್ಳೆಯದು.

ರಾಕೆಟ್‌ ಚಾರ್ಜ್‌

3,500 ಎಂಎಎಚ್‌ ಬ್ಯಾಟರಿ ಇದ್ದು, 10 ನಿಮಿಷ ಚಾರ್ಜ್‌ ಮಾಡಿದರೆ ಎರಡು ಗಂಟೆಗಳವರೆಗೆ ಕರೆ ಮಾಡುವಷ್ಟು ಶಕ್ತಿಯನ್ನು ನೀಡುತ್ತದೆ. ಬ್ಯಾಟರಿ ಶೇ 100ರಷ್ಟು ಚಾರ್ಜ್‌ ಆಗಲು 2 ಗಂಟೆ ಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಸುಧಾರಣೆ ಮಾಡಬಹುದು. ಕ್ವಿಕ್‌ ಆಕ್ಸಲರೇಟರ್‌ ಮತ್ತು ಬ್ಯಾಟರಿ ಲ್ಯಾಬ್‌ ಆಯ್ಕೆಗಳು ಬ್ಯಾಟರಿ ಬಾಳಿಕೆ ಅವಧಿಯನ್ನು ವೃದ್ಧಿಸಲು ನೆರವಾಗುತ್ತವೆ. 

ಒಂದೇ ಸ್ಲಾಟ್‌ನಲ್ಲಿ ಡ್ಯೂಯೆಲ್‌ ನ್ಯಾನೊ ಸಿಮ್‌ ಕಾರ್ಡ್‌ ಮತ್ತು ಒಂದು ಎಸ್‌ಡಿ ಕಾರ್ಡ್‌ ಆಯ್ಕೆ ನೀಡಲಾಗಿದೆ. 

Hios ಗ್ಯಾಲರಿ, ಮ್ಯೂಸಿಕ್‌ಗೆ ತನ್ನದೇ ಆದ ಆ್ಯಪ್‌ ಹೊಂದಿಲ್ಲ. ಹೀಗಾಗಿ ಗೂಗಲ್‌ ಆ್ಯಪ್‌ಗಳನ್ನು ಬಳಸಿಕೊಂಡಿದೆ. ಆ್ಯಪ್‌ಗಳನ್ನು ಎ ಟು ಜೆಡ್‌ ಆರ್ಡರ್‌ನಲ್ಲಿ ಹೊಂದಿಸುವ ಅವಕಾಶ ಇರುವುದರಿಂದ ನಿರ್ದಿಷ್ಟ ಆ್ಯಪ್‌ಗಳಾಗಿ ಹುಡುಕಾಡುವುದು ತಪ್ಪಲಿದೆ.  ಮಿಡ್‌ನೈಟ್‌ ಬ್ಲಾಕ್‌, ಆಕ್ವಾ ಬ್ಲೂ, ನೆಬುಲಾ ಬ್ಲಾಕ್ ಮತ್ತು ಶಾಂಪೇನ್‌ ಗೋಲ್ಡ್‌ ಬಣ್ಣಗಳಲ್ಲಿ ಲಭ್ಯವಿದೆ.

ಫೋನ್ ಖರೀದಿಸಿ 100 ದಿನಗಳ ಒಳಗೆ ಏನೇ ತೊಂದರೆ ಕಂಡು ಬಂದರೂ ಫೋನನ್ನೇ ಬದಲಿಸಿ ಹೊಸ ಫೋನ್ ಕೊಡುವ ವಾಗ್ದಾನ ಕಂಪನಿ ನೀಡಿದೆ. ಪರದೆ ಒಡೆದು ಹೋದರೆ ಒಂದು ಸಲ ಉಚಿತವಾಗಿ ಬದಲಿಸಿ ಕೊಡುತ್ತಾರೆ. ಒಂದು ತಿಂಗಳ ವಿಸ್ತರಿತ ವಾರಂಟಿ ಕೂಡಾ ನೀಡಲಿದೆ. 

ವೈಶಿಷ್ಟ್ಯ

ಡಿಸ್‌ಪ್ಲೇ; 6.2 ಎಚ್‌ಡಿ ಪ್ಲಸ್‌ ಡಾಟ್‌ ನಾಚ್‌

ರೆಸಲ್ಯೂಷನ್; 720X1520‌

ಒಎಸ್‌: ಆಂಡ್ರಾಯ್ಡ್‌ 9.0 ಆಧಾರಿತ Hios 4.6

ಪ್ರೊಸೆಸರ್‌: 2.0 ಗಿಗಾಹರ್ಟ್ಸ್‌ Helio A22 64 ಬಿಟ್‌ ಕ್ಯಾಡ್‌ಕೋರ್‌ ಪ್ರೊಸೆಸರ್

ರ್‍ಯಾಮ್‌: 2+32ಜಿಬಿ, 3+32ಜಿಬಿ, 4+64ಜಿಬಿ

ರಿಯರ್ ಕ್ಯಾಮೆರಾ: 13+2+8ಎಂಪಿ ‌

ಸೆಲ್ಫಿ ಕ್ಯಾಮೆರಾ: 16 ಎಂಪಿ

ಬ್ಯಾಟರಿ: 3,500 ಎಂಎಎಚ್

ಆ್ಯಂಟಿ ಆಯಿಲ್‌ ಫಿಂಗರ್‌ಪ್ರಿಂಟ್‌ ಸೆನ್ಸರ್‌, ಫೇಸ್‌ ಅನ್‌ಲಾಕ್‌ ಆಯ್ಕೆ ಇದೆ

ಬೆಲೆ: 2+ 32GB ₹ 9,599, 3+32GB ₹ 10,599, 4+ 64GB ₹ 11999

Post Comments (+)