ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮ್ಸನ್ ಡೆಸರ್ಟ್ ಏರ್ ಕೂಲರ್: ದೊಡ್ಡ ಕೊಠಡಿಗೆ ದೊಡ್ಡ ಕೂಲರ್

Published 27 ಏಪ್ರಿಲ್ 2024, 7:19 IST
Last Updated 27 ಏಪ್ರಿಲ್ 2024, 7:19 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯಲ್ಲಿ ಸೆಕೆ ತಡೆಯಲು ಫ್ಯಾನ್ ಸಾಕಾಗುವುದಿಲ್ಲ. ಜಾಗತಿಕ ತಾಪಮಾನದ ಪರಿಣಾಮವಾಗಿ ಈ ಬಾರಿಯಂತೂ ಹಿಂದೆಂದಿಗಿಂತಲೂ ಹೆಚ್ಚು ಧಗೆ. ತಾಪಮಾನ ಅಧಿಕವಾಗಿರುವುದರಿಂದ ಜನರು ಕೂಡ ಏರ್ ಕೂಲರ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಇತರ ಕಂಪನಿಗಳಂತೆಯೇ ಯೂರೋಪ್‌ನ ಪ್ರಸಿದ್ಧ ಟಿವಿ ತಯಾರಿಕಾ ಕಂಪನಿ ಥಾಮ್ಸನ್, ಗೃಹ ಬಳಕೆಯ ಉಪಕರಣಗಳ ತಯಾರಿಕೆಯಲ್ಲಿಯೂ ತೊಡಗಿದ್ದು, ಇತ್ತೀಚೆಗೆ ಹೊಸ ಏರ್ ಕೂಲರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 28 ಲೀಟರ್ ನೀರಿನ ಸಾಮರ್ಥ್ಯದಿಂದ ಹಿಡಿದು 150 ಲೀಟರ್‌ವರೆಗೆ ನಾಲ್ಕು ಮಾಡೆಲ್‌ಗಳನ್ನು ಥಾಮ್ಸನ್ ಬಿಡುಗಡೆ ಮಾಡಿದ್ದು, ಅದರಲ್ಲಿ 115 ಲೀಟರ್ ನೀರಿನ ಸಾಮರ್ಥ್ಯ ಇರುವ XXL ಹೆವಿ ಡ್ಯೂಟಿ ಡೆಸರ್ಟ್ ಏರ್ ಕೂಲರ್ (Thomson 115 L XXL Heavy Duty Desert Air Cooler) ಹೇಗಿದೆ? ಎಂಬ ಮಾಹಿತಿ ಇಲ್ಲಿದೆ.

ವಿನ್ಯಾಸ, ಗಾತ್ರ

50.5 ಸೆಂ.ಮೀ. x 133 ಸೆಂ.ಮೀ. x 68 ಸೆಂ.ಮೀ ಸುತ್ತಳತೆಯುಳ್ಳ ಈ ಏರ್ ಕೂಲರ್, ಸುಮಾರು 20 ಕೆ.ಜಿ. ತೂಕವಿದೆ. ನಾಲ್ಕು ಚಕ್ರಗಳಿದ್ದು, ಹಾಲ್‌ನೊಳಗೆ ಬೇಕಾದಲ್ಲಿಗೆ ಒಯ್ಯಲು ಅನುಕೂಲಕರವಾಗಿದೆ. ಗಾತ್ರ ದೊಡ್ಡದಾಗಿರುವುದರಿಂದ ಹೆಚ್ಚು ಸಾಮರ್ಥ್ಯ ಹೊಂದಿದ್ದು, ಇದರಿಂದ ಹೊರ ಸೂಸುವ ಗಾಳಿಯು 750 ಚದರಡಿ ಪ್ರದೇಶವನ್ನು ತಂಪಾಗಿಡಬಲ್ಲದು. ಮತ್ತು ಗಾಳಿಯು ನೇರವಾಗಿ ಸುಮಾರು 50 ಅಡಿ ದೂರಕ್ಕೆ ಚಿಮ್ಮುತ್ತದೆ. ಹೀಗಾಗಿ, ಮನೆಯಲ್ಲಿ ದೊಡ್ಡ ಹಾಲ್ ಮತ್ತು ಹೆಚ್ಚು ಜನ ಇರುವಾಗ ಈ ಏರ್ ಕೂಲರ್ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಇದರಲ್ಲಿರುವ ನೀರಿನ ಟ್ಯಾಂಕ್‌ನ ಶೇಖರಣಾ ಸಾಮರ್ಥ್ಯ 115 ಲೀಟರ್. ನೀರಿನ ಪ್ರಮಾಣ ಎಷ್ಟಿದೆ ಎಂಬುದನ್ನು ಹೊರಗಿನಿಂದಲೇ ನೋಡಿ ತಿಳಿಯುವಂತಹ ವಿನ್ಯಾಸವಿದೆ. ಹೊರಗಿನ ಕವಚವು ಪ್ಲಾಸ್ಟಿಕ್‌ನದ್ದಾಗಿದ್ದು, ಒಳಗಿನ ಫ್ಯಾನ್ ರೆಕ್ಕೆಗಳನ್ನು ಹಗುರ ಲೋಹದಿಂದ ಮಾಡಲಾಗಿದೆ.

ಕಾರ್ಯಾಚರಣೆ

ಫ್ಯಾನ್ ತಿರುಗುವ ವೇಗವು ಮೂರು ವಿಧದಲ್ಲಿದ್ದು ಕನಿಷ್ಠ, ಮಧ್ಯಮ ಮತ್ತು ಗರಿಷ್ಠ ವೇಗವನ್ನು ಬೇಕಾದಂತೆ ಹೊಂದಿಸಿಕೊಳ್ಳಲು ಒಂದು ಸ್ವಿಚ್ (knob) ಇದೆ. ಮೇಲ್ಭಾಗದಲ್ಲಿರುವ ಈ ನಾಬ್ ಪಕ್ಕದಲ್ಲೇ, 'ಫಂಕ್ಷನ್ ನಾಬ್' ಇದೆ. ಇದರಲ್ಲಿ, ಪಂಪ್, ಪಂಪ್ & ಸ್ವಿಂಗ್ ಹಾಗೂ ಸ್ವಿಂಗ್ ಎಂಬ ಮೂರು ಆಯ್ಕೆಗಳಿವೆ. ಅಂದರೆ, ನೀರು ಗಾಳಿಗೆ ಮಿಶ್ರವಾಗಬೇಕೇ ಎಂಬುದರ ಆಯ್ಕೆಯಿದು. ಈ ಎರಡೂ ನಾಬ್‌ಗಳ ತಿರುಗಿಸುವಿಕೆ ಸುಲಲಿತವಾಗಿದೆ.

ಥಾಮ್ಸನ್ ಡೆಸರ್ಟ್ ಏರ್ ಕೂಲರ್‌ನಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ಬಿಎಲ್‌ಡಿಸಿ ಮೋಟಾರು ಅಳವಡಿಸಲಾಗಿದ್ದು, ಸದ್ದನ್ನು ಕಡಿಮೆಯಾಗಿಸಿದೆ ಹಾಗೂ ಇದು ಬಳಸುವ ವಿದ್ಯುತ್ ಪ್ರಮಾಣವೂ ಕಡಿಮೆ. ಬಿಎಲ್‌ಡಿಸಿ ಎಂದರೆ, ಬ್ರಶ್‌ಲೆಸ್ ಡೈರೆಕ್ಟ್ ಕರೆಂಟ್ ಎಂಬುದರ ಸಂಕ್ಷಿಪ್ತ ರೂಪ. ಇದರಲ್ಲಿ ಸಾಂಪ್ರದಾಯಿಕ ಮೋಟಾರುಗಳಲ್ಲಿರುವ ಕಾರ್ಬನ್ ಬ್ರಶ್ ಮತ್ತು ತಾಮ್ರದ ಕಮ್ಯುಟೇಟರ್ ಇರುವುದಿಲ್ಲ. ಹೀಗಾಗಿ, ದೀರ್ಘಕಾಲ ಬಳಸುವ ಮೋಟಾರುಗಳ ಬಾಳಿಕೆ ಹೆಚ್ಚು.

ಇನ್ವರ್ಟರ್ ಮೂಲಕ ಬರುವ ವಿದ್ಯುತ್‌ಗೂ ಈ ಕೂಲರ್ ಅನ್ನು ಸಂಪರ್ಕಿಸಬಹುದಾಗಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆ ಸಂದರ್ಭ ಅನುಕೂಲ. ಇದರ ಹಿಂಭಾಗದಲ್ಲಿ ಹನಿ ಕೂಂಬ್ (ಅಂದರೆ ಜೇನು ಗೂಡಿನಂತಹ) ಕೂಲಿಂಗ್ ವ್ಯವಸ್ಥೆ ಇದ್ದು, ಧೂಳಿನ ಫಿಲ್ಟರ್‌ನಂತೆಯೂ, ನೀರಿನ ಸಿಂಪರಣೆಯನ್ನು ಏಕರೂಪವಿರುವಂತೆಯೂ ನೋಡಿಕೊಳ್ಳುತ್ತದೆ. ಇದು ನೀರಿನಿಂದ ತಂಪಾಗಿಸುವ ವ್ಯವಸ್ಥೆಗೆ ಪೂರಕವಾದ ವಿನ್ಯಾಸ. ಥಾಮ್ಸನ್‌ನ ಭಾರತೀಯ ಪೂರೈಕೆದಾರ ಸಂಸ್ಥೆಯಾಗಿರುವ ಎಸ್‌ಪಿಪಿಎಲ್, ಈ ಕೂಲರ್‌ಗಳ ವಿನ್ಯಾಸದ ಪೇಟೆಂಟ್ ಹೊಂದಿದ್ದು, ನೋಯಿಡಾದ ಫ್ಯಾಕ್ಟರಿಯಲ್ಲೇ ಇವು ತಯಾರಾಗುತ್ತವೆ.

ಬಿಸಿ ವಾತಾವರಣದಲ್ಲಿ ಐದು ನಿಮಿಷದಲ್ಲಿ ಸಾಧಾರಣ ಇನ್ನೂರು ಚದರಡಿಯ ಕೊಠಡಿ ತಂಪಾಗಿರುವುದು ಗಮನಕ್ಕೆ ಬಂದಿದೆ. ಶುಷ್ಕ ವಾತಾವರಣವನ್ನೂ ನಿವಾರಿಸಿ, ಕೊಠಡಿಯೊಳಗೆ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ತಂಪಿನ ಅನುಭವ ಹೆಚ್ಚು.

ಇದರ ಬೆಲೆ ₹10,299 ಆಗಿದ್ದು, ಒಂದು ವರ್ಷದ ವಾರಂಟಿ ಜತೆಗೆ ಫ್ಲಿಪ್ ಕಾರ್ಟ್ ತಾಣದಲ್ಲಿ ಲಭ್ಯವಿದೆ. ಥಾಮ್ಸನ್ 115 ಲೀ. ಎಕ್ಸ್ಎಕ್ಸ್ಎಲ್ ಡೆಸರ್ಟ್ ಏರ್ ಕೂಲರ್ ದೊಡ್ಡ ಕೊಠಡಿ ಅಥವಾ ಹಾಲ್‌ಗೆ ಸೂಕ್ತವಾಗಿದ್ದು, ಚಿಕ್ಕ ಕೊಠಡಿ ಇದ್ದರೆ ಕಡಿಮೆ ನೀರಿನ ಸಾಮರ್ಥ್ಯವಿರುವ (28 ಲೀಟರ್) ಏರ್ ಕೂಲರ್ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT