– ಎಂ.ವಿ. ಕೇಶವ ಮೂರ್ತಿ
ಇದೇನಪ್ಪಾ ಡ್ರೈವರ್ ಇಲ್ಲದ ಕಾರುಗಳು, ಪೈಲೆಟ್ ಇಲ್ಲದ ವಿಮಾನಗಳು, ಬೀಜವಿಲ್ಲದ ಹಣ್ಣುಗಳು ಎಂದು ಹೇಳುವಂತೆ ಸುಲಭವಾಗಿ ಅಪ್ಪ ಅಮ್ಮ ಇಲ್ಲದ ಮಕ್ಕಳು ಎಂದು ಹೇಳುತ್ತಿದ್ದಾನೆಂದು ಗಾಬರಿಗೊಳ್ಳಬೇಡಿ, ಇದು ಸತ್ಯ. ಹೆಣ್ಣು, ಗಂಡುಗಳ ಮಿಲನವೇ ಇಲ್ಲದೇ ಪ್ರಯೋಗಾಲಯದಲ್ಲಿಯೇ ಮಾನವನ ವೀರ್ಯಾಣುಗಳಿಂದ ಅಂಡಾಣು ಫಲಿತಗೊಳ್ಳುವಂತೆ ಮಾಡಿ ಪ್ರಣಾಳಶಿಶುಗಳನ್ನು ಸೃಷ್ಟಿ ಮಾಡುವ ತಂತ್ರಜ್ಞಾನ ಹೊಸದೇನಲ್ಲ. ವೀರ್ಯಾಣುಗಳ ಸಹಾಯವೇ ಇಲ್ಲದೆ ಅಂಡಾಣುವನ್ನು ಮಾತ್ರ ಫಲಿತಗೊಳಿಸಿ, ಅದರಿಂದ ಭ್ರೂಣೋತ್ಪತ್ತಿಯಾಗುವಂತೆ ಮಾಡುವ ವಿಧಾನವೂ ಪರಿಚಿತವೇ. ಅಂಡಾಣು, ವೀರ್ಯಾಣು ಇದಾವುದೂ ಇಲ್ಲದೆ ಭ್ರೂಣೋತ್ಪತ್ತಿ ಸಾಧ್ಯವೇ? ಹೀಗೊಂದು ಪ್ರಶ್ನೆಗೆ ಕೇಂಬ್ರಿಡ್ಜ್ ಹಾಗೂ ಇಸ್ರೇಲಿನ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಉತ್ತರ ಲಭಿಸಿದೆ.
ಸಂಪೂರ್ಣವಾಗಿ ಕೃತಕವಾಗಿರುವ ಹದಿನಾಲ್ಕು ದಿನಗಳ (ಸದ್ಯ ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ ಹದಿನಾಲ್ಕು ದಿನಗಳಿಗಿಂತ ಜಾಸ್ತಿ ವಯಸ್ಸಿನ ಮಾನವ ಭ್ರೂಣವನ್ನು ಪ್ರಯೋಗಾಲಯದಲ್ಲಿ ಅಧಿಕೃತವಾಗಿ ಬೆಳೆಸುವಂತಿಲ್ಲ) ಭ್ರೂಣ ಇದು. ಹದಿನಾಲ್ಕು ದಿನ ವಯಸ್ಸಿನ ಸಹಜ ಭ್ರೂಣದಂತೆಯೇ ಇದೂ ಇದೆ. ಈ ಸಂಶೋಧನೆಯು ಪ್ರಸ್ತುತ ಭ್ರೂಣಶಾಸ್ತ್ರದ ವಿದ್ಯಮಾನಗಳಲ್ಲಿ ದೊಡ್ಡ ಮೈಲುಗಲ್ಲು ಎಂದೇ ಭಾವಿಸಲಾಗಿದೆ.
ಅಂಡಾಣುವಿನ ಸಂಪರ್ಕಕ್ಕೆ ಬಂದ ವೀರ್ಯಾಣುವು ಅಂಡಾಣುವನ್ನು ಫಲಿತಗೊಳ್ಳುವಂತೆ ಮಾಡಿ ಮುಂದಿನ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಹೀಗೆ ಫಲಿತಗೊಂಡ ಅಂಡಾಣು ಮೈಟಾಸಿಸ್ ಎಂದು ಕರೆಯಲಾಗುವ ಕೋಶ ವಿಭಜನೆಗೆ ಈಡಾಗುತ್ತದೆ. ಇದರಿಂದಾಗಿ ಒಂದು ಇದ್ದ ಜೀವಕೋಶ ಎರಡು, ನಾಲ್ಕು ಎಂದು ವಿಭಜನೆಯಾಗುತ್ತಾ ಭ್ರೂಣ ಸೃಷ್ಟಿಯಾದ ದಿನದಿಂದ ಹದಿನಾಲ್ಕನೆಯ ದಿನ ತಲುಪುವ ಹೊತ್ತಿಗೆ ‘ಗ್ಯಾಸ್ಟ್ರುಲಾ’ ಎಂಬ ಹಂತವನ್ನು ತಲುಪುತ್ತವೆ. ಇದು ಭ್ರೂಣೋತ್ಪತ್ತಿಯ ಮೊದಲನೆಯ ಹಂತ. ಭವಿಷ್ಯದಲ್ಲಿ ಯಾವೆಲ್ಲಾ ಅಂಗಗಳು ಯಾವ ಜೀವಕೋಶಗಳಿಂದ ಉತ್ಪತ್ತಿಯಾಗಬೇಕು ಎಂದು ನಿರ್ಧಾರವಾಗುವುದು ಈ ಹಂತದಲ್ಲಿಯೇ. ಹೀಗಾಗಿ ಮುಂದೆ ಈ ಭ್ರೂಣಕ್ಕೆ ಒದಗಬಹುದಾದ ಸಮಸ್ಯೆಗಳ ಬಗ್ಗೆ ವೈಜ್ಞಾನಿಕವಾಗಿ ಅರಿಯಲೂ ಸಾಧ್ಯವಿದೆ.
ಏನೀ ಕೃತಕ ಭ್ರೂಣ?
ಕೃತಕ ಭ್ರೂಣದಲ್ಲಿಯೂ ಬೇರೆ ವಿಧಗಳಿವೆ. ಕೆಲವರು ಪ್ರಯೋಗಾಲಯದಲ್ಲಿ ಉತ್ಪಾದನೆಯಾದದ್ದೆಲ್ಲವೂ ಕೃತಕ ಎಂದು ಭಾವಿಸಿರುತ್ತಾರೆ, ವಾಸ್ತವದಲ್ಲಿ ಹಾಗಿಲ್ಲ. ಪ್ರಯೋಗಾಲಯದಲ್ಲಿ ಉತ್ಪತ್ತಿಯಾದರೂ ಅದರ ಅಂಡಾಣು ಹಾಗೂ ವೀರ್ಯಾಣುಗಳನ್ನು ಅರ್ಹ ದಂಪತಿಯಿಂದ ಅಥವಾ ಯಾರಾದರೂ ದಾನಿಗಳಿಂದ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಅವನ್ನು ಫಲಿತಗೊಳ್ಳುವಂತೆ ಮಾಡಿದರೆ ಅದು ಪ್ರಣಾಳಶಿಶು ಎನಿಸಕೊಳ್ಳುತ್ತದೆ. ಕೃತಕ ಭ್ರೂಣವನ್ನು ಅಂಡಾಣು ಅಥವಾ ವೀರ್ಯಾಣುವಿನ ಹಂಗೇ ಇಲ್ಲದೇ ಸೃಷ್ಟಿಸಲಾಗುತ್ತದೆ.
ಕೃತಕ ಭ್ರೂಣವು ವಿಜ್ಞಾನಕ್ಕೆ ಹೊಸದೇನಲ್ಲ. ಕಳೆದ ವರ್ಷವೇ ಕೆಲವು ವಿಜ್ಞಾನಿಗಳು ಇಲಿಯ ಕೃತಕ ಭ್ರೂಣವನ್ನು ಸೃಷ್ಟಿ ಮಾಡಿದ್ದರು. ಈ ಭ್ರೂಣವು ‘ಗ್ಯಾಸ್ಟ್ರುಲಾ’ ಹಂತವನ್ನು ದಾಟಿ ಅಂಗಾಂಗಗಳ ಬೆಳವಣಿಗೆಯವರೆಗೂ ತಲುಪಿತ್ತು. ಹೃದಯ, ಮೆದುಳು ಮುಂತಾದವುಗಳು ರಚನೆಯಾದದ್ದು ಆ ಭ್ರೂಣದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಸದ್ಯ ಮಾನವನ ಕೃತಕ ಭ್ರೂಣ ಸೃಷ್ಟಿ ಮಾಡಿರುವುದು ಹೊಸ ಮೈಲುಗಲ್ಲಾಗಿ ಪರಿಣಮಿಸಿದೆ.
ಕೃತಕ ಭ್ರೂಣ ಸೃಷ್ಟಿಯು ಸುಲಭವಾದ ಕೆಲಸವಲ್ಲ. ಇದಕ್ಕಾಗಿ ಮಾನವನ ‘ಎಂಬ್ರಿಯಾನಿಕ್ ಸ್ಟೆಮ್ ಸೆಲ್’ ಎಂದು ಕರೆಯಲಾಗುವ ಜೀವಕೋಶಗಳು ಬೇಕು. (ಸ್ಟೆಮ್ ಸೆಲ್ ಎಂದರೆ ಇವುಗಳನ್ನು ಪ್ಲಾಸೆಂಟಾದಿಂದ ಪಡೆದುಕೊಳ್ಳಲಾಗುತ್ತದೆ. ಇವು ಇತರ ಜೀವಕೋಶಗಳಂತಲ್ಲ. ಇವುಗಳ ಬೆಳವಣಿಗೆಗೆ ಸರಿಯಾದ ವಾತಾವರಣವನ್ನು ಪ್ರಯೋಗಾಲಯದಲ್ಲಿ ಕಲ್ಪಿಸಿದ್ದೇ ಆದಲ್ಲಿ ನಮಗೆ ಬೇಕಾದ ಅಂಗಾಂಗಗಳನ್ನು ಪಡೆಯಲು ಸಾಧ್ಯ. ಕೃತಕ ಚರ್ಮ, ಮೂತ್ರಪಿಂಡ ಅಥವಾ ಹೃದಯ ಹೀಗೆ ಯಾವುದನ್ನು ಬೇಕಾದರೂ ಸೃಷ್ಟಿಸಬಹದು. ಸಸ್ಯಗಳಲ್ಲಿ ಈ ಪ್ರಯತ್ನ ಬಹಳ ಸುಲಭ. ಆದರೆ ಪ್ರಾಣಿಗಳಲ್ಲಿ ಈ ಪ್ರಕ್ರಿಯೆ ಬಹಳ ಕಠಿಣವಾದದ್ದು.) ಮಾನವ ಭ್ರೂಣವು ಬೆಳವಣಿಗೆ ಹೊಂದುವಾಗ ತಾಯಿಯ ಗರ್ಭಕೋಶದೊಳಗೆ ಎಷ್ಟು ವ್ಯವಸ್ಥಿತವಾದ ವಾತಾವರಣವಿರುತ್ತದೋ ಅದಕ್ಕೆ ಒಂದಿನಿತೂ ಧಕ್ಕೆ ಬರದಂತೆ ಪ್ರಯೋಗಾಲಯದಲ್ಲಿಯೂ ಸ್ಟೆಮ್ ಸೆಲ್‌ಗಳಿಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ೀ ಸೂಕ್ಷ್ಮವನ್ನು ಗಮನದಲ್ಲಿಟ್ಟುಕೊಂಡೇ ಕೇಂಬ್ರಿಜ್ ವಿವಿಯ ಡಾ. ಮ್ಯಾಗ್ಡಲೀನಾ ಜೆರ್ನಿಕಾ-ಗೋಯೆಟ್ಜ್ ಎಂಬ ಭ್ರೂಣಶಾಸ್ತ್ರದ ವಿಜ್ಞಾನಿ ಹಾಗೂ ಇಸ್ರೇಲಿನ ವೈಜ್ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಡಾ. ಜಾಕೋಬ್ ಹನ್ನಾ ನಾಯಕತ್ವದ ತಂಡಗಳು ಯಶಸ್ವಿಯಾಗಿ ಸಂಶೋಧನೆ ನಡೆಸಿದವು. ಅಪ್ಪ ಅಮ್ಮನೇ ಇಲ್ಲದ ಮಾನವ ಭ್ರೂಣವನ್ನು ಸೃಷ್ಟಿಸಿರುವುದನ್ನು ಆ ತಂಡಗಳೇ ಹೇಳಿಕೊಂಡಿವೆ.
ಹೀಗೆ ಪ್ರಯೋಗಾಲಯದಲ್ಲಿ ತಯಾರಿಸಲಾದ ಕೃತಕ ಭ್ರೂಣದ ರಚನೆ ಹಾಗೂ ಭ್ರೂಣದ ಜೀನ್ ಪ್ರತಿಲೇಖನ ಪ್ರೊಫೈಲ್‌ಗಳನ್ನು ಗಮನಿಸಿದಾಗ, ಅದು ಸಹಜ ಭ್ರೂಣದ ರಚನೆ ಹಾಗೂ ಜೀನ್ ಪ್ರತಿಲೇಖನ ಪ್ರೊಫೈಲ್‌ಗಳಂತೆಯೇ ಇದೆ. (Gene transcription profiles ಎಂದರೆ ಒಂದು ನಿರ್ದಿಷ್ಟವಾದ ಸಮಸಯದಲ್ಲಿ ಭ್ರೂಣದಲ್ಲಿ ಯಾವ ವಂಶವಾಹಿಗಳು ಕೆಲಸ ಮಾಡುತ್ತಿವೆ ಎಂಬುದನ್ನು ಕಂಡು ಹಿಡಿಯುವುದು. ಎಲ್ಲಾ ಸಮಯದಲ್ಲಿ ಎಲ್ಲಾ ವಂಶವಾಹಿಗಳ ಕೆಲಸದ ಅವಶ್ಯಕತೆಯಿಲ್ಲದೇ ಇರುವುದರಿಂದ ವಂಶವಾಹಿಗಳ ಚಟುವಟಿಕೆಗಳ ಆಧಾರದಲ್ಲಿ ಭ್ರೂಣದ ವಯಸ್ಸನ್ನು ಅಂದಾಜಿಸಬಹುದು, ಅದನ್ನೇ ಇಲ್ಲಿ ಮಾಡಿದ್ದಾರೆ).
International Society for Stem Cell Research ಎಂಬ ಸಂಸ್ಥೆಯೊಂದು ಭ್ರೂಣ ಸಂಬಂಧಿತ ಸಂಶೋಧನೆಗಳ ಬಗ್ಗೆ ನಿಗಾ ವಹಿಸುತ್ತದೆ. ಸಾಧಾರಣವಾಗಿ ಹದಿನಾಲ್ಕನೆಯ ದಿನದಿಂದ ಮಾನವನ ಭ್ರೂಣದಲ್ಲಿ ವಿವಿಧ ಅಂಗಾಂಗಗಳ ಬೆಳವಣಿಗೆ ಆರಂಭವಾಗುತ್ತದೆ. ಆದ್ದರಿಂದ ಹದಿನಾಲ್ಕು ದಿನಗಳಿಗಿಂತ ಜಾಸ್ತಿ ಮಾನವನ ಭ್ರೂಣವನ್ನು ಸದ್ಯ ಪ್ರಯೋಗಾಲಯದಲ್ಲಿ ಬೆಳೆಸುವಂತಿಲ್ಲ ಎಂದು International Society for Stem Cell Research ಸಂಸ್ಥೆಯು ನಿರ್ದೇಶನಗಳನ್ನು ನೀಡಿದೆ.
ಸತ್ಯಾಸತ್ಯತೆ, ನೈತಿಕತೆಯ ಪ್ರಶ್ನೆ
ಮೇಲೆ ಹೆಸರಿಸಲಾದ ಎರಡೂ ವಿಜ್ಞಾನಿಗಳ ತಂಡದವರು ತಾವು ನಡೆಸಿರುವ ಸಂಶೋಧನೆಗಳನ್ನು ‘Biorxiv’ ಎಂಬ ಪ್ರಕಟಣಾಪೂರ್ವ ಅಂತರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ನಿಯತಕಾಲಿಕೆಯ ವಿಶೇಷತೆ ಏನೆಂದರೆ, ಇಲ್ಲಿ ಏನು ಪ್ರಕಟವಾದರೂ ಅದು ಅಧಿಕೃತವಾದ ಮಾಹಿತಿ ಎನಿಸಿಕೊಳ್ಳುವುದಿಲ್ಲ. ಅಧಿಕೃತವಾಗಿ ಪ್ರಕಟವಾಗುವ ಮೊದಲಿನ ಹಸ್ತಪ್ರತಿಯ ರೀತಿ ಎನ್ನಬಹುದೇನೋ. ಈ ಪತ್ರಿಕೆಗಳನ್ನು ಯಾವುದಾದರೂ ಪ್ರತಿಷ್ಠಿತ ನಿಯತಕಾಲಿಕೆಗಳಿಗೆ ಕಳುಹಿಸಿ, ಅಲ್ಲಿ ತಜ್ಞರಿಂದ ಪರಿಶೀಲನೆಗೊಳಗಾಗಿ ಆನಂತರ ಪ್ರಕಟವಾದರಷ್ಟೇ ಈ ಮಾಹಿತಿ ಅಧಿಕೃತ ಎನಿಸಿಕೊಳ್ಳುತ್ತದೆ. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಅಧಿಕೃತವಾದ ಯಾವುದಾದರೂ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟವಾಗದ ಹೊರತು ಅದನ್ನು ಸಾರಸಗಟಾಗಿ ಒಪ್ಪಲಾಗದು. ಸ್ಪೇನ್ ದೇಶದ ಪೊಂಪೆ ಫಾಬ್ರಾ ವಿಶ್ವವಿದ್ಯಾಲಯದ ಭ್ರೂಣಶಾಸ್ತ್ರಜ್ಞರಾದ ಅಲ್ಫೊನ್ಸೊ ಮಾರ್ಟಿನೆಜ್ ಏರಿಯಾಸ್ ಎಂಬುವವರು, ‘ಮಾನವನ ಹದಿನಾಲ್ಕನೆಯ ದಿನದ ಭ್ರೂಣಕ್ಕೆ ಹೋಲುವಂತಹ ಯಾವುದೇ ರಚನೆಗಳು ನನಗೆ ಈ ಸಂಶೋಧನೆಯಲ್ಲಿ ತೋರುತ್ತಿಲ್ಲ, ಬದಲಾಗಿ ಜೀವಕೋಶಗಳು ಅಲ್ಲಲ್ಲಿ ಕುಪ್ಪೆಯಾಗಿರುವಂತೆ ತೋರುತ್ತಿವೆ’ ಎಂದು ಹೇಳಿದ್ದಾರೆ. ಹೀಗಾಗಿ ಈ ಸಂಶೋಧನೆಯ ಸತ್ಯಾಸತ್ಯತೆಗಳು ಮುಂದಷ್ಟೇ ಪರಿಶೀಲನೆಗೆ ಒಳಪಡಬೇಕಿವೆ.
ಸಹಜ ಭ್ರೂಣಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಲು ಸಾಧ್ಯವಿರುವಾಗ ಕೃತಕ ಭ್ರೂಣವನ್ನು ಸೃಷ್ಟಿಸಿ ಯಾಕೆ ಕಷ್ಟಪಡಬೇಕು ಎಂಬುದು ಹಲವರ ಅಂಬೋಣ. ಆದರೆ ಸಹಜ ಭ್ರೂಣಗಳ ವಿಚಾರದಲ್ಲಿ ಒಂದು ಸಮಸ್ಯೆ ಇದೆ. ಅದು ಮಾನವೀಯತೆ ಹಾಗೂ ನೈತಿಕತೆಯ ಸಮಸ್ಯೆ. ಮಾನವನ ಭ್ರೂಣವನ್ನು ಹಾಗೆ ಮನಬಂದಂತೆ ಬೆಳೆಸಬಹುದೇ? ಇದುವರೆಗೂ ಹದಿನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಮಾನವ ಭ್ರೂಣವನ್ನು ಪ್ರಯೋಗಾಲಯದಲ್ಲಿ ಬೆಳೆಸಿಲ್ಲ. ಸದ್ಯದ ತಂತ್ರಜ್ಞಾನದಲ್ಲಿ ಅದು ಸಾಧ್ಯವೂ ಇಲ್ಲ. ಒಂದು ವೇಳೆ ನಾಳೆ ಬೆಳೆಸಿದವೆಂದೇ ಇಟ್ಟುಕೊಳ್ಳೋಣ. ಆಗ ಆ ಮಗುವಿಗೆ ತಂದೆ ತಾಯಿ ಯಾರು? ಅದನ್ನು ಸಾಕುವವರು ಯಾರು? ಸಾಕುವುದು ಹೇಗೆ? ಇತ್ಯಾದಿ ಸಮಸ್ಯೆಗಳು ಧುತ್ತನೆ ಎದ್ದುಬಿಡುತ್ತವೆಯಲ್ಲವೇ?
ಹಲವಾರು ಭ್ರೂಣಶಾಸ್ತ್ರದ ವಿಜ್ಞಾನಿಗಳು ಈ ಸಂಶೋಧನೆಯ ಬಗ್ಗೆ ಬಹಳವಾದ ಸಂತೋಷವನ್ನೇನೂ ವ್ಯಕ್ತಪಡಿಸಿಲ್ಲ. ಮೇಲೆ ಹೇಳಲಾದ ನೈತಿಕತೆಯ ಪ್ರಶ್ನೆಗಳ ಜೊತೆಗೇ ಈ ಸಂಶೋಧನೆಯಿಂದ ಮುಂದೊದಗಬಹುದಾದ ಕ್ಲಿಷ್ಟ ಸಮಸ್ಯೆಗಳ ಬಗೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಬಹಳ ಗಂಭೀರವಾದ ಪ್ರಶ್ನೆಗಳನ್ನೂ ಎತ್ತಿದ್ದಾರೆ.
ಈ ಕೃತಕ ಭ್ರೂಣವು ಮೇಲ್ನೋಟಕ್ಕಷ್ಟೇ ಹದಿನಾಲ್ಕು ದಿನದ ಭ್ರೂಣದಂತೆ ತೋರುತ್ತಿದೆಯೇ ಹೊರತು ವಾಸ್ತವವಾಗಿ ಅದರ ರಚನೆ ಹಾಗೂ ಜೀವರಾಸಾಯನಿಕಗಳು ಹೇಗಿವೆ? ಅದರ ವರ್ತನೆಗಳು ಹೇಗೆ? ಅದರಿಂದಾಗುವ ಪರಿಣಾಮಗಳೇನು? ಎನ್ನುವ ಬಗ್ಗೆ ಅಧಿಕೃತವಾಗಿ ತಿಳಿಯುವವರೆಗೂ ಸಂಶೋಧನೆಗಳನ್ನು ನಂಬಲು ಸಾಧ್ಯವಿಲ್ಲ ಹಾಗೂ ಕೃತಕ ಭ್ರೂಣವನ್ನು ಸಹಜಭ್ರೂಣಕ್ಕೆ ಹೋಲಿಸಲು ಸಾಧ್ಯವಿಲ್ಲ. ಅಲ್ಲದೇ ನಮಗೆ ಕೃತಕ ಭ್ರೂಣ ಸೃಷ್ಟಿಸಲು ಸಾಧ್ಯವಿದೆ ಎಂದಮಾತ್ರಕ್ಕೆ ಅದನ್ನು ಪ್ರಯೋಗಾಲಯದಲ್ಲಿ ಬೆಳೆಸಬಹುದು ಎಂದು ನಾವು ಭಾವಿಸಲಾಗದು. ಅದಕ್ಕಿರುವ ಕಾನೂನಿನ ಹಾಗೂ ನೈತಿಕತೆಯ ತೊಡಕುಗಳನ್ನು ನಾವು ಗಂಭೀರವಾಗಿ ಅಧ್ಯಯನ ಮಾಡಿ, ಆನಂತರ ನಿರ್ಧಾರವನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಎಲ್ಲರೂ ಒಟ್ಟಾಗಿ ತೆಗೆದುಕೊಳ್ಳಬೇಕಿದೆ. ಸದ್ಯ ಇಂಗ್ಲೆಂಡಿನ ಕಾನೂನು ತಜ್ಞರು ಈ ಸಂಶೋಧನೆಯನ್ನು ಕಾನೂನಿನ ಚೌಕಟ್ಟಿನೊಳಗೆ ತರಲು ಪ್ರಾಥಮಿಕ ತಯಾರಿಗಳನ್ನು ಮಾಡುತ್ತಿದ್ದಾರೆ.
ಇಷ್ಟೆಲ್ಲಾ ಆದರೂ ಕೃತಕಭ್ರೂಣದಿಂದ ಅಸಂಖ್ಯ ಲಾಭಗಳಿವೆ. ಇದುವರೆಗೂ ಮಾನವನ ಭ್ರೂಣದ ಬೆಳವಣಿಗೆ, ಅವುಗಳ ಬಗ್ಗೆ ಸಮಗ್ರವಾಗಿ ನಮಗೆ ತಿಳಿದಿರುವುದು ಹದಿನಾಲ್ಕನೆಯ ದಿನದವರೆಗೆ ಮಾತ್ರ. ಅಲ್ಲಿಂದ ಮುಂದೆ ಏನಾಗುತ್ತದೆ ಎಂದು ತಿಳಿಯಬೇಕಾದರೆ ಇಲಿಯ ಭ್ರೂಣದ ಅಧ್ಯಯನ ಮಾಡಿ ಮನುಷ್ಯನದ್ದೂ ಹೀಗೆಯೇ ಆಗುತ್ತದೆ ಎಂದು ಊಹಿಸಲಾಗುತ್ತದೆ ಅಥವಾ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮುಖಾಂತರ ತಿಳೀಯಬೇಕಾಗುತ್ತದೆ. ಆದರೆ ಕೃತಕ ಭ್ರೂಣವನ್ನು ಹದಿನಾಲ್ಕು ದಿನಗಳಿಗಿಂತ ಕೇವಲ ಒಂದು ವಾರ ಹೆಚ್ಚು ಬೆಳೆಸಲು ಅವಕಾಶ ಲಭಿಸಿದರೆ ಮಾನವ ಭ್ರೂಣದ ಬೆಳವಣಿಗೆ, ರಚನೆಯ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಲು ರಹದಾರಿ ಲಭಿಸಿದಂತೆ ಆಗುತ್ತದೆ.
ಎಲ್ಲಕ್ಕೂ ಮೀರಿ ಮಕ್ಕಳಿಲ್ಲದ ದಂಪತಿಗಳ ಕೊರಗನ್ನು ನೀಗಿಸುವ ಹೊಸ ತಂತ್ರಜ್ಞಾನವೊಂದು ಉದಯವಾಯಿತೆಂದು ಸಂತೋಷಿಸಬಹುದೇನೋ?
(ಲೇಖಕರು ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.