ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆವರು–ಮೂತ್ರದಿಂದ ಶುದ್ಧ ಕುಡಿಯುವ ನೀರು; ಗಗನಯಾತ್ರಿಗಳ ಹೊಸ ‍ಪ್ರಯೋಗ

Published 26 ಜೂನ್ 2023, 13:03 IST
Last Updated 26 ಜೂನ್ 2023, 13:03 IST
ಅಕ್ಷರ ಗಾತ್ರ

ವಾಷಿಂಗ್ಟನ್ : ಮೂತ್ರ ಹಾಗೂ ಬೆವರನ್ನು ಶುದ್ಧ ಕುಡಿಯುವ ನೀರಾಗಿ ಪರಿರ್ವತಿಸಿರುವ ಗಗನಯಾತ್ರಿಗಳು, ಮುಂದಿನ ಒಂದು ವರ್ಷಗಳ ಕಾಲ ಈ ನೀರನ್ನು ತಮ್ಮ ಗಗನಯಾನದಲ್ಲಿ ಬಳಸಲಿದ್ದಾರೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ(ಐಎಸ್‌ಎಸ್‌) ಗಗನಯಾತ್ರಿಗಳು, ಲಭ್ಯವಿರುವ ದ್ರವವನ್ನು ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ್ದು, ಶೇ.98ರಷ್ಟು ನೀರನ್ನು ಈ ವಿಧಾನದ ಮೂಲಕವೇ ಮರುಬಳಕೆ ಮಾಡಬಹುದು. ಈ ವಿಧಾನ ಭವಿಷ್ಯದ ಅಂತರಿಕ್ಷಯಾನಕ್ಕೆ ಸಹಕಾರಿಯಾಗಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಬಾಹ್ಯಾಕಾಶ ನಿಲ್ದಾಣದಲ್ಲಿರುವ ಪ್ರತಿ ಗಗನಯಾತ್ರಿಗೆ ದಿನಕ್ಕೆ ಸುಮಾರು 3.5 ಲೀಟರ್‌ನಷ್ಟು ಕುಡಿಯುವ ನೀರು ಅಗತ್ಯ. ಒಬ್ಬ ಗಗನಯಾತ್ರಿ ತಿಂಗಳಾನುಗಟ್ಟಲೇ ನಿಲ್ದಾಣದಲ್ಲೇ ಇದ್ದರೆ ಅಷ್ಟೊಂದು ಪ್ರಮಾಣದ ನೀರನ್ನು ಬಾಹ್ಯಾಕಾಶಕ್ಕೆ ಸಾಗಿಸುವುದು ಕಷ್ಟಕರ ಕೆಲಸವಾಗಿದೆ.

ಗಗನಯಾತ್ರಿಗಳು ಮೂತ್ರವನ್ನು ಕುಡಿಯುತ್ತಿಲ್ಲ. ಬದಲಾಗಿ ಶುದ್ಧೀಕರಿಸಿದ ನೀರನ್ನು ಕುಡಿಯುತ್ತಿದ್ದಾರೆ. ಈ ನೀರು ಭೂಮಿಯಲ್ಲಿ ಸಿಗುವ ನೀರಿಗಿಂತ ಶುದ್ಧವಾಗಿದೆ.
ಜಿಲ್‌ ವಿಲಿಯಮ್ಸನ್, ವಾಟರ್ ಪ್ರಾಜೆಕ್ಟ್ ಮ್ಯಾನೇಜರ್, ನಾಸಾ

ಈ ಕಾರಣಕ್ಕೆ ಗಗನಯಾತ್ರಿಗಳು ತಮ್ಮ ದೇಹದಿಂದ ವಿಸರ್ಜನೆಗೊಳ್ಳುವ ನೀರನ್ನೇ ಮರುಬಳಕೆ ಮಾಡುವ ಪರ್ಯಾಯ ವಿಧಾನವನ್ನು ಕಂಡುಹಿಡಿದಿದ್ದಾರೆ. ‘ಎನ್ವಿರಾನ್ಮೆಂಟಲ್ ಕಂಟ್ರೋಲ್ ಮತ್ತು ಲೈಫ್ ಸಪೋರ್ಟ್ ಸಿಸ್ಟಮ್‘ (ಇಸಿಎಲ್‌ಎಸ್‌ಎಸ್‌) ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಈ ಸಾಧನವು ದೇಹದಿಂದ ಬಿಡುಗಡೆಯಾಗುವ ಬೆವರು ಮತ್ತು ಮೂತ್ರವನ್ನು ಶುದ್ಧ ನೀರಾಗಿ ಪರಿರ್ವತಿಸುತ್ತದೆ.

ಈ ಸಾಧನವು ಕೇವಲ ಮೂತ್ರವನ್ನು ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸುವುದಿಲ್ಲ. ಇದರಲ್ಲಿರುವ ಡಿಹ್ಯೂಮಿಡಿಫೈಯರ್‌ಗಳು ಕ್ಯಾಬಿನ್‌ನಲ್ಲಿರುವ ತೇವಾಂಶವನ್ನು ಹೀರಿ (ಉಸಿರಾಟ ಪ್ರಕ್ರಿಯೆ ಮತ್ತು ಬೆವರಿನ ಮೂಲಕ ಸೃಷ್ಟಿಯಾಗುವ ತೇವಾಂಶ) ಶುದ್ಧ ನೀರಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.

ಮೂತ್ರವು ಶುದ್ಧ ಕುಡಿಯುವ ನೀರಾಗುವುದು ಹೇಗೆ?

ಮೊದಲಿಗೆ ಮೂತ್ರವು ಫಿಲ್ಟರ್‌ಗಳ ಮೂಲಕ ಹಾದು ಹೋಗುತ್ತದೆ. ಶೋಧಿಸಿ ಬರುವ ಮೂತ್ರವನ್ನು ರಾಸಾಯನಿಕ ರಿಯಾಕ್ಟರ್‌ಗಳು ಮತ್ತಷ್ಟು ಶುದ್ಧಗೊಳಿಸುತ್ತದೆ. ಅದರಲ್ಲಿರುವ ಅಶುದ್ಧ ಕಣಗಳನ್ನು ಈ ರಿಯಾಕ್ಟರ್‌ಗಳು ಬೇರ್ಪಡಿಸುತ್ತವೆ. ನಂತರ ಈ ನೀರು ಕುಡಿಯಲು ಯೋಗ್ಯವೇ ಎಂದು ಸೆನ್ಸರ್‌ ಪರಿಶೀಲಿಸುತ್ತದೆ. ಒಂದು ವೇಳೆ ಶುದ್ಧವಿಲ್ಲದಿದ್ದರೆ ಪ್ರಕ್ರಿಯೆ ಪುನಾರಾವರ್ತನೆಗೊಳ್ಳುತ್ತದೆ. ಸೂಕ್ಷ್ಮಾಣು ಜೀವಿಗಳು ಬೆಳೆಯದ ಹಾಗೆ ಇಸಿಎಲ್‌ಎಸ್‌ಎಸ್‌ ಸಾಧನ ನೀರಿಗೆ ಅಯೋಡಿನ್‌ ಅನ್ನು ಬೆರೆಸುತ್ತದೆ. ಕೊನೆಯಲ್ಲಿ ಕುಡಿಯಲು ಯೋಗ್ಯವಾದ ಶುದ್ಧ ನೀರನ್ನು ಈ ಯಂತ್ರವು ಉತ್ಪಾದಿಸುತ್ತದೆ.

ಹಣ ಉಳಿತಾಯ

‘ಶುದ್ಧ ಕುಡಿಯುವ ನೀರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಲು ನಾಸಾ ಸಾಕಷ್ಟು ಹಣ ವ್ಯಯಿಸುತ್ತಿದೆ. ಸದ್ಯ ಅಭಿವೃದ್ಧಿಗೊಂಡಿರುವ ವಿಧಾನದಿಂದ ನಾಸಾಗೆ ಬಹಳಷ್ಟು ಹಣ ಉಳಿತಾಯವಾಗುತ್ತದೆ. ಅಲ್ಲದೇ ಗಗನಯಾತ್ರಿಗಳು ದೀರ್ಘಾವಧಿಯವರೆಗೂ ಬಾಹ್ಯಾಕಾಶ ನಿಲ್ದಾಣದಲ್ಲಿ ಅಧ್ಯಯನ ನಡೆಸಲು ಇದು ಸಹಕಾರಿಯಾಗಿದೆ‘ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ವರ್ಷ ಸ್ಕಾಟ್‌ ಕೆಲ್ಲಿ ಗಗಯಯಾನ ಮಾಡಲಿದ್ದು, ಇಸಿಎಲ್‌ಎಸ್ಎಸ್‌ ಯಂತ್ರ ಪರಿವರ್ತಿಸಿದ ಸುಮಾರು 730 ಲೀಟರ್ ನೀರನ್ನು ಬಳಸಲಿದ್ದಾರೆ ಎಂದು ನಾಸಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT