ಹೊಸ ಹೊಸ ತಂತ್ರಜ್ಞಾನ ಮುನ್ನೆಲೆಗೆ ಬರುತ್ತಿದ್ದ ಹಾಗೆ ಮೋಸ ಮಾಡುವ ಹೊಸ ತಂತ್ರಗಳನ್ನೂ ಮೋಸಗಾರರು ಹುಡುಕಿಕೊಳ್ಳುತ್ತಾರೆ. ಇತ್ತೀಚೆಗೆ ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಡೀಪ್‌ಫೇಕ್ ವೀಡಿಯೋಗಳು ಮತ್ತು ಫೊಟೋಗಳನ್ನು ಜನರೇಟ್ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಆಡದ ಮಾತುಗಳನ್ನೂ ಆಡಿಸಬಹುದು. ಆದರೆ, ಇವೆಲ್ಲ ರೆಕಾರ್ಡೆಡ್ ರೂಪದಲ್ಲೇ ಇರುತ್ತಿದ್ದವು. ಅಂದರೆ, ಒಬ್ಬ ವ್ಯಕ್ತಿಯ ವೀಡಿಯೋವನ್ನೋ ಫೋಟೋವನ್ನೋ ಇಟ್ಟುಕೊಂಡು ಅದಕ್ಕೆ ತುಟಿಚಲನೆ ಹಾಗೂ ಧ್ವನಿಯನ್ನು ಡೀಪ್ ಫೇಕ್ ಮಾಡಲಾಗುತ್ತಿತ್ತು. ಹೀಗೆ ಮಾಡಿ ಅದನ್ನು ಕಂಪ್ಯೂಟರಿನಲ್ಲೋ ಮೊಬೈಲ್‌ನಲ್ಲೋ ಸೇವ್ ಮಾಡಿಕೊಂಡು, ಹರಿಬಿಡಲಾಗುತ್ತಿತ್ತು. ಇದನ್ನು ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಬಳಸಿಕೊಂಡ ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆ. ಆದರೆ, ಇದೇ ತಂತ್ರಜ್ಞಾನವನ್ನು ಅಂದರೆ, ‘ಜನರೇಟಿವ್ ಎಐ’ ಅನ್ನೇ ಬಳಸಿಕೊಂಡು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನರಿಗೆ ಮೋಸ ಮಾಡುವ ಹೊಸ ತಂತ್ರವನ್ನು ಮೋಸಗಾರರು ಕಂಡಿಕೊಂಡಿದ್ದಾರೆ.
ಅಂಥದ್ದೊಂದು ಪ್ರಕರಣ ಕೇರಳದಲ್ಲಿ ವರದಿಯಾದ ಮೇಲೆ, ಹೀಗೊಂದು ಮೋಸದ ವಿಧಾನವಿದೆ ಎಂಬುದು ಎಲ್ಲರಿಗೂ ತಿಳಿದಂತಾಗಿದೆ. ಕೇರಳದ ಕೋಯಿಕ್ಕೋಡಿನ ರಾಧಾಕೃಷ್ಣ ಎಂಬುವವರು ತನ್ನ ಮಾಜಿ ಸಹೋದ್ಯೋಗಿಯಂತೆಯೇ ಮುಖ ಮಾಡಿಕೊಂಡು ಲೈವ್ ವೀಡಿಯೋದಲ್ಲಿ ಹಣ ಕೇಳಿದವನಿಗೆ 40 ಸಾವಿರ ಕೊಟ್ಟು ಮೋಸ ಹೋಗಿದ್ದಾರೆ.
ಈ ಪ್ರಕರಣ ನಡೆದಿದ್ದು ಹೀಗೆ:
ಕೋಯಿಕ್ಕೋಡಿನ ರಾಧಾಕೃಷ್ಣ ಅವರಿಗೆ ತನ್ನ ಒಂದು ಕಾಲ್ ಬರುತ್ತದೆ. ಆ ಕಾಲ್ ಅವರು ರಿಸೀವ್ ಮಾಡುವುದಿಲ್ಲ. ಸ್ವಲ್ಪವೇ ಹೊತ್ತಿಗೆ ಅವರ ವಾಟ್ಸ್‌ಆ್ಯಪ್‌ಗೆ ಅವರ ಮಾಜಿ ಸಹೋದ್ಯೋಗಿಯ ಫೋಟೋಗಳು ಬಂದವು. ಹಲವು ವರ್ಷ ಒಟ್ಟಿಗೇ ಕೆಲಸ ಮಾಡಿದ್ದರಿಂದ ಅವರದ್ದೇ ಫೋಟೋ ಎಂಬುದು ಅವರಿಗೆ ಖಚಿತವಾಯಿತು. ಆ ಕಡೆ ಇರುವ ವ್ಯಕ್ತಿ ತನ್ನ ಮಾಜಿ ಸಹೋದ್ಯೋಗಿಯೇ ಎಂದುಕೊಂಡು ಸ್ವಲ್ಪ ಹೊತ್ತು ಔಪಚಾರಿಕ ಮಾತುಕತೆಯನ್ನೂ ಚಾಟ್‌ನಲ್ಲಿ ಮಾಡುತ್ತಾರೆ. ಸ್ವಲ್ಪ ಹೊತ್ತಿಗೇ ಒಂದು ಫೋನ್ ಬರುತ್ತದೆ. ಅದು ಕೂಡ ಮಾಜಿ ಸಹೋದ್ಯೋಗಿಯದ್ದೇ ಧ್ವನಿ. ಇದರಲ್ಲಿ ತನ್ನ ಸೊಸೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾಳೆ. 40 ಸಾವಿರ ಹಣ ಕೊಡಿ ಎಂದು ಕೇಳಿದ್ದಾರೆ. ಹಣ ಕೇಳಿದ ತಕ್ಷಣ ಇವರಿಗೆ ಅನುಮಾನ ಬಂತು.
ಅನುಮಾನ ವ್ಯಕ್ತಪಡಿಸಿದ ಕೆಲವೇ ಕ್ಷಣದಲ್ಲಿ ಆ ವ್ಯಕ್ತಿ ವೀಡಿಯೋ ಕಾಲ್ ಮಾಡಿದ. ಆ ವೀಡಿಯೋ ಕಾಲ್‌ನಲ್ಲಿ ಕಂಡ ಮುಖವೂ ಮಾಜಿ ಸಹೋದ್ಯೋಗಿಯದ್ದೇ. ‘ತುಟಿಗಳ ಚಲನೆ, ಧ್ವನಿ ಎಲ್ಲವೂ ಅವರ ಹಾಗೆಯೇ ಇತ್ತು. ನನ್ನ ಅನುಮಾನ ಪರಿಹಾರವಾಯಿತು. 40 ಸಾವಿರ ಯುಪಿಐ ಮೂಲಕ ಟ್ರಾನ್ಸ್‌ಫರ್ ಮಾಡಿದೆ’ ಎಂದು ರಾಧಾಕೃಷ್ಣ ಹೇಳುತ್ತಾರೆ. ದುಡ್ಡು ಕಳಿಸಿದ ಮೇಲೆ ಅನುಮಾನ ಬಂದು ತನ್ನ ಬಳಿ ಇದ್ದ ಮಾಜಿ ಸಹೋದ್ಯೋಗಿಯ ನಂಬರ್‌ಗೆ ಕರೆ ಮಾಡಿದಾಗ ಅವರು ಮೋಸ ಹೋಗಿದ್ದು ಬಯಲಾಯಿತು.
ಈ ಪ್ರಕರಣದಲ್ಲಿ ಮೋಸ ಮಾಡಿದವನ ಚಾಣಾಕ್ಷತೆಯೇನೆಂದರೆ, ಡೀಪ್ ಫೇಕ್ ಅನ್ನು ವೀಡಿಯೋ ಕಾಲ್‌ಗೆ ಅಳವಡಿಸಿಕೊಂಡಿದ್ದು!
ನಾವು ಈವರೆಗೆ ಈ ಡೀಪ್ ಫೇಕ್ ವೀಡಿಯೋಗಳನ್ನು, ಫೋಟೋಗಳನ್ನು ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ನೋಡಿದ್ದೇವೆ, ಫೇಸ್‌ಬುಕ್, ಟ್ವಿಟರ್ ಹಾಗೂ ಇತರ ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ಮೊದಲ ನೋಟಕ್ಕೆ ನಿಜ ಎನಿಸಿದರೂ, ತೀರಾ ಗಮನವಿಟ್ಟು ನೋಡಿದಾಗ, ನಾಲ್ಕಾರು ಬಾರಿ ನೋಡಿದಾಗ ಅದರಲ್ಲೊಂದು ಕೃತಕ ಚಲನೆ ಇರುವುದರಿಂದ ಇದು ಡೀಪ್ ಫೇಕ್ ಆಗಿರಬಹುದು ಎಂದು ಅನುಮಾನವನ್ನಾದರೂ ಪಡಬಹುದು. ಸೋಷಿಯಲ್ ಮೀಡಿಯಾದಲ್ಲೋ ಅಥವಾ ವಾಟ್ಸ್‌ಆ್ಯಪ್ ಚಾಟ್‌ನಲ್ಲೋ ಡೀಪ್ ಫೇಕ್ ನೋಡುವಾಗ ನಮಗೆ ಅಷ್ಟು ಸಮಯಾವಕಾಶ ಇರುತ್ತದೆ. ಅಲ್ಲಿ ಯಾವುದೇ ಅಂತಹ ತುರ್ತು ಇರುವುದಿಲ್ಲ. ಆದರೆ, ಲೈವ್ ಕಾಲ್‌ಗಳಲ್ಲಿ ಹಾಗಲ್ಲ. ಅದು ವೀಡಿಯೋ ಕಾಲ್ ಇರಲಿ, ಫೋನ್ ಕಾಲ್ ಆಗಿರಲಿ. ಅಲ್ಲೊಂದು ತುರ್ತು ಮೂಡುತ್ತದೆ. ಅಷ್ಟೇ ಅಲ್ಲ, ಅದರ ಜೊತೆಗೆ ಕರೆ ಮಾಡಿದ ವ್ಯಕ್ತಿ ‘ಯಾರೋ ಆಸ್ಪತ್ರೆಯಲ್ಲಿದ್ದಾರೆ; ನಾನು ಬಿಲ್ ಕೌಂಟರಿನಲ್ಲಿದ್ದೇನೆ’ ಎಂದೋ ಅಥವಾ ಮತ್ತಿನ್ನೇನೋ ತುರ್ತನ್ನು ನಮ್ಮ ತಲೆಯೊಳಗೆ ತುಂಬುತ್ತಾನೆ. ಆಗ ನಮ್ಮ ವಿವೇಚನಶಕ್ತಿ ಕಡಿಮೆಯಾಗುತ್ತದೆ. ಅವನ ಗಾಳಕ್ಕೆ ಬೀಳುತ್ತೇವೆ.
ಈ ಹಣ ಕೀಳುವ ದಂಧೆ ಹೊಸ ಹೊಸ ತಂತ್ರಜ್ಞಾನ ಬಂದಾಗಲೂ ಹೊಸ ಹೊಸ ರೂಪದಲ್ಲಿ ಬರುತ್ತೆ. ಡೀಪ್ ಫೇಕ್ ತಂತ್ರಜ್ಞಾನ ಹೊಸದಲ್ಲ. ಆದರೆ, ಇದನ್ನು ಹೊಸ ವಿಧಾನದ ಮೋಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ನಾವು ಮಾಡಬೇಕಿರುವುದಿಷ್ಟೇ, ಯಾರೇ ಹಣ ಕೇಳಿದರೂ ಹಣ ಕೇಳಿದ ವ್ಯಕ್ತಿಯ ‘ತುರ್ತು ಪರಿಸ್ಥಿತಿ’ಗೆ ನಾವು ಸ್ಪಂದಿಸಬಾರದು. ಹಣ ಕೇಳಿದ ತಕ್ಷಣ, ಕೇಳಿದ ವ್ಯಕ್ತಿಯನ್ನು ನಮ್ಮ ಮೂಲದಿಂದ ಸಂಪರ್ಕಿಸಿ ಅವನ ತುರ್ತನ್ನು ಖಚಿತಪಡಿಸಿಕೊಂಡೇ ಹಣಕಾಸಿನ ನೆರವು ನೀಡುವುದು ಉತ್ತಮ.
ಅದರ ಜೊತೆಗೆ ಈ ಡೀಪ್ ಫೇಕ್ ಅನ್ನು ಗುರುತಿಸುವುದಕ್ಕೂ ಒಂದು ವಿಧಾನವಿದೆ. ಸದ್ಯ ನಮ್ಮಲ್ಲಿ ಚಾಲ್ತಿಯಲ್ಲಿರುವ ಬಹುತೇಕ ಡೀಪ್ ಫೇಕ್‌ಗಳೆಲ್ಲವೂ ಸೀಮಿತ ವ್ಯಾಪ್ತಿಯವು. ಅಂದರೆ ಮುಖವನ್ನಷ್ಟೇ ಲೈವ್ ಡೀಪ್ ಫೇಕ್ ಮಾಡಲು ಸಾಧ್ಯವಾಗುವಂಥವು. ಇಡೀ ದೇಹವನ್ನು ಡೀಪ್ ಫೇಕ್ ಮಾಡಿ, ಅದು ಚಲಿಸುವಂತೆಯೂ ಮಾಡಿದರೆ ಅದರಲ್ಲೊಂದು ಕೃತಕತೆ ಎದ್ದುಕಾಣುತ್ತದೆ. ಅಷ್ಟರ ಮಟ್ಟಿಗೆ ಡೀಪ್ ಫೇಕ್ ಇನ್ನೂ ಸುಧಾರಿಸಬೇಕಿದೆ. ಈ ಕೃತಕತೆ ಎಲ್ಲಾದರೂ ಇದೆಯೇ ಎಂದು ನಾವು ಗಮನಿಸಬೇಕು. ಉದಾಹರಣೆಗೆ, ನಕ್ಕಾಗ ತುಟಿ ತೆರೆದುಕೊಳ್ಳುವ ರೀತಿ, ಕೆನ್ನೆಯ ಆಕಾರ ಬದಲಾಗುವ ರೀತಿಯೆಲ್ಲವೂ ಒಬ್ಬೊಬ್ಬರಿಗೂ ವಿಭಿನ್ನ. ಅದನ್ನು ಹಾಗೆ ಹಾಗೆಯೇ ಅನುಕರಿಸುವುದು ಡೀಪ್ ಫೇಕ್‌ಗೆ ಅಷ್ಟು ಸುಲಭವಲ್ಲ. ಮೋಸಗಾರರು ವ್ಯಕ್ತಿಯೊಬ್ಬನ ಬರಿ ಒಂದು ಫೋಟೋವನ್ನೋ, ಸಣ್ಣ ವೀಡಿಯೋವನ್ನೋ ಇಟ್ಟುಕೊಂಡು ಜನರೇಟಿವ್ ಎಐಗೆ ತರಬೇತಿ ಕೊಟ್ಟುಕೊಂಡು ಡೀಪ್ ಫೇಕ್ ಲೈವ್ ವೀಡಿಯೋ ಕಾಲ್ ಮಾಡಿದರೆ ಇಂತಹ ಕೃತಕತೆ ಕಣ್ಣಿಗೆ ರಾಚುವಂತೆ ಇರುತ್ತದೆ.
ಹೀಗಾಗಿ ಇಂತಹ ಸಂಗತಿಗಳ ಮೇಲೆ ಗಮನ ಹರಿಸಿ, ಈ ಡೀಪ್ ಫೇಕ್ ವೀಡಿಯೋ, ಆಡಿಯೋ ಕಾಲ್‌ಗಳ ಮೋಸದಿಂದ ತಪ್ಪಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.