ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೌತ ವಿಜ್ಞಾನಿ ಪ್ರೊ.ಬಿ.ವಿ.ಶ್ರೀಕಂಠನ್ ನಿಧನ 

Last Updated 29 ಅಕ್ಟೋಬರ್ 2019, 17:42 IST
ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ಭೌತ ವಿಜ್ಞಾನಿ ಪ್ರೊ.ಬಿ.ವಿ.ಶ್ರೀಕಂಠನ್ (94) ಮಲ್ಲೇಶ್ವರದ ಸ್ವಗೃಹದಲ್ಲಿ ಭಾನುವಾರ ನಿಧನರಾದರು.

ಕಾಸ್ಮಿಕ್‌ ಕಿರಣಗಳು, ಕಪ್ಪುರಂಧ್ರ, ನ್ಯೂಟ್ರಾನ್‌ ನಕ್ಷತ್ರಗಳ ಕುರಿತ ಸಂಶೋಧನೆಗಳ ಮೂಲಕ ಶ್ರೀಕಂಠನ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು.

ಟಾಟಾ ಇನ್ಸ್‌ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌ನ (ಟಿಐಎಫ್‌ಆರ್‌) ನಿರ್ದೇಶಕರಾಗಿದ್ದ ಶ್ರೀಕಂಠನ್‌ ಮೂಲ ವಿಜ್ಞಾನಕ್ಕೆ ಸಂಬಂಧಿಸಿ ಹಲವು ಯಶಸ್ವಿ ಕಾರ್ಯಕ್ರಮಗಳನ್ನುಹಮ್ಮಿಕೊಂಡಿದ್ದರು. 1948 ರಲ್ಲಿ ಈ ಸಂಸ್ಥೆಗೆ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದ ಅವರು, 1987 ರಲ್ಲಿ ನಿರ್ದೇಶಕರಾಗಿ ನಿವೃತ್ತರಾದರು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳ ನಾಯಕತ್ವ ವಹಿಸಿದ್ದರು.

ವಾತಾವರಣದಲ್ಲಿ ನ್ಯೂಟ್ರಿನೊ ಪತ್ತೆ ಹಚ್ಚಿದ ತಂಡದ ಪ್ರಮುಖ ಸದಸ್ಯರಾಗಿದ್ದರು. 50 ರ ದಶಕದಲ್ಲಿ ಕೆಜಿಎಫ್‌ ಗಣಿಯ ಹಲವು ಕಿ.ಮೀ.ಗಳಷ್ಟು ಆಳದಲ್ಲಿ ಈ ಕುರಿತ ಪ್ರಯೋಗ ನಡೆಸಲಾಗಿತ್ತು. ಭೂಮಿಯ ಆಳದಲ್ಲಿ ಕಾಸ್ಮಿಕ್‌ ಕಿರಣಗಳ ಕಣಗಳ ಪತ್ತೆ ಮತ್ತು ಆಗಸದಲ್ಲಿ ನೂರಾರು ಕಿ.ಮೀ ಎತ್ತರಕ್ಕೆ ಬಲೂನು ಹಾರಿಸಿ ಪ್ರೋಟಾನ್‌ಗಳ ಮೇಲೆ ಪ್ರಯೋಗ, ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್‌ ನಕ್ಷತ್ರಗಳಿಂದ ಹೊರ ಹೊಮ್ಮುವ ಕ್ಷ–ಕಿರಣಗಳನ್ನು ಪತ್ತೆ ಮಾಡುವ ಪ್ರಯೋಗಗಳಲ್ಲೂ ಶ್ರೀಕಂಠನ್ ಭಾಗಿಯಾಗಿದ್ದರು.

1947 ರಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಭೌತವಿಜ್ಞಾನ ಮತ್ತು ವೈರ್‌ಲೆಸ್‌ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದರು. ಪದ್ಮಭೂಷಣ, ಹೋಮಿ ಭಾಭಾ ಪದಕ, ಸಿ .ವಿ.ರಾಮನ್‌ ಪ್ರಶಸ್ತಿ, ಆರ್.ಡಿ.ಬಿರ್ಲಾ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಮೃತರಿಗೆ ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT