ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–2 ಹಾಗೂ 3 : ಎರಡೂ ಯೋಜನೆಗಳ ವಿಶೇಷ ಇಲ್ಲಿದೆ

Published 13 ಜುಲೈ 2023, 10:47 IST
Last Updated 13 ಜುಲೈ 2023, 10:47 IST
ಅಕ್ಷರ ಗಾತ್ರ

ಶ್ರೀಹರಿಕೋಟಾ: ಭಾರತದ ಮೂರನೇ ಅತಿ ದೊಡ್ಡ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ–3 ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆರಂಭಗೊಳ್ಳಲಿದೆ. ಚಂದ್ರಯಾನ–2ರಲ್ಲಿ ಆದ ಲೋಪಗಳನ್ನು ಸರಿಪಡಿಸಿಕೊಂಡು ಚಂದ್ರನ ಅಂಗಳದ ನಿಗದಿತ ಸ್ಥಳದಲ್ಲಿ ರೋವರ್‌ ಇಳಿಯುವಂತೆ ಮಾಡುವ ಸವಾಲು ಇಸ್ರೊ ವಿಜ್ಞಾನಿಗಳ ಎದುರು ಇದೆ.

ಒಂದೊಮ್ಮೆ ಅದು ಸಾಧ್ಯವಾದಲ್ಲಿ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ರೋವರ್‌ ಇಳಿಸಿದ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ. ಈ ಹಿಂದೆ ಅಮೆರಿಕಾ, ರಷ್ಯಾ ಹಾಗೂ ಚೀನಾದ ಯೋಜನೆಗಳು ಯಶಸ್ವಿಯಾಗಿದ್ದವು. 2019ರಲ್ಲಿ ಭಾರತ ಮತ್ತು ಇಸ್ರೇಲ್ ಈ ಪ್ರಯತ್ನಕ್ಕೆ ಕೈಹಾಕಿದ್ದವು. 2022ರಲ್ಲಿ ಜಪಾನ್ ಮತ್ತು ಯುಎಇ ಕೂಡಾ ಪ್ರಯತ್ನ ನಡೆಸಿತ್ತು.

ಈ ಬಾರಿ ಇಸ್ರೊ ಚಂದ್ರನ ಅಂಗಳದಲ್ಲಿ ರೋವರ್ ಇಳಿಸುವ ಮೂರನೇ ಪ್ರಯತ್ನವನ್ನು ಅತ್ಯಂತ ಆತ್ಮವಿಶ್ವಾಸದಿಂದ ನಡೆಸುತ್ತಿದೆ. 2019ರಲ್ಲಿ ಆದ ಲೋಪಗಳನ್ನು ಸರಿಪಡಿಸಿಕೊಂಡು, ಯೋಜನೆಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಲ್ಯಾಂಡರ್‌ನ ವಿನ್ಯಾಸ ಬದಲಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸತತ ಪ್ರಯೋಗಗಳನ್ನು ನಡೆಸಿ, ಚಂದ್ರನ ಅಂಗಳದಲ್ಲಿ ಅದನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಸಿದ್ಧಪಡಿಸಲಾಗಿದೆ. 

ಅದರಲ್ಲೂ ಒಂದೊಮ್ಮೆ ಅದು ಚಂದ್ರನ ಅಂಗಳದ ಮೇಲೆ ನಿಗದಿತ ಸ್ಥಳದಲ್ಲಿ ಇಳಿಯದಿದ್ದರೆ...? ಎಲೆಕ್ಟ್ರಾನಿಕ್ಸ್ ಮತ್ತು ಸೆನ್ಸರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ...? ನಿಗದಿತ ವೇಗ ಸಿಗದಿದ್ದರೆ...? ಅಂತಹ ಸಂದರ್ಭಗಳಲ್ಲಿ ಪರ್ಯಾಯ ಯೋಜನೆಯನ್ನು ಹಾಕಿಕೊಳ್ಳುವಂತೆಯೂ ರೋವರ್‌ ಅನ್ನು ಸಜ್ಜುಗೊಳಿಸಲಾಗಿದೆ.

ಪಿಟಿಐ ಚಿತ್ರ (ಪ್ರಜಾವಾಣಿ ಗ್ರಾಫಿಕ್ಸ್– ವಿಜಯಕುಮಾರಿ ಆರ್.)
ಪಿಟಿಐ ಚಿತ್ರ (ಪ್ರಜಾವಾಣಿ ಗ್ರಾಫಿಕ್ಸ್– ವಿಜಯಕುಮಾರಿ ಆರ್.)

ಶುಕ್ರವಾರ ಮಧ್ಯಾಹ್ನ ಶ್ರೀಹರಿಕೋಟಾದಿಂದ ಉಡ್ಡಯನಗೊಳ್ಳುವ ಮಾರ್ಕ್‌–3 ಬಾಹ್ಯಾಕಾಶ ನೌಕೆಯು 179 ಕಿ.ಮೀ. ಎತ್ತರಕ್ಕೆ ತಲುಪಿ ತನ್ನ ಕಕ್ಷೆ ಸೇರಲಿದೆ. ನಂತರ ಭೂಮಿಯ ಗುರುತ್ವಾಕರ್ಷಣ ಶಕ್ತಿಯಿಂದ ದೂರ ಸರಿಯಲು ನಿಧಾನಕ್ಕೆ ತನ್ನ ಕಕ್ಷೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ. ಆ ಮೂಲಕ ಚಂದ್ರನತ್ತ ವಾಲಲಿದೆ. ಚಂದ್ರನನ್ನು ಸಮೀಪಿಸುತ್ತಿದ್ದಂತೆ, ಅದರ ಗುರುತ್ವಾಕರ್ಷಣೆಯತ್ತ ಸಾಗಲಿದೆ. ನಂತರ ಸುತ್ತುವ ಕಕ್ಷೆಯನ್ನು ಕಿರಿದಾಗಿಸಿಕೊಳ್ಳಲಿದೆ. ನಂತರ 100X100 ಕಿ.ಮೀ. ವೃತ್ತಾಕಾರದಲ್ಲಿ ಸುತ್ತಲಿದೆ. ಅಲ್ಲಿಂದ ಮುಂದೆ ಚಂದ್ರಯಾನ–3 ಅತ್ಯಂತ ಕುತೂಹಲಕರ ಘಟ್ಟ ತಲುಪಲಿದೆ.

ಚಂದ್ರನ ಅಂಗಳದಲ್ಲಿ ನಡೆದಾಡುವ ರೋವರ್‌ ಹೊತ್ತೊಯ್ಯುವ ಲ್ಯಾಂಡರ್‌ ಉಡ್ಡಯನ ವಾಹನದಿಂದ ಪ್ರತ್ಯೇಕಗೊಳ್ಳಲಿದೆ. ಪ್ರೊಪಲ್ಶನ್ ಮಾಡ್ಯೂಲ್‌ನಿಂದ ಪ್ರತ್ಯೇಕಗೊಂಡು, ಸ್ವಂತ ಶಕ್ತಿಯ ಮೂಲಕ ಚಂದ್ರನ ಸಮೀಪಿಸಲಿದೆ. ಈ ಎಲ್ಲಾ ಪ್ರಕ್ರಿಯೆಗೆ ಈ ಬಾರಿ ಬೇಕಿರುವ ಸಮಯ 42 ದಿನಗಳು.

ಚಂದ್ರನ ಅಂಗಳದಲ್ಲಿನ ರಾತ್ರಿಯಲ್ಲಿ ಕ್ಷೀಣಿಸುವ ತಾಪಾಮಾನದಲ್ಲಿ ಒಂದು ದಿನಕ್ಕಿಂತ ಹೆಚ್ಚು ಕಾಲ ಲ್ಯಾಂಡರ್ ಮತ್ತು ರೋವರ್ ಕಾರ್ಯನಿರ್ವಹಿಸದು. ಹೀಗಾಗಿ ಚಂದ್ರನ ಅಂಗಳದಲ್ಲಿ ಸಂಜೆ ಹೊತ್ತಿನಲ್ಲಿ ಇಳಿಸಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ. 

ಇದನ್ನು ಓದಿ: ಚಂದ್ರಯಾನ–3ಗೆ ಕ್ಷಣಗಣನೆ: ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಇಸ್ರೊ ವಿಜ್ಞಾನಿಗಳ ತಂಡ

ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿಯಲಿದೆ. ಇಲ್ಲಿ ನೀರ್ಗಲ್ಲು, ಖನಿಜಗಳ ನಿಕ್ಷೇಪಗಳಿವೆ ಎಂದೆನ್ನಲಾಗಿದೆ. ಚಂದ್ರಯಾನ–2ರಲ್ಲಿ ತೆಗೆದ ಕೆಲ ಚಿತ್ರಗಳನ್ನು ಆಧರಿಸಿ ಈ ಬಾರಿಯ ಲ್ಯಾಂಡ್ ಆಗುವ ಸ್ಥಳವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಈ ಬಾರಿ ಉಡ್ಡಯನ ವಾಹನ ಸೇರಿದಂತೆ ಒಟ್ಟು ತೂಕ ಹೆಚ್ಚಾಗಿದೆ. ಲ್ಯಾಂಡರ್‌ನಲ್ಲಿ ಮಾಡಿಕೊಂಡಿರುವ ಹಲವು ಬದಲಾವಣೆಗಳಿಂದಾಗಿ ತೂಕ ಹೆಚ್ಚಳವಾಗಿದೆ. ಆ ಮೂಲಕ ಚಂದ್ರನ ಅಂಗಳದ ಮೇಲೆ ಸುರಕ್ಷಿತವಾಗಿ ಇಳಿಸುವ ಯೋಜನೆ ಇಸ್ರೊದ್ದು.

ಇದನ್ನೂ ಓದಿ: ಭಾವುಕರಾದ ಇಸ್ರೊ ಅಧ್ಯಕ್ಷ ಶಿವನ್‌, ಸಮಾಧಾನಪಡಿಸಿದ ಪ್ರಧಾನಿ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT