ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ 3: ಭೂಮಿಯ ಕಕ್ಷೆಗೆ ಪ್ರೊಪಲ್ಷನ್ ಮಾಡ್ಯೂಲ್ ತಂದ ಇಸ್ರೊ

Published 5 ಡಿಸೆಂಬರ್ 2023, 4:54 IST
Last Updated 5 ಡಿಸೆಂಬರ್ 2023, 4:54 IST
ಅಕ್ಷರ ಗಾತ್ರ

ಬೆಂಗಳೂರು: ‘ಚಂದ್ರಯಾನ–3’ ಬಾಹ್ಯಾಕಾಶ ಕಾರ್ಯಕ್ರಮದ ನೋದನ ಘಟಕವನ್ನು (ಪ್ರೊಪಲ್ಷನ್ ಮಾಡ್ಯೂಲ್) ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಯೊಂದಕ್ಕೆ ಮರಳಿ ಸೇರಿಸುವ ವಿಶಿಷ್ಟ ಪ್ರಯೋಗ ಮಾಡಲಾಗಿದೆ ಎಂದು ಇಸ್ರೊ ಹೇಳಿದೆ.

ಚಂದಿರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಗನನೌಕೆಯ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವುದು ಈ ಚಂದ್ರಯಾನ–3ರ ಉದ್ದೇಶವಾಗಿತ್ತು. ಲ್ಯಾಂಡರ್‌ (ವಿಕ್ರಮ್‌) ಹಾಗೂ ರೋವರ್ (ಪ್ರಜ್ಞಾನ್) ನೋದನ ಘಟಕದಿಂದ ಬೇರ್ಪಟ್ಟು, ಚಂದ್ರನ ದಕ್ಷಿಣ ಧ್ರುವದತ್ತ ಪಯಣ ಬೆಳೆಸಿದ್ದವು.

ನಂತರ, ನೋದನ ಘಟಕವು ಚಂದ್ರನ ಕಕ್ಷೆಯಲ್ಲಿಯೇ ಪರಿಭ್ರಮಿಸುತ್ತಿತ್ತು. ಈ ಘಟಕದಲ್ಲಿ ಅಳವಡಿಸಲಾಗಿದ್ದ ‘ಸ್ಪೆಕ್ಟ್ರೊ ಪೊಲ್ಯಾರಿಮೆಟ್ರಿ ಆಫ್ ಹ್ಯಾಬಿಟೆಬಲ್ ಪ್ಲಾನೆಟ್‌ ಅರ್ಥ್’(ಎಸ್‌ಎಚ್‌ಎಪಿಇ) ಎಂಬ ಸಾಧನವು ತನ್ನ ಕಾರ್ಯಾಚರಣೆ ಆರಂಭಿಸಿತ್ತು.

ನೋದನ ಘಟಕವು ಮೂರು ತಿಂಗಳು ಕಾಲ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿತ್ತು. ಈ ಮೂರು ತಿಂಗಳ ಅವಧಿಗೆ ‘ಎಚ್‌ಎಚ್‌ಎಪಿಇ’ ಸಾಧನವನ್ನು ಬಳಸಿಕೊಂಡು, ಭವಿಷ್ಯದ ಕಾರ್ಯಕ್ರಮಗಳಿಗಾಗಿ ಬಾಹ್ಯಾಕಾಶ  ವಿದ್ಯಮಾನಗಳ ಅಧ್ಯಯನ, ಮಾಹಿತಿ ಸಂಗ್ರಹಿಸುವ ಉದ್ದೇಶವನ್ನು ಹೊಂದಲಾಗಿತ್ತು ಎಂದು ಇಸ್ರೊ ತಿಳಿಸಿದೆ.

ಆದರೆ, ಉಡ್ಡಯನ ವಾಹನ ‘ಎಲ್‌ವಿಎಂ3’, ನೋದನ ಘಟಕವನ್ನು ಅತ್ಯಂತ ಕರಾರುವಾಕ್ಕಾಗಿ ಕಕ್ಷೆಯಲ್ಲಿ ಸೇರಿಸಿತ್ತು. ಇದರ ಫಲವಾಗಿ, ಒಂದು ತಿಂಗಳ ಕಾಲ ಕಾರ್ಯಾಚರಣೆ ನಂತರವೂ ನೋದನ ಘಟಕದಲ್ಲಿ 100 ಕೆ.ಜಿಗೂ ಅಧಿಕ ಇಂಧನ ಲಭ್ಯವಿತ್ತು. 

ಈ ಹೆಚ್ಚುವರಿ ಇಂಧನ ಲಭ್ಯತೆಯನ್ನು ಬಳಸಿಕೊಂಡು, ಚಂದ್ರನ ಕಕ್ಷೆಯಿಂದ ಭೂ ಕಕ್ಷೆಗೆ ನೋದನ ಘಟಕವನ್ನು ಮರಳಿ ನೂಕುವಂತೆ ಮಾಡಲು ನಿರ್ಧರಿಸಿ, ಈ ಪ್ರಯೋಗ ನಡೆಸಲಾಯಿತು ಎಂದು ಇಸ್ರೊ ಪ್ರಕಟಣೆ ತಿಳಿಸಿದೆ.

ಸದ್ಯ, ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಯಾವುದೇ ಉಪಗ್ರಹಗಳಿಂದ ನೋದನ ಘಟಕಕ್ಕೆ ಅಪಾಯ ಇಲ್ಲ ಎಂದೂ ಇಸ್ರೊ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT