ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ 2: ಸೆ.7ರಂದು ಮಧ್ಯರಾತ್ರಿ ಲ್ಯಾಂಡರ್ ಚಂದ್ರನ ಅಂಗಳ ಸ್ಪರ್ಶ

Last Updated 5 ಸೆಪ್ಟೆಂಬರ್ 2019, 16:35 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–2 ನೌಕೆಯು ಚಂದ್ರನ ಮೇಲ್ಮೈ ಸ್ಪರ್ಶಿಸಲು ಇನ್ನು ಕೆಲ ದಿನಗಳಷ್ಟೇ ಬಾಕಿ ಇವೆ.ಚಂದ್ರನ ಅಂಗಳದಲ್ಲಿ ನೌಕೆ ಇಳಿಯುವ ಮುಂಚಿನ ಕೊನೆಯ ಕಾರ್ಯಾಚರಣೆಯನ್ನು ಭಾರ ತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮೊದಲೇ ನಿಗದಿಯಾಗಿದ್ದಂತೆ ನಸುಕಿನ 3.42ರ ವೇಳೆ ಒಂಬತ್ತು ಸೆಕೆಂಡ್‌ ಅವಧಿಯಲ್ಲಿ ಈ ಕಾರ್ಯಾಚರಣೆ ನಡೆಯಿತು. ನೌಕೆಯಲ್ಲಿರುವ ವಿಕ್ರಮ್ ಲ್ಯಾಂಡರ್ ಅನ್ನು35 ಕಿ.ಮೀ. X 101 ಕಿ.ಮೀ. ಕಕ್ಷೆಯಲ್ಲಿ ಇರಿಸಲಾಯಿತು.

ಈ ಮೂಲಕ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವುದಕ್ಕೆ ಲ್ಯಾಂಡರ್ ಅನ್ನು ಸಜ್ಜುಗೊಳಿಸಲಾಗಿದೆ.

ಕಕ್ಷೆಗಾಮಿಯು (ಆರ್ಬಿಟರ್) 96 ಕಿ.ಮೀ x 125 ಕಿ.ಮೀ ದೂರದ ಕಕ್ಷೆಯಲ್ಲಿ ಸುತ್ತಲಿದೆ. ಲ್ಯಾಂಡರ್ ಹಾಗೂ ಆರ್ಬಿಟರ್ ಸುರಕ್ಷಿತವಾಗಿವೆ ಎಂದು ಇಸ್ರೊ ತಿಳಿಸಿದೆ.

ಸೆಪ್ಟೆಂಬರ್ 7ರಂದು ಮಧ್ಯರಾತ್ರಿ 1.30ರಿಂದ 2.30ರ ಅವಧಿಯಲ್ಲಿ ಚಂದ್ರನ ಅಂಗಳವನ್ನು ಲ್ಯಾಂಡರ್ ಸ್ಪರ್ಶಿಸಲಿದೆ.

ಸುರಕ್ಷಿತವಾಗಿ ಇಳಿದ 3–4 ಗಂಟೆಗಳ ಅವಧಿಯಲ್ಲಿ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಬೇರ್ಪಟ್ಟು, ಚಂದ್ರನ ಅಧ್ಯಯನದಲ್ಲಿ ತೊಡಗಲಿದೆ. ಚಂದ್ರನನ್ನು ಸ್ಪರ್ಶಿಸುವ ಕೊನೆಯ 15 ನಿಮಿಷಗಳು ಸತ್ವಪರೀಕ್ಷೆಯ ಸಮಯ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ಹೇಳಿದ್ದರು.

ಚಂದ್ರನ ಮೇಲೆ ನೌಕೆ ಇಳಿಯುವ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವೀಕ್ಷಿಸಲಿದ್ದಾರೆ. ದೇಶದ ವಿವಿಧ ಭಾಗಗಳ 60 ಶಾಲಾ ಮಕ್ಕಳೂ ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಮೋದಿ ಜೊತೆ ‘ಚಂದ್ರಯಾನ–2’ ವೀಕ್ಷಣೆ: ಸಿಂಧನೂರಿನ ವೈಷ್ಣವಿ ಆಯ್ಕೆ

ರಾಯಚೂರು: ‘ಚಂದ್ರಯಾನ–2’ ನೌಕೆಯು ಚಂದ್ರನ ಅಂಗಳಕ್ಕೆ ಇಳಿಯುವುದನ್ನು ವೀಕ್ಷಿಸಲು ಸೆ.7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಬರುತ್ತಿದ್ದು, ಪ್ರಧಾನಿ ಜತೆಗೆ ಈ ವಿದ್ಯಮಾನವೀಕ್ಷಿಸಲು ಸಿಂಧನೂರಿನ ಡಾಫೋಡಿಲ್ಸ್‌ ಕಾನ್ಸೆಪ್ಟ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ನಾಗರಾಜ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶದಾದ್ಯಂತ 20 ನಿಮಿಷಗಳ 20 ಪ್ರಶ್ನೆಗಳ ಆನ್‌ಲೈನ್‌ ಪರೀಕ್ಷೆಯನ್ನು ಇಸ್ರೊ ನಡೆಸಿತ್ತು. ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿದ್ದರು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಇಸ್ರೊ ಕೇಂದ್ರಕ್ಕೆ ಆಹ್ವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT