ಶುಕ್ರವಾರ, ಜನವರಿ 27, 2023
25 °C
ಭೂ ಪರಿವೀಕ್ಷಣಾ ಉಪಗ್ರಹ ‘ಓಷನ್‌ಸ್ಯಾಟ್–3’ ಉಡ್ಡಯನ

ಇಸ್ರೊ: ಕಕ್ಷೆ ಸೇರಿದವು 9 ಉಪಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಒಂಬತ್ತು ಉಪಗ್ರಹಗಳ ಗುಚ್ಛವನ್ನು ಶನಿವಾರ ನಭಕ್ಕೆ ಕಳುಹಿಸಿದೆ. ಭೂ ಪರಿವೀಕ್ಷಣಾ ಉಪಗ್ರಹವಾದ ‘ಓಷನ್‌ಸ್ಯಾಟ್–3’ ಜೊತೆಗೆ ಎಂಟು ಚಿಕ್ಕ ಉಪಗ್ರಹಗಳನ್ನು ರಾಕೆಟ್ ಹೊತ್ತೊಯ್ಯಿತು.

ಬೆಂಗಳೂರಿನ ‘ಪಿಕ್ಸೆಲ್’ ಎಂಬ ಖಾಸಗಿ ಸಂಸ್ಥೆ ನಿರ್ಮಿಸಿರುವ ‘ಆನಂದ್’ ಉಪಗ್ರಹವೂ ಇದರಲ್ಲಿದೆ. ಇದು ಇಸ್ರೊ ಕೈಗೊಂಡ ದೀರ್ಘ ಅವಧಿಯ (2 ಗಂಟೆ) ಉಡ್ಡಯನ ಯೋಜನೆ. ಸಂಸ್ಥೆಯ ಅತ್ಯಂತ ಯಶಸ್ವಿ ಪಿಎಸ್‌ಎಲ್‌ವಿ ರಾಕೆಟ್‌ನ 56ನೇ ಬಾಹ್ಯಾಕಾಶ ಪಯಣವಿದು. ಈ ಮೂಲಕ ವರ್ಷದ ಐದನೇ ದೊಡ್ಡ ಹಾಗೂ ಕೊನೆಯ ಕಾರ್ಯಾಚರಣೆಯನ್ನು ಇಸ್ರೊ ಪೂರ್ಣಗೊಳಿಸಿದೆ.

ಭಿನ್ನ ಕಕ್ಷೆಗಳಿಗೆ ಸೇರ್ಪಡೆ ಪ್ರಕ್ರಿಯೆ

*ಭೂ ಪರಿವೀಕ್ಷಣಾ ಉಪಗ್ರಹವಾದ (ಇಒಎಸ್‌–06) ‘ಓಷನ್‌ಸ್ಯಾಟ್–3’ ಅನ್ನು ಉಡ್ಡಯನವಾದ 17 ನಿಮಿಷಗಳಲ್ಲಿ, 742 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಲಾಯಿತು

*ನಂತರ ರಾಕೆಟ್ ಅನ್ನು ಕೆಳಗಿನ ಕಕ್ಷೆಗೆ ಇಳಿಸಿ, ಉಳಿದ ಎಂಟು ಚಿಕ್ಕ ಉಪಗ್ರಹಗಳನ್ನು 528 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಲಾಯಿತು

*ಈ ಎಲ್ಲ ಪ್ರಕ್ರಿಯೆ ಮುಗಿಯಲು ವಿಜ್ಞಾನಿಗಳಿಗೆ 2 ಗಂಟೆಯಷ್ಟು ಸುದೀರ್ಘ ಸಮಯ ಹಿಡಿಯಿತು 

ಏನಿದು ಓಷನ್‌ಸ್ಯಾಟ್–3

*ಓಷನ್‌ಸ್ಯಾಟ್ ಸರಣಿಯ ಭೂ ಪರಿವೀಕ್ಷಣಾ ಉಪಗ್ರಹಗಳಲ್ಲಿ ಇದು ಮೂರನೆಯದ್ದು

*ಈ ಸರಣಿಯ ಮೊದಲ ಉಪಗ್ರಹವನ್ನು 1999ರಲ್ಲಿ ಉಡಾವಣೆ ಮಾಡಲಾಗಿತ್ತು, ಅದು ಈಗ ನಿವೃತ್ತವಾಗಿದೆ

*ಸರಣಿಯ ಎರಡನೇ ಉಪಗ್ರಹವು 2009ರಲ್ಲಿ ಕಕ್ಷೆ ಸೇರಿತ್ತು. ಇದು ಕಾರ್ಯಾಚರಣೆಯಲ್ಲಿದೆ

*ಓಷನ್‌ಸ್ಯಾಟ್ ಸರಣಿಯ ಮೂರನೇ ಉಪಗ್ರಹ ಶನಿವಾರ ಯಶಸ್ವಿಯಾಗಿ ಕಕ್ಷೆ ಸೇರಿದೆ

*ಓಷನ್‌ಸ್ಯಾಟ್ ಸರಣಿಯ ಎರಡನೇ ಉಪಗ್ರಹದ ಕೆಲಸವನ್ನು ಮೂರನೇ ಉಪಗ್ರಹ ಮುಂದುವರಿಸಲಿದೆ

ಓಷನ್‌ಸ್ಯಾಟ್–3 ಕೆಲಸ?

ಓಷನ್‌ಸ್ಯಾಟ್‌–3 ಉಪಗ್ರಹದಲ್ಲಿ ಸುಧಾರಿತ ಉಪಕರಣಗಳನ್ನು ಬಳಸಲಾಗಿದೆ. ಸಾಗರ ಹವಾಮಾನದ ಮೇಲೆ ನಿಗಾ ಇರಿಸುವುದು ಇದರ ಪ್ರಮುಖ ಕೆಲಸಗಳಲ್ಲಿ ಒಂದು. ಜೊತೆಗೆ ಏರೋಸಾಲ್‌ (ಅನಿಲಗಳಲ್ಲಿರುವ ದ್ರವಕಣಗಳು) ಮಾರುತಗಳನ್ನೂ ಗಮನಿಸಿ, ದತ್ತಾಂಶಗಳನ್ನು ರವಾನಿಸುತ್ತದೆ. ಈಗಾಗಲೇ ಓಷನ್‌ಸ್ಯಾಟ್–2 ಮಾಡುತ್ತಿರುವ ಈ ಕೆಲಸಗಳನ್ನು ಹೊಸ ಉಪಗ್ರಹ ಮುಂದುವರಿಸಲಿದೆ 

  ಉಡ್ಡಯನ ಮಾಡಲಾದ ಉಪಗ್ರಹಗಳು

*ಓಷನ್‌ಸ್ಯಾಟ್‌–3

ಇಸ್ರೊ ನಿರ್ಮಿಸಿರುವ ಈ ಉಪಗ್ರಹವು ಓಷನ್ ಕಲರ್ ಮಾನಿಟರ್, ಸೀ ಸರ್ಫೇಸ್ ಟೆಂಪರೇಚರ್ ಮಾನಿಟರ್, ಕು ಬ್ಯಾಂಡ್ ಸ್ಕ್ಯಾಟರೋಮೀಟರ್, ಎಆರ್‌ಜಿಒಎಸ್ ಉಪಕರಣಗಳನ್ನು ಒಳಗೊಂಡಿದೆ

*ಐಎನ್‌ಎಸ್–2ಬಿ

*ಇದು ಭೂತಾನ್‌ಗಾಗಿ ಇಸ್ರೊ ತಯಾರಿಸಿರುವ ನ್ಯಾನೊ ಸ್ಯಾಟಲೈಟ್–2 (ಐಎನ್‌ಎಸ್–2ಬಿ). ಇದರಲ್ಲಿ ಎರಡು ಪೇಲೋಡ್‌ಗಳಿವೆ. ನ್ಯಾನೊ ಎಂಎಕ್ಸ್ ಮತ್ತು ಎಪಿಎಸ್‌ಆರ್ ಡಿಜಿಪೀಟರ್

*ಇಸ್ರೊದ ಯುಆರ್‌ ರಾವ್ ಸ್ಯಾಟಲೈಟ್ ಸೆಂಟರ್ ಮತ್ತು ಭೂತಾನ್‌ನ ಇನ್ಫರ್ಮೇಷನ್ ಟೆಕ್ನಾಲಜಿ ಅಂಡ್ ಟೆಲಿಕಾಮ್ ಇಲಾಖೆ ಜಂಟಿಯಾಗಿ ಅಭಿವೃದ್ಧಿಪಡಿಸಿವೆ

ಆನಂದ್

ಬೆಂಗಳೂರು ಮೂಲಕ ಬಾಹ್ಯಾಕಾಶ ನವೋದ್ಯಮ ‘ಪಿಕ್ಸೆಲ್’ ಅಭಿವೃದ್ಧಿಪಡಿಸಿರುವ ಈ ಖಾಸಗಿ ಉಪಗ್ರಹವು ಕೃಷಿ, ಹವಾಮಾನ ಬದಲಾವಣೆ ಮತ್ತು ನಗರ ಯೋಜನೆಗೆ ಸಂಬಂಧಿಸಿದ ದತ್ತಾಂಶ ಹಾಗೂ ಉತ್ಕೃಷ್ಟ ದರ್ಜೆಯ ಚಿತ್ರಗಳನ್ನು ಒದಗಿಸುತ್ತದೆ. ಭೂಮಿಯ ಮೇಲೆ ನಿರಂತರವಾಗಿ ನಿಗಾ ಇಡುತ್ತದೆ

ಥೈಬೋಲ್ಟ್ (ಎರಡು ಉಪಗ್ರಹ)

ಧ್ರುವ್ ಸ್ಪೇಸ್ ಬಾಹ್ಯಾಕಾಶ ನವೋದ್ಯಮವು ಎರಡು ಸಂಹವನ ಉಪಗ್ರಹಗಳನ್ನು ಅಭಿವೃದ್ಧಿಪಡಿಸಿದೆ

ಆಸ್ಟ್ರೋಕ್ಯಾಸ್ಟ್ (4 ಉಪಗ್ರಹ)

ಇಂಟರ್ನೆಟ್‌ ಆಫ್ ಥಿಂಗ್ಸ್‌ಗೆ (ಐಒಟಿ) ಸಂಬಂಧಿಸಿದ ನಾಲ್ಕು ಉಪಗ್ರಹಗಳನ್ನು ಅಮೆರಿಕದ ಸ್ಪೇಸ್‌ಫ್ಲೈಟ್ ಅಭಿವೃದ್ಧಿಪಡಿಸಿದೆ

ಆಧಾರ: ಪಿಟಿಐ, ಇಸ್ರೊ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು