ನವದೆಹಲಿ: ಚಂದ್ರಯಾನ–4 ಹಾಗೂ ಚಂದ್ರಯಾನ–5 ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿಯನ್ನು ಶೀಘ್ರದಲ್ಲೇ ಕೋರಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ಮಂಗಳವಾರ ತಿಳಿಸಿದ್ದಾರೆ.
ಎರಡೂ ಯೋಜನೆಗಳಿಗೆ ಅಗತ್ಯವಿರುವ ಉಪಗ್ರಹಗಳ ವಿನ್ಯಾಸ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ 50ರಿಂದ 70 ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೊ ಸಜ್ಜಾಗಿದೆ ಎಂದು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ತಿಳಿಸಿದ್ದಾರೆ.
ಚಂದ್ರಯಾನ–4 ಯೋಜನೆಯನ್ನು 2027–28ರ ಸುಮಾರಿಗೆ ಕಾರ್ಯಗತಗೊಳಿಸುವ ಉದ್ದೇಶ ‘ಇಸ್ರೊ’ಕ್ಕೆ ಇದೆ. ಚಂದ್ರನಲ್ಲಿನ ಮಣ್ಣು ಹಾಗೂ ಕಲ್ಲುಗಳನ್ನು ಭೂಮಿಗೆ ತರುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.