ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಿಜಗತ್ತು | ನೆಲದಡಿಯಲ್ಲಿ ನಮಗೆ ತಿಳಿಯದ ಬೃಹತ್‌ ಲೋಕವಿದೆ

Published 15 ಆಗಸ್ಟ್ 2023, 19:30 IST
Last Updated 15 ಆಗಸ್ಟ್ 2023, 19:30 IST
ಅಕ್ಷರ ಗಾತ್ರ

‘ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ’ ಎಂದಿದ್ದರು ಡಿವಿಜಿ. ನಿಜ, ಎಂದು ಡಿವಿಜಿಯವರು ಪಾರಮಾರ್ಥಿಕವನ್ನು ಕುರಿತು ಹೇಳಿರಬಹುದು. ಆದರೆ ಇದು ನಿಸರ್ಗದ ವಾಸ್ತವತೆಯೂ ಹೌದು ಎನ್ನುವುದಕ್ಕೆ ಮೊನ್ನೆ ‘ಪಿಎನ್‌ಎಎಸ್‌’ ಪತ್ರಿಕೆಯಲ್ಲಿ ವರದಿಯಾದ ಸಂಶೋಧನೆಯೇ ಪುರಾವೆ. ಸ್ವಿಟ್ಜರ್ಲ್ಯಾಂಡಿನ ಸ್ವಿಸ್‌ ಫೆಡರಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಫಾರೆಸ್ಟ್ಸ್‌ ಸಂಸ್ಥೆಯ ಅರಣ್ಯ ವಿಜ್ಞಾನಿ ಮಾರ್ಕ್‌ ಅಂಥೊನಿ ಮತ್ತು ಸಂಗಡಿಗರ ಪ್ರಕಾರ ನಮ್ಮ ಕಣ್ಣಿಗೆ ಕಾಣುವ ಜೀವಿಜಗತ್ತಿಗಿಂತಲೂ ದೊಡ್ಡದೊಂದು ಜಗತ್ತು ಈ ಭೂಮಿಯಲ್ಲಿದೆಯಂತೆ. ಅದರಲ್ಲಿರುವ ವೈವಿಧ್ಯ ಹಾಗೂ ಜನಸಂಖ್ಯೆಯನ್ನು ಭೂಮಿಯ ಮೇಲೆ ನಮಗೆ ಕಾಣುವ ಜೀವಿಜಗತ್ತೂ ಸಾಟಿಯಾಗಲಾರದಂತೆ.

ಅಚ್ಚರಿಯಾಯಿತೇ? ಇದು ನೆಲದಡಿಯಲ್ಲಿ ಅಂದರೆ ಮಣ್ಣಿನಲ್ಲಿ ಜೀವಿಸುವ ಜೀವಿಗಳ ಸಂಖ್ಯೆ ನೆಲದ ಮೇಲೆ ನಾವು ಕಾಣುವ ಆನೆ, ಹುಲಿ, ಜಿಂಕೆ, ಮನುಷ್ಯ, ಮಂಗ ಮೊದಲಾದ ಜೀವಿಗಳಿಗಿಂತಲೂ ಹೆಚ್ಚು ಎಂದು ಇವರು ಲೆಕ್ಕ ಹಾಕಿದ್ದಾರೆ. ಇವರ ಲೆಕ್ಕಾಚಾರದ ಪ್ರಕಾರ ಭೂಮಿಯ ಮೇಲಿರುವ ಒಟ್ಟಾರೆ ಜೀವಿಗಳಲ್ಲಿ ಶೇ 59.5ರಷ್ಟು, ಎಂದರೆ ಐದರಲ್ಲಿ ಮೂರು ಪಾಲು ನೆಲದಡಿಯ ಮಣ್ಣಿನಲ್ಲಿಯೇ ನೆಲೆಯಾಗಿವೆ. ಉಳಿದ ಎರಡು ಪಾಲಷ್ಟೆ ನಮಗೆ ಕಾಣುವ ಜಗತ್ತು.

ಮಣ್ಣಿನ ಮಹತ್ವದ ಬಗ್ಗೆ ತಿಳಿಸಿಕೊಡಬೇಕಿಲ್ಲ. ಮನುಷ್ಯನ ಇಡೀ ನಾಗರಿಕತೆಗೆ ಅದುವೇ ಆಧಾರ. ಆತನ ಆಹಾರಕ್ಕೆ ಬೇಕಾದ ಗಿಡ, ಮರಗಳು ಬೆಳೆಯಲು ಅದುವೇ ಆಸರೆ. ಕುಡಿಯುವ ನೀರಿನ ಆಕರ. ನಾಗರಿಕತೆ ಹುಟ್ಟು ಹಾಕಿದ ನೂರಾರು ವಸ್ತುಗಳಿಗೆ ಮೂಲ. ಅಷ್ಟೇ ಯಾಕೆ, ಸಾವಿನ ನಂತರವೂ ಈ ಮಣ್ಣೇ ಆತನ ಕೊನೆಯನ್ನು ನಿರ್ಧರಿಸುವ ಸಾಧನ. ಇದು ಕೇವಲ ಮನುಷ್ಯನ ಕಥೆಯಷ್ಟೆ ಅಲ್ಲ. ಭೂಮಿಯ ಮೇಲೆ ಬದುಕುವ ಎಲ್ಲ ಜೀವಿಗಳೂ ಒಂದಲ್ಲ ಒಂದು ಬಗೆಯಲ್ಲಿ ಮಣ್ಣನ್ನೇ ಆಧರಿಸಿವೆ. ಈ ಮಣ್ಣು ಸ್ವತಃ ವಿಶಿಷ್ಟವಾದೊಂದು ಜೀವಿನೆಲೆ ಆಗಿರುವುದರಲ್ಲಿ ಅಚ್ಚರಿ ಏನಿಲ್ಲ. ಆದರೆ ಅಲ್ಲಿ ಎಷ್ಟು ಜೀವಿಗಳಿವೆ? ಯಾವುವು ಹೆಚ್ಚು? ಈ ಪ್ರಶ್ನೆಗಳಿಗೆ ನಿಖರವಾದ ಉತ್ತರವಿರಲಿಲ್ಲ.

ಮಾರ್ಕ್‌ ಆಂಥನಿ ಮತ್ತು ಸಂಗಡಿಗರು ಈ ಕಾರ್ಯವನ್ನು ಸಾಧಿಸಿದ್ದಾರೆ. ಇದುವರೆವಿಗೂ ವರದಿಯಾಗಿರುವಂತಹ ವಿವಿಧ ಜೀವಿಗಣನೆಗಳಲ್ಲಿ ವಿವಿಧ ಪ್ರಬೇಧಗಳು, ಕುಲಗಳಲ್ಲಿ ಇರುವ ಜೀವಿಗಳನ್ನು ಒಟ್ಟಾರೆ ಒಂದು ವರ್ಗವಾಗಿ ಪರಿಗಣಿಸಿಬಿಡುತ್ತಿದ್ದರು. ಉದಾಹರಣೆಗೆ, ಮನೆ ಇಲಿಯೂ, ನೆಲದಡಿಯಲ್ಲಿ ಬಿಲವನ್ನು ಕೊರೆದು ಜೀವಿಸುವ ಹೆಗ್ಗಣವೂ ಒಂದೇ ಜೀವಕುಟುಂಬಕ್ಕೆ ಸೇರಿಬಿಡುತ್ತಿದ್ದುವು. ಇದು ಮಣ್ಣಿನಲ್ಲಿ ಜೀವಿವೈವಿಧ್ಯ ಎಷ್ಟಿದೆ ಎಂದು ನಿಖರವಾಗಿ ತಿಳಿಯದಂತೆ ಮಾಡಿತ್ತು. ಇದೀಗ ಆಂಥನಿಯ ಲೆಕ್ಕಾಚಾರ ಈ ನೆಲೆಗಳನ್ನು ಪ್ರತ್ಯೇಕಿಸಿ, ಪುನಃ ಲೆಕ್ಕಾಚಾರ ಮಾಡಿದೆ.

ಆ ಪ್ರಕಾರ ನೆಲ, ಜಲ ಹಾಗೂ ಗಾಳಿಯಲ್ಲಿ ಇರುವ ಒಟ್ಟಾರೆ ಎಲ್ಲ ಜೀವಪ್ರಬೇಧಗಳನ್ನು ಕೂಡಿಸಿದರೂ, ನೆಲದ ಅಡಿಯಲ್ಲಿ ಜೀವಿಸುವ ಜೀವಿಗಳನ್ನು ಸರಿಗಟ್ಟುವುದಕ್ಕೆ ಸಾಧ್ಯವಿಲ್ಲವಂತೆ. ‘ಓ. ಸೂಕ್ಷ್ಮಜೀವಿಗಳನ್ನು ಸೇರಿಸಿದರೆ, ಇನ್ನೂ ಬೃಹತ್‌ ಸಂಖ್ಯೆ ದೊರೆಯುತ್ತಿತ್ತು. ಅದಿಲ್ಲದ್ದರಿಂದ ನೆಲದ ಮೇಲಿನ ಜೀವಿಪ್ರಮಾಣ ಕಡಿಮೆ ಆಗಿದೆ’ ಎಂದು ನಿಮಗನಿಸಿದ್ದರೆ ಕ್ಷಮಿಸಿ. ಹಾಗಲ್ಲ. ಈ ಲೆಕ್ಕಾಚಾರದಲ್ಲಿ ಬ್ಯಾಕ್ಟೀರಿಯಾ, ಬೂಸುಗಳಂತಹ ಸೂಕ್ಷ್ಮಜೀವಿಗಳೂ ಸೇರಿವೆ. ಹೀಗಾಗಿ ಇವೆರಡನ್ನೂ ಹೋಲಿಸಬಹುದು ಎನ್ನುವುದು ಮಾರ್ಕ್‌ ಅವರ ತರ್ಕ.

ಈ ಲೆಕ್ಕಾಚಾರಕ್ಕಾಗಿ ಇದಾಗಲೇ ಮಾಡಿರುವ ಜೀವಿಗಳ ಸರ್ವೆಗಳು, ಅದ್ಯಯನಗಳನ್ನೆಲ್ಲ ಮಾರ್ಕ್‌ ತಂಡ ಒಟ್ಟು ಮಾಡಿತ್ತು. ತದನಂತರ ಅವುಗಳಲ್ಲಿದ್ದ ವಿವಿಧ ಜೀವಿ ವರ್ಗಗಳನ್ನು ನೆಲ, ಜಲ ಹಾಗೂ ಮಣ್ಣಿನಲ್ಲಿ ವಾಸಿಸುವ ಜೀವಿಗಳನ್ನಾಗಿ ವಿಂಗಡಿಸಿದರು. ನೆಲದ ಮೇಲಿರುವ ಪ್ರಬೇಧಗಳೆಷ್ಟು? ನೆಲದಡಿಯಲ್ಲಿ, ಮಣ್ಣೇ ಮನೆಯಾಗಿರುವ ಪ್ರಬೇಧಗಳೆಷ್ಟು ಎಂದು ಪಟ್ಟಿ ಮಾಡಿದರು. ಒಟ್ಟಾರೆ ಪ್ರಬೇಧಗಳಲ್ಲಿ ಎಷ್ಟು ಅಂಶ ನೆಲದ ಅಡಿಯಲ್ಲಿ, ಎಷ್ಟು ನೆಲದ ಮೇಲೆ ಎಂದು ಗಣಿಸಿದರು. ಇವೆಲ್ಲದರ ಫಲಿತಾಂಶ: ಮಣ್ಣಿನಲ್ಲಿ ವಾಸಿಸುವ ಜೀವಿಗಳ ಪ್ರಬೇಧಗಳು ಒಟ್ಟಾರೆ ಭೂಮಿಯ ಮೇಲಿರುವ ಎಲ್ಲ ಜೀವಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು. ಶೇ 59.5ರಷ್ಟು ಎಂದು ಲೆಕ್ಕ ಸಿಕ್ಕಿದೆ.

ಈ ಜೀವಿಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಹಿಡಿದು ಹೆಗ್ಗಣಗಳಂತಹ ಸ್ತನಿಗಳವರೆಗೂ ಎಲ್ಲ ಪ್ರಬೇಧಗಳೂ ಇವೆ. ಅದರೆ ನೆಲದಡಿಯಲ್ಲಿ ಅತಿ ಹೆಚ್ಚಾಗಿ ಇರುವಂತಹವುಗಳಲ್ಲಿ ಎರೆಹುಳಕ್ಕೆ ಸಂಬಂಧಿಸಿದ ಹುಳುಗಳದ್ದೇ ಪ್ರಧಾನ ಪಾತ್ರ. ಈ ಹುಳುಗಳಲ್ಲಿ ಶೇ 99ರಷ್ಟು ನೆಲದಡಿಯಲ್ಲೇ ವಾಸಿಸುತ್ತವೆ. ಇವಕ್ಕೆ ಹೋಲಿಸಿದರೆ ಮಣ್ಣೇ ನೆಲೆಯಾದ ಬೂಸ್ಟುಜೀವಿಗಳಲ್ಲಿಯೂ ಕೇವಲ 90 ಶತಾಂಶವಷ್ಟೆ. ನಾವು ಕೇವಲ ಮೇಲೆ ಕಾಣುವ ಎತ್ತರದ ಮರಗಳನ್ನಷ್ಟೆ ನೋಡಿ ಖುಷಿ ಪಡುತ್ತೇವಷ್ಟೆ. ಅದಕ್ಕಿಂತಲೂ ಹೆಚ್ಚಿನ ವೈವಿಧ್ಯ ಮಣ್ಣಿನೊಳಗಿದೆ. ಸಸ್ಯವರ್ಗದಲ್ಲಿ ಶೇ 80ರಷ್ಟು ನೆಲದಡಿಯಲ್ಲಿ ಬೆಳೆಯುತ್ತವೆ. ನಂತರದ ಸ್ಥಾನ ಗೆದ್ದಲಿನದ್ದು. ನಾವು ಕಾಣುವ ಗೆದ್ದಲಿಗಿಂತಲೂ ಆರು ಪಟ್ಟು ಹೆಚ್ಚು ಗೆದ್ದಲಿನ ಪ್ರಬೇಧಗಳು ನಮ್ಮ ಕಣ್ಣಿಗೆ ಕಾಣದಂತೆ ನೆಲದಡಿಯಲ್ಲಿಯೇ ಜೀವಿಸುತ್ತವೆಯಂತೆ.

ಈಗ ಹೇಳಿ. ನೆಲದ ಮೇಲಿನ ಹುತ್ತಕ್ಕಿಂತಲೂ ನೆಲದಡಿಯದ್ದೇ ದೊಡ್ಡದು ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT