ಭಾನುವಾರ, ಸೆಪ್ಟೆಂಬರ್ 26, 2021
24 °C
ಗ್ರಹಣ

ಗರಿಷ್ಠ ಅವಧಿಯ ಖಗ್ರಾಸ ಚಂದ್ರಗ್ರಹಣ

ಡಾ.ಎಸ್.ಎ. ಮೋಹನ್ ಕೃಷ್ಣ Updated:

ಅಕ್ಷರ ಗಾತ್ರ : | |

‘ಗ್ರಹಣ’ ಎಂದರೆ ಹಲವರಲ್ಲಿ ಭಯ, ಆತಂಕ ಮೂಡುವುದು ಸಹಜ. ಗ್ರಹಣದ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಯುತ್ತಿದ್ದರೂ, ಜನರಲ್ಲಿ  ಮನೆ ಮಾಡಿರುವ ಮೂಢನಂಬಿಕೆ ಕಡಿಮೆಯಾಗುತ್ತಿಲ್ಲ. ಗ್ರಹಣ ಸಂಭವಿಸುತ್ತದೆ ಎಂದರೆ ಸಾಕು ಅನೇಕರು ಗಂಡಾಂತರ ಕಾದಿದೆ ಎಂದು ಆತಂಕ ಸೃಷ್ಟಿಸುತ್ತಾರೆ. ಗ್ರಹಣ ಸಂಭವಿಸುವುದು ಖಗೋಲ ವಿದ್ಯಮಾನ ಎಂದು ಯೋಚಿಸುವವರ ಸಂಖ್ಯೆ ಕಡಿಮೆ ಇದೆ. ಗಂಡಾಂತರಗಳು ಸಂಭವಿಸಲಿವೆ ಎಂದು ಆತಂಕಪಡುವವರು, ಇದರ ವೈಜ್ಞಾನಿಕ ಮಾಹಿತಿಯ ಸಹವಾಸವೇ ಬೇಡ ಎಂದು ದೂರ ಸರಿಯುತ್ತಾರೆ.  ಇದೇ 27, 28 ರಂದು  ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ.

ಜನವರಿ 31 ರಂದು ಸಂಭವಿಸಿದ ಅದ್ಭುತ ಚಂದ್ರ ಗ್ರಹಣವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.  ಅದೇ ರೀತಿ ಇಲ್ಲದಿದ್ದರೂ, 27–28 ರಂದು ಸಂಭವಿಸಲಿರುವ ಈ ಗ್ರಹಣವೂ ಗಮನ ಸೆಳೆಯಲಿದೆ.  ಶತಮಾನದ ಗರಿಷ್ಠ ಅವಧಿಯ ಗ್ರಹಣ ಇದಾಗಿರುವುದು ಈ ಗ್ರಹಣದ ವೈಶಿಷ್ಟ್ಯವಾಗಿದೆ. ಚಂದ್ರನನ್ನು ಭೂಮಿಯು ಪೂರ್ತಿಯಾಗಿ ಮರೆಮಾಚಿದಾಗ ‘ಚಂದ್ರ ಗ್ರಹಣ’ ಸಂಭವಿಸುತ್ತದೆ. ಗ್ರಹಣ ಸಂಭವಿಸುವ ವಿಧಾನ, ಅದರಲ್ಲಿ ಅಡಗಿರುವ ವೈಜ್ಞಾನಿಕ ಸಂಗತಿಗಳು ಜನರಲ್ಲಿ ಮನದಟ್ಟಾಗ ಬೇಕಾಗಿದೆ. ಗ್ರಹಣ ಸಂಭವಿಸುವಾಗ ವಿವಿಧ ಘಟ್ಟಗಳನ್ನು ವೀಕ್ಷಿಸಿದರೆ ಅದರ ಹಿಂದಿರುವ ವೈಜ್ಞಾನಿಕ ಮಾಹಿತಿ ಅರ್ಥವಾಗುತ್ತದೆ.

ಈ ಗ್ರಹಣವು ವಿಶ್ವದ ಅನೇಕ ಭಾಗಗಳಲ್ಲಿ ಕಂಡು ಬರಲಿದೆ. ಏಷ್ಯಾ, ಆಸ್ಟ್ರೇಲಿಯಾ, ಅಮೆರಿಕ, ಆಫ್ರಿಕಾ ಖಂಡಗಳಲ್ಲಿ ಈ  ಗ್ರಹಣ ವೀಕ್ಷಿಸಬಹುದು.  ಗ್ರಹಣದ ಸಂಪೂರ್ಣ ಅವಧಿ 6 ಗಂಟೆ 14 ನಿಮಿಷಗಳು. ಭಾರತದಲ್ಲಿ 27ರ ರಾತ್ರಿ 11.54ಕ್ಕೆ ಪ್ರಾರಂಭವಾಗಿ, 28ರ ನಸುಕಿನ 3.38ಕ್ಕೆ ಅಂತ್ಯಗೊಳ್ಳುವುದು. ಸಂಪೂರ್ಣ ಗ್ರಹಣದ ಅವಧಿ 1 ಗಂಟೆ 43 ನಿಮಿಷಗಳು. ಈ ಕಾರಣಕ್ಕಾಗಿಯೇ ಇದು ಶತಮಾನದ ಅತ್ಯಂತ ಗರಿಷ್ಠ ಅವಧಿಯ ಗ್ರಹಣವೆಂದು ಪರಿಗಣಿಸಲಾಗಿದೆ. ಈ ಗ್ರಹಣ ವೀಕ್ಷಿಸುವುದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಈ ಗರಿಷ್ಠ ಅವಧಿಯ ಚಂದ್ರ ಗ್ರಹಣವನ್ನು  ವೀಕ್ಷಿಸಿ ಸಂಭ್ರಮ ಪಡಬಹುದು. ಗ್ರಹಣ ಸಂಭವಿಸಿದಾಗ ಆಕಾಶ ಕಾಯಗಳಲ್ಲಿ ಗುರುತ್ವಾಕರ್ಷಣ ಶಕ್ತಿ ಉಂಟಾಗಿ ಸಮುದ್ರದಲ್ಲಿ ನೀರಿನ ಉಬ್ಬರವಿಳಿತ ಹೆಚ್ಚಬಹುದು. ದಯಮಾಡಿ ಮೂಢನಂಬಿಕೆಗೆ ಬೆಲೆ ಕೊಡಬೇಡಿ. 27ರಂದು ಕೆಂಪು ಗ್ರಹ ಖ್ಯಾತಿಯ ‘ಮಂಗಳ’ ಭೂಮಿಯ ತೀರ ಸಮೀಪ ಬಂದಿರುತ್ತದೆ. ಹೀಗಾಗಿ ಚಂದ್ರಗ್ರಹಣದ ಜತೆ ಖಗೋಲ ತಜ್ಞರು ಮಂಗಳ ಗ್ರಹದತ್ತಲೂ ಗಮನ ಕೇಂದ್ರಿಕರಿಸಿರುತ್ತಾರೆ.  

ಈ ಚಂದ್ರಗ್ರಹಣವು ಈ ವರ್ಷದ ಕೊನೆಯ ಗ್ರಹಣ.   ಮುಂದಿನ ವರ್ಷ ಎರಡು ಚಂದ್ರ ಗ್ರಹಣಗಳನ್ನು ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು