ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿಯ ಪತ್ತೆಗೆ ‘ಐ.ಡಿ.’

Published 21 ಫೆಬ್ರುವರಿ 2024, 0:30 IST
Last Updated 21 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಇದು ಡಿಜಿಟಲ್ ಯುಗ. ಶಿಕ್ಷಣ, ಆರೋಗ್ಯ, ಸಾರಿಗೆ, ಮಾರುಕಟ್ಟೆಗಳಂಥ ಎಷ್ಟೋ ವ್ಯವಹಾರಗಳು ಡಿಜಿಟಲೀಕರಣವಾಗಿವೆ. ಬಾರ್ ಕೋಡನ್ನು ಗುರುತಿಸಿ ಒಂದು ಉತ್ಪನ್ನದ ಎಲ್ಲಾ ವಿವರಗಳನ್ನು ತಿಳಿಯುವುದು, ಆಸ್ಪತ್ರೆಗಳಲ್ಲಿ ಒಂದು ಫೈಲಿನ ಮೇಲಿರುವ ಬಾರ್ ಕೋಡನ್ನು ಸ್ಕ್ಯಾನ್ ಮಾಡಿ ಆ ವ್ಯಕ್ತಿಯ ವಿವರಗಳನ್ನೆಲ್ಲಾ ಕಲೆಹಾಕುವುದು, ಟೋಲ್ ಗೇಟುಗಳಲ್ಲಿ ವಾಹನಗಳ ವಿವರಗಳನ್ನು ದಾಖಲಿಸಿ ಸುಂಕವನ್ನು ಪಾವತಿಸಿಕೊಳ್ಳಲು – ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಡಿಜಿಟಲೀಕರಣ ಬಹಳ ವೇಗವಾಗಿ ಆವರಿಸಿಕೊಂಡಿದೆ. ಇಲ್ಲೆಲ್ಲ ಬಳಸುವ ತಂತ್ರಜ್ಞಾನಕ್ಕೆ ‘ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್’ (ಆರ್. ಎಫ್. ಐ. ಡಿ.) ಎನ್ನಲಾಗುತ್ತದೆ. ವಿದ್ಯುತ್ಕಾಂತೀಯ ತರಂಗಗಳ ಸಹಾಯದಿಂದ ವಸ್ತುಗಳ ಮೇಲೆ ಅಂಟಿಸಿರುವ ಬಾರ್ ಕೋಡ್‌ ಇರುವ ಟ್ಯಾಗ್‌ ಅಥವಾ ಕಾರ್ಡುಗಳನ್ನು ಓದಿ ಅವುಗಳನ್ನು ಗುರುತಿಸಿ ನಮ್ಮ ಕೆಲಸಗಳನ್ನು ವೇಗವಾಗಿ ಸಾಧಿಸಿಕೊಳ್ಳುವ ಒಂದು ಬಹುಪಯೋಗಿ ತಂತ್ರಜ್ಞಾನವಿದು. ಆದರೆ ಇದು ಹೊಸ ವಿಷಯವೇನಲ್ಲ; ಬಹಳ ವರ್ಷಗಳ ಹಿಂದಿನಿಂದಲೇ ಈ ತಂತ್ರಜ್ಞಾನವನ್ನು ನಾವು ನೋಡಿದ್ದೇವೆ ಮತ್ತು ಬಳಸುತ್ತಿದ್ದೇವೆ. ಆರ್. ಎಫ್. ಐ. ಡಿ. ನಂತರ ‘ಕ್ರಿಪ್ಟೋಗ್ರಾಫಿಕ್ ಐ.ಡಿ. ಟ್ಯಾಗ್’ನ ಅನ್ವೇಷಣೆಯಾಯಿತು. ಆದರೆ ಇದಕ್ಕಿಂತಲೂ ಮುಂದುವರೆದ ಆವೃತ್ತಿಯಾದ, ಕ್ಷಣಮಾತ್ರದಲ್ಲೇ ಬಹಳ ನಿರ್ದಿಷ್ಟವಾಗಿ ಒಂದು ವಸ್ತುವು ಅಸಲಿಯೋ ನಕಲಿಯೋ ಎಂದು ಪತ್ತೆಮಾಡಿಬಿಡುವಂತಹ ‘ಐಡೆಂಟಿಫಿಕೇಷನ್ ಟ್ಯಾಗ್’ ಒಂದನ್ನು ಅಭಿವೃದ್ದಿಪಡಿಸಿದ್ದಾರೆ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು.

ವಾಟರ್ ಪ್ರೂಫ್, ಸೌಂಡ್‌ ಪ್ರೂಫ್‌ ಎನ್ನುವಂತೆ ಇದೊಂದು ‘ಟ್ಯಾಂಪರ್ ಪ್ರೂಫ್’ ತಂತ್ರಜ್ಞಾನವೆನ್ನುವುದು ವಿಶೇಷ. ಅಂದರೆ ಅಕ್ರಮವನ್ನು ತಡೆಯುವುದು. ಈ ಪುಟ್ಟ ಸಾಧನವು ಆರ್. ಎಫ್. ಐ. ಡಿ. ತಂತ್ರಜ್ಞಾನಕ್ಕಿಂತಲೂ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆಯಂತೆ. ಇಲ್ಲಿ ಬಳಕೆಯಾಗುವ ವಿದ್ಯುತ್ಕಾಂತೀಯ ತರಂಗ - ಟೆರಾಹರ್ಟ್ಸ್. ಇದು ಸೂಕ್ಷ್ಮತರಂಗ ಹಾಗೂ ಅವಕೆಂಪು ತರಂಗಗಳ ನಡುವಿನ ತರಂಗದೂರದ ಕಿರಣಗಳಾಗಿವೆ. ಇವು ಆರ್. ಎಫ್. ಐ. ಡಿ.ಯಲ್ಲಿ ಬಳಕೆಯಾಗುವ ರೇಡಿಯೊ ತರಂಗಗಳಿಗಿಂತಲೂ ಚಿಕ್ಕದಾಗಿದ್ದು, ಅತಿ ವೇಗವಾಗಿ ಚಲಿಸಬಲ್ಲವಂತೆ. ಆದರೆ ಇದರಲ್ಲಿನ ದೋಷವೆಂದರೆ ಕಳ್ಳತನ ಮಾಡುವವರು, ಸುಲಭವಾಗಿ ಈ ಕಾರ್ಡು ಅಥವಾ ಟ್ಯಾಗುಗಳನ್ನು ಕಿತ್ತು ನಕಲೀ ವಸ್ತುಗಳ ಮೇಲೆ ಅಂಟಿಸಿಕೊಂಡು ಅವನ್ನು ಅಸಲೀ ಎಂದು ಸಾಬೀತು ಮಾಡಿ ತಮ್ಮ ವ್ಯವಹಾರಗಳನ್ನು ಸಾಧಿಸಿಕೊಂಡುಬಿಡುತ್ತಿದ್ದರು. ಆದರೆ ಸಂಶೋಧಕರು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದುವೇ ಪುಟ್ಟ, ಅಗ್ಗ ಹಾಗೂ ಸುರಕ್ಷಿತವಾಗಿರುವ, ಸುಲಭವಾಗಿ ಮೋಸಮಾಡಲಾಗದಂತಹ ಐಡೆಂಟಿಫಿಕೇಷನ್ ಟ್ಯಾಗ್. ಇವರು ಇದಕ್ಕಾಗಿ ವಸ್ತುಗಳ ಮೇಲೆ ಚಿಪ್, ಸ್ಮಾರ್ಟ್ ಕಾರ್ಡು ಅಥವಾ ಟ್ಯಾಗನ್ನು ಅಂಟಿಸಲು ಬಳಸುವ ಅಂಟು ಅಥವಾ ಗೋಂದಿನಲ್ಲಿ ಲೋಹದ ಸೂಕ್ಷ್ಮಕಣಗಳನ್ನು ಬೆರೆಸಿದ್ದಾರೆ. ಇವೆರೆಡೂ ಬೆರೆತು ವಸ್ತುವಿನ ಮೇಲ್ಮೈ ಮೇಲೆ ವಿಶೇಷ ಹಾಗೂ ವಿಭಿನ್ನವಾದ ವಿನ್ಯಾಸವನ್ನು ರಚಿಸುತ್ತವೆ. ನಂತರ ಇವು ಟೆರಾಹರ್ಟ್ಸ್ ತರಂಗಗಳನ್ನು ಹೀರಿಕೊಂಡು ವಸ್ತುಗಳ ವಿವರಗಳನ್ನು ಗುರುತಿಸಿ ಕಲೆಹಾಕುವ ಕೆಲಸ ಮಾಡುತ್ತವೆ. ಹೀಗೆ ಈ ಗೋಂದಿನ ವಿನ್ಯಾಸವು ಆಯಾ ವಸ್ತುವಿಗೇ ಸೀಮಿತ ಹಾಗೂ ವಿಶಿಷ್ಟವಾಗಿರುವುದರಿಂದ ವಸ್ತುವನ್ನು ದೃಢೀಕರಿಸುತ್ತದೆ.

ಈ ಲೋಹದ ಸೂಕ್ಷ್ಮಕಣಗಳು ಟೆರಾಹರ್ಟ್ಸ್ ತರಂಗಗಳೊಂದಿಗೆ ಕನ್ನಡಿಯಂತೆ ವರ್ತಿಸುತ್ತವೆ. ಅರ್ಥಾತ್, ಕನ್ನಡಿಯ ಸಣ್ಣ ತುಣುಕುಗಳನ್ನು ಒಂದು ಸಮತಲದ ಮೇಲೆ ಹರಡಿ, ಬೆಳಕನ್ನು ಹಾಯಿಸಿದಾಗ, ಅವುಗಳ ದಿಕ್ಕು, ಗಾತ್ರ ಮತ್ತು ಸ್ಥಾನದ ಆಧಾರದ ಮೇಲೆ, ಅವು ಪ್ರತಿಫಲಿಸುವ ಬೆಳಕೂ ಭಿನ್ನವಾಗಿರುತ್ತದೆ. ಅಂತೆಯೇ ಗೋಂದು ಹಾಗೂ ಲೋಹದ ಕಣಗಳು ತರಂಗದೊಂದಿಗೆ ವರ್ತಿಸಿ ರಚಿಸುವ ವಿನ್ಯಾಸವೂ ವಿಭಿನ್ನ. ಒಂದು ವೇಳೆ ಆ ಚಿಪ್ ಅನ್ನು ಕಿತ್ತು ಬೇರೊಂದು ವಸ್ತುವಿನ ಮೇಲೆ ಅಂಟಿಸಲು ಹೊರಟಾಗ ಅದು ರಚಿಸುವ ವಿನ್ಯಾಸ ಬೇರೆಯದಾಗಿರುತ್ತದೆ. ಆಗ ನಕಲಿ–ಅಸಲಿ ಆಟ ಬಯಲಾಗುತ್ತದೆ, ಎನ್ನುತ್ತಾರೆ ರೋನಾನ್ ಹನ್. ರೋನಾನ್ ಹನ್ ಮತ್ತು ಸಂಗಡಿಗರು ಈ ತತ್ವವನ್ನು ಬಳಸಿಕೊಂಡು ಬೆಳಕಿನಿಂದ ಕಾರ್ಯ ನಿರ್ವಹಿಸಬಲ್ಲ, ಅಕ್ರಮ ಬಳಕೆಯನ್ನು ಪತ್ತೆಮಾಡಬಲ್ಲ 4 ಚದರ ಮಿಲಿಮೀಟರು ಗಾತ್ರದ ಟ್ಯಾಗ್ ಅನ್ನು ತಯಾರಿಸಿ ವಿಜಯಿಗಳಾಗಿದ್ದಾರೆ. ಒಂದೇ ತೆರನಾದ ನಕಲಿ ವಿನ್ಯಾಸವನ್ನೂ ನಿಖರವಾಗಿ, ಯಶಸ್ವಿಯಾಗಿ ಗುರುತು ಹಿಡಿಯಬಲ್ಲ ಯಾಂತ್ರಿಕ ಕಲಿಕೆಯನ್ನಾಧರಿಸಿದ ಮಾಡೆಲ್ ಅನ್ನೂ ರಚಿಸಿ ಪರೀಕ್ಷಿಸಿದ್ದಾರೆ. ಟೆರಾಹರ್ಟ್ಸ್ ಟ್ಯಾಗ್ ತಯಾರಿಸುವುದು ಅಗ್ಗವಾಗಿರುವುದರಿಂದ, ಬೃಹತ್ ಪೂರೈಕೆ ಸರಣಿ(ಸಪ್ಲೈ ಚೈನ್)ಯಲ್ಲಿಯೂ ಇದನ್ನು ಅಳವಡಿಕೊಳ್ಳಬಹುದಂತೆ. ಗಾತ್ರದಲ್ಲಿ ಸಣ್ಣದೂ ಆಗಿರುವುದರಿಂದ ಪುಟ್ಟಪುಟ್ಟ ವೈದ್ಯಕೀಯ ಸಾಧನಗಳಲ್ಲಿಯೂ ಬಳಸಿಕೊಳ್ಳಬಹುದಂತೆ. ಹೆಚ್ಚಿನ ಸುರಕ್ಷತೆಗಾಗಿ, ಟ್ಯಾಗನ್ನು ಅತಿ ತೆಳುವಾದ ಕಾಗದದಿಂದ ಮಾಡಲಾಗಿದೆಯಂತೆ. ಟ್ಯಾಗ್ ಅನ್ನು ಅಕ್ರಮವಾಗಿ ಬಳಸಿಕೊಳ್ಳಲು ಎಳೆದಾಗ ಅರಿದುಹೋಗುವುದರಿಂದ ಪುನಃ ಬೇರೆ ವಸ್ತುಗಳ ಮೇಲೆ ಅಂಟಿಸಿ ಬಳಸಿಕೊಳ್ಳಲಾಗುವುದಿಲ್ಲ. ಒಮ್ಮೆ ಅಂಟಿಸಿದರೆ ಮುಗಿಯಿತು, ಆ ನಿರ್ದಿಷ್ಟ ವಸ್ತುವಿಗಷ್ಟೇ ಸೀಮಿತವಾಗಿರುತ್ತದೆ. ಆದರೆ, ಇದರಲ್ಲೂ ಮತ್ತೊಂದು ಸಮಸ್ಯೆಯಿದೆ. ಯಾರಾದರೂ ಚತುರರು ಗೋಂದನ್ನು ಯಾವುದಾದರೂ ದ್ರಾವಣದಿಂದ ಕರಗಿಸಿ ತೆಗೆದುಕೊಂಡು ಆ ಟ್ಯಾಗ್ ಅನ್ನು ಬಿಡಿಸಿಕೊಂಡುಬಿಡಬಹುದು. ಮರುಬಳಸಿಕೊಂಡುಬಿಡಬಹುದು ಎನ್ನುವುದು. ಹಾಗಾಗಿ ಟ್ಯಾಗ್ ಅನ್ನು ದೃಢೀಕರಿಸುವ ಬದಲು ವಸ್ತುವನ್ನೇ ದೃಢೀಕರಿಸುವುದು ಉತ್ತಮ ಎನ್ನುತ್ತಾರೆ, ರೋನಾನ್ ಹನ್. ಹಾಗಾಗಿ ಇವರಿಲ್ಲಿ ಟ್ಯಾಗ್ ಮತ್ತು ವಸ್ತುವಿನ ಮೇಲ್ಮೈನ ನಡುವಿರುವ ಗೋಂದನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದ್ದಾರೆ. ಟ್ಯಾಗ್‌ನ ನಡುನಡುವೆ ಸಣ್ಣಸಣ್ಣ ಜಾಗಗಳಿದ್ದು ತನ್ಮೂಲಕ ಟೆರಾಹರ್ಟ್ಸ್ ತರಂಗಗಳನ್ನು ಹಾಯಗೊಡುತ್ತವೆ. ನಂತರ ಗೋಂದಿನಲ್ಲಿ ಮಿಶ್ರಿತವಾಗಿರುವ ಲೋಹದ ಸೂಕ್ಷ್ಮಕಣಗಳೊಂದಿಗೆ ವರ್ತಿಸುತ್ತವೆ. ಟೆರಾಹರ್ಟ್ಸ್ ತರಂಗಗಳು ಸಣ್ಣದಾಗಿರುವುದರಿಂದ ಸುಲಭವಾಗಿ ಈ ಕಣಗಳ ಮೂಲಕ ತೂರಬಲ್ಲವು, ವಸ್ತುಗಳನ್ನು ಪ್ರಮಾಣೀಕರಿಸಬಲ್ಲವು. ರೇಡಿಯೊ ತರಂಗಗಳು ದೊಡ್ಡಗಾತ್ರದಾಗಿರುವುದರಿಂದ ಟೆರಾಹರ್ಟ್ಸ್ ತರಂಗಗಳಷ್ಟು ಸಂವೇದನಾಶೀಲತೆಯಿರುವುದಿಲ್ಲ. ಮತ್ತು ಟೆರಾಹರ್ಟ್ಸ್ ತರಂಗಗಳನ್ನು ಬಳಸಿದಾಗ ಸಂದೇಶ ರವಾನೆಗೆ ದೊಡ್ಡದೊಡ್ಡ ಆ್ಯಂಟೆನಾಗಳ ಅವಶ್ಯಕತೆಯೂ ಇರುವುದಿಲ್ಲ. ಈ ವಿನ್ಯಾಸಗಳನ್ನು ದ್ವಿಪ್ರತಿಗೊಳಿಸುವುದೂ ಸಾಧ್ಯವಿಲ್ಲವಂತೆ. ಒಮ್ಮೆ ರಚಿತವಾಗಿರುವ ವಿನ್ಯಾಸ ನಾಶವಾಗದ ಹೊರತು ಅದೇ ವಿನ್ಯಾಸ ದ್ವಿಪ್ರತಿಯಾಗದು. ಆದರೆ ಅದನ್ನು ನಾಶಪಡಿಸುವುದೂ ಸುಲಭವಲ್ಲವಂತೆ. ಈ ಟ್ಯಾಗ್ ಮಿತಿಯೆಂದರೆ, ಸಾಕಷ್ಟು ದತ್ತಾಂಶಗಳಿಲ್ಲದಿರುವುದು. ಆದರೆ ಭವಿಷ್ಯದಲ್ಲಿ ದತ್ತಾಂಶಗಳನ್ನು ಒದಗಿಸಿಕೊಂಡರೆ ಪೂರೈಕೆ ಸರಣಿಯಲ್ಲಿಯೂ ಹೆಚ್ಚೆಚ್ಚು ಉಪಯೋಗಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT