ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಅಧ್ಯಯನ: ಪಾರ್ಕರ್‌ ‘ಸೂಪರ್‌

ದಿನಕರನಿಂದ 15 ದಶಲಕ್ಷ ಮೈಲುಗಳ ದೂರ ತಲುಪಿದ ನಾಸಾದ ಬಾಹ್ಯಾಕಾಶ ನೌಕೆ
Last Updated 8 ನವೆಂಬರ್ 2018, 19:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸೂರ್ಯನ ಮೇಲ್ಮೈ ಅಧ್ಯಯನಕ್ಕಾಗಿ ಉಡಾವಣೆ ಮಾಡಿರುವ ಪಾರ್ಕರ್‌ ಬಾಹ್ಯಾಕಾಶ ನೌಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾಸಾ ಹೇಳಿದೆ.

ಸೂರ್ಯನ ಮೇಲ್ಮೈನಿಂದ ಕೇವಲ 15 ದಶಲಕ್ಷ ಮೈಲುಗಳ ದೂರ ತಲುಪಿದ ಪಾರ್ಕರ್‌, ಈ ಮೊದಲು 1976ರಲ್ಲಿ ಹೀಲಿಯಸ್‌ ಬಿ ಬಾಹ್ಯಾಕಾಶ ನೌಕೆ ಮಾಡಿದ್ದ ದಾಖಲೆಯನ್ನು ಅಳಿಸಿ ಹಾಕಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಸೂರ್ಯನ ತಾಪಮಾನ ಮತ್ತು ಅದರ ವಿಕಿರಣ ತಡೆದುಕೊಂಡು ಕಾರ್ಯನಿರ್ವಹಿಸುವಲ್ಲಿ ಇದು ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ತಾಪಮಾನವು 1,371 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ನಾಸಾ ತಿಳಿಸಿದೆ.

‘ತನ್ನ ನಿರ್ವಹಣೆಯನ್ನು ತಾನೇ ನೋಡಿಕೊಳ್ಳುವಂತೆ ಪಾರ್ಕರ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಭೂಮಿಯಿಂದ ಅದನ್ನು ನಾವು ನಿಯಂತ್ರಿಸುತ್ತಿಲ್ಲ. ಆರು ದಶಕಗಳ ವೈಜ್ಞಾನಿಕ ಪ್ರಗತಿಯ ದ್ಯೋತಕವಾಗಿ ಪಾರ್ಕರ್‌ ಕಾರ್ಯನಿರ್ವಹಿಸುತ್ತಿದೆ. ಆ ಮೂಲಕ, ಮನುಕುಲವು ಸೂರ್ಯನನ್ನು ಮೊದಲ ಬಾರಿಗೆ ಅತಿ ಹತ್ತಿರದಲ್ಲಿ ಭೇಟಿಯಾದಂತಾಗಿದೆ’ ಎಂದು ನಾಸಾದ ವಿಜ್ಞಾನಿ ಥಾಮಸ್‌ ಝುರ್ಬುಚೆನ್‌ ಹೇಳಿದ್ದಾರೆ.

‘ಸೂರ್ಯನಿಂದ ಭೂಮಿಯ ಮೇಲಾಗುವ ಪರಿಣಾಮ ಮಾತ್ರವಲ್ಲ, ಇಡೀ ಬ್ರಹ್ಮಾಂಡದ ಮೇಲೆ ಈ ನಕ್ಷತ್ರ ಬೀರುವ ಪರಿಣಾಮ ಎಂಥದು ಎಂಬುದರ ಆಳ ಅಧ್ಯಯನ ಪಾರ್ಕರ್‌ನಿಂದ ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಪಾರ್ಕರ್‌ ಬಾಹ್ಯಾಕಾಶ ನೌಕೆಯು ತಾನು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದಲ್ಲಿರುವ ಭೌತವಿಜ್ಞಾನ ಪ್ರಯೋಗಾಲಯಕ್ಕೆ ನವೆಂಬರ್‌ 7ರಂದು ಸಂದೇಶ ರವಾನಿಸಿದೆ ಎಂದು ಕಾರ್ಯಾಚರಣೆಯ ತಜ್ಞರು ಹೇಳಿದ್ದಾರೆ.

ಪಾರ್ಕರ್‌ ನೌಕೆಯು ನವೆಂಬರ್‌ 5ರಂದು ಗಂಟೆಗೆ 2.13 ಲಕ್ಷ ಮೈಲುಗಳ ವೇಗದಲ್ಲಿ ಸೂರ್ಯನ ಮೇಲ್ಮೈನ ಅತಿ ಹತ್ತಿರಕ್ಕೆ ಹೋಗಿದೆ ಎಂದು ಅವರು ತಿಳಿಸಿದ್ದಾರೆ. ಬಾಹ್ಯಾಕಾಶ ನೌಕೆಯೊಂದು ಇಷ್ಟು ವೇಗದಲ್ಲಿ ಸಾಗಿರುವುದೂ ದಾಖಲೆ.

ಅಕ್ಟೋಬರ್‌ 31ರಂದು ಈ ನೌಕೆಯು ಕಾರ್ಯಾಚರಣೆ ಆರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT