ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕಕ್ಕೆ ವರದಾನ ಪಿ–ಬ್ಯಾಂಡ್‌ ರಾಡರ್‌

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಅಳವಡಿಕೆ
Last Updated 3 ಮೇ 2019, 4:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಿಸಲಾಗುತ್ತಿರುವ ‘ಪಿ–ಬ್ಯಾಂಡ್‌’ ರಾಡರ್‌ ಕೇಂದ್ರ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ವರದಾನವಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿಯೇ ಮೊದಲ ಕೇಂದ್ರ ಇದಾಗಿದೆ.

ಇಸ್ರೊ ನೆರವಿನೊಂದಿಗೆ ಆರಂಭಿಸಲಾಗುತ್ತಿರುವ ಈ ಕೇಂದ್ರವು ಗುಡುಗು, ಸಿಡಿಲು, ಮಳೆ, ಬಿರುಗಾಳಿ, ನೆರೆ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ನಿಖರ ಮಾಹಿತಿ ಮತ್ತು ಮುನ್ಸೂಚನೆಯನ್ನು ಕನಿಷ್ಠ ಮೂರು ಗಂಟೆಗಳ ಮೊದಲೇ ನೀಡಲಿದೆ.

₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕೇಂದ್ರವು ಹವಾಮಾನದಲ್ಲಾಗುವ ಏರುಪೇರುಗಳ ಬಗ್ಗೆ ಖಚಿತ ಮಾಹಿತಿಯನ್ನು ಕ್ಷಣ, ಕ್ಷಣಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಗೆ ಮತ್ತು ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ, ಮೀನುಗಾರರಿಗೆ, ಕುರಿಗಾಹಿಗಳಿಗೆ ರವಾನಿಸುತ್ತದೆ.

508 ಕಿ.ಮೀ. ವ್ಯಾಪ್ತಿಯಲ್ಲಾಗುವ ಹವಾಮಾನ ವೈಪರೀತ್ಯಗಳ ಖಚಿತ ಮಾಹಿತಿಯನ್ನು ಈ ರಾಡರ್‌ ಚಿತ್ರ ಸಹಿತ ಸೆರೆ ಹಿಡಿಯಲಿದೆ. ಯಾವ ದಿಕ್ಕಿನಲ್ಲಿ, ಯಾವ ಸ್ಥಳದಲ್ಲಿ ಗುಡುಗು, ಸಿಡಿಲು, ಮಳೆಯಾಗಬಹುದು. ಇದರಿಂದ ಯಾವ ಪ್ರಮಾಣದ ಹಾನಿಯಾಗಬಹುದು ಎಂಬ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆ.

ರಾಡರ್‌ ನೀಡುವ ಮಾಹಿತಿಯನ್ನು ಕೇಂದ್ರದ ವಿಜ್ಞಾನಿಗಳು, ತಜ್ಞರು ವಿಶ್ಲೇಷಿಸಿ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಿದ್ದಾರೆ. ಇದರಿಂದ ತಕ್ಷಣಕ್ಕೆ ಮುನ್ನೆಚ್ಚರಿಕೆ ಕೈಗೊಳ್ಳಲು ಅನುಕೂಲವಾಗುತ್ತದೆ.

ಮಳೆಯಿಂದಾಗುವ ಅನಾಹುತ ಮಾಹಿತಿ ಆಧರಿಸಿ ಜನರು, ಕೃಷಿಕರು, ಕುರಿಗಾಹಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಜೀವಹಾನಿ ತಪ್ಪಿಸಬಹುದಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉತ್ತರ ಕರ್ನಾಟಕ ಹವಾಮಾನ ಮತ್ತು ಸಂಶೋಧನಾ ಕೇಂದ್ರದ ಉಸ್ತುವಾರಿ ಅಧಿಕಾರಿ ಡಾ.ರಾಜು ರೋಕಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರಕ್ಕೆ ಚಾಲನೆ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಆರಂಭವಾಗುತ್ತಿರುವ ‘ಪಿ–ಬ್ಯಾಂಡ್‌’ ರಾಡರ್‌ ಕೇಂದ್ರ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸಚಿವ ಡಾ.ಹರ್ಷವರ್ಧನ್‌ ಫೆ.14ರಂದು ಚಾಲನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT