ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್. ವಿ. ಎಂ. 3: ಭಾರತದ ಹೆಮ್ಮೆಯ ರಾಕೆಟ್

Published 19 ಜುಲೈ 2023, 0:16 IST
Last Updated 19 ಜುಲೈ 2023, 0:16 IST
ಅಕ್ಷರ ಗಾತ್ರ

ಬಿ. ಆರ್‌. ಗುರುಪ್ರಸಾದ್‌

ಭಾರತ ನಿರ್ಮಿಸಿದ ಉಡಾವಣಾ ರಾಕೆಟ್ ವಾಹನ ‘ಪಿ. ಎಸ್. ಎಲ್. ವಿ.’ ಒಂದು ಅತ್ಯಂತ ನಂಬಿಕಾರ್ಹ ವಾಹನ; ಇದು ಭಾರತದ ‘ಕಾರ್ಯಾಶ್ವ’ (‘ವರ್ಕ್ ಹಾರ್ಸ್’) ರಾಕೆಟ್ ವಾಹನ ಎಂಬ ಹೆಗ್ಗಳಿಕೆಯನ್ನು ಇಂದು ಪಡೆದಿದೆ. ಆದರೆ ಅದಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಸಾಮರ್ಥ್ಯವುಳ್ಳ, ಸಂಕೀರ್ಣವಾದ ‘ಜಿ. ಎಸ್. ಎಲ್. ವಿ. ಮಾರ್ಕ್ 3’ ಅಥವಾ ‘ಎಲ್. ವಿ. ಎಂ. 3’ ಎಂಬ ಭಾರತದ ಮತ್ತೊಂದು ರಾಕೆಟ್ ವಾಹನವೂ ಇಂದು ಒಂದು ನಂಬಿಕಾರ್ಹ ವಾಹನವಾಗಿ ಹೊರಹೊಮ್ಮುತ್ತಿದೆ. ‘ಎಲ್. ವಿ. ಎಂ. 3’ ರ ಸಾಮರ್ಥ್ಯ, ನಂಬಿಕಾರ್ಹತೆ ಹಾಗೂ ವೈವಿಧ್ಯ ಇವುಗಳಿಗೆ ಉತ್ತಮ ಉದಾಹರಣೆ ಎಂದರೆ ಇತ್ತೀಚಿಗೆ, ಎಂದರೆ, ಮೊನ್ನೆಯಷ್ಟೆ (ಜುಲೈ 14) ಜರುಗಿದ ಅದರ ಆರನೆಯ ಕಕ್ಷಾಯಾನ.

ಜುಲೈ 14ರಂದು ನಿಗದಿಯಾದ ಸಮಯಕ್ಕೆ, ಎಂದರೆ ಮಧ್ಯಾಹ್ನ 2:35ಕ್ಕೆ ಸರಿಯಾಗಿ ಚಾಚೂ ತಪ್ಪದೇ ಸುಮಾರು ಹದಿನಾಲ್ಕು ಮಹಡಿಗಳಷ್ಟು ಎತ್ತರದ ‘ಎಲ್. ವಿ. ಎಂ. 3’ ವಾಹನ ಭಾರತದ ನೆಲದಿಂದಲೇ, ಎಂದರೆ ಆಂಧ್ರಪ್ರದೇಶದ ಶ್ರೀಹರಿಕೋಟಾ ದ್ವೀಪದಲ್ಲಿನ ‘ಸತೀಶ್ ಧವನ್ ಅಂತರಿಕ್ಷ ಕೇಂದ್ರ’ದ ಎರಡನೇ ಉಡಾವಣಾ ವೇದಿಕೆಯಿಂದ ಸುಗಮವಾಗಿ ಮೇಲೇರಿತು. ಆ ಅಮೋಘವಾದ ದೃಶ್ಯವನ್ನು ನೋಡಲು ಶ್ರೀಹರಿಕೋಟಾದ ವೀಕ್ಷಣಾ ಗ್ಯಾಲರಿಯಲ್ಲಿ ನೆರೆದಿದ್ದ ಸಾವಿರಾರು ಜನರು ಸೇರಿದ್ದರು; ಆ ಚಾರಿತ್ರಿಕ ದೃಶ್ಯವನ್ನು ನೋಡಲು ಟಿ.ವಿ.ಯ ಮುಂದೆ  ಕೋಟ್ಯಂತರ ಭಾರತೀಯರೂ ವಿದೇಶಿಯರೂ ಕುಳಿತಿದ್ದರು. ಇವರೆಲ್ಲರ ಹರ್ಷೋದ್ಗಾರಕ್ಕೆ  ಕಾರಣವೇನು ಗೊತ್ತೆ?

ಅಂದು ‘ಎಲ್. ವಿ. ಎಂ. 3’ ವಾಹನ ಅಂತರಿಕ್ಷಕ್ಕೆ ಕೊಂಡೊಯ್ಯುತ್ತಿದ್ದ ನೌಕೆಯು ಚಂದ್ರನ ಮೇಲೆ ಇಳಿಸುವ ಉದ್ದೇಶದಿಂದ ಭಾರತ ಹಾರಿಬಿಡುತ್ತಿದ್ದ ‘ಚಂದ್ರಯಾನ 3’ ನೌಕೆಯಾಗಿತ್ತು. ಮಾಧ್ಯಮಗಳಂತೂ ಆ ರೋಬಾಟ್ ನೌಕೆಯ ಬಗ್ಗೆ ಹಗಲೂ ರಾತ್ರಿ ವರದಿ ಮಾಡಿ ವಿಶ್ಲೇಷಿಸಿದವು. ಆ ವರದಿಗಳಲ್ಲಿ ‘ಚಂದ್ರಯಾನ 3’ ನೌಕೆಯನ್ನು ಉಡಾಯಿಸಲಿದ್ದ ‘ಎಲ್. ವಿ. ಎಂ. 3’ ವಾಹನದ ಬಗ್ಗೆ ಸಾಕಷ್ಟು ಪ್ರಸ್ತಾಪವೇನೋ ಇತ್ತು. ಆದರೆ ನೌಕೆಯನ್ನು ಭೂಮಿಯ ಮೇಲಿನಿಂದ ಅಂತರಿಕ್ಷಕ್ಕೆ ಕೊಂಡೊಯ್ದು, ಅನಂತರ ಅದು ಭೂಮಿಯನ್ನು ಸುತ್ತುವಂತೆ ಮಾಡುವ ಕಾರ್ಯವನ್ನು ನಿರ್ವಹಿಸಲಿದ್ದ ‘ಎಲ್. ವಿ. ಎಂ. 3’ ರ ಮಹತ್ವದತ್ತ ಹೆಚ್ಚಿನ ಗಮನ ಕೇಂದ್ರೀಕೃತವಾಗಲಿಲ್ಲ ಎನ್ನಬಹುದು.

ಆದರೆ ತನಗೆ ವಹಿಸಿದ ಕಾರ್ಯವನ್ನು ‘ಎಲ್. ವಿ. ಎಂ. 3’ ಯಾವ ಆಕ್ಷೇಪಣೆಗೂ ಅವಕಾಶವಿಲ್ಲದಂತೆ ಅದ್ಭುತವಾದ ರೀತಿಯಲ್ಲಿ ನಿರ್ವಹಿಸಿತು. ನೆಲದಿಂದ ಮೇಲೆದ್ದ ಸುಮಾರು 17 ನಿಮಿಷಗಳ ಸುಮಾರಿಗೆ ಆ ರಾಕೆಟ್ ವಾಹನ ‘ಚಂದ್ರಯಾನ 3’ನ್ನು ಭೂಮಿಯ ಒಂದೆಡೆ ಸುಮಾರು 170 ಕಿ.ಮೀ.ನಷ್ಟು ಎತ್ತರವಿರುವ, ಮತ್ತೊಂದೆಡೆ ಮೂವತ್ತಾರು ಸಾವಿರದ ಐನೂರು ಕಿ.ಮೀ. ಎತ್ತರವಿರುವ ದೊಡ್ಡ ಕೋಳಿಮೊಟ್ಟೆಯಾಕಾರದ ಕಕ್ಷೆಗೆ ಸೇರಿಸಿ ಅದು ಅಲ್ಲಿ ಭೂಮಿಯನ್ನು ಸುತ್ತುವಂತೆ ಮಾಡಿತು. ಅಲ್ಲಿಗೆ ‘ಚಂದ್ರಯಾನ 3’ರ ಚಂದ್ರಯಾತ್ರೆಯ ಮೊದಲ ಹಂತ ಶುಭಾರಂಭವನ್ನು ಕಂಡಿತು. ಆ ನೌಕೆಯ ಭವಿಷ್ಯದ ಯಶಸ್ಸಿನ ಬಗ್ಗೆ ಆಶಾಭಾವನೆ ಮೂಡಿತು.

ಅಂತರಿಕ್ಷ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುವ ಆಶಯವನ್ನು ಹೊಂದಿರುವ ರಾಷ್ಟ್ರವೊಂದು ಉಪಗ್ರಹಗಳನ್ನು ಹಾಗೂ ಅಂತರಿಕ್ಷ ನೌಕೆಗಳನ್ನು ಭೂಕಕ್ಷೆಗೆ ಹಾರಿಬಿಡುವ ರಾಕೆಟ್ ವಾಹನಗಳ ತಂತ್ರಜ್ಞಾನವನ್ನು ಕರಗತಮಾಡಕೊಳ್ಳುವುದು ಅತ್ಯಗತ್ಯ. ಇದನ್ನು ಮನಗಂಡ ಭಾರತೀಯ ಅಂತರಿಕ್ಷ ಕಾರ್ಯಕ್ರಮದ ಪಿತಾಮಹ ವಿಕ್ರಂ ಸಾರಾಭಾಯಿಯವರು ರಾಕೆಟ್‌ಗಳ ನಿರ್ಮಾಣಕ್ಕೆ ಆದ್ಯತೆಯನ್ನು ಆ ಕಾರ್ಯಕ್ರಮದ ಪ್ರಾರಂಭದ ದಶಕದಲ್ಲೇ (1960ರ ದಶಕ) ನೀಡಿದರು. ಪರಿಣಾಮವಾಗಿ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೋ’ ಇದುವರೆಗೂ ಆರು ಪೀಳಿಗೆಯ ಉಪಗ್ರಹ ಉಡಾವಣಾ ರಾಕೆಟ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಆ ಪೈಕಿ ‘ಎಲ್. ವಿ. ಎಂ. 3’ ಐದನೇ ಪೀಳಿಗೆಯ ರಾಕೆಟ್ಟಾಗಿದ್ದು, ಅದು ಭಾರತ ನಿರ್ಮಿಸಿರುವ ರಾಕೆಟ್ ವಾಹನಗಳ ಪೈಕಿ ಅತ್ಯಂತ ಶಕ್ತಿಶಾಲಿಯಾದುದು. ‘ಸ್ಥೂಲಕಾಯದ ಹುಡುಗ’ (‘ಫ್ಯಾಟ್ ಬಾಯ್’), ‘ಬಾಹುಬಲಿ ರಾಕೆಟ್’ ಎಂದೆಲ್ಲಾ ಹೆಸರಿರುವ ಈ ಒಂದರ ಮೇಲೊಂದು ಜೋಡಿಸಿರುವ ವಾಹನವು ಎರಡು ಹಂತಗಳನ್ನು, ಅವುಗಳೊಂದಿಗೇ ಆಚೀಚಿನ ಬದಿಯಲ್ಲಿ ಜೋಡಿಸಲ್ಪಟ್ಟಿರುವ ‘ಬೂಸ್ಟರ್’ಗಳೆಂಬ ಎರಡು ರಾಕೆಟ್ ಗಳನ್ನು ಹೊಂದಿದೆ. ಜುಲೈ 14ರಂದು ‘ಎಲ್. ವಿ. ಎಂ. 3’ ನೆಲದಿಂದ ಮೇಲೇರಿದ್ದೇ ಆ ಎರಡು ಬೂಸ್ಟರ್‌ಗಳ ಕಾರ್ಯಾರಂಭದೊಂದಿಗೆ.

ತಲಾ ಎರಡು ಲಕ್ಷ ಐದು ಸಾವಿರ ಕೆ.ಜಿ. ತೂಕದ ಘನರೂಪದ ನೋದನಕಾರಿಗಳನ್ನು (‘ಪ್ರೊಪೆಲೆಂಟ್ಸ್’, ಎಂದರೆ ಇಂಧನ ಹಾಗೂ ದಹನಾನುಕೂಲಿಗಳ ಜೋಡಿ) ಆ ಎರಡು ರಕ್ಕಸ ಬೂಸ್ಟರ್‌ಗಳು ತಮ್ಮೊಳಗೆ ಹೊಂದಿದ್ದವು. ಹೀಗೆ ಒಟ್ಟಾಗಿ ಸುಮಾರು ನಾಲ್ಕು ಲಕ್ಷ ಕೆ.ಜಿ. ತೂಕದ ನೋದನಕಾರಿಗಳನ್ನು ಆ ಬೂಸ್ಟರ್‌ಗಳು ಎರಡು ನಿಮಿಷಗಳ ಸುಮಾರಿನಲ್ಲಿ ಬಕಾಸುರನಂತೆ ಕಬಳಿಸಿ ಅಪಾರವಾದ ನೂಕುಬಲವನ್ನು ‘ಎಲ್. ವಿ. ಎಂ. 3’ಗೆ ಒದಗಿಸಿ, ವೇಗವನ್ನು ಅಲ್ಪ ಸಮಯದಲ್ಲಿ ವೃದ್ಧಿಸಿ ಆ ವಾಹನದಿಂದ ಬೇರ್ಪಟ್ಟವು. ಬೂಸ್ಟರ್‌ಗಳಿನ್ನೂ ಚಟುವಟಿಕೆಯಿಂದಿರುವಾಗಲೇ ತನ್ನ ಕಾರ್ಯಾರಂಭಿಸಿದ ಅದರ ಮೊದಲ ಹಂತ ಒಂದು ಲಕ್ಷ ಹದಿನೈದು ಸಾವಿರ ಕೆ.ಜಿ.ಗಳಷ್ಟು ದ್ರವನೋದನಕಾರಿಗಳನ್ನು ಬೇಗನೆ ಬಳಸಿ ‘ಎಲ್. ವಿ. ಎಂ. 3’ನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದಲ್ಲದೇ ಅದರ ವೇಗವನ್ನು ಮತ್ತಷ್ಟು ವೃದ್ಧಿಸಿ ತಾನೂ ಅದರಿಂದ ಬೇರ್ಪಟ್ಟಿತು. ಹೀಗೆ ‘ಎಲ್. ವಿ. ಎಂ. 3’ ಮತ್ತಷ್ಟು ಹಗುರವಾದ ನಂತರ ಅದರ ಎರಡನೆಯ ಹಂತದ ಸರದಿ ಬಂದಿತು. ಅದು ಒಂದು ಅತ್ಯಂತ ಸಂಕೀರ್ಣವಾದ ಆದರೆ ದಕ್ಷವಾದ ‘ಕ್ರಯೋಜನಿಕ್’ ಹಂತ.

ಈ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿರುವುದು ಕೇವಲ ರಷ್ಯಾ, ಅಮೆರಿಕಾ, ಜಪಾನ್, ಚೀನಾ, ಫ್ರಾನ್ಸ್ ಹಾಗೂ ಭಾರತ ಮಾತ್ರ. ಇದು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುತ್ತದೆ. ಒಟ್ಟು ಇಪ್ಪತ್ತೆಂಟೂವರೆ ಸಾವಿರ ಕೆ.ಜಿ. ತೂಕದ ಹಾಗೂ ಕೃತಕವಾಗಿ ಅತ್ಯಂತ ಶೈತ್ಯಪರಿಸರದಲ್ಲಿಟ್ಟ ದ್ರವಹೈಡ್ರೊಜನ್ ಹಾಗೂ ದ್ರವ–ಆಮ್ಲಜನಕವನ್ನು ಬಳಸುವ ಈ ಹಂತ ಹತ್ತೂವರೆ ನಿಮಿಷಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿದ ಫಲವಾಗಿ ‘ಎಲ್. ವಿ. ಎಂ. 3’ ಹಾಗೂ ಅದರ ಮೇಲಿದ್ದ ‘ಚಂದ್ರಯಾನ 3’ ಅಂತಿಮವಾಗಿ ಸಾಧಿಸಿದ ವೇಗ ಎಷ್ಟು ಗೊತ್ತೆ? ಗಂಟೆಗೆ ಕೇವಲ 37 ಸಾವಿರ ಕಿ.ಮೀ.ಗಳು!  ಪ್ರತಿನಿತ್ಯ ಗಂಟೆಗೆ ಸುಮಾರು 30-40 ಕಿ.ಮೀ. ಸರಾಸರಿ ವೇಗದಲ್ಲಿ ನೆಲದ ಮೇಲೆ ಪಯಣಿಸುವ ನಾವು ಇದನ್ನು ಊಹಿಸಲೂ ಸಾಧ್ಯವಿಲ್ಲ.

ಈ ಕಾರ್ಯಗಳೆಲ್ಲವೂ ನಿಗದಿಯಾದ ಕಾಲಕ್ಕೆ ಜರುಗುವಂತೆ ಮಾಡಿದ ಸಾಧನವೇ ‘ಎಲ್. ವಿ. ಎಂ. 3’ ರ ಎಲೆಕ್ಟ್ರಾನಿಕ್ ಮೆದುಳು. ಸ್ವದೇಶಿ ಸಾಫ್ಟ್‌ವೇರ್ ಅನ್ನುಳ್ಳ ಈ ಮೆದುಳೇ ‘ಎಲ್. ವಿ. ಎಂ. 3’ರ ಜೀವಾಳ.

ಅಂತೂ ಭಾರತದಲ್ಲೇ ಯೋಜಿಸಿ, ರೂಪಿಸಿ ನಿರ್ಮಿಸಲಾದ ಈ ಎಲ್ಲ ತಾಂತ್ರಿಕ ಸಾಧನಗಳನ್ನುಳ್ಳ ‘ಎಲ್. ವಿ. ಎಂ. 3‘ರ ಮೊದಲ ಆರು ಕಕ್ಷಾಯಾನಗಳೂ (ಜುಲೈ 14ರದೂ ಸೇರಿದಂತೆ) ಸತತವಾಗಿ ಯಶಸ್ವಿಯಾಗಿವೆ. ಪರಿಣಾಮವಾಗಿ 72 ವಿದೇಶಿ ಉಪಗ್ರಹಗಳು, ಎರಡು ಸ್ವದೇಶಿ ಉಪಗ್ರಹಗಳು ಹಾಗೂ ಚಂದ್ರನ ಅನ್ವೇಷಣೆಗಾಗಿ ತೆರಳುತ್ತಿದ್ದ / ತೆರಳುತ್ತಿರುವ ಎರಡು ರೋಬಾಟ್ ನೌಕೆಗಳು, ಇವು ಭೂಕಕ್ಷೆಯನ್ನು ನಿರಾತಂಕವಾಗಿ ಸೇರಿವೆ. ಜುಲೈ 14ರ ಯಶಸ್ಸಿನ ಬಳಿಕ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಕುರಿತ ಅರಿವು ಹೊರಜಗತ್ತಿನಲ್ಲಿ ಮತ್ತಷ್ಟು ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT