ಯುರೇನಿಯಂ ವಿಷಕ್ಕೊಂದು ಸಂಜೀವಿನಿ

ಶುಕ್ರವಾರ, ಜೂಲೈ 19, 2019
24 °C

ಯುರೇನಿಯಂ ವಿಷಕ್ಕೊಂದು ಸಂಜೀವಿನಿ

Published:
Updated:
Prajavani

ಯುರೇನಿಯಂ ಎಂಬ ವಿಕಿರಣಶೀಲ ಮೂಲವಸ್ತುವು ಪ್ರಸ್ತುತ ಜಗತ್ತಿನಲ್ಲಿ ಹಲವಾರು ಕಾರಣಗಳಿಗಾಗಿ ಅತ್ಯಂತ ಪ್ರಚಲಿತದಲ್ಲಿರುವ ರಾಸಾಯನಿಕ. ಕೆಲವು ವರ್ಷಗಳ ಹಿಂದೆ ಭಾರತ ಸರ್ಕಾರವನ್ನು ಬೀಳಿಸುವಷ್ಟು ಪ್ರಬಲವಾದ ಕಾರಣವೊಂದನ್ನು ಈ ಯುರೇನಿಯಂ ತಂದಿಟ್ಟಿದ್ದನ್ನು ನೆನಪಿಸಿಕೊಂಡರೆ ಅದು ಎಷ್ಟು ಅನಿವಾರ್ಯ ಎಂಬುದರ ಸಣ್ಣ ಅರಿವು ನಿಮಗಾಗಬಹುದು.

ಬೈಜಿಕ ವಿದಳನ ಪ್ರಕ್ರಿಯೆಯಿಂದಾಗಿ ಯುರೇನಿಯಂ ಒಡೆದಾಗ ಅಪಾರ ಪ್ರಮಾಣದ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಯುರೇನಿಯಂನ ಈ ಲಕ್ಷಣ ಬಳಸಿಕೊಂಡು ಅದನ್ನು ಅಣುಶಕ್ತಿ ಸ್ಥಾವರಗಳಲ್ಲಿ ಪ್ರಮುಖ ಇಂಧನವಾಗಿ, ಅಣುಬಾಂಬುಗಳಲ್ಲಿ ಪ್ರಮುಖ ಸ್ಫೋಟಕ ವಸ್ತುವನ್ನಾಗಿ ಬಳಸಲಾಗುತ್ತದೆ. ಅದು ಎಷ್ಟು ಉಪಯೋಗಕಾರಿಯೋ ಅದಕ್ಕಿಂತ ಹೆಚ್ಚು ಅಪಾಯಕಾರಿ. ಚರ್ನೋಬಿಲ್ ದುರಂತ ನಮೆಲ್ಲರ ಕಣ್ಣ ಮುಂದೆಯೇ ಇದೆ. ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಮೆರಿಕ ಎಸೆದ ಅಣುಬಾಂಬುಗಳು ನಡೆಸಿದ ಅನಾಹುತಗಳನ್ನು ಮನುಕುಲ ಮರೆಯುವಂತಿದೆಯೇ?

ಅಣುಬಾಂಬ್‌ ಅಥವಾ ಅಣುಶಕ್ತಿ ಸ್ಥಾವರಗಳ ಅವಘಡಗಳಿಂದ ಆ ಕ್ಷಣದಲ್ಲಷ್ಟೇ ಸಮಸ್ಯೆಗಳು ಉದ್ಭವವಾಗುವುದಿಲ್ಲ. ಬದಲಾಗಿ ಅಣುವಿಕಿರಣವು ಸುತ್ತಮುತ್ತಲಿನ ಪ್ರದೇಶವನ್ನೆಲ್ಲಾ ಆಕ್ರಮಿಸಿ ಜನಸಾಮಾನ್ಯರ ಬದುಕನ್ನು ನರಕ ಮಾಡಿಬಿಡುತ್ತದೆ.  ಯುರೇನಿಯಂ ನಮ್ಮ ದೇಹದಲ್ಲಿ ಶೇಖರಣೆಗೊಂಡು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗೆ ಒಳಕ್ಕೆ ಸೇರುವ ಯುರೇನಿಯಂ ಅನ್ನು ಹೊರಹಾಕಲು ನಮ್ಮ ದೇಹ ಇನ್ನಿಲ್ಲದ ಪ್ರಯತ್ನ ಪಡುತ್ತದೆ. ಮೂತ್ರಪಿಂಡಗಳು ಬಹಳಷ್ಟು ಕಷ್ಟಪಟ್ಟು ಅದನ್ನು ರಕ್ತದಿಂದ ಸೋಸಿ ತೆಗೆಯುತ್ತವೆಯಾದರೂ ಅಲ್ಪಪ್ರಮಾಣದ ಯುರೇನಿಯಂ ಜೀವಕೋಶಗಳೊಳಗೆ ಉಳಿದು ಬಿಡುತ್ತದೆ.

ದೇಹದಲ್ಲಿ ಉಳಿಯುವ ಯುರೇನಿಯಂ ಬಹಳ ಅಪಾಯಕಾರಿ. ಹೀಗಾಗಿ ಅದನ್ನು ಹೊರಹಾಕುವ ಔಷಧಿಗಳ ಬಗ್ಗೆ ವಿಜ್ಞಾನಿಗಳು ತೀವ್ರವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಚೀನಾ ಹಾಗೂ ಅಮೆರಿಕದ ವಿಜ್ಞಾನಿಗಳು ಜಂಟಿಯಾಗಿ ನಡೆಸಿದ ಸಂಶೋಧನೆಯ ಫಲವಾಗಿ 5LIO-1-Cm-3,2-HOPO ಎಂಬ ಔಷಧಿಯೊಂದು ಮಾನವನ ಮೂಳೆಯಿಂದ ಯುರೇನಿಯಂ ಅನ್ನು ತೆಗೆಯುವಲ್ಲಿ ಸಫಲವಾಗಿದೆ. ಈ ಸಂಬಂಧ ಸಂಶೋಧನಾ ಲೇಖನವು ಪ್ರತಿಷ್ಠಿತ ನೇಚರ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಯಾವುದೇ ಒಂದು ವಿಕಿರಣಶೀಲ ವಸ್ತುವನ್ನು ಮಾನವನ ದೇಹದಿಂದ ಹೊರತೆಗೆಯುವ ಪ್ರಕ್ರಿಯೆಗೆ ಡೀಕಾರ್ಪೋರೇಷನ್ ಎನ್ನುತ್ತಾರೆ. ವಿಕಿರಣಶೀಲವಸ್ತುಗಳನ್ನು ಆಕ್ಟಿನೈಡ್‌ಗಳೆಂದು ಗುಂಪು ಮಾಡಿ ಆವರ್ತಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ. ಆಕ್ಟಿನೈಡ್‌ಗಳನ್ನು ದೇಹದಿಂದ ಹೊರಹಾಕಲು ‘ಕೀಲೇಟೀಂಗ್ ಲಿಗ್ಯಾಂಡ್’ ಎಂದು ಕರೆಯಲಾಗುವ ಕೆಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ಕೀಲೇಟಿಂಗ್ ಲಿಗ್ಯಾಂಡ್‌ಗಳು ಯುರೇನಿಯಂ ಮುಂತಾದ ಆಕ್ಟಿನೈಡ್‌ಗಳೊಂದಿಗೆ ರಾಸಾಯನಿಕವಾಗಿ ಬೆರೆತು ಆನಂತರ ಅವುಗಳನ್ನು ತಮ್ಮೊಂದಿಗೆ ದೇಹದಿಂದ ಹೊರಗೆ ಕೊಂಡೊಯ್ಯುತ್ತವೆ.

ಯುರೇನಿಯಂ ಎಂಬ ಕಾರ್ಕೋಟಕ ವಿಷ

ಎಲ್ಲಾ ರೀತಿಯ ಅಣು ವಿಕಿರಣ ಸಂಬಂಧಿ ಚಟುವಟಿಕೆಗಳಿಗಾಗಿ ಯುರೇನಿಯಂ ಅನ್ನು ಇಂಧನವಾಗಿ ಯಥೇಚ್ಛ ಬಳಸಲಾಗುತ್ತದೆ. ದುರದೃಷ್ಟಕರ ಸಂದರ್ಭದಲ್ಲಿ ಅವಘಡಗಳೇನಾದರೂ ಸಂಭವಿಸಿದರೆ ಆಹಾರ, ಉಸಿರಾಟ ಅಥವಾ ಗಾಯದ ಮುಖಾಂತರ ಯುರೇನಿಯಂ ಮಾನವನ ದೇಹವನ್ನು ಪ್ರವೇಶಿಸಬಹುದು. ಹೀಗೆ ಪ್ರವೇಶಿಸಿದ ವಿಕಿರಣಶೀಲ ವಸ್ತುಗಳು ನಮ್ಮ ದೇಹದ ಪ್ಲಾಸ್ಮಾಕ್ಕೆ ಸೇರಿ ಆನಂತರ ರಕ್ತವನ್ನು ಸೇರುತ್ತದೆ. ಮೂತ್ರಪಿಂಡಗಳು ರಕ್ತದಿಂದ ಅದನ್ನು ಸೋಸಿ ಮೂತ್ರಕ್ಕೆ ಸೇರಿಸುತ್ತವೆ. ಆನಂತರ ಅದು ಮೂತ್ರದೊಂದಿಗೆ ವಿಸರ್ಜಿಸಲ್ಪಡುತ್ತದೆ.

ದೇಹ ಸೇರಿದ ಯುರೇನಿಯಂನ ಮೂರನೇ ಒಂದು ಭಾಗ ಮಾತ್ರ ಈ ರೀತಿಯಾಗಿ ವಿಸರ್ಜನೆಯಾಗದೇ ಮೂತ್ರಪಿಂಡ ಹಾಗೂ ಮೂಳೆಯಲ್ಲಿ ಶೇಖರಣೆಯಾಗಲು ಆರಂಭಿಸುತ್ತದೆ. ಇಷ್ಟಲ್ಲದೇ ಅದು ಹೆಕ್ಸಾವೇಲೆಂಟ್ ಯುರಾನಿಲ್ ಅಯಾನುಗಳಾಗಿ ಪರಿವರ್ತನೆಗೊಂಡು ಮುಂದೆ ಮೂತ್ರಪಿಂಡಗಳ ವೈಫಲ್ಯ, ಮೂಳೆಯ ಕ್ಯಾನ್ಸರ್ ಹಾಗೂ ಇನ್ನಿತರ ಕ್ಯಾನ್ಸರ್ ರೋಗಗಳಿಗೂ ಕಾರಣವಾಗುತ್ತದೆ. ಹೀಗಾಗಿ ಇಂತಹ ವಸ್ತುಗಳನ್ನು ಮೂಳೆಯಿಂದ ಡೀಕಾರ್ಪೋರೇಟ್ ಮಾಡುವಂತಹ ರಾಸಾಯನಿಕಗಳನ್ನು ಔಷಧಿಯಾಗಿ ಬಳಸಲೇಬೇಕು ಎನ್ನುವುದು ವೈದ್ಯಲೋಕದ ವಾದ. ಇದನ್ನು ಕೀಲೇಟಿಂಗ್ ಥೆರಪಿ ಎಂದು ಕರೆಯಲಾಗುತ್ತದೆ.

ಏನಿದು ಕೀಲೇಟಿಂಗ್ ಥೆರಪಿ

ರಸಾಯನ ಶಾಸ್ತ್ರದ ಪ್ರಕಾರ ಧಾತುಗಳು (element) ಯಾವುದಾದರೂ ಒಂದು ಲೋಹದ ಅಯಾನನ್ನು ಸುತ್ತುವರೆದು ಸಂಯುಕ್ತ ವಸ್ತುವೊಂದನ್ನು ರಚಿಸುವ ಪ್ರಕ್ರಿಯೆಗೆ ಕೀಲೇಟಿಂಗ್ ಎಂದು ಹೆಸರು.

ಹೀಗಾಗಿ ಕೀಲೇಟಿಂಗ್ ವಸ್ತುಗಳು ನಮ್ಮ ದೇಹವನ್ನು ಸೇರಿದೊಡನೆ ದೇಹದಲ್ಲಿರುವ ವಿಷಕಾರಕ ವಸ್ತುಗಳೊಂದಿಗೆ ರಾಸಾಯನಿಕವಾಗಿ ಅಂಟಿಕೊಂಡು ಅಂದರೆ ಯುರೇನಿಯಂ ಅಯಾನಿನ ಸುತ್ತ ಸುತ್ತುವರೆದು ಅವನ್ನು ತಮ್ಮೊಂದಿಗೆ ಹೊರ ಕೊಂಡೊಯ್ಯುತ್ತವೆ. ಕೀಲೇಟಿಂಗ್ ಧಾತುಗಳು ಯುರೇನಿಯಂ ವಿಷದೊಂದಿಗೆ ಸೇರಿ ನೀರಿನಲ್ಲಿ ಕರಗಬಹುದಾದ ಸಂಯುಕ್ತ ವಸ್ತುಗಳನ್ನು ರಚಿಸುತ್ತವೆ. ಇದರಿಂದಾಗಿ ಮೂತ್ರದ ಮೂಲಕ ಅದನ್ನು ವಿಸರ್ಜಿಸಬಹುದು. ಇಂತಹ ಕೀಲೇಟಿಂಗ್ ವಸ್ತುಗಳನ್ನು ಔಷಧವನ್ನಾಗಿ ಬಳಸುವಾಗ ಅತ್ಯಂತ ಜಾಗೃತರಾಗಿರಬೇಕು. ಅವುಗಳು ಸ್ವತಃ ವಿಷವಸ್ತುಗಳಾಗಿರಬಾರದು. ಯಾವುದೇ ಅಡ್ಡಪರಿಣಾಮಗಳನ್ನು ದೇಹದಲ್ಲಿ ಸೃಜಿಸಬಾರದು. ನಮ್ಮ ಜೀವಕೋಶಗಳೊಂದಿಗೆ ಅವು ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಬೇಕು.

ನಮ್ಮ ರೋಗನಿರೋಧಕ ಶಕ್ತಿಯು ಅದನ್ನು ಶತ್ರುವೆಂದು ಪರಿಗಣಿಸಬಾರದು ಹಾಗೂ ಅದರ ವಿರುದ್ಧ ಪ್ರತಿಕಣಗಳನ್ನು ದೇಹದಲ್ಲಿ ಉತ್ಪತ್ತಿ ಮಾಡಿ ಅವನ್ನು ಹೊಡೆದೋಡಿಸಬಾರದು. ಬಹಳ ಚಿಕ್ಕದಾಗಿ ಹೇಳಬೇಕೆಂದರೆ ಕೀಲೇಟಿಂಗ್ ಥೆರಪಿ ನಮ್ಮ ದೇಹಕ್ಕೆ ಸ್ನೇಹಿತನಾಗಿಯೂ, ಯುರೇನಿಯಂಗೆ ವೈರಿಯಾಗಿಯೂ ಇರಬೇಕು.

ವಿಜ್ಞಾನಿಗಳು ಶೋಧಿಸಿದ ಹೊಸ ಔಷಧಿಯನ್ನು ಮಾನವನ ದೇಹದ ಮೇಲೆ ಪ್ರಯೋಗಿಸಲು ಇನ್ನೂ ಅನುಮತಿ ದೊರಕಿಲ್ಲ. ಸದ್ಯದಲ್ಲೇ ದೊರಕಬಹುದೆಂಬ ಆಶಾಭಾವನೆಯಲ್ಲಿ ಸಂಶೋಧಕರು ಇದ್ದಾರೆ. ಅನುಮತಿ ದೊರಕಿ ಸಂಶೋಧನೆ ಯಶಸ್ವಿಯಾದರೆ ದೇಹ ಹೊಕ್ಕುವ ಯುರೇನಿಯಂ ವಿಷದಿಂದಾಗುವ ಪ್ರಾಣಾಪಾಯಗಳನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬಹುದೇನೋ? 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !