ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟ–ನೋಟ ಅಂಕಣ: ವೀವರ್ ಆ್ಯಂಟ್

Last Updated 31 ಅಕ್ಟೋಬರ್ 2022, 0:30 IST
ಅಕ್ಷರ ಗಾತ್ರ

ಇರುವೆಗಳಲ್ಲಿ ಸಾವಿರಾರು ಪ್ರಬೇಧಗಳಿವೆ. ಒಂದೊಂದು ಪ್ರಬೇಧದಲ್ಲೂ ಅದರದ್ದೇ ಆದ ವಿಭಿನ್ನ ವಿಸ್ಮಯ ಅಡಗಿದೆ. ಇವುಗಳಲ್ಲಿ ಮರದ ಮೇಲೆ ಎಲೆಗಳನ್ನೇ ಬಳಸಿಕೊಂಡು ಗೂಡು ಹೆಣೆಯುವ ನೇಕಾರ ಇರುವೆಗಳು ಒಂದು ವಿಶಿಷ್ಟ ಪ್ರಭೇದವಾಗಿದೆ. ಇವುಗಳನ್ನು ಕೆಂಜಗವೆಂದೂ ಕರೆಯುತ್ತಾರೆ.

ಇರುವೆಗಳು ಸಾಮಾಜಿಕ ಸಮೂಹ ಜೀವಿಗಳು. ಈ ನೇಕಾರ ಇರುವೆಗಳು ಮರದ ಮೇಲೆಯೇ ವಾಸಮಾಡುತ್ತ ತಾವು ಗೂಡು(Nest) ಕಟ್ಟುವ ಕಾಯಕಕ್ಕೇ ಹೆಸರುವಾಸಿಯಾಗಿವೆ. ಹಾಗಾದರೆ, ಈ ಇವುಗಳಿಗೆ ನೇಕಾರರು ಎಂದು ಹೆಸರು ಬರಲು ಕಾರಣವೇನೆಂದು ಅರಿಯೋಣ.

ಈ ಕೆಂಜಗಗಳು ಹೊರಗಿನಿಂದ ಎಲೆಯ ಎರಡೂ ಬದಿಯ ಅಂಚನ್ನು ಹತ್ತಿರಕ್ಕೆ ತಳ್ಳುತ್ತವೆ. ಒಳಗೆ ಪ್ರೌಢ ಕೆಂಜಗವು ತನ್ನ ಮರಿಯನ್ನು ಬಾಯಿಯಲ್ಲಿ ಸೂಜಿಯಂತೆ ಕಚ್ಚಿ ಹಿಡಿದಾಗ ಮರಿಯು ತನ್ನ ಬಾಯಿಯಿಂದ ಎಂಜಿಲನ್ನು ರೇಷ್ಮೆ ದಾರದೆಳೆಯಂತೆ ಹೊರ ಸೂಸುತ್ತದೆ. ಇದರ ಸಹಾಯದಿಂದ ಎಲೆಯ ಎಡ ಮತ್ತು ಬಲಭಾಗದ ಎರಡೂ ಅಂಚಿಗೆ ಅಂಟಿಸುತ್ತಾ ಕೆಂಜಗಗಳು ಗೂಡು ನಿರ್ಮಾಣ ಮಾಡುತ್ತವೆ. ಗೂಡಿನೊಳಗೆ ಮೊಟ್ಟೆಗಳನ್ನಿಟ್ಟು ಸಂತಾನ ಮುಂದುವರೆಸುತ್ತವೆ. ಕಾಲುಗಳಿಲ್ಲದ ಮರಿಯನ್ನು ಸೂಜಿದಾರದಂತೆ ಬಳಸಿ ಎಲೆಗಳನ್ನು ನೇಯ್ಗೆ ಮಾಡುವುದರಿಂದಲೇ ಇವುಗಳಿಗೆ ನೇಕಾರ ಇರುವೆ (Weaver Ant) ಎಂದು ಕರೆಯುತ್ತಾರೆ.

ದೊಡ್ಡ ಎಲೆಗಳಿದ್ದಾಗ ಹಲವಾರು ಕೆಲಸಗಾರ ಇರುವೆಗಳು ಒಂದಕ್ಕೊಂದು ಕೊಂಡಿಯಂತೆ ಸಾಲಾಗಿ ನಿಂತು ಎಲೆಗಳನ್ನು ಒಂದಕ್ಕೊಂದು ಹತ್ತಿರ ತಳ್ಳುತ್ತವೆ. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬುದನ್ನು ಸಾಬೀತುಪಡಿಸುತ್ತವೆ. ಈ ನೇಕಾರ ಇರುವೆಗಳು ತಾವು ವಾಸಿಸುವ ಮರದ ಮೇಲೆ ಬರುವ ಇತರೆ ಕೀಟಗಳನ್ನು ತಿಂದು ಬದುಕುತ್ತವೆ. ಹಾಗಾಗಿ ಇವುಗಳನ್ನು ಹಲವಾರು ಕಡೆ ಜೈವಿಕ ನಿಯಂತ್ರಣದಲ್ಲಿ ಬಳಸಿದ ನಿದರ್ಶನಗಳಿವೆ.

ರಸ ಹೀರುವ ಕೀಟಗಳಾದ ಶಲ್ಕಕೀಟ, ಸಸ್ಯಹೇನು, ಜಿಗಿಹುಳುಗಳ ಜೊತೆ ಇರುವೆ/ಕೆಂಜಗಗಳು ಸಹಜೀವನ ನಡೆಸುತ್ತಾ ಅವು ವಿಸರ್ಜಿಸುವ ಸಿಹಿ ಪದಾರ್ಥವನ್ನು ಸವಿಯುತ್ತವೆ. ಇವುಗಳು ಕಚ್ಚುವಾಗ ಫಾರ್ಮಿಕ್ ಆಮ್ಲ(Formic acid) ಚರ್ಮದೊಳಗೆ ಬಿಡುತ್ತವೆ. ಇನ್ನಷ್ಟು ತೀಕ್ಷ್ಣವಾದ ಉರಿಯೂತದ ಯಾತನೆ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ, ಇರುವೆಗಳು ತಮ್ಮ ದೇಹದಿಂದ ಹೊರ ಸೂಸುವ ರಾಸಾಯನಿಕಗಳನ್ನು (Pheromone) ಬಳಸಿಕೊಂಡು ಸಂದರ್ಭಾನುಸಾರ ಹಲವು ಪ್ರಕಿಯೆಗಳನ್ನು ನಡೆಸುತ್ತವೆ. ಆಹಾರ ಹುಡುಕಲು ಸಾಲಾಗಿ ಸಾಗಲು ಟ್ರಯಲ್ ಮಾರ್ಕಿಂಗ್ ಫೆರೊಮೊನ್‌ (Trail marking Pheromone), ಶತ್ರುಗಳ ಆಕ್ರಮಣಕ್ಕೆ ಎಚ್ಚೆತ್ತುಕೊಳ್ಳುವ ರಾಸಾಯನಿಕವನ್ನು (Alaram Pheromone) ಇನ್ನಿತರೆ ಚಟುವಟಿಕೆಗಳಲ್ಲಿ ಬಹಳ ಸೂಕ್ತವಾಗಿ ಬಳಸಿಕೊಳ್ಳುತ್ತವೆ.

ಈ ಇರುವೆಗಳ ದೇಹ ಹೆಚ್ಚು ಪ್ರೊಟೀನ್‌ನಿಂದ ಕೂಡಿದ್ದು, ಹಲವು ದೇಶಗಳಲ್ಲಿ ಇವುಗಳನ್ನು ಹುರಿದುಕೊಂಡು ತಿನ್ನುತ್ತಾರೆ. ನಮ್ಮ ದೇಶದಲ್ಲಿ ಜಾರ್ಖಂಡ್‌ನ ಕೋಡಾ, ಮಹಾರಾಷ್ಟ್ರದ ಮೈದಾ ಸೇರಿದಂತೆ ಒಡಿಶಾ, ಕಾಸರಗೋಡು, ಭುವನೇಶ್ವರ ಮತ್ತಿರ ಕಡೆಗಳಲ್ಲಿರುವ ಬುಡಕಟ್ಟು ಜನಾಂಗದವರು ಇವುಗಳನ್ನು ಕೆಂಪು ಚಟ್ನಿಯ ರೂಪದಲ್ಲಿ ಸೇವಿಸುತ್ತಾರೆ.

ಇದನ್ನು ಹೊರತುಪಡಿಸಿ ಇನ್ನೊಂದು ಬಗೆಯ ಅರ್ಜೆಂಟೈನ್ ಇರುವೆ(Argentine Ant) ನೆಲದಡಿಯಲ್ಲಿ 5ರಿಂದ 6 ಸಾವಿರ ಕಿ.ಮೀ ಗಾತ್ರದ ಗೂಡು ನಿರ್ಮಿಸುವುದು ಅಚ್ಚರಿ ಮೂಡಿಸುತ್ತದಲ್ಲವೇ?

(ಲೇಖಕರು: ಕೃಷಿ ಅಧಿಕಾರಿ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT