ಮಂಗಳವಾರ, ಅಕ್ಟೋಬರ್ 27, 2020
20 °C

ಟ್ವೀಟಿಗರ ಆಕ್ರೋಶ, ಪರ ವಿರೋಧ ಚರ್ಚೆ: ಜಾಹೀರಾತು ವಿಡಿಯೊ ಡಿಲೀಟ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಆಭರಣ ಜಾಹೀರಾತಿನ ದೃಶ್ಯ–ಸಂಗ್ರಹ ಚಿತ್ರ

ಬೆಂಗಳೂರು: 'ಏಕತ್ವಂ' ಶೀರ್ಷಿಕೆಯ ವಿಡಿಯೊ ಜಾಹೀರಾತು ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆ ಹುಟ್ಟು ಹಾಕಿದ್ದು, ಆಭರಣ ಸಂಸ್ಥೆ ತನಿಷ್ಕ್ ಜಾಹೀರಾತನ್ನು ಹಿಂದಕ್ಕೆ ಪಡೆದಿದೆ.

ಜಾಹೀರಾತು ವಿಡಿಯೊ ನೋಡಿರುವ ಹಲವು ಟ್ವೀಟಿಗರು 'ಲವ್‌ ಜಿಹಾದ್' ಪ್ರಚುರ ಪಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 'ಏಕತೆ' ವಿಷಯವನ್ನು ಆಧರಿಸಿ ಪ್ರಕಟಿಸಲಾಗಿರುವ ಆಭರಣದ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬದಲ್ಲಿರುವ ಹಿಂದೂ ಮಹಿಳೆಗೆ ಸೀಮಂತ ಕಾರ್ಯಕ್ರಮ ಆಯೋಜಿಸುವ ದೃಶ್ಯಗಳಿವೆ. ಇಡೀ ಕುಟುಂಬ ಹಿಂದೂ ಸಂಪ್ರದಾಯದಂತೆ ಸಿದ್ಧತೆ ಮಾಡಿ ಮಹಿಳೆಗೆ ಸಂತಸ ನೀಡುವ ವಾತಾವರಣ ಸೃಷ್ಟಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಆದರೆ, ಟ್ವೀಟಿಗರು ಇಂಥ ವಿಡಿಯೊ ಪ್ರಕಟಿಸಿರುವ ಸಂಸ್ಥೆಯನ್ನೇ ನಿಷೇಧಿಸುವಂತೆ ಅಭಿಯಾನ ನಡೆಸಿದ್ದಾರೆ. ಹಲವು ಜನರು, ಏಕತೆಯನ್ನು ಸಾರುವ ವಿಡಿಯೊಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಒಂದೇ ವಿಡಿಯೊಗೆ ಎರಡೂ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುವ ಜೊತೆಗೆ, ಟ್ರೋಲ್‌ ಮಾಡುವವರಿಂದ ಹಲವು ರೀತಿಯ ಟೀಕೆಗಳು ಪ್ರಕಟಗೊಂಡಿವೆ.

ಎರಡು ಭಿನ್ನ ಧರ್ಮಗಳು, ಆಚರಣೆಗಳು ಹಾಗೂ ಸಂಸ್ಕೃತಿಗಳನ್ನು ಬೆಸೆದಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಬಗ್ಗೆ ಆಕ್ರೋಶ ಹೆಚ್ಚುತ್ತಿದ್ದಂತೆ, ಯುಟ್ಯೂಬ್‌ ಸೇರಿದಂತೆ ಎಲ್ಲ ವೇದಿಕೆಗಳಿಂದ ಸಂಸ್ಥೆಯು ವಿಡಿಯೊ ತೆಗೆದು ಹಾಕಿದೆ.

ಜಾಹೀರಾತು ಹಿಂಪಡೆಯುವಂತೆ ನಡೆಸಿರುವ ಅಭಿಯಾನಕ್ಕೆ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಭಿಯಾನ ನಡೆಸಿದವರನ್ನು 'ಹಿಂದುತ್ವ ಮತಾಂಧರು' ಎಂದು ಕರೆದಿದ್ದಾರೆ.

'ಹಿಂದೂ ಸೊಸೆಯೇ ಏಕೆ ಕಾಣುತ್ತಾಳೆ....ಏಕೆ ಮುಸ್ಲಿಂ ಸಮುದಾಯದ ಸೊಸೆಯನ್ನು ತೋರಿಸುವುದಿಲ್ಲ...', 'ಈ ವಿಡಿಯೊ ತೆಗೆದು ಹಾಕಿರುವುದು ಬೇಸರದ ಸಂಗತಿ. ಅದರ ಬದಲು ಸಂಸ್ಥೆ ಅಂತರ್‌ಜಾತಿ, ಅಂತರ್‌ ಧರ್ಮೀಯ ವಿಷಯಾಧಾರಿತ ಜಾಹೀರಾತುಗಳನ್ನು ಇನ್ನಷ್ಟು ಹೆಚ್ಚಿಸಬೇಕಿತ್ತು. ಟ್ರೋಲ್‌ಗಳು ಸಮರ್ಥನೀಯವಲ್ಲ', 'ಲವ್ ಜಿಹಾದ್‌ನಂತದ್ದು ಏನಿದೆ ಇದರಲ್ಲಿ?'–ಹೀಗೆ ಹಲವು ಬಗೆಯ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು