ಸೋಮವಾರ, ಏಪ್ರಿಲ್ 6, 2020
19 °C
ಟ್ವಿಟರ್‌ನಲ್ಲಿ ಕೊರೊನಾ ಜಾಗೃತಿ

ಟ್ವಿಟರ್‌ನಲ್ಲಿ ‘ಕೋವಿಡಿಯಟ್ಸ್‌’ ಟ್ರೆಂಡ್: ಸಾಮಾಜಿಕ ಅಂತರದ ಮಹತ್ವ ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus

ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಭಾನುವಾರದ ‘ಜನತಾ ಕರ್ಫ್ಯೂ’ ಬಹುತೇಕ ಯಶಸ್ವಿಯಾಗಿತ್ತು. ಸಾಮಾಜಿಕ ಅಂತರ  ಕಾಯ್ದುಕೊಳ್ಳುವ (ಸೋಶಿಯಲ್ ಡಿಸ್ಟೆನ್ಸಿಂಗ್) ನಿಟ್ಟಿನಲ್ಲಿ ಈ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆದರೆ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಸಂಜೆ ಐದು ಗಂಟೆ ವೇಳೆಗೆ ಜನರೆಲ್ಲ ಗುಂಪುಗೂಡಿದ್ದು, ಮೆರವಣಿಗೆ–ಸಂಭ್ರಮಾಚರಣೆ ಮಾಡಿದ್ದು ಆತಂಕ ಸೃಷ್ಟಿಸಿದೆ.

ಜನರ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ. ಕೊರೊನಾ ವೈರಸ್ ಸೋಂಕಿನ ಕುರಿತು ಸುಳ್ಳು ಮಾಹಿತಿ, ವದಂತಿ ಹರಡುವುದರ ಮತ್ತು ಅಜಾಗರೂಕತೆ ವಹಿಸುವವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ತಪ್ಪು ಮಾಹಿತಿ ಹರಡುವವರನ್ನು ಟ್ವೀಟಿಗರು ತರಾಟೆಗೆ ತೆಗದುಕೊಂಡಿದ್ದು, ‘ಕೋವಿಡಿಯಟ್ಸ್‌’ (#COVIDIOTS) ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಅತೀ ಮುಖ್ಯ: ‘ಓ ಸಮಾಜವೇ, ದಯಮಾಡಿ ಮನೆಯಲ್ಲೇ ಕುಳಿತುಕೋ’ ಎಂದು ಜೇನ್ ವಿಲ್ಲಾಗೋಮೆಜ್ ಎಂಬುವವರು ಟ್ವೀಟ್‌ ಮಾಡಿದ್ದಾರೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು ಉದಾಹರಣೆ ಸಹಿತ ವಿವರಿಸಿದ ಸಂದೇಶವೊಂದನ್ನು ಪ್ರಕಟಿಸಿದ್ದಾರೆ. ಆ ಸಂದೇಶ ಹೀಗಿದೆ:
‘ – ಕರೆನ್‌ಗೆ ನಿನ್ನೆ ಸೋಂಕು ತಗುಲಿತ್ತು. ಆದರೆ ಆಕೆಗದು 14 ದಿನಗಳ ವರೆಗೆ ಗೊತ್ತಾಗುವುದಿಲ್ಲ.

– ತಾನು ಆರೋಗ್ಯವಂತೆ ಎಂದು ಭಾವಿಸಿದ ಆಕೆ ದಿನಕ್ಕೆ 10 ಮಂದಿಗೆ ಸೋಂಕು ಹರಡುತ್ತಾಳೆ.

– ಈ ಹತ್ತು ಜನರು ತಾವು ಆರೋಗ್ಯವಂತರೆಂದು ಭಾವಿಸಿ ಹೊರಗಡೆ ಪ್ರಯಾಣಿಸುತ್ತಾರೆ, 100 ಮಂದಿಗೆ ಸೋಂಕು ಹರಡುತ್ತಾರೆ.

– ತಾವು ಆರೋಗ್ಯವಂತರೆಂದು ಭಾವಿಸುವ ಈ ಜನರು 1,000 ಜನರಿಗೆ ಸೋಂಕು ಹರಡುತ್ತಾರೆ.

– ಯಾರು ಆರೋಗ್ಯವಂತರು, ಯಾರು ಸೋಂಕು ಪೀಡಿತರು ಎಂಬುದು ಯಾರಿಗೂ ತಿಳಿದಿರುವುದಿಲ್ಲ.

ಮನೆಯಲ್ಲೇ ಇರುವುದರ ಮಹತ್ವ, ಅಗತ್ಯವೇನು ಎಂಬುದು ನಿಮಗೆ ಈಗ ತಿಳಿಯಿತೇ’ ಎಂದು ಜೇನ್ ವಿಲ್ಲಾಗೋಮೆಜ್ ಪ್ರಶ್ನಿಸಿದ್ದಾರೆ.

‘ಈ ವಿಡಿಯೊಗಳಲ್ಲಿ ಕಾಣಿಸುವ ಮೂರ್ಖರು ನಿಮ್ಮ ಸಿಟ್ಟು ಹೆಚ್ಚಲು ಕಾರಣರಾಗುತ್ತಾರೆ. ಅವರು ಇದನ್ನೊಂದು ಹಬ್ಬವೆಂದು ಪರಿಗಣಿಸಿದ್ದಾರೆ. ಜನತಾ ಕರ್ಫ್ಯೂವಿನ ಮೂಲ ಆಶಯವನ್ನೇ ಧಿಕ್ಕರಿಸಿ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ’ ಎಂದು ಗೌರವ್ ಕಪೂರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸಾವು ಸಾವೇ...: ಸೋಂಕಿನಿಂದಾಗಿ ಮೃತಪಡುವವರಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ದಯಮಾಡಿ ನಿಲ್ಲಿಸಿ. ಹೀಗೆನ್ನುವ ಮೂಲಕ ನೀವು ಅವರ ಜೀವನ ಅಪ್ರಸ್ತುತ ಎಂದು ಹೇಳಿದಂತಾಗುತ್ತದೆ. ಸಾವು ಎಂದಿಗೂ ಸಾವೇ. ನಿಮ್ಮ ವಯಸ್ಸೇನೆಂಬುದನ್ನು ನಾನು ಗಮನಿಸುವುದಿಲ್ಲ. ನೀವು ಸಂವೇದನಾರಹಿತ ಮಾತುಗಳನ್ನಾಡುತ್ತಿದ್ದೀರಿ. ತುಸುವಾದರೂ ಜವಾಬ್ದಾರಿ ತೆಗೆದುಕೊಳ್ಳಿ’ ಎಂದು ಡೊಮಿನಿಕ್ ಹ್ಯಾಮಿಲ್ಟನ್ ಎಂಬುವವರು ಹೇಳಿದ್ದಾರೆ.

‘ಈ ಒಂದು ಚಿತ್ರ ಸಾಕು ಲಕ್ಷಾಂತರ ಕಥೆಗಳನ್ನು ಹೇಳಲು... ವೈದ್ಯರು ಮತ್ತು ದಾದಿಯರು ನಮಗಾಗಿ ಸ್ವಾರ್ಥರಹಿತ ಹೋರಾಟ ಮಾಡುತ್ತಿರುವುದು ಗ್ರೇಟ್. ಅವರಿಗೆ ಅಭಿನಂದನೆಗಳು’ ಎಂದು ಚಂದನ್ ಶರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಜನರು ಒಂದು ತಿಂಗಳ ಕಾಲ ಸಹನೆಯಿಂದ ಮನೆಯಲ್ಲೇ ಕುಳಿತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸಹಜ ಸ್ಥಿತಿಗೆ ಮರಳಲು ಇರುವ ದಾರಿ. ಇಲ್ಲವಾದಲ್ಲಿ ಅನೇಕ ಜೀವಗಳು...’ ಎಂದು ಸ್ಟೇಸಿ ಹಾಫ್ಮನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಈ ಒಂದು ಸರಳ ಗ್ರಾಫ್‌ ನೀವು ಯಾಕೆ ಮನೆಯಲ್ಲೇ ಇರಬೇಕು? ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ’ ಎಂದು ಆ್ಯಂಡ್ರ್ಯೂ ಬ್ಯಾಕ್‌ಹೌಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಟ್ವೀಟ್‌ಗಳು:

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು