ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮೋಸ ಹೋದೆ ಎಂದು ಕಣ್ಣೀರಿಟ್ಟ ‘ಕಚ್ಚಾ ಬಾದಾಮ್’ ಖ್ಯಾತಿಯ ಭುಬನ್ ಭಡ್ಯಾಕರ್

Last Updated 7 ಮಾರ್ಚ್ 2023, 11:35 IST
ಅಕ್ಷರ ಗಾತ್ರ

ಕೊಲ್ಕತ್ತ: ಅಮಾಯಕರಿಗೆ ಮೋಸಗಾರರು ಹೇಗೆಲ್ಲ ಮೋಸ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.

‘ಬಾದಾಮ್ ಬಾದಾಮ್ ಕಚ್ಚಾ ಬಾದಾಮ್ , ಕಚ್ಚಾ.... ಬಾದಾಮ್ ’ ಎಂದು ತನ್ನದೇಯಾದ ಶೈಲಿಯಲ್ಲಿ ಹಾಡು ಹೇಳಿ ದೇಶದಾದ್ಯಂತ ಹವಾ ಮಾಡಿದ್ದ ಪಶ್ಚಿಮ ಬಂಗಾಳದ ಭಿರ್‌ಭೂಮ್‌ನ ಭುಬನ್ ಭಡ್ಯಾಕರ್ ಇದೇ ರೀತಿ ಮೋಸ ಹೋಗಿರುವುದು ವರದಿಯಾಗಿದೆ.

ಎಬಿಪಿ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಬುಬನ್, ‘ನಾನು ಮೋಸ ಹೋಗಿದ್ದೇನೆ. ಸದ್ಯ ನಾನು ಸಂಕಷ್ಟದಲ್ಲಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘2021 ರಲ್ಲಿ ಹಾಡು ವೈರಲ್‌ ಆಗುವ ಪೂರ್ವದಲ್ಲಿ ಭಿರ್‌ಭೂಮ್‌ನ ಉದ್ಯಮಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬರು ‘ಇಂಡಿಯನ್ ಪರ್‌ಫಾರ್ಮಿಂಗ್ ಸೊಸೈಟಿ’ ಹೆಸರಿನಲ್ಲಿ ನನ್ನ ಕಚ್ಚಾ ಬಾದಾಮ್ ಹಾಡು ಮತ್ತು ಟ್ಯೂನ್‌ ಅನ್ನು ತಮ್ಮದು ಎಂದು ನನ್ನನ್ನು ವಂಚಿಸಿದ್ದಾರೆ. ಏಕೆಂದರೆ ನಾನೀಗ ಆ ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೋದರೆ ಕಾಪಿರೈಟ್ ಕ್ಲೈಮ್ (ಹಕ್ಕು ಸ್ವಾಮ್ಯ) ಬರುತ್ತಿದೆ’ ಎಂದು ಅಲವತ್ತುಕೊಂಡಿದ್ದಾರೆ.

‘ಉದ್ಯಮಿ ಎಂದು ಹೇಳಲಾದ ವ್ಯಕ್ತಿ ನನ್ನ ಹಾಡು ಕೇಳಿ ₹3 ಲಕ್ಷ ನೀಡಿ ಕಾಗದವೊಂದರ ಮೇಲೆ ಸಹಿ ಮಾಡಿಸಿಕೊಂಡಿದ್ದರು. ನನಗೆ ಸರಿಯಾಗಿ ಓದಲು ಬರದಿದ್ದರಿಂದ ಅದು ನನಗೆ ಗೊತ್ತಾಗಿರಲಿಲ್ಲ. ಹಾಡನ್ನು ವಿಡಿಯೊ ಮಾಡಿಕೊಂಡು ಯುಟ್ಯೂಬ್‌ಗೆ ಹಾಕಿದ್ದರಿಂದ ಅದು ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದೀಗ ನಾನು ಯೂಟ್ಯೂಬ್‌ನಲ್ಲಿ ಆ ಹಾಡು ಹಾಗೂ ಟ್ಯೂನ್‌ ಅನ್ನು ಹಾಕಲು ಆಗುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

‘ನಾನು ಈ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ’ ಎಂದು ಕೂಡ ಅವರು ಹೇಳಿಕೊಂಡಿದ್ದಾರೆ. ಈಗ ನನ್ನದೇ ಕಚ್ಚಾ ಬಾದಾಮ್ ಹಾಡಿನ ವಿವಿಧ ರೂಪಗಳನ್ನು ಯುಟ್ಯೂಬ್‌ಗೆ ಹಾಕಲು ಆಗುತ್ತಿಲ್ಲ. ನನ್ನ ಜೀವನ ಇದೀಗ ಮೊದಲಿನಂತೆ ಆಗಿದೇ ಎಂದು ದುಃಖ ತೋಡಿಕೊಂಡಿದ್ದಾರೆ.

ರಾತ್ರೋರಾತ್ರಿ ಫೇಮಸ್

ಪಶ್ಚಿಮ ಬಂಗಾಳದ ದುರ್ಜಾಪುರ್‌ದ ಬೀದಿ ಬದಿಯಲ್ಲಿ ಶೇಂಗಾ ಬೀಜದ (ಕಡಲೆಕಾಯಿ) ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಅವರೇ ’ಕಚ್ಚಾ ಬಾದಮ್‌, ಹಾಡಿನ ರುವಾರಿ.

ಕಡಲೇ ಕಾಯಿ ಮಾರಾಟ ಮಾಡುವ ಸಲುವಾಗಿ ಅವರೇ ಈ ಹಾಡು ಬರೆದು ಹಾಡಿದ್ದರು. ಬಂಗಾಳಿಯಲ್ಲಿ ’ಕಚ್ಚಾ ಬಾದಾಮ್‌’ ಎಂದರೆ ಹಸಿ ಕಡಲೆಕಾಯಿ.

ಕಡಲೆ ಕಾಯಿ ಮಾರುತ್ತಾ ಹಾಡು ಹೇಳುತ್ತಿದ್ದ ಭುಬನ್ ಭಡ್ಯಾಕರ್ ಅವರ ವಿಡಿಯೊವನ್ನು 2021 ರಲ್ಲಿ ಯಾರೋ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದರು. ಕೆಲ ದಿನಗಳಲ್ಲಿ ಅವರ ಹಾಡು ವೈರಲ್‌ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿತ್ತು.

ಅಸಲಿ ಸಮಸ್ಯೆ ಏನು?

ಸದ್ಯ ಕಚ್ಚಾ ಬಾದಾಮ್ ಹಾಡು @ourcollection ಎಂಬ ಯುಟ್ಯೂಬ್‌ ಚಾನಲ್‌ನ ಶಾರ್ಟ್ಸ್ ವಿಡಿಯೊದಲ್ಲಿ ಮಾತ್ರ ಸಿಗುತ್ತಿದೆ, 61 ಮಿಲಿಯನ್ ವೀಕ್ಷಣೆ ಕಂಡಿದೆ. ವಿಚಿತ್ರ ಎಂದರೆ ಮೂಲ ಹಾಡನ್ನು ಹುಟ್ಟಿಹಾಕಿದವರಾದ ಭುಬನ್ ಅವರದೂ ಒಂದು Bhuban Badyakar Official ಎಂಬ ಯೂಟ್ಯೂಬ್ ಚಾನಲ್ ಇದೆ. 1.47 ಲಕ್ಷ ಚಂದಾದಾರೂ ಇದ್ದಾರೆ. ಆದರೆ, ಅದರಲ್ಲಿ ತಮ್ಮ ಒರಿಜಿನಲ್ ಕಚ್ಚಾ ಬದಾಮ್ ಹಾಡನ್ನು ಹಾಕಲು ಆಗುತ್ತಿಲ್ಲ ಎಂಬುದೇ ಭುಬನ್ ಪ್ರಮುಖ ಆರೋಪವಾಗಿದೆ.

ಇನ್ನು ಕಚ್ಚಾ ಬಾದಾಮ್‌ನ ರಿಮಿಕ್ಸ್‌ ವರ್ಷನ್ ಹಾಡೊಂದು Bhuban Badyakar Official ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಬಂದಿತ್ತು. ಅದು ಇಲ್ಲಿಯವರೆಗೆ ಬರೋಬ್ಬರಿ 401 ಮಿಲಿಯನ್ ವೀಕ್ಷಣೆ ಕಂಡಿದೆ.

ಕಚ್ಚಾ ಬಾದಾಮ್‌ನ ಇನ್ನೊಂದು ರಾಪ್ ವರ್ಷನ್ ಹಾಡು ಕೂಡ Godhuli Bela Music ಎಂಬ ಯುಟ್ಯೂಬ್ ಚಾನಲ್‌ನಲ್ಲಿ ಇದೆ. ಅದು ಇಲ್ಲಿಯವರೆಗೆ 155 ಮಿಲಿಯನ್ ವೀಕ್ಷಣೆ ಕಂಡಿದೆ.

ಕಷ್ಟದಲ್ಲಿ ಭುಬನ್

ಬಾದಾಮ್ ಹಾಡು ವೈರಲ್ ಆಗಿದ್ದ ಮೇಲೆ ಭುಬನ್ ಗೆ ಖ್ಯಾತಿ ಹಾಗೂ ಒಂದಿಷ್ಟು ಹಣ ಬಂದಿತ್ತು. ಅದರಿಂದ ಅವರು ದುರ್ಜಾಪುರ್ದಲ್ಲಿ ತಮ್ಮ ಗುಡಿಸಲಿನ ಮನೆ ತೆಗೆದು ಆರ್‌ಸಿಸಿ ಮನೆ ಕಟ್ಟುತ್ತಿದ್ದರು. ಒಂದು ಹೊಸ ಬೈಕ್ ತೆಗೆದುಕೊಂಡಿದ್ದರು.

ಆದರೆ ಸದ್ಯ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವುದಂರಿಂದ ಆರ್‌ಸಿಸಿ ಮನೆ ನಿರ್ಮಾಣವನ್ನು ಸ್ಥಗೀತಗೊಳಿಸಿ ಮತ್ತೆ ಬೀದಿ ಬೀದಿ ಅಲೆದು ಕಡಲೆಕಾಯಿ ಮಾರುವ ಸ್ಥತಿ ಬಂದಿದೆ ಎಂದು ಹೇಳಿದ್ದಾರೆ. ಸದ್ಯ ಅವರು ತಮ್ಮ ಊರನ್ನು ಬಿಟ್ಟು ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳಲ್ಲಿ ಮನರಂಜನೆಗಾರರಾಗಿ ಭಾಗವಹಿಸುತ್ತಾ ಪತ್ನಿಯೊಂದಿಗೆ ಭಿರ್‌ಭೂಮ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ ಎಂದು ಸಂದರ್ಶನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT