ಭಾನುವಾರ, ಸೆಪ್ಟೆಂಬರ್ 27, 2020
21 °C
#Boycott_KBC_SonyTv

ಕೌನ್‌ ಬನೇಗಾ ಕರೋಡ್‌ಪತಿ ವಿರುದ್ಧ ಟ್ವೀಟಿಗರ ಆಕ್ರೋಶ; 'ಶಿವಾಜಿ' ಬಳಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಜನಪ್ರಿಯ ಟಿ.ವಿ. ಕಾರ್ಯಕ್ರಮ ಕೌನ್‌ ಬನೇಗಾ ಕರೋಡ್‌ಪತಿ(ಕೆಬಿಸಿ) ವಿರುದ್ಧ ಇದೀಗ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಬಿಸಿ ಬಹಿಷ್ಕರಿಸಿ(#Boycott_KBC_SonyTv) ಎಂದು ಮಾಡಿರುವ ಟ್ವೀಟ್‌ಗಳು ಟ್ರೆಂಡ್‌ ಆಗಿವೆ. 

ಅಮಿತಾಬ್‌ ಬಚ್ಚನ್ ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ಕೇಳಿದ ಪ್ರಶ್ನೆಗೆ ನೀಡಿದ್ದ ಆಯ್ಕೆಗಳ ಬಗ್ಗೆ ಕೋಪಗೊಂಡಿರುವ ವೀಕ್ಷಕರು ಶುಕ್ರವಾರ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಮರಾಠ ದೊರೆ ಛತ್ರಪತಿ ಶಿವಾಜಿ ಹೆಸರು ಪ್ರಶ್ನೆಗೆ ನೀಡಲಾದ ಉತ್ತರಗಳಲ್ಲಿ ನಾಲ್ಕನೇ ಆಯ್ಕೆಯಾಗಿತ್ತು ಹಾಗೂ ಅಲ್ಲಿ 'ಶಿವಾಜಿ' ಎಂದಷ್ಟೇ ಬಳಸಲಾಗಿತ್ತು. ಆದರೆ, ಉಳಿದ ಆಯ್ಕೆಗಳಲ್ಲಿ ದೊರೆಗಳ ಪೂರ್ಣ ಹೆಸರುಗಳನ್ನು ನೀಡಲಾಗಿತ್ತು. 'ಛತ್ರಪತಿ' ಎಂಬುದನ್ನು ಬಿಟ್ಟಿರುವ ಬಗ್ಗೆ ಪ್ರಸ್ತಾಪಿಸಿ ಸೋನಿ ಟಿ.ವಿಯಲ್ಲಿ ಪ್ರಸ್ತಾರ ಮಾಡುತ್ತಿರುವ ಕೆಬಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಎಂದು ಕರೆಕೊಟ್ಟಿದ್ದಾರೆ. 

'ಮೊಘಲ್‌ ಚಕ್ರವರ್ತಿ ಔರಂಗಜೇಬ್‌ ಸಮಕಾಲೀನ ಆಡಳಿತಗಾರ ಯಾರು?' ಎಂಬುದು ಪ್ರಶ್ನೆ. ಇದಕ್ಕೆ ನೀಡಲಾದ ಆಯ್ಕೆಗಳು; ಮಹಾರಾಣಾ ಪ್ರತಾಪ್‌, ಮಹಾರಾಜಾ ರಂಜಿತ್‌ ಸಿಂಗ್‌, ರಾಣಾ ಸಾಂಗಾ ಹಾಗೂ ಶಿವಾಜಿ. ಇಲ್ಲಿ ಶಿವಾಜಿ ಹೊರತುಪಡಿಸಿ ಎಲ್ಲ ರಾಜರ ಪೂರ್ಣ ಹೆಸರು ಬಳಸಲಾಗಿದೆ. ಆದರೆ, ಛತ್ರಪತಿ ಎಂಬುದನ್ನು ಬಿಟ್ಟು ಶಿವಾಜಿ ಎಂದಷ್ಟೇ ತೋರಿಸುವ ಮೂಲಕ ಛತ್ರಪತಿ ಶಿವಾಜಿ ಅವರನ್ನು ಅಗೌರವಿಸಲಾಗಿದೆ. ಅವರ ಮೇಲೆ ಪ್ರೀತಿ, ಅಭಿಮಾನ ಹೊಂದಿರುವವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸುವ ಟ್ವೀಟ್‌ಗಳು ಹರಿದಾಡುತ್ತಿವೆ. 

'ಛತ್ರಿಪತಿ ಶಿವಾಜಿ ಅವರು ಎಷ್ಟೆಲ್ಲ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ, ಈ ರೀತಿಯೇ ಅವರನ್ನು ಗೌರವಿಸುವುದು?', 'ಮುಂದಿನ ಜನಾಂಗ ಇದರಿಂದ ಏನನ್ನು ಕಲಿಯುತ್ತದೆ?' ಹೀಗೆ ಹಲವು ಟ್ವೀಟ್‌ಗಳು ಕೆಬಿಸಿ ವಿರುದ್ಧ ಹರಿಹಾಯ್ದಿವೆ. 

ಈಗ ಕೆಬಿಸಿಯ 11ನೇ ಆವೃತ್ತಿ ಪ್ರಸಾರವಾಗುತ್ತಿದೆ. 2000ರಲ್ಲಿ ಕೆಬಿಸಿ ಮೊದಲ ಆವೃತ್ತಿ ಪ್ರಸಾರವಾಗಿತ್ತು. ಕೆಬಿಸಿ–3ರಲ್ಲಿ ಶಾರೂಕ್‌ ಖಾನ್‌ ಕಾರ್ಯಕ್ರಮ ನಡೆಸಿಕೊಟ್ಟದ್ದು ಬಿಟ್ಟರೆ, ಉಳಿದ ಎಲ್ಲ ಸೀಸನ್‌ಗಳಲ್ಲಿ ಅಮಿತಾಬ್‌ ಬಚ್ಚನ್‌ ನಿರೂಪಕರಾಗಿದ್ದಾರೆ. ಈವರೆಗೂ ಇಬ್ಬರು ಸ್ಪರ್ಧಿಗಳು ₹1 ಕೋಟಿ ಗಳಿಸಿದ್ದಾರೆ, ಯಾರೊಬ್ಬರೂ ₹7 ಕೋಟಿ ಜಾಕ್‌ಪಾಟ್‌ ಹಂತವನ್ನು ಪೂರ್ಣಗೊಳಿಸಿಲ್ಲ. 

(ಟ್ವೀಟಿಗರ ಆಕ್ರೋಶಕ್ಕೆ ಸೋನಿ ಟಿ.ವಿ. ನೀಡಿರುವ ಪ್ರತಿಕ್ರಿಯೆ: ಎಪಿಸೋಡ್‌ನಲ್ಲಿ ಉಂಟಾಗಿರುವ ತಪ್ಪಿಗೆ ಅಡಿ ಪಟ್ಟಿಯನ್ನು ಹಾಕಿ ಪ್ರಸಾರ ಮಾಡುವ ಮೂಲಕ ಕ್ಷಮೆಯಾಚಿಸುತ್ತಿದ್ದೇವೆ..)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು