ಮಂಗಳವಾರ, ಅಕ್ಟೋಬರ್ 15, 2019
26 °C

ಕೇರಳ: ಕುಟುಂಬದಿಂದ ತಿರಸ್ಕೃತನಾದ ಹಿರಿಯ ವ್ಯಕ್ತಿಗೆ ಜನಸ್ನೇಹಿ ಪೊಲೀಸರ ಸಹಾಯ ಹಸ್ತ

Published:
Updated:
Aboobaker

ಪಾಲಕ್ಕಾಡ್: ಕುಟುಂಬ ನಿರ್ವಹಣೆಗಾಗಿ 30 ವರ್ಷಗಳ ಕಾಲ ಗಲ್ಫ್ ರಾಷ್ಟ್ರದಲ್ಲಿ ದುಡಿದು ತಾಯ್ನಾಡಿಗೆ ಮರಳಿ ಬಂದಾಗ ಕುಟುಂಬದವರು ಕೇಳಿದ್ದು ಆಸ್ತಿಯಾಗಿತ್ತು. ಅದು ಸಿಗದೇ ಇದ್ದಾಗ ಆ ಕುಟುಂಬ ಅಬೂಬಕ್ಕರ್ ಅವರನ್ನು ಒಬ್ಬಂಟಿಯಾಗಿ ಬಿಟ್ಟುಹೋಯಿತು. ಹೀಗೆ  ಕುಟುಂಬದ ಆಶ್ರಯವಿಲ್ಲದೆ ಮುರುಕಲು ಮನೆಯಲ್ಲಿ ಅನಾರೋಗ್ಯದಿಂದ ಬಳಲಿದ್ದ ಅಬೂಬಕ್ಕರ್ ಎಂಬ ಹಿರಿಯ ವ್ಯಕ್ತಿಗೆ ನೆರವಾಗಿದ್ದು ಚಾಲಿಶ್ಶೇರಿ  ಜನಮೈತ್ರಿ (ಜನಸ್ನೇಹಿ) ಪೊಲೀಸ್.

 ಪಾಲಕ್ಕಾಡ್ ಜಿಲ್ಲೆಯ  ಕಪ್ಪೂರ್ ಎರವಕ್ಕಾಡ್ ಕೋಲಯಿಲ್ ನಿವಾಸಿ ಅಬೂಬಕ್ಕರ್ ಅವರಿಗೆ ಇಬ್ಬರು ಹೆಣ್ಮಕ್ಕಳು, ಪತ್ನಿ ಇದ್ದಾರೆ. ಮಕ್ಕಳಿಬ್ಬರಿಗೂ ವಿವಾಹವಾಗಿದೆ. ಗಲ್ಫ್ ರಾಜ್ಯದಲ್ಲಿ ದುಡಿದು ಆರೋಗ್ಯ ಕೈಕೊಟ್ಟಾಗ ಊರಿಗೆ ಮರಳಿದ್ದಾರೆ ಅಬೂಬಕ್ಕರ್. ಆದರೆ ಅಬೂಬಕ್ಕರ್ ಅವರನ್ನು ನೋಡಿಕೊಳ್ಳಲು ಹೆಣ್ಣು ಮಕ್ಕಳು ತಯಾರಿರಲಿಲ್ಲ. ಉಳಿದಿರುವ ಆಸ್ತಿ ಕೊಟ್ಟರೆ ಮಾತ್ರ ನಿಮ್ಮನ್ನು ನೋಡಿಕೊಳ್ಳುತ್ತೇವೆ  ಎಂಬುದು  ಮಕ್ಕಳ ಹಠ. ಇದಕ್ಕೆ ಒಪ್ಪದಿದ್ದಾಗ  ಅವರು ಅಪ್ಪನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾರೆ.  ಪತ್ನಿಯೂ ಸಾಥ್ ನೀಡಲಿಲ್ಲ.

ಕುಟುಂಬದವರ ನಿರಾಕರಣೆಯಿಂದ  ಕುಗ್ಗಿ ಹೋದ ಅಬೂಬಕ್ಕರ್ ಆತ್ಮಹತ್ಯೆ ಬಗ್ಗೆಯೂ ಯೋಚಿಸಿದ್ದರು. ಕುಟುಂಬದವರು ದೂರವಾದ ಕೊರಗಿನಿಂದ ಹಾಸಿಗೆ ಹಿಡಿದ ಆ ವ್ಯಕ್ತಿಯ  ಸಹಾಯಕ್ಕೆ ಬಂದಿದ್ದು ಜನಮೈತ್ರಿ ಬೀಟ್ ಡ್ಯೂಟಿಯಲ್ಲಿದ್ದ ಪೊಲೀಸರು.

ಎರವಕ್ಕಾಡ್ ಪ್ರದೇಶದಲ್ಲಿರುವ ಮನೆಗಳಿಗೆ ಭೇಟಿಯಿತ್ತಾಗ ಅಬೂಬಕರ್ ಪೊಲೀಸರ ಕಣ್ಣಿಗೆ ಬಿದ್ದಿದ್ದರು. ತಕ್ಷಣವೇ ಪೊಲೀಸರು ಅಬೂಬಕ್ಕರ್ ಅವರಿಗೆ  ಸಹಾಯಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.

ಚಾಲಿಶ್ಶೇರಿ ಕೋಆಪರೇಟಿವ್ ಬ್ಯಾಂಕ್ ನೌಕರನಾಗಿದ್ದ ಶಿವಾಸ್ ಎಂಬವರು ಅಬೂಬಕ್ಕರ್ ಅವರ ಕತೆಯನ್ನು ಚಾಲಿಶ್ಶೇರಿ ಎಸ್ಐ  ಅನಿಲ್ ಮ್ಯಾಥ್ಯೂಗೆ ತಿಳಿಸಿದ್ದರು. ವಿಷಯ ತಿಳಿದ ಚಾಲಿಶ್ಶೇರಿ ಎಸ್‌ಐ ಮತ್ತು ಪೊಲೀಸರ ತಂಡ ಸೋಮವಾರ ಅಬೂಬಕ್ಕರ್ ಮನೆಗೆ ಭೇಟಿ ಸಾಂತ್ವನ ನೀಡಿದೆ.
 

ಜನಮೈತ್ರಿ ಬೀಟ್ ಅಧಿಕಾರಿಗಳಾದ ಶ್ರೀಕುಮಾರ್, ರತೀಶ್, ಸಾಮಾಜಿಕ ಕಾರ್ಯಕರ್ತರಾದ ಹಬೀಬ್ ರೆಹಮಾನ್, ಮುಸ್ತಫಾ,  ವಿಜೇಶ್ ಮೊದಲಾದವರು ಸೇರಿ ಮನೆ ಮತ್ತು ಸುತ್ತಲಿನ ಪ್ರದೇಶ ಸ್ವಚ್ಛಮಾಡಿದ್ದಾರೆ.
 ಪ್ರತಿದಿನ ಆಹಾರ ಮತ್ತು ಔಷಧಿ ತಲುಪಿಸಿಕೊಡುವ ಕೆಲಸವನ್ನು ಸಾಮಾಜಿಕ ಕಾರ್ಯಕರ್ತರು ವಹಿಸಿಕೊಂಡಿದ್ದಾರೆ. ಅಬೂಬಕ್ಕರ್ ಅವರಿಗೆ ಅಗತ್ಯವಾದ ಸಹಾಯ, ಸಾಂತ್ವನ ನೀಡಲು ನಾವು ಸದಾ ಜತೆಗಿರುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಪೊಲೀಸರ ಈ ಕಾರ್ಯವನ್ನು ಕೇರಳ ಪೊಲೀಸ್ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Post Comments (+)