ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲಿ ಮೋದಿಯದ್ದೇ ಟ್ರೆಂಡ್

Last Updated 3 ಜುಲೈ 2020, 20:04 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್‌ನ ರಾಜಧಾನಿ ಲೇಹ್‌ಗೆ ನೀಡಿದ ಭೇಟಿ, ಟ್ವಿಟರ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಶುಕ್ರವಾರ ಭಾರತದಲ್ಲಿನ ಟ್ವಿಟರ್‌ ಟ್ರೆಂಡ್‌ನಲ್ಲಿ ಮೋದಿಗೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್‌ಗಳೇ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದವು. ಪ್ರಧಾನಿಯ ಲೇಹ್ ಭೇಟಿಯನ್ನು ಪ್ರಶಂಸಿಸಿ, ಹಲವರು ಟ್ವೀಟ್ ಮಾಡಿದ್ದಾರೆ. ಇನ್ನೂ ಹಲವರು ಇದೊಂದು ಪ್ರಚಾರ ತಂತ್ರ ಎಂದು ಟ್ವೀಟ್ ಮಾಡಿದ್ದಾರೆ.

#ಮೋದಿ ಇನ್‌ ಲೇಹ್

ಪ್ರಧಾನಿ ನರೇಂದ್ರ ಮೋದಿ ಅವರು ಲೇಹ್‌ಗೆ ಭೇಟಿ ನೀಡಿದ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಶುಕ್ರವಾರದ ಮೊದಲ 10 ಟಾಪ್‌ ಟ್ರೆಂಡ್‌ನಲ್ಲಿ#ModiInLeh ಮೊದಲ ಸ್ಥಾನ ಪಡೆಯಿತು. ಶುಕ್ರವಾರ ಸಂಜೆವೇಳೆಗೆ ಈ ಹ್ಯಾಷ್‌ಟ್ಯಾಗ್‌ನಲ್ಲಿ 1.26 ಲಕ್ಷ ಮಂದಿ ಟ್ವೀಟ್ ಮಾಡಿದ್ದರು.ಈ ಹ್ಯಾಷ್‌ಟ್ಯಾಗ್‌ನಲ್ಲಿ ಮಾಡಿದ ಟ್ವೀಟ್‌ನಲ್ಲಿ ಮೋದಿ ಪರವಾದ ಟ್ವೀಟ್‌ಗಳೂ ಇವೆ. ಮೋದಿ ವಿರುದ್ಧವಾದ ಟ್ವೀಟ್‌ಗಳೂ ಇವೆ.

ಪ್ರಧಾನಿ ಲೇಹ್‌ನಲ್ಲಿ ಸೈನಿಕರ ಜತೆ ಸಂವಾದ ನಡೆಸುತ್ತಿರುವ, ಮಾಹಿತಿ ಪಡೆಯುತ್ತಿರುವ, ಕೈಬೀಸುತ್ತಿರುವ ಮತ್ತು ಭಾಷಣ ಮಾಡುತ್ತಿರುವ ಚಿತ್ರಗಳನ್ನು ಟ್ವೀಟಿಗರು ಹಂಚಿಕೊಂಡಿದ್ದಾರೆ. ಹೆಲಿಕಾಪ್ಟರ್‌ನಿಂದ‌ ಇಳಿದು ಮೋದಿ ಮತ್ತು ಸೇನೆಯ ಅಧಿಕಾರಿಗಳು ನಡೆದು ಬರುತ್ತಿರುವ ಚಿತ್ರ ಹೆಚ್ಚು ಬಾರಿ ಪೋಸ್ಟ್ ಆಗಿದೆ.ಈ ಚಿತ್ರದಲ್ಲಿ ಮೂವರ ನೆರಳನ್ನು ಎಡಿಟ್ ಮಾಡಿ, ಸಿಂಹದ ನೆರಳನ್ನು ಹಾಕಲಾಗಿದೆ.ಈ ಚಿತ್ರ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

‘ಹೌ ಇಸ್ ದ ಜೋಶ್‌?, ಹೈ ಸರ್‌’ ಎಂಬ ಸಿನಿಮಾ ಸಂಭಾಷಣೆಯ ಘೋಷಣೆಯನ್ನು ಹಲವರು ಟ್ವೀಟ್ ಮಾಡಿದ್ದಾರೆ. ಮೋದಿಯಂತಹ ಮಹಾನ್ ನಾಯಕ ಮಾತ್ರವೇ ಸಂಘರ್ಷ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡುವಂತಹ ಧೈರ್ಯ ಮಾಡುತ್ತಾರೆ. ಯೋಧರಲ್ಲಿ ಧೈರ್ಯ ತುಂಬುತ್ತಾರೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.#mypmmypride ಎಂಬ ಹ್ಯಾಶ್‌ಟ್ಯಾಗ್ ಸಹ ಶುಕ್ರವಾರದ ಟ್ವಿಟರ್ ಟ್ರೆಂಡ್ ಆಗಿತ್ತು. ಈ ಹ್ಯಾಶ್‌ಟ್ಯಾಗ್‌ನಲ್ಲೂ ಹಲವರು ಮೋದಿ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ಹೇ ಚೀನಾ, ಅತಿಕ್ರಮಣವನ್ನು ಇನ್ನು ಮುಂದೆ ಭಾರತ ಸಹಿಸುವುದಿಲ್ಲ. ಗಡಿಯಲ್ಲಿ ಪಿಎಂ ಮೋದಿ ಎಂಬ ಮಹಾನ್ ತಡೆಗೋಡೆ ಇದೆ. ಅವರಿಗೆ ಸೈನಿಕರು ಮತ್ತು 130 ಕೋಟಿ ಭಾರತೀಯರ ಬೆಂಬಲವಿದೆ’ ಎಂದು ಪರ್ವೀಶ್ ಸಾಹಿಬ್ ಸಿಂಗ್ (@p_sahibsingh) ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನೀಮೂ ಪ್ರೇಕ್ಷಣೀಯ ಸ್ಥಳ’

ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರನ್ನು ಭೇಟಿ ಮಾಡಿ, ಭಾಷಣ ಮಾಡಿದ ಜಾಗ ಲೇಹ್‌ ಬಳಿ ಇರುವ ನಿಮು ಒಂದು ಪ್ರೇಕ್ಷಣೀಯ ಸ್ಥಳ. ಈ ಜಾಗದ ಹೆಸರೂ ಶುಕ್ರವಾರ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಶುಕ್ರವಾರ ಸಂಜೆ ವೇಳೆಗೆ 56,000ಕ್ಕೂ ಹೆಚ್ಚು ಟ್ವೀಟ್‌ಗಳಲ್ಲಿ ‘NIMU’ ಹೆಸರನ್ನು ಬಳಸಲಾಗಿತ್ತು.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು, ‘ನಾವು ಕೊಳಲನ್ನು ಹಿಡಿದಿರುವ ಕೃಷ್ಣನನ್ನು ಪ್ರಾರ್ಥಿಸುವಂತೆ, ಸುದರ್ಶನ ಚಕ್ರಧಾರಿ ಕೃಷ್ಣನನ್ನೂ ಪ್ರಾರ್ಥಿಸುತ್ತೇವೆ. PM @narendramodi ಅವರು ನಿಮು ಮುಂಚೂಣಿ ಠಾಣೆಯಲ್ಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಸುಳ್ಳು ಹೇಳಬೇಡಿ. ನಿಮು ಮುಂಚೂಣಿ ಠಾಣೆ ಅಲ್ಲ’ ಎಂದು ಆರ್‌.ತಂಕಪ್ಪನ್ ಎಂಬುವವರು ಬಿ.ಎಲ್.ಸಂತೋಷ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೂ ಹಲವರು ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧಭೂಮಿ ನಿಮುಗೆ ಭೇಟಿ ನೀಡಿ, ಸೈನಿಕರಿಗೆ ಧೈರ್ಯ ತುಂಬಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.ಆದರೆ ನಿಮು ಯುದ್ಧಭೂಮಿ ಅಲ್ಲ. ಅದು ಲೇಹ್ ಬಳಿ ಇರುವ ಪ್ರೇಕ್ಷಣೀಯ ಸ್ಥಳ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

‘ಮುಂಚೂಣಿ ಠಾಣೆ ಇರುವ ಗಾಲ್ವನ್‌ ಕಣಿವೆಗೂ, ನಿಮು ನಡುವೆ 250 ಕಿ.ಮೀ. ಅಂತರವಿದೆ. ಚಟಾಕಿ ಹಾರಿಸುವುದನ್ನು ನಿಲ್ಲಿಸಿ’ ಎಂದು@NafratHatao ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

#ಪಿಎಂಮಸ್ಟ್‌ಆ್ಯನ್ಸರ್‌
ಟ್ವಿಟರ್‌ನಲ್ಲಿ#ModiInLeh ಮೊದಲ ಟ್ರೆಂಡ್ ಆಗಿದ್ದರೆ,#PMMustAnswer ಎಂಬುದು ಎರಡನೇ ಟ್ರೆಂಡ್ ಆಗಿತ್ತು.

ಚೀನಾ ನಮ್ಮ ನೆಲವನ್ನು ಹೇಗೆ ಅಕ್ರಮಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಬೇಕು ಎಂದು#PMMustAnswer ಹ್ಯಾಷ್‌ಟ್ಯಾಗ್‌ನಲ್ಲಿ ಹಲವರು ಟ್ವೀಟ್ ಮಾಡಿದ್ದಾರೆ. ಚೀನಾ ಜತೆಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಹಲವರು ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವು ಪ್ರಶ್ನೆಗಳು ಇಂತಿವೆ.

* ಚೀನಾ ನಮ್ಮ ನೆಲವನ್ನು ಪ್ರವೇಶಿಸಿದ್ದು ಹೇಗೆ? (@RahulMukherji5)

* ಚೀನಾ ನಮ್ಮ 20 ಸೈನಿಕರನ್ನು ಕೊಂದಿದ್ದು ಏಕೆ?ನಮ್ಮ 20 ಹುತಾತ್ಮರ ಆತ್ಮಕ್ಕೆ ಶಾಂತಿ ದೊರೆಯುವುದು ಯಾವಾಗ? (@KibaVenisha)

* ಚೀನಾದ ಹೆಸರನ್ನು ಅವರು ಉಲ್ಲೇಖಿಸುವುದು ಯಾವಾಗ? ಈ ಬಗ್ಗೆ ಮೌನವೇಕೆ? (@KrrishDilSe)

* ಪ್ರಧಾನಿ ಅವರು ಚೀನಾದ ಹೆಸರು ಹೇಳುತ್ತಿಲ್ಲ, ನಿರ್ಣಾಯಕ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಎಲ್ಲವೂ ಚೆನ್ನಾಗೇ ಇದೆ ಎನ್ನುವುದಾದರೆ ಮೋದಿ ಅವರು ಲಡಾಖ್‌ಗೆ ಹೋಗಿದ್ದೇಕೆ? (@StayingReal0511)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT