ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ಹಣ ಪಡೆಯಲು 100 ವರ್ಷದ ವೃದ್ಧೆಯನ್ನು ಬ್ಯಾಂಕ್‌ಗೆ ತಳ್ಳಿಕೊಂಡು ಹೋದ ಮಹಿಳೆ

ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದಲ್ಲಿ ಜನಧನ ಖಾತೆಯಿಂದ ಹಣ ಪಡೆಯುವುದಕ್ಕೋಸ್ಕರ ನೂರು ವರ್ಷದ ವೃದ್ಧೆಯನ್ನು ಅವರ ಪುತ್ರಿ ಮಂಚ ಸಮೇತ ಬ್ಯಾಂಕಿಗೆ ತಳ್ಳಿಕೊಂಡು ಬಂದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಒಡಿಶಾದ ನೌಪರಾ ಜಿಲ್ಲೆಯ ಬರ್‌ಗಾಂವ್‌ ಗ್ರಾಮದ 60 ವರ್ಷ ವಯಸ್ಸಿನ ಪುಂಜಿಮತಿ ದೇಯಿ ಎಂಬುವವರೇ ತಾಯಿಯನ್ನು ಮಂಚ ಸಮೇತ ಬ್ಯಾಂಕಿಗೆ ತಳ್ಳಿಕೊಂಡು ಹೋದವರು. ಫಲಾನುಭವಿಗಳ ಹಾಜರಿ ಇಲ್ಲದೆ ಹಣವನ್ನು ನೀಡಲಾಗದು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದರಿಂದ ತಾಯಿಯನ್ನು ಮಂಚದಲ್ಲಿ ತಳ್ಳಿಕೊಂಡು ಹೋಗಿದ್ದೆ ಎಂದು ಪುಂಜಿಮತಿ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಬ್ಯಾಂಕ್ ಆಡಳಿತ ತಳ್ಳಿ ಹಾಕಿದೆ. ಫಲಾನುಭವಿಯ ಪರಿಶೀಲನೆಗಾಗಿ ಮ್ಯಾನೇಜರ್ ಆಕೆಯ ಮನೆಗೆ ತೆರಳುವುದಕ್ಕೆ ಮುನ್ನವೇ ಮಹಿಳೆ ತಾಯಿಯನ್ನು ಕರೆದುಕೊಂಡು ಬಂದಿದ್ದಾರೆ ಎಂದು ಬ್ಯಾಂಕ್ ಹೇಳಿದೆ.

ಜನಧನ್ ಬ್ಯಾಂಕ್ ಖಾತೆ ಹೊಂದಿರುವವರಿಗೆ ಏಪ್ರಿಲ್‌ನಿಂದ ಜೂನ್ ಅವಧಿಗೆ ತಿಂಗಳಿಗೆ ₹ 500ರಂತೆ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಘೋಷಿಸಿತ್ತು. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಹಣ ಬಿಡುಗಡೆ ಮಾಡುವುದಾಗಿ ಹೇಳಿತ್ತು.

ಹೀಗಾಗಿ ತಾಯಿ ಲಭೆ ಬಘೆಲ್‌ಗೆ ದೊರೆಯಬೇಕಾದ ₹1,500 ಪಡೆಯಲೆಂದು ದೇಯಿ ಅವರು ಜೂನ್ 9ರಂದು ಉತ್ಕಲ್ ಗ್ರಾಮೀಣ್ ಬ್ಯಾಂಕ್‌ನ ಸ್ಥಳೀಯ ಶಾಖೆಗೆ ತೆರಳಿದ್ದರು. ಆ ಸಂದರ್ಭ, ತಾಯಿಯನ್ನು ಬ್ಯಾಂಕಿಗೆ ಕರೆದುಕೊಂಡು ಬರಬೇಕೆಂದು ಮ್ಯಾನೇಜರ್ ಸೂಚಿಸಿದ್ದರು ಎಂದು ಸ್ಥಳೀಯರ ಹೇಳಿಕೆ ಉಲ್ಲೇಖಿಸಿ ಹಿಂದುಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ತಾಯಿಗೆ ವಯಸ್ಸಾಗಿದ್ದರಿಂದ ಮತ್ತು ಹಾಸಿಗೆ ಹಿಡಿರುವುದರಿಂದ ಮಂಚ ಸಮೇತ ತಳ್ಳಿಕೊಂಡು ಹೋಗದೆ ಬೇರೆ ವಿಧಿ ಇರಲಿಲ್ಲ ಎಂದೂ ಮಹಿಳೆ ಹೇಳಿದ್ದಾರೆ. ಬ್ಯಾಂಕ್‌ಗೆ ತಾಯಿಯನ್ನು ಕರೆದುಕೊಂಡು ಹೋದ ಬಳಿಕ ಮ್ಯಾನೇಜರ್ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಈ ವಿಚಾರವಾಗಿ ನೌಪರಾ ಜಿಲ್ಲಾಧಿಕಾರಿ ಮಧುಸ್ಮಿತಾ ಸಾಹೂ ಪ್ರತಿಕ್ರಿಯೆ ನೀಡಿದ್ದು, ಮರುದಿನ ಮನೆಗೆ ಭೇಟಿ ನೀಡುವುದಾಗಿ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದರೂ ಆ ಮಹಿಳೆ ತರಾತುರಿಯಲ್ಲಿ ತಾಯಿಯನ್ನು ಬ್ಯಾಂಕ್‌ಗೆ ಕರೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT