ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮ: ಮಾರಾಟದ ಸರಕಾದ ವೈಯಕ್ತಿಕ ಮಾಹಿತಿ!

Last Updated 6 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಗಳಿಗೆ ಸುರಕ್ಷತೆ ಇಲ್ಲ ಎನ್ನುವುದನ್ನು ಪದೇ ಪದೇ ಸ್ಪಷ್ಟಪಡಿಸುವ ಹಲವು ಘಟನೆಗಳು ನಡೆಯುತ್ತಲೇ ಇವೆ. ಭಾರತವನ್ನೂ ಒಳಗೊಂಡು 106 ದೇಶಗಳ 53.3 ಕೋಟಿ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎನ್ನುವ ವರದಿಯು ಇದಕ್ಕೆ ಇನ್ನೊಂದು ಸೇರ್ಪಡೆಯಷ್ಟೆ. ಇದರಲ್ಲಿ 61 ಲಕ್ಷ ಭಾರತೀಯ ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ ಎನ್ನುವುದನ್ನೂ ಗಮನಿಸಬೇಕಾಗಿದೆ.

ಸೈಬರ್‌ ಸುರಕ್ಷತಾ ಸಂಸ್ಥೆ ಹಡ್ಸನ್‌ ರಾಕ್‌ ನೀಡಿರುವ ಮಾಹಿತಿಯ ಪ್ರಕಾರ, ಈ ಖಾತೆಗಳು ಸೋರಿಕೆಯಷ್ಟೇ ಆಗಿಲ್ಲ, ಬದಲಾಗಿ ಹ್ಯಾಕಿಂಗ್‌ ವೇದಿಕೆಯಲ್ಲಿ ಉಚಿತವಾಗಿಯೂ ಪೋಸ್ಟ್‌ ಮಾಡಲಾಗಿದೆ. ಫೇಸ್‌ಬುಕ್‌ ಖಾತೆಗೆ ಬಳಸಿರುವ ಫೋನ್‌ ನಂಬರ್‌ ಅನ್ನೂ ಒಳಗೊಂಡು ಎಲ್ಲಾ ಮಾಹಿತಿಗಳೂ ಆನ್‌ಲೈನ್‌ನಲ್ಲಿ ಸೋರಿಕೆ ಆಗಿವೆ.

ಈ ಬಗ್ಗೆ ಫೇಸ್‌ಬುಕ್ ಹೇಳುವುದೇ ಬೇರೆ! 2019ರಲ್ಲಿ ಕಂಡುಬಂದಿದ್ದ ಸಮಸ್ಯೆ ಅದು, 2019ರ ಆಗಸ್ಟ್‌ನಲ್ಲಿ ಅದನ್ನು ಸರಿಪಡಿಸಲಾಗಿದೆ ಎಂದು ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ. ಆದರೆ, ಸೋರಿಕೆ ಆಗಿರುವ ಮಾಹಿತಿಯು ಹಳೆಯವೇ ಆಗಿದ್ದರೂ ಸೈಬರ್ ಅಪರಾಧಿಗಳಿಗೆ ಮೌಲ್ಯಯುತವಾಗಿದ್ದೇ ಆಗಿವೆ ಎನ್ನುವುದುಹಡ್ಸನ್‌ ರಾಕ್‌ ಸಂಸ್ಥೆಯ ಸಹ ಸ್ಥಾಪಕ ಅಲನ್‌ ಗಾಲ್‌ ವಾದ. ಏಕೆಂದರೆ ಅವುಗಳಲ್ಲಿ ಬಳಕೆದಾರನ ಮೊಬೈಲ್‌ ಸಂಖ್ಯೆ ಇರುತ್ತದೆ. ಅದೊಂದು ಇದ್ದರೆ ಸಾಕು, ಹಲವು ರೀತಿಯ ದಾಳಿ ನಡೆಸಲು ಸೈಬರ್ ಅಪರಾಧಿಗಳಿಗೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಅವರು.

ಫೇಸ್‌ಬುಕ್‌ ವಿರುದ್ಧ ದತ್ತಾಂಶ ಸುರಕ್ಷತೆಯ ಪ್ರಶ್ನೆ ಎದುರಾಗಿರುವುದು ಇದೇ ಮೊದಲಲ್ಲ ಎಂದೂ ಅವರು ಹೇಳುತ್ತಾರೆ. 2020ರ ಆರಂಭದಲ್ಲಿ ಪ್ರತಿಯೊಂದು ಫೇಸ್‌ಬುಕ್‌ ಖಾತೆಗೆ ಲಿಂಕ್‌ ಆಗಿರುವ ಫೋನ್‌ ನಂಬರ್‌ಗಳು ಸೋರಿಕೆ ಆಗಿವೆ. ಫೇಸ್‌ಬುಕ್‌ ಐಡಿ ಮತ್ತು ಬಳಕೆದಾರನ ಪೂರ್ಣ ಹೆಸರು ಸಹ ಸೋರಿಕೆ ಆಗಿದ್ದು, 2018ರ ಮಾರ್ಚ್‌ನಲ್ಲಿ 5.62 ಲಕ್ಷ ಭಾರತೀಯರ ಫೇಸ್‌ಬುಕ್‌ ಡೇಟಾ ಕಳುವಾಗಿತ್ತು ಎನ್ನುವ ಮಾಹಿತಿಯನ್ನೂ ಅವರು ನೀಡಿದ್ದಾರೆ.

ಈ ಡಿಜಿಟಲ್ ಯುಗದಲ್ಲಿ ಬಳಕೆದಾರನೇ ಮಾರಾಟದ ಸರಕಾಗಿರುವಾಗ ಅದೆಷ್ಟೇ ಎಚ್ಚರ ವಹಿಸಿದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತಿದೆ. ವಾಟ್ಸ್ಆ್ಯಪ್‌ನ ಹೊಸ ನೀತಿಯಿಂದ ಖಾಸಗಿತನಕ್ಕೆ ರಕ್ಷಣೆ ಸಿಗುವುದಿಲ್ಲ ಎಂದು ಜಗತ್ತಿನೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಫೇಸ್‌ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಆಗಿರುವ ಕುರಿತ ವರದಿಯು ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಬಗ್ಗೆ ಮತ್ತೆ ಮರುಚಿಂತನೆ ನಡೆಸುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಏಕೆಂದರೆ, ಕಂಪನಿ ತನ್ನ ಲೋಪ ಸರಿಪಡಿಸಿಕೊಂಡರೂ ಬಳಕೆದಾರನ ಮೊಬೈಲ್‌ ಸಂಖ್ಯೆ, ಜನ್ಮ ದಿನಾಂಕ, ಇನ್ನಿತರವೈಯಕ್ತಿಕ ಮಾಹಿತಿಗಳು ಅದಾಗಲೇ ಜಗಜ್ಜಾಹೀರಾಗಿ ಬಿಟ್ಟಿರುತ್ತವೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ! ಹೀಗಾಗಿ, ತೀರಾ ಅಗತ್ಯ ಇಲ್ಲದೇ ಮೊಬೈಲ್‌ ಸಂಖ್ಯೆ, ಜನ್ಮ ದಿನಾಂಕ ಇನ್ನಿತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದಿರುವುದೇ ಒಳಿತು. ಅದರಲ್ಲಿಯೂ ಬ್ಯಾಂಕ್‌ ವಹಿವಾಟು ನಡೆಸುವ ಮೊಬೈಲ್ ಸಂಖ್ಯೆಯನ್ನು ಬೇರೆ ಉದ್ದೇಶಗಳಿಗೆ ಬಳಸದೇ ಇರುವುದು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಸೂಕ್ತ.

ಫೇಸ್‌ಬುಕ್‌ನಲ್ಲಿ ಸುರಕ್ಷತೆಗೆ ಕೆಲವು ಸಲಹೆ
ಡಿಲೀಟ್ ಆಯ್ಕೆ: ವೈಯಕ್ತಿಕ ಮಾಹಿತಿಗಳಾದ ಫೋನ್‌ ನಂಬರ್‌, ಹುಟ್ಟುಹಬ್ಬದ ಮಾಹಿತಿ, ಯಾವೆಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದೇವೆ ಎನ್ನುವುದನ್ನು ಡಿಲೀಟ್‌ ಮಾಡಲು ಹೀಗೆ ಮಾಡಿ. ಫೇಸ್‌ಬುಕ್‌ ಪುಟದಲ್ಲಿ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ Edit Public Details ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಡಿಲೀಟ್‌ ಮಾಡಬಹುದು ಅಥವಾ ಬದಲಿಸಬಹುದು.

ಫೇಶಿಯಲ್‌ ರೆಕಗ್ನಿಷನ್: ಫೇಸ್‌ಬುಕ್‌ ಪುಟದ ಮೇಲ್ಭಾಗ ಬಲಬದಿಯಲ್ಲಿ ಮೂರು ಅಡ್ಡಗೆರೆಗಳು ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಿ Settings & Privacy>Privacy Shortcuts> Control Face recongition ಇಲ್ಲಿ Do you want facebook to be able to recognize you in photos and videos ಅನ್ನು ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ Yes/No ಆಯ್ಕೆ ಮಾಡಿ.

ಡೇಟಾ ನಿಯಂತ್ರಣ: ಬೇರೆ ಆ್ಯಪ್‌ಗಳು ಅಥವಾ ನ್ಯೂಸ್‌ಪೇಪರ್‌ ಸೈಟ್‌ಗಳಿಗೆ ಲಾಗಿನ್ ಆಗಲು ಫೇಸ್‌ಬುಕ್‌ ಬಳಸಿದ್ದರೆ ಅವುಗಳು ನಮ್ಮ ಫೇಸ್‌ಬುಕ್‌ ಖಾತೆಯಲ್ಲಿರುವ ಎಲ್ಲಾ ಮಾಹಿತಿಗಳನ್ನೂ ಅಕ್ಸೆಸ್‌ ಮಾಡುತ್ತವೆ. ಇದನ್ನು ತಪ್ಪಿಸಲು ಫೇಸ್‌ಬುಕ್‌ ಪುಟದ ಮೇಲ್ಭಾಗ ಬಲಬದಿಯಲ್ಲಿ ಮೂರು ಅಡ್ಡಗೆರೆಗಳು ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಿ Settings & Privacy >Settings >Apps and Websites ಇಲ್ಲಿ ಕ್ಲಿಕ್ ಮಾಡಿದ ಬಳಿಕ Apps, Websites and Games ಎಂದಿರುವಲ್ಲಿ Edit ಮೇಲೆ ಕ್ಲಿಕ್ ಮಾಡಿ. ಅಲ್ಲಿ Cancel ಮತ್ತು Turn off ಆಯ್ಕೆ ಕಾಣಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT