ಮಂಗಳವಾರ, ಮಾರ್ಚ್ 21, 2023
29 °C

ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ ಖಾತೆ ಹ್ಯಾಕ್‌ ಮಾಡಿದ ‘ಜಾನ್‌ ವಿಕ್‌’ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ಗೆ ಲಿಂಕ್‌ ಆಗಿರುವ ಟ್ವಿಟರ್ ಖಾತೆಯನ್ನು ಜಾನ್‌ ವಿಕ್‌ ಎಂಬ ಹ್ಯಾಕರ್‌ ಗುಂಪು ಹ್ಯಾಕ್‌ ಮಾಡಿರುವುದನ್ನು ಗುರುವಾರ ಟ್ವಿಟರ್‌ ಖಚಿತ ಪಡಿಸಿದೆ.

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕ್ರಿಪ್ಟೊಕರೆನ್ಸಿಗಳ ಮೂಲಕ ಸಹಾಯ ಮಾಡುವಂತೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ವೆಬ್‌ಸೈಟ್‌ ಖಾತೆಯಿಂದ ಮನವಿ ಪ್ರಕಟಗೊಂಡಿದೆ.

ಜುಲೈನಲ್ಲಿ ಜಗತ್ತಿನಾದ್ಯಂತ ಗಣ್ಯ ವ್ಯಕ್ತಿಗಳ ಟ್ವಿಟರ್‌ ಖಾತೆ ಹ್ಯಾಕ್‌ ಆಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಮೋದಿ ಅವರ ವೆಬ್‌ಸೈಟ್‌ ಖಾತೆಯ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು

ತೆಗೆದುಕೊಳ್ಳಲಾಗಿದೆ ಎಂದು ಟ್ವಿಟರ್ ಹೇಳಿದೆ. 'ಸಕ್ರಿಯವಾಗಿ ಪರಿಸ್ಥಿತಿಯ ತನಿಖೆ ನಡೆಸುತ್ತಿದ್ದೇವೆ. ಇತರೆ ಅಕೌಂಟ್‌ಗಳು ಇದರ ಪರಿಣಾಮಕ್ಕೆ ಒಳಗಾಗಿರುವ ಬಗ್ಗೆ ಪ್ರಸ್ತುತ ನಮ್ಮ ಗಮನಕ್ಕೆ ಬಂದಿಲ್ಲ' ಎಂದು ಟ್ವಿಟರ್‌ ವಕ್ತಾರರು ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ಜಾನ್‌ ವಿಕ್‌ ಎಂಬ ಹೆಸರಿನ ಹ್ಯಾಕರ್‌ಗಳು ಪ್ರಕಟಿಸಿದ್ದ ಟ್ವೀಟ್‌ಗಳನ್ನು ಸಂಸ್ಥೆ ಡಿಲಿಟ್‌ ಮಾಡಿದೆಯಾದರೂ, ಅದರ ಸ್ಕ್ರೀನ್‌ ಶಾಟ್‌ಗಳು ವೈರಲ್‌ ಆಗಿವೆ.

ಅದರೆ, ಯಾರಿದು ಜಾನ್‌ ವಿಕ್‌?

ಜಾನ್ ವಿಕ್ 2014 ರ ಅಮೆರಿಕದ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು, ಅದನ್ನು ಚಾಡ್‌ ಸ್ಟಾಹೆಲ್‌ಸ್ಕಿ ನಿರ್ದೇಶಿಸಿದ್ದಾರೆ. ಕೀನು ರೀವ್ಸ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಕೀನು ರೀವ್ಸ್ ಪಾತ್ರದಿಂದ ಹ್ಯಾಕರ್ ಗುಂಪು ಸ್ಫೂರ್ತಿ ಪಡೆದಿದೆಯೇ? ಹ್ಯಾಕರ್ ಗುಂಪೇನಾದರೂ ಸ್ವತಃ ಕೀನು ರೀವ್ಸ್‌ ಅವರಿಗೆ ಸಂಬಂಧ ಹೊಂದಿದೆಯೇ? ಹೀಗೆ ಸಾಮಾಜಿಕ ತಾಣಗಳಲ್ಲಿ ಟ್ವಿಟರಿಗರು ಊಹಾಪೋಹಗಳ ಆಧಾರದ ಮೇಲೆ ಚರ್ಚೆ ನಡೆಸುತ್ತಿದ್ದಾರೆ.

ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಾದ ಬಿಲ್ ಗೇಟ್ಸ್, ಬರಾಕ್ ಒಬಾಮರಂಥವರ ಟ್ವಿಟರ್ ಖಾತೆಗಳನ್ನು ಈ ಹಿಂದೆ ಹ್ಯಾಕ್‌ ಮಾಡಿದ ಗುಂಪಿನಲ್ಲಿ ಯಾರೆಲ್ಲರೂ ಭಾಗಿಯಾಗಿದ್ದರು ಎಂಬುದು ಈ ವರೆಗೆ ಗೊತ್ತಾಗಿಲ್ಲ. ಆದರೆ, 'ಜಾನ್ ವಿಕ್' ಎಂಬ ಕಾಲ್ಪನಿಕ ಪಾತ್ರ ನಿಜವಾಗಿ ಯಾರು?

ಜಾನ್ ವಿಕ್ ಸಿನಿಮಾದ ಒಂದು ಪಾತ್ರ. ಜಾನ್ ವಿಕ್–2004, ಜಾನ್ ವಿಕ್–ಚಾಪ್ಟರ್‌–2 (2017), ಜಾನ್ ವಿಕ್: ಚಾಪ್ಟರ್‌–3 ಪ್ಯಾರಾಬೆಲ್ಲಮ್ (2019) ಸರಣಿಗಳಲ್ಲಿ ಈ ಪಾತ್ರವಿದೆ.

ಈ ಸರಣಿಗಳಲ್ಲಿ ಜಾನ್ ವಿಕ್ ಪಾತ್ರವು ಹಂತಕನದ್ದಾಗಿದ್ದು, ರಷ್ಯಾದ ತಾರಾಸೊವ್ ಎಂಬ ಮಾಫಿಯಾ ತಂಡ ಅವನನ್ನು ಚಿಕ್ಕಂದಿನಲ್ಲಿ ಕರೆದೊಯ್ದಿರುತ್ತದೆ. ಅವನ ನಿರ್ದಯತೆಯ ಕಾರಣದಿಂದಾಗಿ ವಿಕ್ ಅನ್ನು ‘ಬಾಬಾ ಯಾಗ’ ಅಥವಾ ‘ಬೂಗಿಮನ್’ ಎಂದು ಕರೆಯಲಾಗುತ್ತದೆ.

ರಷ್ಯಾದ ತಾರಾಸೊವ್ ಮಾಫಿಯಾದಿಂದ ಹೊರಬರುವ ಜಾನ್ ವಿಕ್ ಐದು ವರ್ಷಗಳ ಕಾಲ ನಿಷ್ಕ್ರಿಯವಾಗಿರುತ್ತಾನೆ. ಒಂದು ದಿನ ಜಾನ್‌ ವಿಕ್‌ ಮನೆಗೆ ನುಗ್ಗುವ ಕೆಲವು ದರೋಡೆಕೋರರು, ವಿಕ್‌ಗೆ ಆತನ ಪತ್ನಿ ಸಾಯುವ ವೇಳೆ ನೀಡಿದ್ದ ಪ್ರೀತಿಯ ನಾಯಿಯನ್ನು ಕೊಲ್ಲುತ್ತಾರೆ. ಅದರೊಂದಿಗೆ ಆತನೊಳಗಿನ ಹಂತಕ ಮತ್ತೆ ಮೇಲೇಳುತ್ತಾನೆ.

ಹ್ಯಾಕರ್‌ಗಳು ಕಾಲ್ಪನಿಕ ಪಾತ್ರಗಳ ಹಿಂದೆ ಅಡಗಿ ಕುಳಿತು ಇಂಥ ಕೃತ್ಯಗಳನ್ನು ಮಾಡುವುದು ಇದೇ ಮೊದಲೇನಲ್ಲ. ಫ್ರೆಂಚ್‌ನ ಹ್ಯಾಕರ್‌ವೊಬ್ಬ ತನ್ನನ್ನು 'ಎಲಿಯಟ್ ಆಲ್ಡರ್ಸನ್' ಎಂದು ಹಿಂದೆ ಕರೆದುಕೊಂಡಿದ್ದ. ‘ಮಿ.ರೋಬೋಟ್‌’ ಸಿನಿಮಾದದಲ್ಲಿ ರಾಮಿ ಮಾಲೆಕ್ ಆಲ್ಡರ್ಸನ್ ಪಾತ್ರ ನಿಭಾಯಿಸಿದ್ದರು. ಆದರೆ, ಆ ಪಾತ್ರಕ್ಕೂ, ಹ್ಯಾಕರ್‌ಗೂ ಏನು ಸಂಬಂಧವಿದೆಯೋ ತಿಳಿದಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು