ಬುಧವಾರ, ಆಗಸ್ಟ್ 10, 2022
23 °C
‘ಬೆಳಗಾವಿ ಜಿಲ್ಲಾ ಸಾಮಾಜಿಕ ಜಾಲತಾಣಗಳ ಒಕ್ಕೂಟ’ ಅಸ್ತಿತ್ವಕ್ಕೆ

PV Web Exclusive: ಒಳಿತು, ಹಕ್ಕೊತ್ತಾಯ ‘ವೈರಲ್‌’ಗಾಗಿ ಯುವ ಪಡೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಂವಹನ ಸಾಮರ್ಥ್ಯ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿರುವ ಸಾಮಾಜಿಕ ಜಾಲತಾಣಗಳನ್ನು ಜಿಲ್ಲೆಯ ಒಳಿತಿಗೆ ಬಳಸಿಕೊಳ್ಳಲು ಇಲ್ಲಿನ ಯುವಕರು ಒಗ್ಗೂಡಿದ್ದಾರೆ.

ತಮ್ಮ ಗೀಳನ್ನು, ತಂತ್ರಜ್ಞಾನ ಬಳಕೆ ಜ್ಞಾವನ್ನು ಹಾಗೂ ಶ್ರಮವನ್ನು ತಮ್ಮೂರು ಹಾಗೂ ಇಡೀ ಜಿಲ್ಲೆಯ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಅವರೆಲ್ಲರೂ ಕೈಜೋಡಿಸಿದ್ದರ ಫಲವಾಗಿ ‘ಬೆಳಗಾವಿ ಜಿಲ್ಲಾ ಸಾಮಾಜಿಕ ಜಾಲತಾಣಗಳ ಒಕ್ಕೂಟ’ ಕೆಲವು ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿದೆ.

‘ಪೇಜ್‌’ಗಳ ಮೂಲಕ ಗಡಿ ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿಗೆ ಹಾಗೂ ಕನ್ನಡದ ಅಸ್ಮಿತೆಯ ವಿಚಾರವಾಗಿ ದನಿ ಎತ್ತಲು ನಿರ್ಧರಿಸಿದ್ದಾರೆ. ಜನರಿಗೆ ಅನುಕೂಲ ಆಗುವಂತಹ ಹಕ್ಕೊತ್ತಾಯಗಳನ್ನು ‘ವೈರಲ್‌’ ಮಾಡಲು ಮತ್ತು ಸಂಬಂಧಿಸಿದವರನ್ನು ‘ಟ್ಯಾಗ್‌’ ಮಾಡಿ ಎಚ್ಚರಿಸಲು ಮತ್ತು ಗಮನಸೆಳೆಯಲು ಶಪಥ ಮಾಡಿದ್ದಾರೆ.

‘ಪೋಸ್ಟ್‌’ ಮೂಲಕ ದನಿ

ಬೆಳಗಾವಿ ಜಿಲ್ಲೆಯಲ್ಲಿ ಇರುವಂತಹ ಬಹುತೇಕ Facebook ಪುಟಗಳು, Instagram ಪುಟಗಳು ಈ ಒಕ್ಕೂಟದಲ್ಲಿ ಸೇರಿವೆ. ಜಿಲ್ಲೆಗೆ ಅನ್ಯಾಯವಾದರೆ ತಕ್ಷಣ ‘ಪೋಸ್ಟ್’ ಮೂಲಕ ದನಿ ಎತ್ತಲಿವೆ. ಬೇಕು–ಬೇಡಗಳಿಗೆ ಆಗ್ರಹಗಳನ್ನು ಮಂಡಿಸುತ್ತಾ, ಅವುಗಳನ್ನು ಪಸರಿಸುತ್ತಾ ಹೋಗಲಿವೆ. ತಕ್ಷಣ ಪರ ಅಥವಾ ವಿರೋಧದ ನೆಲೆಯಲ್ಲಿ ಧ್ವನಿ ಎತ್ತುವ ಕೆಲಸ ಮಾಡಲಿವೆ. ತಮ್ಮ ಕೈಯಲ್ಲೇ ಇರುವ ಸುಲಭವಾದ ಅಸ್ತ್ರವನ್ನು ಜನಪರವಾಗಿ ಬಳಸಿಕೊಳ್ಳುವುದಕ್ಕೆ ಯೋಜಿಸಿವೆ.

ಯಾವ್ಯಾವ ಪುಟಗಳು ಸೇರಿವೆ?

Belagavi - ಬೆಳಗಾವಿ, Explore Belagavi, ನಮ್ಮ ರಾಮದುರ್ಗ, Sankeshwara Kannadigaru, ಬೆಳಗಾವಿ ರಾಯಣ್ಣ, Chikkodi Memes,ka23, Beautiful Khanapur, Kulgod Memes, Mudalagi Mandi, Namma Belagavi, Namma Chikkodi, Bailahongal Memes, Gokak Trolls, Hukkeri pa, Nipani memes, Travel Chikkodi, hello raibag, Belagavi Infrastructure, Belagavi airport, Chikkodi chitte, Gandigwad pa , Hello Yarazaravi ಹಾಗೂ CHIKODI suddi ಈ ಸಾಮಾಜಿಕ ಜಾಲತಾಣಗಳ ಪುಟಗಳು ಸೇರಿ ಒಕ್ಕೂಟ ರಚನೆಯಾಗಿದೆ.

ಈ ಪೇಜ್‌ಗಳನ್ನು ನಿರ್ವಹಿಸುತ್ತಿರುವವರಲ್ಲಿ ಬಹುತೇಕರು ಯುವಕರು. ಅವರಲ್ಲಿ ವಿದ್ಯಾರ್ಥಿಗಳು ಹಾಗೂ ಏನಾದರೊಂದು ಕೆಲಸ ಮಾಡುತ್ತಿರುವವರು. ತಮ್ಮ  ಹವ್ಯಾಸಕ್ಕಾಗಿ ಹಾಗೂ ಸ್ಥಳೀಯ (ಅವರೂರಿನ) ಅಸ್ಮಿತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುವುದಕ್ಕಾಗಿ ಪುಟಗಳನ್ನು ಮಾಡಿಕೊಂಡಿದ್ದಾರೆ. ಸಾವಿರಾರು ಫಾಲೋವರ್‌ಗಳನ್ನು ಈ ಪುಟಗಳು ಹೊಂದಿವೆ.

ನಾಡು, ನುಡಿ ವಿಷಯದಲ್ಲಿ ದನಿ

ಬೆಳಗಾವಿ ಫೇಸ್‌ಬುಕ್‌ ಪುಟವೊಂದೇ 3 ಲಕ್ಷಕ್ಕೂ ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿದೆ. ಈಗ, ಒಕ್ಕೂಟ ಮಾಡಿಕೊಂಡಿರುವುದರಿಂದ ಸಕಾರಾತ್ಮಕವಾದ ಎಲ್ಲ ವಿದ್ಯಮಾನಗಳನ್ನು ಮತ್ತು ಹಕ್ಕೊತ್ತಾಯಗಳನ್ನು ಈ ಎಲ್ಲ ಪುಟಗಳೂ ಶೇರ್ ಮಾಡುವ ಮೂಲಕ ತಮ್ಮ Followersಗಳಿಗೆ ತಿಳಿಸಲಿವೆ. ನಿರ್ದಿಷ್ಟ ವಿಷಯಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸುವ ಕಾರ್ಯ ಮಾಡಲಿವೆ. ಕನ್ನಡ ನಾಡು, ನುಡಿ, ಗಡಿಗೆ ಧಕ್ಕೆಯಾದಾಗ ಸಿಡಿದೇಳುವ ಸಂಕಲ್ಪದೊಂದಿಗೆ ಮುಂದಡಿ ಇಟ್ಟಿವೆ.

ಗಟ್ಟಿ ದನಿಯಲ್ಲಿ...

‘ಗಡಿ ನಾಡು ಬೆಳಗಾವಿಯಲ್ಲಿ ಕನ್ನಡ ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಹೋರಾಟಗಳು ನಡೆಯುತ್ತಿವೆ. ಅವುಗಳಿಗೆ ಬೆಂಬಲ ನೀಡುವ ಮೂಲಕ ಕನ್ನಡದ ಬೆಳವಣಿಗೆಗೆ ಶ್ರಮಿಸುವುದಕ್ಕೆ ಸಾಮಾಜಿಕ ಜಾಲತಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜಿಸಿದ್ದೇವೆ. ಅಲ್ಲದೇ, ಅಭಿವೃದ್ಧಿ ವಿಷಯ ಬಂದಾಗ ಒಟ್ಟಾಗಿ ಮತ್ತು ಗಟ್ಟಿಯಾಗಿ ವಾಯ್ಸ್‌ ರೈಸ್ ಮಾಡುತ್ತೇವೆ. ಇದು ಒಕ್ಕೂಟದ ಉದ್ದೇಶವಾಗಿದೆ’ ಎನ್ನುತ್ತಾರೆ ಬೆಳಗಾವಿ ಫೇಸ್‌ಬುಕ್‌ ಪುಟದ ಅಡ್ಮಿನ್ ಕಿರಣ್ ಮಾಳನ್ನವರ.

ಒಕ್ಕೂಟ ರಚನೆಯ ಆಶಯದ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಜಿಲ್ಲೆಯು ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ. ವಿವಿಧ ಯೋಜನೆಗಳು, ಕಚೇರಿಗಳು ಇಲ್ಲಿಂದ ಕೈತಪ್ಪಿ ಹೋಗಿವೆ. ಈ ಬಗ್ಗೆ ಗಟ್ಟಿಯಾಗಿ ಧನಿ ಎತ್ತಬೇಕಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ಸ್ಥಳೀಯ ಪುಟಗಳನ್ನು ಬಳಸಿಕೊಂಡರೆ ಹೆಚ್ಚಿನ ಜನರಿಗೆ ರೀಚ್ ಆಗಬಹುದು’ ಎನ್ನುತ್ತಾರೆ.

ಎಲ್ಲರೂ ಸೇರಿ: ಸ್ಥಳೀಯ ವಿಸ್ಮಯ, ವಿಶೇಷ ಹಾಗೂ ಮಹತ್ವವನ್ನು ಎಲ್ಲರಿಗೂ ತಿಳಿಸಬಹುದಾಗಿದೆ. ಈವರೆಗೆ ಆ ಪುಟಗಳು ಸೀಮಿತ ರೀಚ್ ಹೊಂದಿದ್ದವು. ಈಗ, ಒಕ್ಕೂಟವಾಗಿರುವುದರಿಂದ ಎಲ್ಲರೂ ಶೇರ್ ಮಾಡಿದರೆ ಲಕ್ಷಾಂತರ ಮಂದಿಗೆ ರೀಚ್ ಆಗುತ್ತದೆ. ಇದರೊಂದಿಗೆ ಆಶಯ ಈಡೇರಲು ಸಹಕಾರಿಯಾಗುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಎಲ್ಲ ಪೇಜ್‌ನವರೂ ಕೈಗೂಡಿಸುತ್ತಾರೆ.

‘ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಹಾಗೂ ಅಭಿವೃದ್ಧಿ ವಿಷಯಕ್ಕೆ ಬಳಸಿಕೊಳ್ಳಬೇಕು ಎನ್ನುವುದಷ್ಟೇ ನಮ್ಮ ಉದ್ದೇಶವಾಗಿದೆ. ಹೀಗಾಗಿ, ಒಕ್ಕೂಟದಲ್ಲಿ ಲೀಡರ್‌ ಎಂದು ಯಾರೂ ಇಲ್ಲ. ಎಲ್ಲರೂ ಲೀಡರ್‌ಗಳೆ; ಅಡ್ಮಿನ್‌ಗಳೆ. ಎಲ್ಲರೂ ಸೇರಿ ಕಾರ್ಯಚಟುವಟಿಕೆ ನಡೆಸುತ್ತೇವೆ. ಟ್ವಟರ್‌ ಖಾತೆಗಳಲ್ಲೂ ಸಕ್ರಿಯವಾಗಿ ಇಶ್ಯೂ ರೈಸ್ ಮಾಡುತ್ತೇವೆ’ ಎಂದು ಹಂಚಿಕೊಂಡರು.

‘ಬೆಳಗಾವಿ ವಿಮಾನ ನಿಲ್ದಾಣ, ರೈಲ್ವೆ ಯೋಜನೆಗಳು, ಸ್ಮಾರ್ಟ್‌ ಸಿಟಿ ಸೇರಿದಂತೆ ಆಯಾ ಭಾಗದ ಪ್ರಮುಖ ಯೋಜನೆಗಳ ಸ್ಥಿತಿಗತಿ, ಬೇಡಿಕೆಗಳು ಹಾಗೂ ಪ್ರಗತಿಗಳ ಬಗ್ಗೆ ಪುಟಗಳಲ್ಲಿ ಹಂಚಿಕೊಳ್ಳುತ್ತೇವೆ. ಜನಪ್ರತಿನಿಧಿಗಳಿಗೆ ಹಾಗೂ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯವೂ ಜಾಲತಾಣಗಳಲ್ಲಿ ನಡೆಯಲಿದೆ. ಜನಾಭಿಪ್ರಾಯಗಳಿಗೆ ಮನ್ನಣೆ ಕೊಡುತ್ತೇವೆ; ಹಂಚಿಕೊಳ್ಳುತ್ತೇವೆ. ನಮ್ಮ ಪ್ರದೇಶ, ತಾಲ್ಲೂಕು ಹಾಗೂ ಜಿಲ್ಲೆ ಅಭಿವೃದ್ಧಿ ಆಗಬೇಕು ಎನ್ನುವುದಕ್ಕೆ  ಆದ್ಯತೆ ಇರುತ್ತದೆಯೇ ಹೊರತು ಅನ್ಯ ಉದ್ದೇಶಗಳಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ಅವರು.

ಸಮಸ್ಯೆಗಳತ್ತಲೂ...

ಗಡಿ ಬೆಳಗಾವಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣದ ‘ಪೇಜ್’ ಗಳು ಕನ್ನಡದ ಪರ ಸಾಕಷ್ಟು ವಕಾಲತ್ತು ವಹಿಸಿವೆ. ಅಲ್ಲದೇ ಅನೇಕ ಸಾಮಾಜಿಕ ಸಮಸ್ಯೆಗಳತ್ತ ಲಕ್ಷಾಂತರ ಜನರ ಗಮನ ಸೆಳೆಯುತ್ತಿವೆ. ಸಾಮಾಜಿಕ ಬದ್ಧತೆಯುಳ್ಳ ಅನೇಕ ಯುವಕರು ಈ ಪುಟಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಈ ಪೈಕಿ ಯುವ ಎಂಜಿನಿಯರ್‌ ಕಿರಣ ಮಾಳನ್ನವರ ಮುಂಚೂಣಿಯಲ್ಲಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಬೇರೆ ಪುಟದವರು ಒಕ್ಕೂಟ ಸೇರಲು WhatsApp: 8296426170 ಮಾಡಬಹುದು ಎಂದೂ ಒಕ್ಕೂಟದವರು ತಿಳಿಸಿದ್ದಾರೆ.

ಒಕ್ಕೂಟದ ಘೋಷವಾಕ್ಯ ಇಂತಿದೆ...

ನಾವು ಒಟ್ಟಾಗಿದ್ದೇವೆ
ನಾವು ಕಂಕಣಬದ್ಧವಾಗಿದ್ದೇವೆ
ನಾವು ಶಪಥಗೈದಿದ್ದೇವೆ
ನಾವು ಹೋರಾಡುತ್ತೇವೆ...!
ನಾಡು–ನುಡಿ–ನೆಲ–ಜಲಕ್ಕಾಗಿ
ಸದಾ ಸಮರ್ಪಣೆಗೆ ನಾವು ಸಿದ್ಧರಿದ್ದೇವೆ!
ಚನ್ನವ್ವ ತಾಯಿ, ರಾಯಣ್ಣನಾದಿಯಾಗಿ
ಎದೆಯಲ್ಲಿ ಕ್ರಾಂತಿಯ ಕಿಚ್ಚಿದೆ
ಹಿರಿಯರ ಆಶೀರ್ವಾದಗಳಿವೆ
ಕನ್ನಡಿಗರ ತೋಳ್ಬಲವಿದೆ
ಮತ್ತೇನ್ ಬೇಕ್???
#ಖಬರ್ದಾರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು