ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ | ಚಾರಣದ ಹಾದಿ ಸಲೀಸಾಗಬೇಕೆ?

ಚಾರಣಕ್ಕೆ ಗೂಗಲ್‌ ಮ್ಯಾಪ್‌ ಬಳಸುವುದು ಸೂಕ್ತವೇ...
Published 2 ಜನವರಿ 2024, 20:30 IST
Last Updated 2 ಜನವರಿ 2024, 20:30 IST
ಅಕ್ಷರ ಗಾತ್ರ

ಚಾರಣ ಸುರಕ್ಷಿತವಾಗಿರಬೇಕು ಎಂದರೆ ಯಾವ ತಾಂತ್ರಿಕ ಸವಲತ್ತುಗಳನ್ನು ಬಳಸಬಾರದು ಮತ್ತು ಯಾವುದನ್ನು ಬಳಸಬೇಕು ಎಂಬುದೂ ಈಗ ಮುಖ್ಯವಾಗುತ್ತಿದೆ. ಅಂತಹ ತಾಂತ್ರಿಕ ಸವಲತ್ತುಗಳಲ್ಲಿ ಗೂಗಲ್‌ ಮ್ಯಾಪ್‌ ಮತ್ತು ಲೊಕೇಷನ್‌ ಸರ್ವಿಸ್‌ ಪ್ರಮುಖವಾದವು.

ಇದು ಚಾರಣದ ಋತು. ಜನಪ್ರಿಯ ಚಾರಣತಾಣಗಳಿಗೆ ಹೋಗುವುದು ಒಂದೆಡೆ ಮತ್ತು ಜನಪ್ರಿಯವಲ್ಲದ, ಆದರೆ ರೋಚಕವಾದ ತಾಣಗಳಿಗೆ ಹೋಗುವುದು ಇನ್ನೊಂದೆಡೆ. ಮೊಬೈಲ್‌ ಫೋಟೊಗ್ರಫಿ, ರೀಲ್ಸ್‌, ಸ್ನ್ಯಾಪ್ಸ್‌ ಮತ್ತು ವ್ಲಾಗ್ಗಿಂಗ್‌ನ ಈಗಿನ ಯುಗದಲ್ಲಿ ಚಾರಣದ ಜನಪ್ರಿಯತೆಯೂ ಹೆಚ್ಚುತ್ತಿದೆ.

ಚಾರಣಕ್ಕೆ ಹೋಗುವುದೆಂದು ಬೆಳಿಗ್ಗೆ ನಿರ್ಧಾರ ಮಾಡುವುದು, ತಕ್ಷಣವೇ ಹೊರಟುಬಿಡುವುದು; ಸಂಜೆ ವೇಳೆಗೆ ವಾಪಸ್‌ ಬರುವುದು... ಹೀಗೆ ನಗರದ ಸುತ್ತಮುತ್ತ ಇರುವ ಬೆಟ್ಟಗುಡ್ಡಗಳಿಗೆ ಒಂದೇ ದಿನದಲ್ಲಿ ಚಾರಣಕ್ಕೆ ಹೋಗಿಬರುವುದು ಈಗಿನ ಟ್ರೆಂಡ್‌. ಹೊಸ ತಂತ್ರಜ್ಞಾನ ಚಾರಣದ ಹಾದಿಯನ್ನು ಸುಗಮಗೊಳಿಸಿದೆ. ಆದರೆ ಅದರ ಅರಿವಿರಬೇಕಷ್ಟೆ. 

ಕಳೆದ ವಾರವಷ್ಟೇ ಬೆಂಗಳೂರಿನ ಯುವಕನೊಬ್ಬ ಸಾವನದುರ್ಗ ಬೆಟ್ಟದ ಚಾರಣದ ವೇಳೆ ಕಾಣೆಯಾಗಿದ್ದ. ಆತನ ಹುಡುಕಾಟಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮತ್ತು ಸ್ಥಳೀಯರು ಹಗಲೂ ರಾತ್ರಿ ಶ್ರಮಪಟ್ಟಿದ್ದರು. ಆದರೆ ಆತ ಪತ್ತೆಯಾಗಿದ್ದು ಮಾತ್ರ ಶವವಾಗಿ. ಅದೂ ಐದು ದಿನಗಳ ನಂತರ. ಡ್ರೋನ್‌, ಥರ್ಮಲ್‌ ಡ್ರೋನ್‌ ಮೂಲಕ ಹುಡುಕಾಟ ನಡೆಸಿದರೂ ಆತನ ಸುಳಿವು ದೊರಕಿರಲಿಲ್ಲ. ಆತನ ಐಫೋನ್‌ ಮತ್ತು ವಾಚ್‌ನ ಕಡೆಯ ಲೊಕೇಷನ್‌ ವಿವರ ಬಳಸಿಕೊಂಡು ಹುಡುಕಾಟ ನಡೆಸುವ ಯತ್ನವೂ ಫಲ ನೀಡಲಿಲ್ಲ. ಆತನ ಫೋನ್‌ನ ಕಡೆಯ ಲೊಕೇಷನ್‌ ವಿವರ ದೊರಕಿದ್ದಿದ್ದರೆ, ಆತನನ್ನು ಇನ್ನಷ್ಟು ಬೇಗ ಪತ್ತೆ ಮಾಡಬಹುದಿತ್ತು. ಆತ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಿದ್ದರೆ ಜೀವಉಳಿಸುವ ಯತ್ನವನ್ನೂ ನಡೆಸಬಹುದಿತ್ತು. ಚಾರಣಕ್ಕೂ ತಂತ್ರಜ್ಞಾನಕ್ಕೂ ಸಂಬಂಧ ಇರುವುದು ಇಲ್ಲಿಯೇ.

ಚಾರಣವು ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದಕ್ಕೆ ಸಿದ್ಧತೆ ಬೇಕೇಬೇಕಾಗುತ್ತದೆ. ಆದರೆ ದಿಢೀರ್ ಚಾರಣದ ವೇಳೆ ಅಂತಹ ಯಾವುದೇ ಸಿದ್ಧತೆಗಳು ಇರುವುದಿಲ್ಲ. ಹೀಗೆ ದಿಢೀರ್ ಎಂದು ಚಾರಣಕ್ಕೆ ಹೊರಡುವವರಲ್ಲಿ ಬಹುತೇಕ ಮಂದಿ ತಮ್ಮ ಮಾರ್ಗದರ್ಶಕನಾಗಿ ಬಳಸಿಕೊಳ್ಳುವುದು ಗೂಗಲ್‌ ಮ್ಯಾಪ್‌ ಅನ್ನು. ಇದೇ ದೊಡ್ಡ ಹಿನ್ನಡೆ. ಯಾವ ಅನುಭವಿ ಚಾರಣಿಗನೂ ಗೂಗಲ್‌ ಮ್ಯಾಪ್‌ ಅನ್ನು ಚಾರಣಕ್ಕೆ ಬಳಸಿಕೊಳ್ಳುವುದಿಲ್ಲ. ಏಕೆಂದರೆ ಗೂಗಲ್ ಮ್ಯಾಪ್‌ ರಸ್ತೆ ಸಂಚಾರಕ್ಕೆ ಹೇಳಿ ಮಾಡಿಸಿದಂಥ ತಂತ್ರಜ್ಞಾನ. ಅದು ಚಾರಣಕ್ಕೆ ಸೂಕ್ತವಲ್ಲ.

ದಾರಿತಪ್ಪಿಸುವ ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌ನಲ್ಲಿ ಯಾವುದೇ ಬೆಟ್ಟ–ಗುಡ್ಡ, ಕಾಡು–ಮೇಡನ್ನು ಸಪಾಟು ನೆಲದಂತೆಯೇ ತೋರಿಸುತ್ತದೆ. ಗೂಗಲ್‌ ಮ್ಯಾಪ್‌ನಲ್ಲಿ ಟೋಪೊಗ್ರಫಿ ಸವಲತ್ತು ಇದೆಯಾದರೂ, ಅದರ ನಿಖರತೆ ಕಡಿಮೆ. ಅಂದರೆ ಯಾವ ಪ್ರದೇಶ ಎಷ್ಟು ಎತ್ತರವಿದೆ, ಎಷ್ಟು ಕಡಿದಾಗಿದೆ ಎಂಬುದನ್ನು ಅದು ತೋರಿಸುವುದಿಲ್ಲ. ಒಂದೆಡೆ ಕಡಿದಾದ ಏರು ಮತ್ತೊಂದೆಡೆ ಕಡಿದಾದ ಪ್ರಪಾತದ ಮಧ್ಯೆ ಇರುವ ಎರಡು ಅಡಿಯ ಹಾದಿಯನ್ನೂ ಗೂಗಲ್‌ ಮ್ಯಾಪ್‌ ರಸ್ತೆಯಂತೆಯೇ ತೋರಿಸುತ್ತದೆ. ಈ ಕಾರಣದಿಂದಲೇ ಗೂಗಲ್‌ ಮ್ಯಾಪ್‌ ಬಳಸಿಕೊಂಡು ಚಾರಣದ ಹಾದಿಯನ್ನು ಸಿದ್ಧಪಡಿಸಿಕೊಳ್ಳುವುದು ಅಥವಾ ಹಾದಿಯನ್ನು ಅನುಸರಿಸುವುದು ಅಪಾಯಕಾರಿಯೇ ಹೌದು. ಗೂಗಲ್‌ ಮ್ಯಾಪ್‌ ಅನ್ನು ಹೀಗೆ ಬಳಸುವುದರಿಂದ, ಕಡಿದಾದ ಚಾರಣಕ್ಕೆ ನೀವು ಮಾಡಿಕೊಳ್ಳಬೇಕಿದ್ದ ಮಾನಸಿಕ ಮತ್ತು ದೈಹಿಕ ಸಿದ್ಧತೆಯನ್ನು ಅದು ತಪ್ಪಿಸುತ್ತದೆ.

ಲೋಕೇಷನ್‌ ಸರ್ವೀಸ್‌ ಉಪಯೋಗಿ

ನಿಜಕ್ಕೂ ಚಾರಣದ ವೇಳೆ ಅನುಕೂಲಕ್ಕೆ ಬರುವುದು ಗೂಗಲ್ ಲೊಕೇಷನ್‌ ಸರ್ವಿಸ್‌. ಬಹುತೇಕ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಲೊಕೇಷನ್‌ ವ್ಯವಸ್ಥೆ ಇರುತ್ತದೆ. ತುರ್ತು ಸಂದರ್ಭದಲ್ಲಿ ನಮ್ಮ ಲೊಕೇಷನ್‌ ಅನ್ನು ರಕ್ಷಣಾ ಸಿಬ್ಬಂದಿಗೆ ಕಳುಹಿಸುವ ಸವಲತ್ತೂ ಆ ವ್ಯವಸ್ಥೆಯಲ್ಲಿ ಇರುತ್ತದೆ. ಅದನ್ನು ಬಳಸಿಕೊಳ್ಳಬೇಕಷ್ಟೆ. ಚಾರಣದ ಹಾದಿಯಲ್ಲಿ ನೀವು ಕಳೆದುಹೋದಿರಿ ಎಂದಿಟ್ಟುಕೊಳ್ಳಿ. ನೀವು ಎಲ್ಲಿದ್ದೀರಿ?, ಎಲ್ಲಿಗೆ ಹೋಗಬೇಕು? ಎಂಬುದು ನಿಮಗೆ ತಿಳಿಯದ ಸ್ಥಿತಿಯಲ್ಲಿದ್ದೀರಿ. ಆದರೆ, ನೀವು ಇರುವ ಜಾಗದ ನಿಖರ ವಿವರ ರಕ್ಷಣಾ ಸಿಬ್ಬಂದಿಗೆ ದೊರೆತರೆ, ಅವರು ನಿಮ್ಮನ್ನು ಹುಡುಕುವುದು ಸುಲಭವಾಗುತ್ತದೆ. ಇದಕ್ಕಾಗಿ ನೀವು ಹೊಸ ಸಾಧನಗಳನ್ನು ಖರೀದಿಸುವ, ಹೊಸ ಆ್ಯಪ್‌ಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಏನೂ ಇಲ್ಲ. ಬದಲಿಗೆ ನಿಮ್ಮ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಇರುವ ಸೆಟ್ಟಿಂಗ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿದರಾಯಿತು.

ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಸೆಟ್ಟಿಂಗ್‌ಗೆ ಹೋಗಬೇಕು. ಅದರಲ್ಲಿ ‘ಲೊಕೇಷನ್‌’ ಎಂಬ ಉಪವಿಭಾಗ ಇದೆ. ಅದನ್ನು ಒತ್ತಿದರೆ ಲೊಕೇಷನ್‌ ಸೆಟ್ಟಿಂಗ್‌ಗಳಿಗೆ ಕರೆದೊಯ್ಯುತ್ತದೆ. ಅದರಲ್ಲಿ ‘Emergency Location Service–ELS’ ಎಂಬ ಇನ್ನೊಂದು ಸೆಟ್ಟಿಂಗ್‌ ಸಿಗುತ್ತದೆ. ಅದನ್ನು ಚಾಲ್ತಿ ಮಾಡಬೇಕು. ಈ ವ್ಯವಸ್ಥೆ ಚಾಲ್ತಿಯಲ್ಲಿದ್ದರೆ, ನೀವು ತುರ್ತು ರಕ್ಷಣಾ ಸೇವೆಗೆ (ಸಂಪರ್ಕ ಸಂಖ್ಯೆ: 112) ಕರೆ ಮಾಡಿದರೆ ಅಥವಾ ಸಂದೇಶ ಕಳುಹಿಸಿದರೆ ಅದು ನಿಮ್ಮ ಲೊಕೇಷನ್‌ನ ಅತ್ಯಂತ ನಿಖರವಾದ ವಿವರವನ್ನೂ ರಕ್ಷಣಾ ಸಿಬ್ಬಂದಿಗೆ ಕಳುಹಿಸುತ್ತದೆ.

ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ (ಜಿಪಿಎಸ್‌) ಲೊಕೇಷನ್‌ಗೂ, ಇಎಲ್‌ಎಸ್‌ಗೂ ಬಹಳ ವ್ಯತ್ಯಾಸವಿದೆ. ಜಿಪಿಎಸ್‌ ಲೋಕೇಷನ್‌ನ ನಿಖರತೆ ಕಡಿಮೆ. ಆದರೆ ಇಎಲ್‌ಎಸ್‌ ವ್ಯವಸ್ಥೆಯು ಜಿಪಿಎಸ್‌ ಲೊಕೇಷನ್‌, ಫೋನ್ ಇರುವ ಪ್ರದೇಶದ ಎತ್ತರ, ಪೋನ್‌ ನೆಟ್‌ವರ್ಕ್‌ ಗೋಪುರದಿಂದ ಎಷ್ಟು ದೂರವಿದೆ, ಕಡೆಯ ಕರೆ, ಕಡೆಯ ಸಂದೇಶ ಮತ್ತು ಕಡೆಯ ಬಾರಿ ಇಂಟರ್ನೆಟ್‌ ಸಂಪರ್ಕ ಪಡೆದುಕೊಂಡಿದ್ದು ಎಲ್ಲಿ ಎಂಬ ವಿವರಗಳನ್ನು ಪಡೆದುಕೊಳ್ಳುತ್ತದೆ. ಈ ಮೂಲಕ ಫೋನ್‌ ಮತ್ತು ಆ ವ್ಯಕ್ತಿ ಇರುವ ಜಾಗದ ಅತ್ಯಂತ ನಿಖರವಾದ ಲೊಕೇಷನ್‌ನ ವಿವರವನ್ನು ಸಿದ್ಧಪಡಿಸುತ್ತದೆ. ಇಷ್ಟೆಲ್ಲಾ ನಿಖರವಾದ ವಿವರ ದೊರೆಯುವಂತಾಗಬೇಕು ಅಂದರೆ ನಿಮ್ಮ ಫೋನ್‌ನಲ್ಲಿ ‘Google Location Accuracy’ ಆಯ್ಕೆಯನ್ನು ಚಾಲೂ ಸ್ಥಿತಿಯಲ್ಲಿ ಇಡಬೇಕು.

ಇವು ಚಾರಣವನ್ನು ಮತ್ತಷ್ಟು ಸುರಕ್ಷಿತವಾಗಿಸುವ ವ್ಯವಸ್ಥೆಗಳು. ಅವು ನಮ್ಮ ಕೈಗಳಲ್ಲೇ ಇವೆ. ಅವುಗಳನ್ನು ಬಳಸಿಕೊಳ್ಳಬೇಕು ಅಷ್ಟೆ.

ಐಫೋನ್‌ ಲೊಕೇಷನ್‌ ಶೇರಿಂಗ್‌

ಐಫೋನ್‌ಗಳಲ್ಲೂ ಅತ್ಯಂತ ನಿಖರವಾದ ಲೊಕೇಷನ್‌ ವಿವರ ದಾಖಲಾಗುತ್ತದೆ. ಅದನ್ನು ನಿಮ್ಮ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಹಂಚಿಕೊಳ್ಳಲು ‘ಲೊಕೇಷನ್‌ ಶೇರಿಂಗ್‌’ ವ್ಯವಸ್ಥೆ ಇದೆ. ಅದನ್ನು ಚಾಲೂ ಇಟ್ಟು, ಯಾರಿಗೆಲ್ಲಾ ನಿಮ್ಮ ಲೊಕೇಷನ್‌ ವಿವರ ಹಂಚಿಕೊಳ್ಳಬೇಕು ಎಂಬುದನ್ನು ನಮೂದಿಸಿದರೆ ಆಯಿತು. ನಿಮ್ಮ ಇರುವಿಕೆಯ ವಿವರ ಅವರಿಗೆ ರವಾನೆಯಾಗುತ್ತಿರುತ್ತದೆ. ಫೈಂಡ್‌ ಮೈ ಆ್ಯಪ್‌ನಲ್ಲಿ ಆ ವಿವರಗಳನ್ನು ಬಳಸಿಕೊಂಡು, ಚಾರಣದ ವೇಳೆ ಕಾಣೆಯಾಗಿರುವ ವ್ಯಕ್ತಿಯನ್ನು ಹುಡುಕಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT