ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಒನ್: ಗ್ರಾಮೀಣ ಮಟ್ಟಕ್ಕೂ ವಿಸ್ತರಿಸುತ್ತಿದೆ ತಂತ್ರಜ್ಞಾನ

ಸರಕಾರಿ ಸವಲತ್ತು ಪಡೆಯುವ ಏಕ ಗವಾಕ್ಷಿ
Last Updated 25 ಜನವರಿ 2022, 13:41 IST
ಅಕ್ಷರ ಗಾತ್ರ

ಇದು ತಂತ್ರಜ್ಞಾನವು ಗ್ರಾಮೀಣ ಪ್ರದೇಶದ ನಾಗರಿಕರನ್ನೂ ತಲುಪುವ ಬಗೆ. ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸುಲಭವಾಗಿ ಪಡೆಯುವಲ್ಲಿ ಅನುಕೂಲ ಮಾಡಿಕೊಡುವ 'ಬೆಂಗಳೂರು ಒನ್', 'ಕರ್ನಾಟಕ ಒನ್' ಹೆಸರಿನ ಕೇಂದ್ರಗಳಂತೆಯೇ, ರಾಜ್ಯದಲ್ಲಿ 'ಗ್ರಾಮ ಒನ್' ಹೆಸರಿನ ಕೇಂದ್ರಗಳು ಕರ್ನಾಟಕದ 12 ಜಿಲ್ಲೆಗಳಿಗೆ ವಿಸ್ತರಣೆಯಾಗುತ್ತಿದೆ. ಇಂದಿನಿಂದ (ಜ.26) ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳ ವಿವಿಧೆಡೆಗಳಲ್ಲಿ ಈ ಕೇಂದ್ರಗಳು ಕಾರ್ಯಾಚರಿಸಲಿವೆ.

ಏನು ಪ್ರಯೋಜನ?
ಕಂದಾಯ ಇಲಾಖೆ, ಆಹಾರ, ಕಾರ್ಮಿಕ ಇಲಾಖೆ, ವೈದ್ಯಕೀಯ ಮುಂತಾದ ಸರಕಾರದ ಹಲವಾರು ಇಲಾಖೆಗಳ 100ಕ್ಕೂ ಅಧಿಕ ಸೇವೆಗಳನ್ನು ಪಡೆಯುವುದಕ್ಕಾಗಿ ಜನರು ತಾಲೂಕು ಕಚೇರಿ ಅಥವಾ ಜಿಲ್ಲಾ ಪಂಚಾಯತ್ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಮತ್ತು ಅಧಿಕಾರಿಗಳು ಸತಾಯಿಸುತ್ತಾರೆ, ಸರದಿ ಸಾಲಿನಲ್ಲಿ ನಿಲ್ಲಬೇಕು ಎಂಬೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಈ ಗ್ರಾಮ ಒನ್ ಕೇಂದ್ರಗಳು ಒದಗಿಸುತ್ತವೆ. ತಂತ್ರಜ್ಞಾನ ಆಧಾರಿತ ಈ ಸೌಕರ್ಯದಿಂದಾಗಿ ಹಣ ಮತ್ತು ಶ್ರಮದ ಉಳಿತಾಯ.

ಯಾವೆಲ್ಲ ಸೇವೆಗಳು?
ಇದು ಸರಕಾರದ ಇ-ಆಡಳಿತ ವಿಭಾಗದ ಕೊಡುಗೆ. ಅಂತರಜಾಲದ ಸಹಾಯದಿಂದ ಎಲೆಕ್ಟ್ರಾನಿಕ್ ರೂಪದಲ್ಲಿ ಪಡೆಯಬಹುದಾದ ಸೇವೆಗಳು ಈ 'ಏಕ ಗವಾಕ್ಷಿ' ಸೌಕರ್ಯದಿಂದ ದೊರೆಯುತ್ತದೆ. ನಿರಂತರ ಇಂಟರ್ನೆಟ್ ಹಾಗೂ ವಿದ್ಯುಕ್ ಸಂಪರ್ಕ ಲಭ್ಯವಿರುವ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಕನಿಷ್ಠ ಅರ್ಜಿ ಶುಲ್ಕ ಪಾವತಿಸಿ, ನಮಗೆ ಬೇಕಾದ ಗ್ರಾಮ ಮಟ್ಟದ ಸರಕಾರಿ ಸೇವೆಗಳನ್ನು ಪಡೆಯಬಹುದು.

ಉದಾಹರಣೆಗೆ, ನಮ್ಮದೇ ಜಮೀನಿನ ದಾಖಲೆ ಪಡೆಯಬೇಕಿದ್ದರೆ, ಕಂದಾಯ ಇಲಾಖೆಗೆ ತೀರುವೆ (ತೆರಿಗೆ) ಪಾವತಿಸಬೇಕಿದ್ದರೆ, ಪಿಂಚಣಿಗೆ, ಮಾಸಾಶನಕ್ಕೆ ಅರ್ಜಿ ಹಾಕಬೇಕಿದ್ದರೆ, ಸರಕಾರದಿಂದ ಸಹಾಯಧನ ಪಡೆಯಬೇಕಿದ್ದರೆ, ಶಿಕ್ಷಣ ಇಲಾಖೆಯಿಂದ ಮರು ಮೌಲ್ಯಮಾಪನ ಇತ್ಯಾದಿಗೆ, ಈ ಕೇಂದ್ರಗಳಲ್ಲೇ ಅರ್ಜಿ ತುಂಬಿದರಾಯಿತು. ಅದೇ ರೀತಿ, ಆರ್‌ಟಿಐಗೆ ಅರ್ಜಿ, ಆಧಾರ್ ಕಾರ್ಡ್‌ನಲ್ಲೇನಾದರೂ ಬದಲಾವಣೆಯಾಗಬೇಕಿದ್ದರೆ, 'ಸೇವಾ ಸಿಂಧು' ಮೂಲಕ ಲಭ್ಯವಾಗುವ 750ಕ್ಕೂ ಅಧಿಕ ಸೇವೆಗಳು, ಸಾರಿಗೆ ಇಲಾಖೆ, ಆಧಾರ್, ಮುದ್ರಾಂಕ, ಸಕಾಲ ಮುಂತಾದ ಸೇವೆಗಳು ಇಲ್ಲಿ ಲಭ್ಯ. ವಿದ್ಯುತ್, ನೀರಿನ ಬಿಲ್ ಪಾವತಿ, ಚಾಲನೆಯ ಕಲಿಕಾ ಪರವಾನಗಿ, ನಾಡಕಚೇರಿ ಸೇವೆಗಳು ಇಲ್ಲಿಯೇ ಲಭ್ಯ. ಅಂದರೆ, ಖುದ್ದಾಗಿ ಅಧಿಕಾರಿಗಳೇ ಬಂದು ಪರಿಶೀಲನೆ ನಡೆಸಬೇಕಾಗಿರುವ ಸೇವೆಗಳನ್ನು ಹೊರತುಪಡಿಸಿ, ಕಾಗದಪತ್ರದಲ್ಲಿ ನಡೆಯಬಹುದಾದ ಬಹುತೇಕ ಎಲ್ಲ ಅರ್ಜಿಗಳು ಗ್ರಾಮ ಒನ್ ಮೂಲಕವೇ ವಿಲೇವಾರಿಯಾಗುತ್ತವೆ.

ಹೇಗೆ?
ಈ ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ, ನಿರ್ದಿಷ್ಟ ಸೇವೆಗೆ ಅರ್ಜಿ ಸಲ್ಲಿಸಬಹುದು. ಅಲ್ಲಿರುವ ತರಬೇತಾದ ಸಿಬ್ಬಂದಿಗಳು ನೆರವಾಗುತ್ತಾರೆ. ಈ ಕೇಂದ್ರಗಳು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತವೆ. ಅಂತರಜಾಲದ ಮೂಲಕ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ, ಆಯಾ ಇಲಾಖೆಗಳ ಸೇವೆಗಳನ್ನು ಪಡೆಯಬಹುದು. ಅರ್ಜಿ ಸಲ್ಲಿಸಿದ ಬಳಿಕ ಅದರ ಸ್ಥಿತಿಗತಿ ಬಗ್ಗೆ ಮೊಬೈಲ್ ಸಂದೇಶದ ಮೂಲಕ ಮಾಹಿತಿ ದೊರೆಯುತ್ತದೆ. ಮತ್ತು ಸರಕಾರದಿಂದ ಲಭ್ಯವಾಗುವ ಪ್ರಮಾಣಪತ್ರ, ಆಸ್ತಿಯ ಹಕ್ಕುಪತ್ರದ ಪ್ರತಿಗಳು ಮುಂತಾದವನ್ನು ಇದೇ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT