ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಶ್‌ ಬುಟ್ಟಿಯಿಂದ ನೇರ ಇಂಟರ್‌ನೆಟ್‌: ಇನ್ನು ಹಾರಿ ಬರಲಿದೆ ಊಟ

Last Updated 1 ಜನವರಿ 2022, 19:31 IST
ಅಕ್ಷರ ಗಾತ್ರ

ಹೊಸವರ್ಷದ ಹೊಸ್ತಿಲು ದಾಟಿರುವ ನಮ್ಮೆದುರು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಏನೆಲ್ಲಾ ಚಮತ್ಕಾರ ಮಾಡಲಿದೆ ಗೊತ್ತೆ? ವಿಜ್ಞಾನದ ಕಥೆಗಳಲ್ಲಿ ಹಿಂದೆಂದೋ ಓದಿದ್ದ ಕಾಲ್ಪನಿಕ ವಿವರಗಳೆಲ್ಲ ಧುತ್ತೆಂದು ನೈಜರೂಪದಲ್ಲಿ ಅನಾವರಣಗೊಳ್ಳಲು ಸಜ್ಜಾಗಿವೆ. ಏನೀ ಹೊಸ ತಂತ್ರಜ್ಞಾನದ ಮಜಕೂರು ಎಂದು ಬೆನ್ನು ಹತ್ತಿದಾಗ ಸಿಕ್ಕ ರಸವತ್ತಾದ ವಿವರಗಳು ಇಲ್ಲಿವೆ...

**
2021 ಅನ್ನು ಹಿಂದೆ ಬಿಟ್ಟು 2022ಕ್ಕೆ ಕಾಲಿಟ್ಟಿದ್ದೇವೆ. ಕೋವಿಡ್‌ ಸಾಂಕ್ರಾಮಿಕದ ಏಕಾಂತವಾಸದಲ್ಲಿ ಈ ಹಿಂದಿನ ವರ್ಷದಲ್ಲಿ ನಮ್ಮ ಪಯಣಕ್ಕೆ ಜತೆಯಾದದ್ದು ತಂತ್ರಜ್ಞಾನ ಮತ್ತು ಇಂಟರ್‌ನೆಟ್‌ ಆಫ್ ಥಿಂಗ್ಸ್ (ಐಒಟಿ). 2022ರಲ್ಲಿ ಮತ್ತೆ ಕೋವಿಡ್‌ ಸಾಂಕ್ರಾಮಿಕದ ಗುಮ್ಮ ಅವುಚಿಕೊಳ್ಳಲು ಕಾದುಕುಳಿತಿದ್ದಾನೆ. ಹೀಗಾಗಿ ಹೊಸ ವರ್ಷದಲ್ಲೂ ನಮ್ಮನ್ನು ಮುನ್ನಡೆಸುವುದು ತಂತ್ರಜ್ಞಾನ ಮತ್ತು ಐಒಟಿಯೇ. ಈ ಎರಡು ವಿಚಾರಗಳು ಸಾಮಾನ್ಯರ ಬದುಕನ್ನೂ ಬದಲಿಸಲಿವೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಹೀಗೆ ನಮ್ಮ ಬದುಕನ್ನು ಬದಲಿಸುವ ಇತರ ಸಂಗತಿಗಳು ಯಾವುವು ಎಂದು ಯೋಚಿಸಿದರೆ ಸ್ಯಾಟಲೈಟ್ ಇಂಟರ್‌ನೆಟ್, 5ಜಿ, ಡ್ರೋನ್‌ ಡೆಲಿವರಿ... ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಹಿಂದಿನ ವರ್ಷದ ಬಹುತೇಕ ಸಮಯವು ವರ್ಕ್‌ ಫ್ರಂ ಹೋಮ್, ಆನ್‌ಲೈನ್ ತರಗತಿ, ವಿಡಿಯೊ ಕಾನ್ಫರೆನ್ಸ್, ಆನ್‌ಲೈನ್‌ ಶಾಪಿಂಗ್‌ ಹೀಗೆ ಇಂಟರ್‌ನೆಟ್ ಸಂಪರ್ಕವನ್ನು ಬೇಡುವ ಕಾರ್ಯಗಳಲ್ಲೇ ಕಳೆದುಹೋಗಿದೆ. ಕೈಬೆರಳ ತುದಿಯಲ್ಲೇ ಜಗತ್ತನ್ನು ನೋಡುವಂತಹ ಡಿಜಿಟಲ್ ಭಾರತದ ಕನಸು ಕಾಣುತ್ತಿದ್ದರೂ ಹಳ್ಳಿಗಳಲ್ಲಿ ಮಕ್ಕಳು ಮಾಳಿಗೆಯ ಮೇಲೆ ನಿಂತು ನೆಟ್‌ವರ್ಕ್‌ಗಾಗಿ ಹುಡುಕಾಡುತ್ತಿದ್ದ ದೃಶ್ಯಗಳು ಈಗಲೂ ಕಣ್ಣಮುಂದೆ ಇವೆ. ಮನೆಯಲ್ಲೇ ಕುಳಿತು ಕೆಲಸ ಮಾಡಬೇಕಾದಾಗ ಇಂಟರ್‌ನೆಟ್‌ ನೆಟ್‌ವರ್ಕ್‌ ಸಿಗದೇ ಪಡಿಪಾಟಲು ಬಿದ್ದದ್ದನ್ನು ಬಹುತೇಕ ಮಂದಿ ಮರೆತಿರಲಿಕ್ಕಿಲ್ಲ. ನಗರವಾಸದ ಅವಶ್ಯಕತೆ ಇಲ್ಲದಿದ್ದರೂ ನೆಲದ ಜೀವನಕ್ಕೆ ಹತ್ತಿರವಿರುವ ತಮ್ಮೂರಿನಲ್ಲಿ ಇಂಟರ್‌ನೆಟ್‌ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಕಾಂಕ್ರೀಟ್‌ ಕಾಡುಗಳಲ್ಲೇ ವರ್ಷ ಕಳೆದವರ ಸಂಖ್ಯೆಯೇನೂ ಕಡಿಮೆಯಿಲ್ಲ.

2022ರ ಆರಂಭದೊಂದಿಗೆ ‘ವರ್ಕ್‌ ಫ್ರಂ ಹೋಮ್‌’ನ ಮನೆವಾಸ ಮುಗಿಸಿ, ಕಚೇರಿಗಳತ್ತ ಮುಖಮಾಡಲು ಬಹುತೇಕ ಮಂದಿ ಸಿದ್ಧರಾಗಿದ್ದರು. ಆದರೆ ಈಗ ಮತ್ತೆ ಕೋವಿಡ್‌ ಗುಮ್ಮನ ಕಾಟ. ಹೊಸ ವರ್ಷವನ್ನೂ ಮತ್ತದೇ ವರ್ಕ್‌ ಫ್ರಂ ಹೋಮ್‌, ಆನ್‌ಲೈನ್‌ ತರಗತಿ, ವಿಡಿಯೊ ಕಾನ್ಫರೆನ್ಸ್‌ಗಳಲ್ಲಿ ಕಳೆಯಬೇಕಾದ ಆತಂಕದ ಮೂಟೆ. ಆದರೆ, ಈ ಎಲ್ಲಾ ಸಂಗತಿಗಳನ್ನು ಮತ್ತಷ್ಟು ಸಹನೀಯವಾಗಿಸುವ ಸಾಧ್ಯತೆಗಳೂ ನಮ್ಮೆದರು ಕಾದುಕುಳಿತಿವೆ.

ನೆಟ್‌ವರ್ಕ್‌ ಇಲ್ಲ ಎಂದು ಮಕ್ಕಳು ಮೊಬೈಲ್‌ ಹಿಡಿದು ಚಾವಣಿ ಏರುವ, ಮರದ ಮೇಲಿನ ಅಟ್ಟಣೆ ಏರುವ ಪರಿಪಾಟವನ್ನು ಇಲ್ಲವಾಗಿಸುವ ಹೊಸ ಸಾಧ್ಯತೆಯೊಂದು ನಮ್ಮೆದುರು ಇದೆ. ಇಂಟರ್‌ನೆಟ್‌ ಸಂಪರ್ಕಕ್ಕಾಗಿ ಬ್ರಾಡ್‌ಬ್ಯಾಂಡ್‌ ವೈರುಗಳನ್ನು ಕಿಲೊಮೀಟರ್‌ಗಟ್ಟಲೆ ಎಳೆಯಬೇಕಾದ ಅಗತ್ಯವೇ ಇಲ್ಲದ ಅಥವಾ ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಬೇಕಾದ ಜರೂರತ್ತು ಇಲ್ಲದ ಸ್ಯಾಟಲೈಟ್‌ ಇಂಟರ್‌ನೆಟ್‌ ಸೇವೆ ಈ ವರ್ಷ ಆರಂಭವಾಗುವ ನಿರೀಕ್ಷೆ ಇದೆ. ಇದಕ್ಕಾಗಿ ದೇಶ–ವಿದೇಶಗಳ ಕಂಪನಿಗಳೂ ದಿಲ್ಲಿ ಗದ್ದುಗೆಯಲ್ಲಿರುವವರ ಎದುರು ಪ್ರಸ್ತಾವ ಹಿಡಿದು ಕಾದಿವೆ. ಒಂದೊಮ್ಮೆ ದಿಲ್ಲಿ ‘ದೊರೆ’ಯ ಒ‍ಪ್ಪಿಗೆ ದೊರೆತರೆ, ಅದು ಡಿಜಿಟಲ್ ಭಾರತದ ಕನಸನ್ನು ನನಸಾಗಿಸುವ ಮಹತ್ವದ ಮೈಲುಗಲ್ಲಾಗಲಿದೆ.

ವಿದ್ಯುತ್ ಚಾಲಿತ ವಾಹನಗಳಿಗೆ ವೇಗ ಇರುವುದಿಲ್ಲ, ಬಹಳ ದೂರ ಕ್ರಮಿಸುವುದಿಲ್ಲ ಎಂಬ ‘ಸತ್ಯ’ವನ್ನು ಟೆಸ್ಲಾ ಮೂಲಕ ಮಿಥ್ಯೆಯಾಗಿಸಿದ ಎಲಾನ್‌ ಮಸ್ಕ್‌, ತನ್ನ ಸ್ಪೇಸ್‌ಎಕ್ಸ್‌ ಸ್ಯಾಟಲೈಟ್‌ ಇಂಟರ್‌ನೆಟ್‌ ಸೇವೆಯನ್ನು ಭಾರತದಲ್ಲಿ ನೀಡಲು ಕಾದಿದ್ದಾನೆ. ವಿಶ್ವದಾದ್ಯಂತ ಈ ಸೇವೆ ನೀಡುವ ಉದ್ದೇಶದಿಂದ ಸ್ಪೇಸ್‌ಎಕ್ಸ್‌ ಕಂಪನಿಯು, ಭೂಮಿಯ ಸುತ್ತ ಡಾಬು ಹಾಕಿದಂತೆ ಸಾಲುಸಾಲು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ತೇಲಿಬಿಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿರುವ ಈ ಉಪಗ್ರಹಗಳ ಮೂಲಕವೇ, ಭೂಮಿಯ ಯಾವುದೋ ಕಗ್ಗಾಡಿನಲ್ಲಿರುವ ಡಿಶ್‌ ಆ್ಯಂಟೆನಾಗೆ ಇಂಟರ್‌ನೆಟ್‌ ಸಂಪರ್ಕವನ್ನು ನೀಡಲಾಗುತ್ತದೆ. ಈ ಮೂಲಕ ಕಗ್ಗಾಡಿನಲ್ಲಿ ಮನೆಮಾಡಿ ಕೂತವರೂ, ದಿಲ್ಲಿಯಲ್ಲಿ ಕೂತವರಂತೆ ಬೆರಳ ತುದಿಯಲ್ಲಿ ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ. ಕುಗ್ರಾಮವೊಂದರಲ್ಲಿನ ಕುಶಲಕರ್ಮಿಯು, ತನ್ನದೇ ಮೊಬೈಲ್‌ ಮೂಲಕ ಆನ್‌ಲೈನ್ ಮಾರುಕಟ್ಟೆಯಲ್ಲಿ ತನ್ನ ಕರಕುಶಲ ವಸ್ತುಗಳನ್ನು ಮಾರಲು ಸಾಧ್ಯವಾಗುತ್ತದೆ. ಗ್ಲೋಬಲ್‌ ವಿಲೇಜ್‌ ಎಂಬ ಪರಿಕಲ್ಪನೆಯನ್ನು ವಾಸ್ತವಕ್ಕೆ ಹತ್ತಿರವಾಗಿಸುವ ಸಂಗತಿಗಳಲ್ಲಿ ಇದೂ ಒಂದು. ಇಷ್ಟೆಲ್ಲಾ ದೊಡ್ಡ ಕನಸು ಬೇಡ ಎನ್ನುವುದಾದರೆ, ಮನೆಯ ಮಕ್ಕಳು ನೆಟ್‌ವರ್ಕ್‌ಗಾಗಿ ಮರ ಏರುವುದನ್ನಾದರೂ ಇದು ತಪ್ಪಿಸಲಿದೆ ಎಂಬುದಂತೂ ಸತ್ಯ.

ಇದಿಷ್ಟನ್ನೇ ನಾವು ಎದುರು ನೋಡಬೇಕಿಲ್ಲ. ಹೊಟ್ಟೆ ಹಸಿದಾಗ, ಬುಕ್‌ ಮಾಡಿದರೆ ಮನೆಗೆ ಊಟ ತಂದುಕೊಡುವ ಅನ್ನದಾತರ ಕೆಲಸದ ವಿಧಾನವನ್ನು ಬದಲಿಸುವ ಸಂಗತಿಯೂ ನಮ್ಮೆದುರು ಇದೆ. ಈಗ ನಾವು ಊಟ ಬುಕ್‌ ಮಾಡಿದರೂ ಡೆಲಿವರಿ ಏಜೆಂಟ್‌ ಸಂಚಾರ ಸಾಗರದ ಹಲವು ಅಡೆತಡೆಗಳನ್ನು ದಾಟಿ ನಮ್ಮನ್ನು ತಲುಪುವಷ್ಟರಲ್ಲಿ ಅದು ತಣ್ಣಗಾಗಿರುತ್ತದೆ. ಹೋಟೆಲ್‌ನಿಂದ ಹೊರಟು, ಆ ತಿನಿಸಿನ ಹಬೆ ಇಲ್ಲವಾಗುವ ಮುನ್ನವೇ ಅದು ನಮ್ಮ ತಟ್ಟೆಯಲ್ಲಿರುವ ಹಾಗಿದ್ದಿದ್ದರೆ ಎಷ್ಟು ಚಂದವಿರುತ್ತಿತ್ತು. ಹೋಟೆಲ್‌ಗೆ ಹೋಗದೇ ಇರುವ ಸ್ಥಿತಿಯಲ್ಲಿ, ಹೋಟೆಲ್‌ನಲ್ಲಿ ದೊರತಷ್ಟೇ ಬಿಸಿಯಾದ ತಿನಿಸು ನಮ್ಮ ನಾಲಿಗೆಯನ್ನೂ ಬೆಚ್ಚಗೆ ಮಾಡುತ್ತಿತ್ತು. ಇಂತಹ ಕಲ್ಪನೆ ಕೇವಲ ಕನಸಾಗಿ ಉಳಿಯಬೇಕಿಲ್ಲ. ಅಷ್ಟು ಬೇಗ ನಮಗೆ ಊಟವನ್ನು ತಂದುಕೊಡಲಿರುವ ಡ್ರೋನ್‌ ಡೆಲಿವರಿ ಎಂಬ ಪರಿಕಲ್ಪನೆ ಈ ವರ್ಷ ಸತ್ಯವಾಗುವ ನಿರೀಕ್ಷೆ ಇದೆ.

ಫುಡ್‌ ಡೆಲಿವರಿ ದೈತ್ಯ ಸ್ವಿಗ್ಗಿ ಅಂತಹದ್ದೊಂದು ಪ್ರಯತ್ನಕ್ಕೆ ಕೈಹಾಕಿದೆ. ಪ್ರಾಯೋಗಿಕವಾಗಿ ಹಲವು ಮನೆಗಳಿಗೆ ಡ್ರೋನ್‌ ಮೂಲಕ ಊಟವನ್ನು ತಲುಪಿಸಿದೆ. ಅತ್ಯಂತ ಸಂಚಾರ ದಟ್ಟಣೆ ಇರುವ ನಗರವೊಂದರಲ್ಲಿ 5 ಕಿ.ಮೀ. ಅಂತರವನ್ನು ಕೇವಲ ಐದು ನಿಮಿಷದಲ್ಲಿ ಕ್ರಮಿಸಿದ ಡ್ರೋನ್‌ ಭೇಷ್‌ ಎನಿಸಿಕೊಂಡಿದೆ. ಇದನ್ನು ದೇಶದ ಹಲವೆಡೆಗೆ ಹಂಚುವ ಕನಸಿನ ಬುತ್ತಿಯನ್ನು ದಿಲ್ಲಿ ದೊರೆಯ ಎದುರು ಹಿಡಿದು ಸ್ವಿಗ್ಗಿ ನಿಂತಿದೆ. ದಿಲ್ಲಿ ದೊರೆ ಇದಕ್ಕೂ ಹೂಂಗುಟ್ಟಿದರೆ, ಡ್ರೋನ್‌ ನಿಮ್ಮ ಮನೆಬಾಗಿಲಿಗೆ ಬಂದು ಕೈಬೀಸುವ ದಿನಗಳು ದೂರದಲ್ಲಿಲ್ಲ. ಬರಿಯ ಊಟ ತಲುಪಿಸುವುದಕ್ಕೆ ಈ ಪ್ರಯತ್ನ ನಿಂತಿಲ್ಲ. ಔಷಧಿ, ಆನ್‌ಲೈನ್ ಶಾಪಿಂಗ್‌ಗಳ ಡೆಲಿವರಿಯನ್ನೂ ಡ್ರೋನ್‌ ಹೆಗಲೇರಿಸುವ ಪ್ರಯತ್ನಗಳು ನಡೆದಿವೆ. ಇವೆಲ್ಲಾ ಸಾಕಾರವಾದರೆ, ಆಗಸದಲ್ಲಿ ಡ್ರೋನ್‌ ದಟ್ಟಣೆ ಹೆಚ್ಚುವುದರಲ್ಲಿ ಅನುಮಾನವಿಲ್ಲ ಎಂಬುದು ಹೊಸ ವರ್ಷದ ಹೊಸ ಮಾತಾಗಿದೆ.

ತಂತ್ರಜ್ಞಾನವೇ ನಮ್ಮನ್ನು ನಿಯಂತ್ರಿಸುತ್ತದೆ ಎಂಬುದನ್ನು ಮತ್ತಷ್ಟು ಸತ್ಯವಾಗಿಸುವ ಬೆಳವಣಿಗೆಗಳಿಗೂ ನಾವು ಈ ವರ್ಷದಲ್ಲಿ ಸಾಕ್ಷಿಯಾಗಬೇಕಿದೆ. ಈ ವರ್ಷದಿಂದ ವಿದ್ಯುತ್ ಚಾಲಿತ ವಾಹನಗಳು ನಮ್ಮ ದೈನಂದಿನ ಬದುಕಿನ ಚಟುವಟಿಕೆಗಳನ್ನು ನಿಯಂತ್ರಿಸಲು ಆರಂಭಿಸಲಿವೆ. ಪೆಟ್ರೋಲ್‌/ಡೀಸೆಲ್ ವಾಹನವಾಗಿರಲಿ ಅಥವಾ ವಿದ್ಯುತ್ ಚಾಲಿತ ವಾಹನವೇ ಆಗಿರಲಿ ನಾವು ಅದನ್ನು ನಿಯಂತ್ರಿಸಬೇಕಲ್ಲವೇ ಎಂದು ಪ್ರಶ್ನಿಸುತ್ತಿದ್ದೀರಾ? ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ. ವಾಹನವನ್ನು ಚಲಾಯಿಸುವಾಗ ನಾವು ಅದನ್ನು ನಿಯಂತ್ರಿಸುತ್ತೇವೆ ಎಂಬುದು ಸತ್ಯ. ಆದರೆ ವಿದ್ಯುತ್ ಚಾಲಿತ ವಾಹನಗಳು (ಇ.ವಿ.) ನಮ್ಮ ಇತರ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ ಎಂಬುದೂ ಅಷ್ಟೇ ಸತ್ಯ.

ಇ.ವಿ.ಗಳಲ್ಲಿರುವ ಬ್ಯಾಟರಿ ಪೂರ್ಣ ಡಿಸ್ಚಾರ್ಜ್‌ ಆಗುವವರೆಗೆ ಮಾತ್ರ ಅವನ್ನು ಚಲಾಯಿಸಲು ಸಾಧ್ಯ. ಪೆಟ್ರೋಲ್‌/ಡೀಸೆಲ್ ವಾಹನಗಳಲ್ಲಿ ಇಂಧನ ಖಾಲಿಯಾಗುತ್ತಿದ್ದಂತೆ ಅಥವಾ ಅದಕ್ಕಿಂತಲೂ ಮೊದಲೇ ಬಂಕ್‌ಗಳಿಗೆ ಹೋಗಿ ಟ್ಯಾಂಕ್ ಭರ್ತಿ ಮಾಡಿಸುತ್ತೇವೆ. ಇದಕ್ಕೆಲ್ಲಾ ಒಂದೆರಡು ನಿಮಿಷ ಖರ್ಚು ಮಾಡಬೇಕಷ್ಟೆ. ಇಂಧನ ಭರ್ತಿ ಮಾಡಲು ನಾವು ಯೋಜನೆ ಹಾಕಬೇಕಿಲ್ಲ. ಆದರೆ ನೀವು ಇ.ವಿ. ಬಳಸಲು ಆರಂಭಿಸುತ್ತೀರಿ ಎಂದಿಟ್ಟುಕೊಳ್ಳಿ, ನಿಮ್ಮ ದೈನಂದಿನ ಬದುಕು ಬದಲಾಗುತ್ತದೆ. ನೀವು ಹೆಚ್ಚು ಓಡಾಡುವವರಾಗಿದ್ದರೆ, ಪ್ರತಿದಿನ ಇ.ವಿ.ಯ ಬ್ಯಾಟರಿ ಚಾರ್ಜ್‌ ಮಾಡಬೇಕು. ಅದರ ಚಾರ್ಜ್‌ ಮುಗಿಯುವ ಮುನ್ನ ಮನೆ ಸೇರಬೇಕು. ಇಲ್ಲದಿದ್ದರೆ, ಚಾರ್ಜಿಂಗ್‌ ಸ್ಟೇಷನ್‌ನಲ್ಲಾದರೂ ಇರಬೇಕು.

ದೂರದ ಪ್ರಯಾಣಕ್ಕೆ ಯೋಜಿಸುವುದಾದರೆ, ನಿಮಗಿಷ್ಟವಿಲ್ಲದಿದ್ದರೂ ಚಾರ್ಜಿಂಗ್‌ಗೆಂದು ಅಲ್ಲಲ್ಲಿ ನಿಲ್ಲಬೇಕು. ಇ.ವಿ. ಚಾರ್ಜ್‌ ಆಗುವವರೆಗೆ ಸುಮ್ಮನೆ ಕಾಲ ಕಳೆಯಬೇಕು. ಇಲ್ಲವೇ ಕಾಲ ಕಳೆಯಲು ಟೀ–ಕಾಫಿ ಹೀರಬೇಕು. ಇದ್ಯಾವುದೂ ನಿಮಗೆ ಇಷ್ಟವಿಲ್ಲದಿದ್ದರೂ ಮಾಡಲೇಬೇಕು.

ಇನ್ನು ಮನೆ ಹುಡುಕುವಾಗ ಇ.ವಿ. ನಿಲ್ಲಿಸಲು ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಪೆಟ್ರೋಲ್‌–ಡೀಸೆಲ್ ವಾಹನಗಳಾದರೆ ಪಕ್ಕದ ಮನೆಯ ಮುಂದೆಯೂ ನಿಲ್ಲಿಸಿ ಬೆಳಿಗ್ಗೆ ತೆಗೆದುಕೊಂಡು ಹೋಗಬಹುದು. ಆದರೆ ನಿಮ್ಮ ಇ.ವಿ.ಯನ್ನು ಪಕ್ಕದ ಮನೆಯ ಮುಂದೆ ನಿಲ್ಲಿಸಿ, ಆ ಮನೆಯಿಂದಲೇ ಚಾರ್ಜು ಮಾಡಿಕೊಳ್ಳಲು ಸಾಧ್ಯವೇ? ಇದಕ್ಕಾಗಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇದ್ದು, ಅಲ್ಲಿ ಚಾರ್ಜಿಂಗ್‌ಗೆ ವ್ಯವಸ್ಥೆ ಇದ್ದರಷ್ಟೇ ಮನೆಯಲ್ಲಿ ಬದುಕು ನಡೆಸಲು ಸಾಧ್ಯ. ಹೊಸದಾಗಿ ಮನೆ ಕಟ್ಟಿಸುವವರೂ ತಮ್ಮ ಇ.ವಿ.ಗೆ ಅಥವಾ ಬಾಡಿಗೆದಾರರ ಇ.ವಿ.ಗೆ ಇಂಥದ್ದೊಂದು ಗೂಡನ್ನೂ ನಿರ್ಮಿಸದೆ ಅನ್ಯ ವಿಧಿಯಿಲ್ಲ.

ಇವಿಗಳು ಹಿಂದಿನ ವರ್ಷದಲ್ಲೂ ಇದ್ದವು, ಹೊಸ ವರ್ಷದಲ್ಲೂ ಇರಲಿವೆ ಎಂದು ನೀವು ವಾದ ಮುಂದಿಡಬಹುದು. ಆದರೆ ಹೊಸ ವರ್ಷದಲ್ಲಿ, ಹೊಸ ಕಂಪನಿಗಳು ಮತ್ತಷ್ಟು ಹೊಸ ಇವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿವೆ. ಆಕರ್ಷಕವಾದ, ಹೆಚ್ಚು ಶಕ್ತಿ, ಹೆಚ್ಚಿನ ವೇಗದ, ಹೆಚ್ಚು ದೂರ ಕ್ರಮಿಸುವ ಇ–ಸ್ಕೂಟರ್ ಮತ್ತು ಇ–ಬೈಕ್‌ಗಳು ರಸ್ತೆಗಿಳಿಯಲು ಸಿದ್ಧವಾಗಿವೆ. ಅವುಗಳನ್ನು ಖರೀದಿಸಲೇಬೇಕಾದ ಅನಿವಾರ್ಯತೆಯನ್ನು ಪೆಟ್ರೋಲ್‌ ಬೆಲೆ ಏರಿಕೆ ನಿರ್ಮಿಸುತ್ತಿದೆ. ಮಧ್ಯಪ್ರಾಚ್ಯದ ತೈಲದೊರೆಗಳು, ತಾವು ನೆಲದಾಳದಿಂದ ಮೇಲಕ್ಕೆತ್ತುವ ಕಚ್ಚಾತೈಲದ ಪ್ರಮಾಣವನ್ನು ಹೆಚ್ಚಿಸಲು ಉಹೂಂಗುಟ್ಟಿದ್ದಾರೆ. ಇದರಿಂದ ಈ ವರ್ಷದಲ್ಲಿ ತೈಲದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಪೆಟ್ರೋಲ್‌–ಡೀಸೆಲ್‌ಗೆ ಸುರಿಯಬೇಕಾದ ಹಣವನ್ನು ಪ್ರತಿ ತಿಂಗಳು ಇಎಂಐ ಕಟ್ಟುತ್ತಾ, ಪ್ರತಿ ಕಿ.ಮೀ.ಗೆ ಪೈಸೆಗಳ ವೆಚ್ಚದಲ್ಲಿ ಓಡಾಡಲು ಇ.ವಿ.ಯನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಎದುರಾಗಲಿದೆ. ನಮ್ಮ ವಾಹನ ಖರೀದಿಯನ್ನೂ ಇ.ವಿ. ಪ್ರಭಾವಿಸಲಿದೆ. ಈಗ ಹೇಳಿ, ಇ.ವಿ.ಗಳು ನಮ್ಮ ದೈನಂದಿನ ಚಟುವಟಿಕೆಗಳನ್ನು ನಿಯಂತ್ರಿಸುವುದಿಲ್ಲವೇ?

ಹೊಸ ವರ್ಷದ ಹೊಸ ಪ್ರಭಾವಗಳ ಸರಪಳಿ ಇಲ್ಲಿಗೇ ಮುಗಿಯುವುದಿಲ್ಲ. ಸಿನಿಮಾವೊಂದನ್ನು ಅರೆಕ್ಷಣದಲ್ಲಿಯೇ ಡೌನ್‌ಲೋಡ್‌ ಮಾಡುವಷ್ಟು ವೇಗದ ಇಂಟರ್‌ನೆಟ್‌ ಸಂಪರ್ಕ ನೀಡುವ 5ಜಿ ಈ ವರ್ಷ ನಮ್ಮ ಮೊಬೈಲ್‌ಗಳಿಗೆ ಬರಲಿದೆ. ಮನೆವಾಳ್ತೆಯ ಹಲವು ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಬಾಟ್‌–ರೊಬಾಟ್‌ಗಳು ಕೈಗೆಟುವ ಬೆಲೆಯಲ್ಲಿ ನಮ್ಮ ಮನೆ ತುಂಬಿಕೊಳ್ಳಲಿವೆ. ಚಾಲನೆ ವೇಳೆ ನಾವು ಎಚ್ಚರತಪ್ಪಿದರೂ ತನ್ನಿಂದ ತಾನೇ ಬ್ರೇಕ್‌ ಹಾಕಿಕೊಳ್ಳುವ ಬುದ್ಧಿಯಿರುವ ಮತ್ತಷ್ಟು ಕಾರುಗಳು ನಮ್ಮ ಮನೆಬಾಗಿಲಿಗೆ ಬರಲಿವೆ. ಹೀಗೆ ಈ ಹೊಸ ವರ್ಷದಲ್ಲಿ, ಹೊಸದನ್ನು ಕಲಿಸುತ್ತಾ, ಬದುಕು ಬದಲಿಸಲು ಹಲವು ಸಂಗತಿಗಳು ನಮಗೆ ಜತೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT