ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ ಡೌನ್‌ಲೋಡ್‌, ಖಾಸಗಿತನ ಅಪ್‌ಲೋಡ್!

Last Updated 26 ಜನವರಿ 2021, 19:30 IST
ಅಕ್ಷರ ಗಾತ್ರ

ಡಿಜಿಟಲ್‌ ಜಗತ್ತಿನಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ವೈಯಕ್ತಿಕ ಮಾಹಿತಿ ಕದಿಯಲು ಯಾರು, ಯಾವಾಗ, ಹೇಗೆ ದಾಳಿ ಮಾಡುತ್ತಾರೆ ಎಂದು ಗೊತ್ತೇ ಆಗುವುದಿಲ್ಲ! ಇಂತಹ ಪರಿಸ್ಥಿತಿಯಲ್ಲಿ ಖಾಸಗಿತನದ ರಕ್ಷಣೆ ಅತಿದೊಡ್ಡ ಸಮಸ್ಯೆ ಮತ್ತು ಸವಾಲಾಗಿದೆ.

ಜನಪ್ರಿಯ ಸಾಮಾಜಿಕ ಮಾಧ್ಯಮಗಳೆಲ್ಲವೂ ಬಳಕೆದಾರನ ಖಾಸಗಿತನ ರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳುತ್ತಲೇ ಇರುತ್ತವೆ. ಆದರೆ, ವಾಸ್ತವದಲ್ಲಿ ಬಳಕೆದಾರನ ವೈಯಕ್ತಿಕ ಮಾಹಿತಿ ಸೋರಿಕೆ ಆಗುವುದಂತೂ ನಿಂತಿಲ್ಲ. ಖಾಸಗಿತನದ ರಕ್ಷಣೆಯಲ್ಲಿ ವೈಫಲ್ಯ ಆಗುತ್ತಿರುವ ಕುರಿತು ಫೇಸ್‌ಬುಕ್‌ ಸದಾಕಾಲ ಸುದ್ದಿಯಲ್ಲಿರುತ್ತದೆ.

ಕಳೆದೊಂದು ವರ್ಷದಿಂದ ಉದ್ದಿಮೆಗಳು ತಮ್ಮ ವಹಿವಾಟು ವಿಸ್ತರಣೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಹೆಚ್ಚಾಗಿದೆ. ಹೀಗಾಗಿ ಖಾಸಗಿತನ ರಕ್ಷಣೆಯ ಕುರಿತು ಗಂಭೀರ ಚರ್ಚೆ ನಡೆಯುತ್ತಿದ್ದು, ಸೂಕ್ತವಾದ ನೀತಿ, ನಿಯಮಗಳನ್ನು ರೂಪಿಸಬೇಕು ಎನ್ನುವ ಅಭಿಪ್ರಾಯಗಳು ಮೂಡಲು ಕಾರಣವಾಗಿದೆ.

ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಶನ್‌ ವ್ಯವಸ್ಥೆ ಇದ್ದು, ಬಳಕೆಗೆ ಸುರಕ್ಷಿತ ಎಂದು ಹೇಳಿಕೊಳ್ಳುತ್ತಿದ್ದ ವಾಟ್ಸ್ಆ್ಯಪ್‌; 2019ರಲ್ಲಿ ಪೆಗಾಸಸ್‌ ಕುತಂತ್ರಾಂಶದ ದಾಳಿಗೆ ಒಳಗಾದಾಗಲೇ ಗೊತ್ತಾಗಿದ್ದು, ಡಿಜಿಟಲ್‌ ಲೋಕದಲ್ಲಿ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದು ಎಷ್ಟು ಕಷ್ಟ ಎನ್ನುವುದು. ಭಾರತವನ್ನೂ ಒಳಗೊಂಡು ಹಲವು ದೇಶಗಳಲ್ಲಿ ನಿರ್ದಿಷ್ಟ ಬಳಕೆದಾರರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಯಾವೆಲ್ಲಾ ಮಾಹಿತಿಗಳು ಸೋರಿಕೆಯಾಗಿವೆ ಎನ್ನುವುದು ಸ್ವತಃ ವಾಟ್ಸ್‌ಆ್ಯಪ್‌ಗೂ ತಿಳಿಯಲಿಲ್ಲ. ಇದೊಂದು ಉದಾಹರಣೆಯಷ್ಟೆ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲೆಕ್ಕವಿಲ್ಲದಷ್ಟು ವಂಚಕ, ನಕಲಿ ಆ್ಯಪ್‌ಗಳು ನುಸುಳುತ್ತಲೇ ಇರುತ್ತವೆ. ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತಲೇ ಇರುತ್ತದೆ.

ಆ ಬಗ್ಗೆ ಸಾರ್ವಜನಿಕವಾಗಿ ಸುದ್ದಿಯಾದ ಮೇಲಷ್ಟೇ ಅಂತಹ ಆ್ಯಪ್‌ಗಳು ಪ್ಲೇಸ್ಟೋರ್‌ನಿಂದ ಬಹಿಷ್ಕಾರಕ್ಕೆ ಒಳಗಾಗುತ್ತಿವೆ. ಆದರೆ, ಅಷ್ಟರ ಒಳಗಾಗಿಯೇ ಮತ್ತೊಂದಿಷ್ಟು ವಂಚಕ ಆ್ಯಪ್‌ಗಳು ಪ್ಲೇಸ್ಟೋರ್‌ನೊಳಗೆ ಸೇರಿಕೊಂಡಿರುತ್ತವೆ.

ಜನಪ್ರಿಯ ಹಾಗೂ ಅತಿಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ ಎಂದಮಾತ್ರಕ್ಕೆ ಖಾಸಗಿತನ ಮತ್ತು ಸುರಕ್ಷತೆಗೆ ಆದ್ಯತೆ ನೀಡಿರಲೇಬೇಕು ಎನ್ನುವ ನಿಯಮವೇನೂ ಇಲ್ಲ.ಫೋನ್‌ನಿಂದ ಯಾವೆಲ್ಲಾ ಮಾಹಿತಿಗಳನ್ನು ಪಡೆಯಲಾಗುತ್ತದೆ ಎನ್ನುವುದನ್ನುಬಹುತೇಕ ಆ್ಯಪ್‌ಗಳು ಇನ್‌ಸ್ಟಾಲ್‌ ಮಾಡುವಾಗ ತೋರಿಸುವುದೇ ಇಲ್ಲ. ಹೀಗಾಗಿ ಬಳಕೆದಾರರಾದ ನಾವುಗಳೇ ಯಾವ ಆ್ಯಪ್‌ ಅಗತ್ಯ ಇದೆ ಎನ್ನುವ ನಿರ್ಧಾರಕ್ಕೆ ಬರಬೇಕಾಗಿದೆ. ಹಾಗೆ ಅಗತ್ಯ ಇರುವ ಆ್ಯಪ್‌ ಡೌನ್‌ಲೋಡ್ ಮಾಡುವ ಮುನ್ನ ಅದು ಎಷ್ಟರ ಮಟ್ಟಿಗೆ ಸುರಕ್ಷತೆ ಒದಗಿಸಬಲ್ಲದು ಎನ್ನುವುದನ್ನೂ ಖಾತರಿಪಡಿಸಿಕೊಳ್ಳುವ ಜವಾಬ್ದಾರಿಯೂ ನಮ್ಮದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT