ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ಗೆ ಗುಡ್‌ಬೈ?

Last Updated 12 ಜೂನ್ 2019, 19:30 IST
ಅಕ್ಷರ ಗಾತ್ರ

ನಿರಂತರವಾದ ಪ್ರಯೋಗ, ಪರಿಶೀಲನೆಯ ಬಳಿಕ ಆ್ಯಪಲ್‌ ಕಂಪನಿಯು ಐಒಎಸ್‌ 13ನಲ್ಲಿ, ತನ್ನದೇ ಪೂರ್ಣ ಪ್ರಮಾಣದ ಮ್ಯಾಪ್‌ ಪರಿಚಯಿಸಿದೆ. ಇನ್ನು ಮುಂದೆ ಐಫೋನ್‌ ಮತ್ತು ಐಪಾಡ್‌ ಬಳಕೆದಾರರು ಗೂಗಲ್‌ ಮ್ಯಾಪ್‌ ಬಳಸುವ ಅಗತ್ಯ ಇಲ್ಲ. ಅದಕ್ಕಿಂತಲೂ ಉತ್ತಮವಾದ ವೈಶಿಷ್ಟ್ಯಗಳು ಇದರಲ್ಲಿವೆ ಎಂದು ಕಂಪನಿ ಹೇಳಿದೆ.

ಐಫೋನ್‌ನಲ್ಲಿ ಗೂಗಲ್ ಮ್ಯಾಪ್‌ ಬಳಸಲು ಗೂಗಲ್‌ ಮತ್ತು ಆ್ಯಪಲ್‌ ಮಧ್ಯೆ ಒಪ್ಪಂದ ಆಗಿತ್ತು. ಅದರಂತೆ, ಗೂಗಲ್‌ ಐಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಬಳಸುವವರ ಕೆಲವೇ ಕೆಲವು ಮಾಹಿತಿಗಳನ್ನು ಮಾತ್ರವೇ ಪಡೆಯಬಹುದಾಗಿತ್ತು. ಆದರೆ ಇದರಿಂದ ಗೂಗಲ್‌ಗೆ ತನ್ನ ಜಾಹೀರಾತುಗಳನ್ನು ನೀಡಲು ಕಷ್ಟವಾಗುತ್ತಿತ್ತು. ಹೀಗಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ನೀಡಿರುವ ಲೈವ್‌ ಅಪ್‌ಡೇಟ್‌ ಮತ್ತು ಟರ್ನ್‌ ಬೈ ಟರ್ನ್‌ ಡೈರೆಕ್ಷನ್‌ನಂತಹ ಪ್ರಮುಖ ವೈಶಿಷ್ಟ್ಯಗಳು ಆ್ಯಪಲ್‌ನಲ್ಲಿ ಬಳಸುವ ಗೂಗಲ್‌ ಮ್ಯಾಪ್‌ನಲ್ಲಿ ಕೆಲಸ ಮಾಡುತ್ತಿರಲಿಲ್ಲ. ಇದರರ್ಥ ಇಷ್ಟೆ. ಆ್ಯಪಲ್‌ ತನ್ನ ಗ್ರಾಹಕರ ಮಾಹಿತಿಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲ ಎನ್ನುವ ಕಾರಣಕ್ಕೆ ಗೂಗಲ್‌ ತನ್ನ ವೈಶಿಷ್ಟ್ಯಗಳನ್ನು ನೀಡುತ್ತಿಲ್ಲ. ಇದರಿಂದ ಗೂಗಲ್‌ಗೆ ಜಾಹೀರಾತಿನಿಂದ ಬರುವ ವರಮಾನ ಕಡಿಮೆಯಾದರೆ, ಆ್ಯಪಲ್‌ಗೆ ತನ್ನ ಗ್ರಾಹಕರಿಗೆ ಗೂಗಲ್‌ ಮ್ಯಾಪ್‌ ಸೌಲಭ್ಯ ನೀಡುವುದಕ್ಕಾಗಿ ಗೂಗಲ್‌ಗೆ ಹಣ ಕೊಡಬೇಕಾಗಿತ್ತು.

ತನ್ನ ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ನ ಎಲ್ಲಾ ವೈಶಿಷ್ಟ್ಯಗಳು ದೊರೆಯುವಂತೆ ಮಾಡಲು ಆ್ಯಪಲ್‌ ಈಗಾಗಲೇ ಮಾಡಿಕೊಂಡಿರುವ ಒಪ್ಪಂದದ ಷರತ್ತುಗಳನ್ನು ಬದಲಾಯಿಸಿಕೊಳ್ಳಬೇಕು. ಅಂದರೆ ಗೂಗಲ್‌ ಕೇಳುವ ಮಾಹಿತಿಗಳನ್ನು ನೀಡಲು ಅನುಮತಿ ಕೊಡಬೇಕು. ಆದರೆ ಇದಕ್ಕೆ ಮಣಿಯಲು ಆ್ಯಪಲ್‌ ಸಿದ್ಧವಿಲ್ಲ. ಗೂಗಲ್‌ ಮ್ಯಾಪ್‌ಗೆ ಗುಡ್‌ ಬೈ ಹೇಳಿ ತನ್ನದೇ ಆದ ಆ್ಯಪಲ್‌ ಮ್ಯಾಪ್‌ ಅನ್ನು ಐಒಎಸ್‌ 13ನಲ್ಲಿ ಬಿಡುಗಡೆ ಮಾಡಿದೆ.

ಒಟ್ಟಾರೆ ಐಫೋನ್‌ ಬಳಕೆದಾರರಲ್ಲಿ ಗೂಗಲ್‌ ಮ್ಯಾಪ್‌ ಬಳಕೆಯನ್ನು ಬಿಟ್ಟು ಆ್ಯಪಲ್‌ ಮ್ಯಾಪ್‌ ಬಳಕೆ ಆರಂಭಿಸಿರುವವರ ಸಂಖ್ಯೆ 2.3 ಕೋಟಿ ಇದೆ.

ಆ್ಯಪಲ್‌ ಮ್ಯಾಪ್‌ ಮರುವಿನ್ಯಾಸ
ಈ ಮ್ಯಾಪ್‌ನಲ್ಲಿ ಬೀಚ್‌, ಪಾರ್ಕ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳ ವಿಸ್ತೃತ ಮಾಹಿತಿ ಇದೆ. ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಬದಲಾವಣೆ ಮಾಡಿಕೊಳ್ಳುವ ಆಯ್ಕೆಯೂ ಇದರಲ್ಲಿದೆ.

ಬಳಕೆದಾರರ ಮೆಚ್ಚಿನ ಸ್ಥಳಗಳನ್ನು ಆ್ಯಪ್‌ನ ಹೋಮ್‌ ಸ್ಕ್ರೀನ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ಕೆಲವು ನಿರ್ದಿಷ್ಟ ಸ್ಥಳಗಳನ್ನು ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್‌ ಮಾಡುವ ಆಯ್ಕೆಯೂ ಇದೆ.

ಗೂಗಲ್‌ ಫೇಮಸ್‌ ಸ್ಟ್ರೀಟ್‌ ವೀವ್‌ ಫೀಚರ್ ಅನ್ನು ‘ಲುಕ್‌ ಅರೌಂಡ್‌’ನಲ್ಲಿ ನೀಡಲಿದೆ. ಸ್ಥಳದ 360 ಡಿಗ್ರಿ ಫೋಟೊಗ್ರಾಫಿಕ್‌ ವೀವ್‌ ಸಿಗಲಿದೆ.

2012ರಲ್ಲಿಯೇ ಆ್ಯಪಲ್‌ ಕಂಪನಿಯು ಗೂಗಲ್‌ ಮ್ಯಾಪ್‌ಗೆ ಪರ್ಯಾಯವನ್ನು ಬಿಡುಗಡೆ ಮಾಡಿತ್ತು. ಐಒಎಸ್‌ 6ನಲ್ಲಿ ಸಾಫ್ಟ್‌ವೇರ್‌ ಅಪ್‌ಡೇಟ್ ಮಾಡುವ ಮೂಲಕ ಐಫೋನ್‌ ಮತ್ತು ಐಪಾಡ್‌ಗಳಿಗೆ ಮ್ಯಾಪ್‌ ಆಯ್ಕೆ ನೀಡಿತ್ತು. ಆದರೆ, ಆ ಹೊತ್ತಿಗೆ ಆ್ಯಪ್‌ನ ಕಾರ್ಯವೈಖರಿಗೆ ತೀವ್ರ ಟೀಕೆಯನ್ನು ಎದುರಿಸಬೇಕಾಗಿ ಬಂದಿತ್ತು. ಮ್ಯಾಪ್‌ನಲ್ಲಿ ಮಾಹಿತಿಯ ಕೊರತೆ ಇದೆ ಎಂದು ಕೆಲವರು ದೂರಿದರೆ, ಮ್ಯಾಪ್‌ ನಿಖರವಾದ ಮಾಹಿತಿ ನೀಡುತ್ತಿಲ್ಲ ಎಂದು ಇನ್ನೂ ಕೆಲವರು ಅಸಮಾಧಾನ ಹೊರಹಾಕಿದ್ದರು. ಸಿಇಒ ಟಿಮ್‌ ಕುಕ್‌ ಅವರು ಈ ಬಗ್ಗೆ ಕ್ಷಮೆಯನ್ನೂ ಕೇಳಿದ್ದರು.

ಆ ಬಳಿಕ ನ್ಯಾವಿಗೇಷನ್‌ ಆ್ಯಪ್‌ ಅನ್ನು ಮರುವಿನ್ಯಾಸಗೊಳಿಸಲು ಗಮನ ಕೇಂದ್ರೀಕರಿಸಿತ್ತು. ಹೆಚ್ಚಿನ ಮಾಹಿತಿ ಮತ್ತು ನಿಖರವಾದ ಸ್ಥಳವನ್ನು ಗುರುತಿಸುವಂತೆ ಮಾಡಲು ಹೂಡಿಕೆಯನ್ನೂ ಮಾಡುತ್ತಾ ಬಂದಿತ್ತು.

ಆ್ಯಪಲ್‌ ಮ್ಯಾಪ್‌ನಲ್ಲಿ ಇರುವ ಹಲವು ಆಯ್ಕೆಗಳು ಗೂಗಲ್‌ ಮ್ಯಾಪ್‌ನಲ್ಲಿ ಬಂದು ವರ್ಷಗಳೇ ಕಳೆದಿವೆ. ಗೂಗಲ್‌ ಈಗಲೂ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇರುತ್ತದೆ. ಹೀಗಾಗಿ ಗೂಗಲ್‌ ಮ್ಯಾಪ್‌ಗೆ ಸರಿಸಾಟಿಯಾಗಲಾರದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ, ಕೆಲವು ವೈಶಿಷ್ಟ್ಯಗಳು ಗೂಗಲ್‌ ಮ್ಯಾಪ್‌ಗಿಂತಲೂ ಉತ್ತಮವಾಗಿರಲಿವೆ ಎನ್ನುವುದು ಕಂಪನಿಯ ವಿಶ್ವಾಸದ ನುಡಿ.

ಐಒಎಸ್‌ 13
ಐಒಎಸ್‌ 13ನಲ್ಲಿ ನ್ಯೂ ಮ್ಯಾಪ್‌ ಟೂಲ್, ಡಾರ್ಕ್‌ ಮೊಡ್‌, ನ್ಯೂ ಫೋಟೊ ಟೂಲ್ಸ್‌ ಮತ್ತು ಸ್ವೈಪೆಬಲ್‌ ಕೀಬೋರ್ಡ್‌ ಕೆಲವು ಪ್ರಮುಖ ವೈಶಿಷ್ಟ್ಯಗಳಾಗಿವೆ.

ಡಾರ್ಕ್‌ ಮೋಡ್‌
ಲೈಟ್‌ ಸ್ಕ್ರೀನ್‌ಗೆ ಬದಲಾಗಿ ಡಾರ್ಕ್‌ ಸ್ಕ್ರೀನ್‌ ಬರಲಿದೆ. ಕ್ಯಾಲೆಂಡರ್‌, ಮ್ಯೂಸಿಕ್‌ ಮತ್ತು ಫೋಟೊ ಆ್ಯಪ್‌ಗಳು ಡಾರ್ಕ್‌ ಮೋಡ್‌ನಲ್ಲಿ ಇರಲಿವೆ. ಡಾರ್ಕ್‌ ಮೋಡ್‌ನಲ್ಲಿ ಬ್ಯಾಗ್ರೌಂಡ್‌ ಬಣ್ಣ ಬದಲಾಗುತ್ತದೆ. ಲೈಟ್‌ ಕಲರ್‌ ಶೇಡ್‌ನಲ್ಲಿರುವ ಆ್ಯಪ್‌ಗಳ ಬಣ್ಣವೂ ಕಪ್ಪು ಮತ್ತು ಕಡು ಬೂದು ಬಣ್ಣಕ್ಕೆ ತಿರುಗುತ್ತವೆ. ಸಾಮಾನ್ಯವಾಗಿ ಟೆಕ್ಸ್ಟ್‌ ಕಪ್ಪು ಬಣ್ಣದಲ್ಲಿದ್ದು, ಬ್ಯಾಗ್ರೌಂಡ್‌ ಲೈಟ್‌ ಬಣ್ಣದಲ್ಲಿರುತ್ತದೆ. ಆದರೆ, ಡಾರ್ಕ್‌ ಮೋಡ್‌ನಲ್ಲಿ ಟೆಕ್ಸ್ಟ್‌ ಬಣ್ಣ ಲೈಟ್‌ ಆಗಿ, ಬ್ಯಾಗ್ರೌಂಡ್‌ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ‘ಆಂಡ್ರಾಯ್ಡ್‌ ಕ್ಯೂ’ನಲ್ಲಿಯೂ ಈ ಆಯ್ಕೆ ನಿರೀಕ್ಷೆ ಮಾಡಲಾಗುತ್ತಿದೆ.

ಸ್ವೈಪ್‌ ಕೀಬೋರ್ಡ್‌
ಆಂಡ್ರಾಯ್ಡ್‌ನಲ್ಲಿ ಬಹಳ ಹಿಂದಿನಿಂದಲೂ ಥರ್ಡ್‌ ಪಾರ್ಟಿ ಆ್ಯಪ್‌ಗಳಾದ Swype, Swiftype ಸ್ವೈಪಿಂಗ್ ಆಯ್ಕೆ ಇದೆ. ಆದರೆ ಬಹಳ ತಡವಾಗಿಯಾದರೂ ಆ್ಯಪಲ್‌ ಈ ಸೌಲಭ್ಯವನ್ನು ನೀಡುತ್ತಿದೆ. ಒಂದು ಶಬ್ಧ ಟೈಪಿಸಲು ಒಂದೊಂದೇ ಕೀಗಳನ್ನು ಒತ್ತುವ ಅಥವಾ ಮುಟ್ಟುವುದಕ್ಕೆ ಬದಲಾಗಿ ಬೆರಳನ್ನು ಎತ್ತದೇ ಏಕಕಾಲಕ್ಕೆ ನಿರ್ದಿಷ್ಟ ಅಕ್ಷರಗಳ ಮೇಲೆ ಸ್ವೈಪ್‌ ಮಾಡುವುದು. ಆ್ಯಪಲ್‌ ಇದಕ್ಕೆ QuickPath Typing ಎಂದು ಹೆಸರಿಟ್ಟಿದೆ.

ಪೋರ್ಟ್‌ರೇಟ್‌ ಲೈಟಿಂಗ್‌
ಪೊರ್ಟ್‌ರೇಟ್‌ ಫೋಟೊ ಅಂದಗೊಳಿಸಲು ಪೋರ್ಟ್‌ರೇಟ್‌ ಲೈಟಿಂಗ್‌ ಉಪಯುಕ್ತವಾಗಿದೆ. ಡೂಪ್ಲಿಕೇಟ್‌ ಫೋಟೊಗಳನ್ನು ತೆಗೆಯಲು ಮತ್ತು ಉತ್ತಮ ಫೋಟೊಗಳನ್ನು ಹೈಲೈಟ್‌ ಮಾಡುವ ಆಯ್ಕೆ ನೀಡಿದೆ. ಫೋಟೊ, ವಿಡಿಯೊ ಎಡಿಟಿಂಗ್‌ ಆಯ್ಕೆಗಳೂ ಲಭ್ಯವಾಗಲಿವೆ. ವಿಡಿಯೊ ರೊಟೇಟ್‌, ಫಿಲ್ಟರ್ಸ್‌ ಮತ್ತು ವಿಡಿಯೊ ಎಫೆಕ್ಟ್‌ ಇದೆ.

ವರ್ಷ, ತಿಂಗಳು ಮತ್ತು ದಿನಾಂಕಕ್ಕೆ ಅನುಗುಣವಾಗಿ ಫೋಟೊಗಳನ್ನು ಸ್ವಯಂಚಾಲಿತವಾಗಿ ಹೊಂದಿಸುವ ಆಯ್ಕೆಯು ಫೋಟೊ ಆ್ಯಪ್‌ನಲ್ಲಿದೆ. ಇದರಿಂದ ಫೋಟೊಗಳನ್ನು ಹುಡುಕಲು ಸುಲಭವಾಗುತ್ತದೆ.

ಫೈಂಡ್‌ ಮೈ
ಫೋನ್‌ ಕಳುವಾದರೆ ಅದನ್ನು ಹುಡುಕಲು ಫೈಂಡ್‌ ಮೈ ಫೋನ್‌ ಆಯ್ಕೆ ಹಾಗೂ ಹತ್ತಿರದಲ್ಲಿರುವ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಫೈಂಡ್‌ ಮೈ ಫ್ರೆಂಡ್ಸ್‌ ಆಯ್ಕೆಗಳೆರಡೂ ‘ಫೈಂಡ್‌ ಮೈ’ ಆ್ಯಪ್‌ನಲ್ಲಿಯೇ ಸಿಗಲಿವೆ.

ಇ–ಮೇಲ್‌ ಷೇರ್‌ ಮಾಡುವುದಿಲ್ಲ: ಇ–ಮೇಲ್‌ ಬಳಸದೇ ಆ್ಯಪಲ್‌ ಖಾತೆ ಮತ್ತು ಆ್ಯಪ್‌ಗಳಿಗೆ ಸೈನ್‌ ಇನ್‌ ಆಗುವ ಹೊಸ ವೈಶಿಷ್ಟ್ಯವನ್ನು ನೀಡಿದೆ. ಇದರಿಂದ ಥರ್ಡ್‌ ಪಾರ್ಟಿ ಆ್ಯಪ್‌ಗಳು ಹ್ಯಾಕ್‌ ಮಾಡುವುದರಿಂದ ರಕ್ಷಣೆ ಸಿಗಲಿದೆ ಎಂದು ಆ್ಯಪಲ್‌ ಹೇಳಿಕೊಂಡಿದೆ.

ಫೇಸ್‌ ಐಡಿ ಮೂಲಕ ಅಥೆಂಟಿಕೇಷನ್‌ ಕೊಟ್ಟರೆ ಸಾಕು. ಇದಕ್ಕಾಗಿ ಯಾವುದೇ ವೈಯಕ್ತಿಕ ಮಾಹಿತಿ ಗಳನ್ನು ನೀಡುವ ಅಗತ್ಯ ಇಲ್ಲ ಎಂದು ಹೇಳಿದೆ.

ಬ್ಲೂಟೂತ್‌ ಮತ್ತು ವೈ–ಫೈ ಮೂಲಕ ನಿಮ್ಮ ಲೊಕೇಷನ್‌ ಟ್ರ್ಯಾಕ್‌ ಮಾಡುವುದನ್ನು ಬ್ಲಾಕ್‌ ಮಾಡಲಾಗಿದೆ. ಪ್ರತಿ ಬಾರಿಯೂ ಲೊಕೇಷನ್‌ ಡೇಟಾ ಬಳಕೆಗೆ ಅನುಮತಿ ನೀಡುವ ನಿರ್ಧಾರದ ಆಯ್ಕೆ ಬಳಕೆದಾರನಿಗೇ ನೀಡಲಾಗಿದೆ.

ಮೆಸೇಜ್‌ ಆ್ಯಪ್‌
ನಿಮ್ಮ ಮುಖದ ಎಮೊಜಿ ಸೃಷ್ಟಿಸಬಹುದು. ನಿಮ್ಮ ಮುಖದ ಎಮೊಜಿಯಲ್ಲಿ ಬದಲಾವಣೆಗಳನ್ನೂ ಮಾಡಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT