ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಾಡ್ತಾ ಮಾತಾಡ್ತಾ ಮಿದುಳಿಗೆ ಸರ್ಜರಿ!

Last Updated 15 ಜನವರಿ 2019, 19:45 IST
ಅಕ್ಷರ ಗಾತ್ರ

‘ಮನದಲ್ಲಿ ದುಗುಡ.. ತಳಮಳ.. ಒಡಲಲ್ಲಿ ಸಂಕಟ.. ಸ್ಟ್ರೆಚರ್ ಮೇಲೆ ಕರೆದೊಯ್ಯುವಾಗ ಹೃದಯವೇ ಬಾಯಿಗೆ ಬಂದಿತ್ತು. ಆ ಕ್ಷಣಕ್ಕೆ ನನ್ನಲ್ಲಿದ್ದ ಒಂದಿಷ್ಟು ಧೈರ್ಯವೇ ನನಗೆ ಆಸರೆಯಾಗಿತ್ತು.’

‘ಕತ್ತಲ ಕೋಣೆಯೊಳಗೆ ಮಂದ ಬೆಳಕಿನ ಒಂದೆರೆಡು ಬಲ್ಬ್‌ಗಳು. ಕ್ಷೀಣಿಸುತ್ತಿರುವ ಅಂತರ್ದನಿಯನ್ನು ಅಣಕಿಸುತ್ತಿದ್ದವು. ಕಿವಿಗೆ ಬೀಳುತ್ತಿದ್ದ ಕತ್ತರಿ, ಕತ್ತಿ ಮೊದಲಾದವುಗಳ ಸದ್ದು ಮನದಲ್ಲೇ ಕತ್ತರಿಯಾಡಿಸುತ್ತಿತ್ತು. ಸಿದ್ಧತೆ ಆಯಿತೇ ಎಂಬ ವೈದ್ಯರ ಮಾತಿಗೆ, ಇನ್ನೇನು ಆಯಿತು ಎಂಬ ಸಹಾಯಕರ ಉತ್ತರ ನನ್ನಲ್ಲಿ ಬೆವರಿಳಿಸದೇ ಇರಲಿಲ್ಲ’

‘ನಿರ್ಧಾರ ಮಾಡಿಯಾಗಿತ್ತು. ಇನ್ನೊಂದೇ ಹೆಜ್ಜೆ. ಕಡೆಯದಾಗಿ ಈ ನೋವನ್ನೂ ಉಂಡು ಎಲ್ಲ ನೋವುಗಳಿಗೂ ಗುರಿಯಿಟ್ಟು ಹಿಮ್ಮೆಟ್ಟಿಸುವ ಉಮೇದು ಉಕ್ಕಿ ಬಂತು. ಈಗ ಒಂದಿಷ್ಟು ಚೈತನ್ಯ ಬಂತು. ಮನಕ್ಕೆ ಕೊಂಚ ಸಮಾಧಾನ.

‘ಏನ್ ಸಾರ್... ಏನ್ ಸಮಾಚಾರ. ಹೇಗಿದ್ದೀರಿ..?’

‘ನಾನು ಚೆನ್ನಾಗಿದ್ದೀನಿ’ ಎನ್ನುತ್ತಿದ್ದಾಗಲೇ ಪಕ್ಕದಲ್ಲಿದ್ದ ವೈದ್ಯರೊಬ್ಬರು ಇಂಜೆಕ್ಷನ್ ಚುಚ್ಚಿದರು. ಅರೆಗಳಿಗೆಯಲ್ಲೇ ತಲೆಯಲ್ಲಿ ಏನಾಗುತ್ತಿದೆ ಎಂಬ ಅರಿವು ಮಾಯವಾಯಿತು.

‘ಯಾವೂರು ಅಂದಿರಿ ನಿಮ್ಮದು..?’ ವೈದ್ಯರ ಪ್ರಶ್ನೆ.

‘ಅಪ್ಪಟ ಮಲೆನಾಡು. ಮೂಡಿಗೆರೆ ಬಳಿಯ ಕಡಗಾಲ ಗ್ರಾಮ’ ಎಂದೆ.

‘ಹೌದಾ, ಏನೇನು ಕೃಷಿ ಮಾಡ್ತೀರಿ?’

‘ನಮ್ಮದು ಕಾಫಿ ತೋಟ ಇದೆ. ಜೊತೆಗೆ ಮೆಣಸು, ಅಡಿಕೆ ಕೂಡಾ ಬೆಳೀತೀವಿ. ಕೃಷಿ ಕೈ ಹಿಡಿದಿದೆ. ಮಳೆಯೂ ಸಾಕಷ್ಟು ಸುರಿದಿದೆ. ತೋಟ ಸೊಸಗಾಗಿದೆ’ ಎಂದು ನಿತ್ಯದ ಕೆಲಸದ ಪಟ್ಟಿಯನ್ನು ಅವರ ಮುಂದಿಟ್ಟೆ.

‘ನಿಮ್ಮೂರ ಹತ್ತಿರ ದತ್ತಪೀಠ ಇದೆಯಲ್ಲಾ..’ ಅಂದರು.

‘ಹೌದು, ಒಳ್ಳೆಯ ಹವಾಗುಣ ಅಲ್ಲಿಯದು. ಮುಳ್ಳಯ್ಯನ ಗಿರಿಯ ತುತ್ತತುದಿಯಲ್ಲಿ ಮೋಡಗಳ ಲಾಸ್ಯ ನೋಡೋದೆ ಚೆಂದ’ ಅಂದೆ. ಹೀಗೇ ಅದೂ ಇದೂ ಅಂತಾ ಸಾಗಿತ್ತು ನಮ್ಮ ಮಾತಿನ ಬಂಡಿ..

‘ಆಯ್ತು. ಇನ್ನೇನೂ ಚಿಂತೆಯಿಲ್ಲ. ಎಲ್ಲವೂ ಸರಿಹೋಯ್ತು. ನೀವಿನ್ನು ಆರಾಮಾಗಿರಿ’ ಅಂದರು ಡಾಕ್ಟರ್.

‘ಹೌದಾ ಡಾಕ್ಟ್ರೇ.. ಆಪರೇಷನ್ ಯಾವಾಗ ಶುರು ಮಾಡ್ತೀರಿ’ ಎಂದೆ ದೈನ್ಯದಿಂದ..

ಮುಗೀತಲ್ಲಾ..! ಅಂದು ಬಿಡೋದೇ ಅವ್ರು!!

ನನಗೆ ಪರಮಾಶ್ಚರ್ಯ. ಡಾಕ್ಟರ್ ಇನ್ನೂ ಸಿದ್ಧತೆ ಮಾಡಿಕೊಳ್ತಿದ್ದಾರೆ. ಅಲ್ಲಿವರೆಗೂ ಏನೇನೋ ಪ್ರಶ್ನೆ ಕೇಳ್ತಿದ್ದಾರೆ ಅಂತಾನೇ ನಾನಂದುಕೊಂಡಿದ್ದೆ. ಹೌದು.. ಇಷ್ಟೆಲ್ಲಾ ವಿವರವಾಗಿ ಮಾತನಾಡುವ ಹೊತ್ತಿಗೆ ಆಪರೇಷನ್ ಮುಗಿದಿತ್ತು. ಮಿದುಳಿನ ಟ್ಯೂಮರ್ ಹೊರಬಂದಿತ್ತು. ಇದಾವುದರ ಪರಿವೆಯೇ ಇಲ್ಲದೆ ನಾನು ವೈದ್ಯರೊಂದಿಗೆ ಎರಡು ಗಂಟೆ ಹರಟಿದ್ದೆ. ಅವರು ಮಾತಾಡುತ್ತಲೇ ನನ್ನ ಮಿದುಳಿನಲ್ಲಿ ಚಿಗುರಿದ್ದ ಟ್ಯೂಮರ್ ಹೊಸಕಿ ಹಾಕಿದ್ದರು.

***
ಸುಂದರೇಶ್ ಅವರು ತಮ್ಮ ಹಾಗೂ ವೈದ್ಯರ ನಡುವಿನ ಸಂವಾದದ ಕತೆ ಹೇಳಿ ಮುಗಿಸುವ ಹೊತ್ತಿಗೆ ಆಪರೇಷನ್ ಆಗಿ ಮೂರು ವಾರ ಕಳೆದಿತ್ತು. ಅವರಲ್ಲಿ ನವಚೈತನ್ಯ ಮನೆಮಾಡಿತ್ತು. 32 ದಿನ ರೇಡಿಯೋ ಥೆರಪಿ ಮಾಡಿಸುವಂತೆ ಹೇಳಿದ್ದಾರೆ. ಅದೊಂದು ಮುಗಿದರೆ ಏನೂ ತೊಂದರೆಯಿಲ್ಲ ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟರು ಸುಂದರೇಶ್.

ತಮ್ಮ 50ನೇ ವಯಸ್ಸಿನಲ್ಲಿ ಸುಂದರೇಶ್ ಅವರಿಗೆ ಹೊಸ ಜೀವನ ನೀಡಿದ್ದು ಬೆಂಗಳೂರಿನ ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆ. ರೋಗಿಯಲ್ಲಿದ್ದ ಟ್ಯೂಮರ್, ಮಿದುಳಿನಲ್ಲಿರುವ ‘ಶಬ್ದ ಹೊರಡಿಸುವ/ ಮಾತನಾಡುವ’ (ಸ್ಪೀಚ್ ಏರಿಯಾ) ಜಾಗದವರೆಗೂ ವ್ಯಾಪಿಸಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಮಾತನಾಡುವ ಶಕ್ತಿಯನ್ನೇ ಕಳೆದುಕೊಳ್ಳುವ ಅಥವಾ ದೇಹದ ಯಾವುದೇ ಭಾಗದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆ ಇತ್ತು.

ಶಸ್ತ್ರಚಿಕಿತ್ಸೆ ವೇಳೆ ಮಾತನಾಡುವುದು ನಿಂತಿತು ಎಂದರೆ, ಮಿದುಳಿನಲ್ಲಿರುವ ಸ್ಪೀಚ್ ಏರಿಯಾದ ನರಗಳಿಗೆ ಹಾನಿಯಾಗಿದೆ ಎಂದೇ ಅರ್ಥ. ನರರೋಗ ತಜ್ಞ ಡಾ.ವೆಂಕಟರಮಣ ಅವರು ಇದನ್ನು ಸವಾಲಾಗಿ ಸ್ವೀಕರಿಸಿ, ರೋಗಿಯನ್ನು ಎಚ್ಚರವಿಟ್ಟುಕೊಂಡೇ ಆಪರೇಷನ್ ಮಾಡುವ ನಿರ್ಧಾರಕ್ಕೆ ಬಂದರು. ಸತತ ಎರಡು ಗಂಟೆ ಕಾಲ ಅವರನ್ನು ಮಾತನಾಡಿಸುತ್ತಲೇ ಇದ್ದರು. ಶಸ್ತ್ರಚಿಕಿತ್ಸೆಯುದ್ದಕ್ಕೂ ಸಂವಾದ ಸಾಗಿತ್ತು. ಸುಂದರೇಶ್ ಅವರು ವೈದ್ಯರಿಗೆ ಸಂಪೂರ್ಣ ಸಹಕಾರ ನೀಡಿದ್ದರಿಂದ, ವೈದ್ಯರಿಗೆ ಎದುರಾಗಿದ್ದ ಸವಾಲು ಸಾರ್ಥಕತೆಯಲ್ಲಿ ಮುಕ್ತಾಯವಾಯಿತು.

ಹೀಗಿತ್ತು ಅವೇಕ್ ಬ್ರೈನ್ ಸರ್ಜರಿ...

ದೇಹದ ಪ್ರತಿ ಜಾಗವನ್ನೂ ಮಿದುಳು ನಿಯಂತ್ರಿಸುತ್ತದೆ. ಮಾತು, ಕೈಕಾಲು, ಕಣ್ಣಿನ ಚಲನೆ.. ಹೀಗೆ ಎಲ್ಲವೂ ನಿಯಂತ್ರಿತವಾಗುವುದು ಇಲ್ಲಿಯೇ. ಆದರೆ ಮಾತು ಸ್ವಲ್ಪ ಭಿನ್ನ. ಅದರ ಜಾಲ ಮಿದುಳಿನ ಹಲವು ಕಡೆ ವಿಸ್ತರಿಸಿರುತ್ತದೆ. ಟ್ಯೂಮರ್ ಬೆಳೆದಂತೆಲ್ಲಾ ಆ ಜಾಗಗಳು ಆಚೀಚೆ ಆಗುತ್ತವೆ. ಎಷ್ಟೇ ಸ್ಕ್ಯಾನ್ ಮಾಡಿ, ಮುಂಜಾಗ್ರತೆ ವಹಿಸಿದ್ದರೂ ಮಾತಿನ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಮಾತಿನ ಜಾಲದ (ನೆಟ್‍ವರ್ಕ್) ಯಾವುದೇ ಭಾಗಕ್ಕೆ ಹಾನಿಯಾದರೂ ರೋಗಿಯ ಮಾತೇ ನಿಂತು ಹೋಗಬಹುದು. ಹೀಗಾಗಿ ಇದು ನಿಜಕ್ಕೂ ಸವಾಲಿನ ಆಪರೇಷನ್.

ರೋಗಿಯನ್ನು ಎಚ್ಚರವಿಟ್ಟುಕೊಂಡು ಶಸ್ತ್ರಚಿಕಿತ್ಸೆ ನಡೆಸುವುದು ಹೊಸ ಟ್ರೆಂಡ್. ಮಿದುಳಿನ ಕ್ರಿಟಿಕಲ್ ಏರಿಯಾದಲ್ಲಿ ಟ್ಯೂಮರ್ ಇದ್ದಾಗ ಅದನ್ನು ತೆಗೆಯಬೇಕಾದರೆ ಅವೇಕ್ ಬ್ರೈನ್ ಸರ್ಜರಿ ಮಾತ್ರವೇ ದಾರಿ.

ವಿಧಾನ: ಆಪರೇಷನ್ ಮುನ್ನಾದಿನ ಅವೇಕ್ ಸರ್ಜರಿ ಬಗ್ಗೆ ರೋಗಿಗೆ ಸಮಗ್ರ ಮಾಹಿತಿ ನೀಡಿ, ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸಲಾಯಿತು. ಆಪರೇಷನ್‍ನ ದಿನ ಮೊದಲಿಗೆ ಲೋಕಲ್ ಅನಸ್ತೇಷಿಯಾ ನೀಡಲಾಯಿತು. ಇದು ತಲೆಬುರುಡೆ, ಮೂಳೆಗಳು ಹಾಗೂ ಮಿದುಳಿನ ಪದರಗಳಿಗೆ ಸಂಪರ್ಕವಿರುವ ನರಗಳ ಸ್ಪರ್ಶಜ್ಞಾನವನ್ನು ತಡೆಹಿಡಿಯುತ್ತದೆ. ಪ್ರೊಪೊಫಾಲ್ ಎಂಬ ವಿಶೇಷವಾದ ಔಷಧಿ ಪೂರೈಕೆ ನಿಲ್ಲಿಸಿದಾಗ ರೋಗಿ ಎಚ್ಚರಗೊಳ್ಳುತ್ತಾನೆ. ಆಗ ಅವರ ಜೊತೆ ಮಾತನಾಡುತ್ತಾ ಟ್ಯೂಮರ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಾತು ನಿಲ್ಲುತ್ತದೆ ಎಂಬ ಭೀತಿಯೂ ದೂರವಾಯಿತು.

‘ಸುಂದರೇಶ್ ಅವರು ತಮ್ಮ ಕಾಫಿ ಪ್ಲಾಂಟೇಷನ್ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಅವರ ಸಹಕಾರ ಆಪರೇಷನ್‍ ಯಶಸ್ಸಿಗೆ ಸಹಕಾರಿಯಾಯಿತು’ ಎನ್ನುತ್ತಾರೆ ಶಸ್ತ್ರಚಿಕಿತ್ಸೆ ನಡೆಸಿದ ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಯ ಖ್ಯಾತ ನರರೋಗ ತಜ್ಞ
ಡಾ.ಎನ್.ಕೆ.ವೆಂಕಟರಮಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT