ಮಂಗಳವಾರ, ಜೂನ್ 28, 2022
24 °C

ತಂತ್ರಜ್ಞಾನ: ವಿಮಾನಯಾನದಲ್ಲಿ ‘ಡಿಜಿ ಯಾತ್ರಾ’– ಏನೇನು ವಿಶೇಷತೆ?

ಉದಯ ಶಂಕರ ಪುರಾಣಿಕ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಉಡಾನ್‌ ಯೋಜನೆಯಿಂದಾಗಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ವಿಮಾನಯಾನ ಮಾಡುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಉದಾಹರಣೆಗೆ, ಪ್ರತಿದಿನ ಸರಾಸರಿ ಮೂವತ್ತು ಸಾವಿರ ಪ್ರಯಾಣಿಕರು ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ. ಕೋವಿಡ್‌-19ರಿಂದ ಸ್ಥಗಿತವಾಗಿರುವ ಅಂತರರಾಷ್ಟ್ರೀಯ ವಿಮಾನಯಾನ ಪೂರ್ಣ ಪ್ರಮಾಣದಲ್ಲಿ ಮತ್ತೆ ಪ್ರಾರಂಭವಾದರೆ, ಪ್ರತಿದಿನ ಬೆಂಗಳೂರಿನ ವಿಮಾನ ನಿಲ್ದಾಣವನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ವಿಮಾನ ಹೊರಡುವ ಸಮಯಕ್ಕಿಂತ ಕೆಲವು ಗಂಟೆಗಳ ಕಾಲ ಮೊದಲು ವಿಮಾನ ನಿಲ್ದಾಣವನ್ನು ತಲುಪಬೇಕು. ವಿಮಾನ ನಿಲ್ದಾಣ ಪ್ರವೇಶಿಸಲು, ಸರತಿಸಾಲಿನಲ್ಲಿ ನಿಂತು ಸುರಕ್ಷತಾ ಸಿಬ್ಬಂದಿಗೆ ಐಡಿ, ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ತೋರಿಸಬೇಕು. ಲಗೇಜ್‌ ಚೆಕ್‌ ಇನ್‌ ಮಾಡಲು, ಬೋರ್ಡಿಂಗ್‌ ಪಾಸ್‌ ಪಡೆಯಲು ಮತ್ತೊಮ್ಮೆ ಸರತಿಸಾಲಿನಲ್ಲಿ ನಿಲ್ಲಬೇಕು. ಇದಾದ ನಂತರ ಬೋರ್ಡಿಂಗ್‌ ಏರಿಯಾ ಪ್ರವೇಶಿಸುವ ಮೊದಲು ಸೆಕ್ಯೂರಿಟಿ ತಪಾಸಣೆಗಾಗಿ ಸರತಿಸಾಲಿನಲ್ಲಿ ನಿಲ್ಲಬೇಕು. ವಿಮಾನ ಹೊರಡಲು ಸಿದ್ಧವಾದಾಗ, ಬೋರ್ಡಿಂಗ್‌ ಏರಿಯಾದಿಂದ ವಿಮಾನದ ಹತ್ತಿರ ಹೋಗಲು ಸರತಿಸಾಲಿನಲ್ಲಿ ನಿಂತು ವಿಮಾನಯಾನ ಸಿಬ್ಬಂದಿಗೆ ಬೋರ್ಡಿಂಗ್‌ ಪಾಸ್‌ ತೋರಿಸಬೇಕು. ವಿಮಾನ ಪ್ರವೇಶಿಸುವ ಮೊದಲು ಮತ್ತೊಮ್ಮೆ ಸರತಿಸಾಲಿನಲ್ಲಿ ನಿಂತು ಬೋರ್ಡಿಂಗ್‌ ಪಾಸ್‌ ತೋರಿಸಿ, ಸೆಕ್ಯುರಿಟಿ ಚೆಕ್‌ಗೆ ಒಳಪಡಬೇಕು.

ಇಷ್ಟೊಂದು ಸರತಿಸಾಲಿನಲ್ಲಿ ನಿಲ್ಲುವುದು ಮತ್ತು ಇಷ್ಟೊಂದು ಹಂತದಲ್ಲಿ ಸೆಕ್ಯುರಿಟಿ ತಪಾಸಣೆಗಾಗಿ ಪ್ರಯಾಣಿಕರ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಮತ್ತೊಂದು ಕಡೆ, ವಿವಿಧ ಹಂತದಲ್ಲಿ ಪ್ರಯಾಣಿಕರಿಗೆ ನೆರವಾಗಲು ಸಾಕಷ್ಟು ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆ ನಿಯೋಜಿಸಬೇಕಾಗುತ್ತದೆ.

ಪ್ರಯಾಣಿಕರಿಗೆ ಸುಲಭವಾಗಿ ವಿಮಾನಯಾನ ಮಾಡಲು ಸಾಧ್ಯವಾಗಲು, ಭಾರತ ಸರ್ಕಾರ ಕಂಪ್ಯೂಟರ್‌ ವಿಷನ್‌ ತಂತ್ರಜ್ಞಾನ ಆಧಾರಿತ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಹಂತಹಂತವಾಗಿ ಭಾರತದ ಎಲ್ಲ ವಿಮಾನ ನಿಲ್ದಾಣದಲ್ಲಿ ಜಾರಿಗೊಳಿಸುತ್ತಿದೆ.

 ಈ ಸೌಲಭ್ಯವನ್ನು ಪಡೆಯುವ ಇಚ್ಛಿಸುವ ಪ್ರಯಾಣಿಕರು, ಈ ಉದ್ದೇಶಕ್ಕಾಗಿ ಲಭ್ಯವಾಗುವ ಜಾಲತಾಣದಲ್ಲಿ ತಮ್ಮ ಹೆಸರು, ಇ-ಮೇಲ್‌ ವಿಳಾಸ, ಮೊಬೈಲ್‌ ಫೋನ್‌ ಸಂಖ್ಯೆ ಹಾಗೂ ಐಡಿ ಮಾಹಿತಿ (ಆಧಾರ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್‌ ಇತ್ಯಾದಿ) ನೀಡಿದರೆ ಅವರಿಗೊಂದು ಡಿಜಿಯಾತ್ರಾ ಐಡಿ ದೊರೆಯುತ್ತದೆ.

 ವಿಮಾನಯಾನಕ್ಕಾಗಿ ಟಿಕೆಟ್‌ ಖರೀದಿಸುವಾಗ ಈ ಡಿಜಿ ಯಾತ್ರಾ ಐಡಿಯನ್ನು ಪ್ರಯಾಣಿಕರು ನೀಡಬೇಕು. ಅವರು ವಿಮಾನಯಾನ ಪ್ರಾರಂಭಿಸುವ ವಿಮಾನ ನಿಲ್ದಾಣಕ್ಕೆ ಡಿಜಿ ಯಾತ್ರಾ ಐಡಿಯನ್ನು ಹಾಗೂ ಟಿಕೆಟ್‌ ಮಾಹಿತಿಯನ್ನು ವಿಮಾನಯಾನ ಸಂಸ್ಥೆ ತಲುಪಿಸುತ್ತದೆ.

 ಮೊದಲ ಸಲ ಡಿಜಿ ಯಾತ್ರಾ ಐಡಿ ಪ್ರಯಾಣ ಮಾಡುವಾಗ ಮಾತ್ರ ವಿಮಾನ ನಿಲ್ದಾಣದಲ್ಲಿರುವ ನೊಂದಣಿ ಕಿಯೋಸ್ಕ್‌ನಲ್ಲಿ ಪ್ರಯಾಣಿಕರ ಐಡಿಯನ್ನು ಪರಿಶೀಲಿಸಲಾಗುತ್ತದೆ. ಪರಿಶೀಲನೆ ಯಶಸ್ವಿಯಾದರೆ, ಪ್ರಯಾಣಿಕರ ಫೋಟೊವನ್ನು ಅವರ ಡಿಜಿ ಯಾತ್ರಾ ಐಡಿಯಲ್ಲಿ ಸೇರಿಸಲಾಗುತ್ತದೆ.‌

 ಇಷ್ಟು ಮಾಡಿದ ನಂತರ, ಎಷ್ಟು ಬಾರಿ ವಿಮಾನಯಾನ ಮಾಡಿದರೂ, ಪ್ರಯಾಣಿಕರನ್ನು ‘ಐಡಿ ತೋರಿಸಿ’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಅಥವಾ ಸುರಕ್ಷತಾ ಸಿಬ್ಬಂದಿ ಕೇಳುವುದಿಲ್ಲ.

 ಡಿಜಿ ಯಾತ್ರಾ ಐಡಿ ಹೊಂದಿರುವ ಪ್ರಯಾಣಿಕರು ವಿಮಾನಯಾನ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಾಗ, ಸ್ವಯಂಚಾಲಿತ ದ್ವಾರದಲ್ಲಿ ತಮ್ಮ ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರ ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ಮಾಹಿತಿಯನ್ನು ಹಾಗೂ ಡಿಜಿ ಯಾತ್ರಾ ಐಡಿಯಲ್ಲಿರುವ ಫೋಟೊದ ಜೊತೆಗೆ ಪ್ರಯಾಣಿಕರ ಹೋಲಿಕೆಯನ್ನು ಮಾಡಿ ಪರಿಶೀಲಿಸಲಾಗುತ್ತದೆ. ಮಾಹಿತಿ ಮತ್ತು ಫೋಟೊ ಹೋಲಿಕೆಯಾದರೆ, ಸ್ವಯಂಚಾಲಿತ ದ್ವಾರ ತೆರೆದುಕೊಳ್ಳುತ್ತದೆ ಮತ್ತು ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಪ್ರವೇಶಿಸಬಹುದು.

 ಅಲ್ಲಿಂದ ಪ್ರಯಾಣಿಕರು ನೇರವಾಗಿ ಸೆಕ್ಯೂರಿಟಿ ತಪಾಸಣ ವಲಯಕ್ಕೆ ಹೋಗಬಹುದು; ಅಲ್ಲಿ ತಪಾಸಣೆಯ ನಂತರ ಬೋರ್ಡಿಂಗ್‌ ಏರಿಯಾವನ್ನು ಪ್ರವೇಶಿಸಬಹುದು.

ಪ್ರಯಾಣಿಕರಿಗೆ ಹಲವು ಬಾರಿ ಸರತಿಸಾಲಿನಲ್ಲಿ ನಿಲ್ಲುವುದು ಡಿಜಿ ಯಾತ್ರಾ ಸೌಲಭ್ಯದಿಂದ ತಪ್ಪುತ್ತದೆ; ಐಡಿ ಮತ್ತು ಬೋರ್ಡಿಂಗ್‌ ಪಾಸ್‌ ತೋರಿಸುವುದೂ ತಪ್ಪುತ್ತದೆ. ಅಧಿಕೃತ ಪ್ರಯಾಣಿಕರು ಮತ್ತು ಸಿಬ್ಬಂದಿಯ ಹೊರತಾಗಿ ಬೇರೆ ಯಾರಿಗೂ ವಿಮಾನ ನಿಲ್ದಾಣ ಪ್ರವೇಶಿಸುವ ಅವಕಾಶ ಇರುವುದಿಲ್ಲವಾದ ಕಾರಣ ವಿಮಾನ ನಿಲ್ದಾಣ ಮತ್ತು ವಿಮಾನಯಾನದ ಸುರಕ್ಷತೆಯೂ ಹೆಚ್ಚಾಗುತ್ತದೆ.

ಡಿಜಿ ಯಾತ್ರಾ ಸೌಲಭ್ಯವನ್ನು ಮೊದಲು ಪ್ರಾಯೋಗಿಕವಾಗಿ ಬೆಂಗಳೂರು ಮತ್ತು ಹೈದರಾಬಾದಿನ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗಿತ್ತು. ಈಗ ಮೊದಲ ಹಂತವಾಗಿ ಪುಣೆ, ವಿಜಯವಾಡ, ಕೋಲ್ಕತ್ತಾ ಮತ್ತು ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಅನುಷ್ಠಾನಗೊಳಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು