ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ನೂಲಿನಲ್ಲಿ ಅರಳಿದ ಕಸೂತಿ

Last Updated 3 ಫೆಬ್ರುವರಿ 2023, 19:45 IST
ಅಕ್ಷರ ಗಾತ್ರ

ನವಿಲಿನ ಚಿತ್ತಾರ, ಜಾತ್ರೆ ತೇರಿನ ಸಡಗರ, ಬಾಸಿಂಗ, ತೊಟ್ಟಿಲ ಸಂಭ್ರಮ, ಕೋಳಿ, ಜಿಂಕೆ, ಆನೆ ಹೀಗೆ ಪ್ರಕೃತಿಯ ರಮ್ಯತೆ ಹಾಗೂ ಜಾನಪದದ ಸೊಗಡು ಇವೆಲ್ಲವೂ ಕಸೂತಿಯೊಳಗೆ ಮೂಡಿಬಿಟ್ಟರೆ ಅದರ ಸೊಗಸೆ ಬೇರೆ..!

ಧಾರವಾಡದ ಕಸೂತಿ ಎಂದೇ ಖ್ಯಾತಿಯಾಗಿ ಇದೀಗ ಕರ್ನಾಟಕ ಕಸೂತಿ ಎಂಬ ಭೌಗೋಳಿಕ ಮಾನ್ಯತೆ(ಜಿಐ ಟ್ಯಾಗ್) ಹೊಂದಿರುವ ಈ ‘ಕಸೂತಿ ಕಲೆ’ ಫ್ಯಾಷನ್‌ ಲೋಕದಲ್ಲಿ ತನ್ನದೇ ಆದ ಹೆಜ್ಜೆ ಉಳಿಸಿಕೊಂಡಿದೆ. ಕೇಂದ್ರ ಬಜೆಟ್ ಮಂಡನೆಗೆ ಬಂದ ನಿರ್ಮಲಾ ಸೀತಾರಾಮನ್ ಅವರು ಧಾರವಾಡ ಕಸೂತಿಯಿದ್ದ ಕಪ್ಪು ಅಂಚಿನ ಕೆಂಪು ಬಣ್ಣದ ಇಳಕಲ್ ರೇಷ್ಮೆ ಸೀರೆಯುಟ್ಟಿದ್ದು ದೇಶ, ವಿದೇಶಗಳಲ್ಲಿ ಹೆಚ್ಚು ಸುದ್ದಿಯಾಯಿತು. ಆದರೆ ಅಲ್ಲಿ ಗೆದ್ದಿದ್ದು ಕರ್ನಾಟಕದ ನೇಕಾರ ಮಹಿಳೆಯರ ಜೀವಂತ ಕಸೂತಿ ಕಲೆ.

ಧಾರವಾಡದ ಆರತಿ ಹಿರೇಮಠ ಅವರ ಆರತಿ ಕ್ರಾಫ್ಟ್ಸ್‌ನಲ್ಲಿರುವ ಮಹಿಳೆಯರಿಗೆ ಈಗ ಬಿಡುವಿಲ್ಲದ ಕೆಲಸ. ಜನಪ್ರಿಯವಾಗಿರುವ ಧಾರವಾಡದ ಈ ಕಸೂತಿಗೆ ದೇಶ ವಿದೇಶಗಳ ಮಹಿಳೆಯರಿಂದ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದೆ.

ಸುಮಾರು ಮೂರು ಶತಮಾನಗಳಿಗೂ ಹಿಂದಿನಿಂದ ತಲೆಮಾರಿನಿಂದ ತಲೆಮಾರಿಗೆ ವರ್ಗಾ ವಣೆಯಾಗುತ್ತಲೇ ಬಂದಿರುವ ಕಸೂತಿ ಕಲೆಯನ್ನು ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ನೇಕಾರ ಸಮುದಾಯದ ಹೆಣ್ಣುಮಕ್ಕಳು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಆಧುನಿಕ ಕಾಲದಲ್ಲಿ ಈ ಕಲೆಯನ್ನು ಇತರ ಸಮುದಾಯದವರೂ ಕಲಿತಿದ್ದಾರೆ. ಮನೆಯಲ್ಲೇ ಕೂತು ಕಸೂತಿ ಹಾಕಿ ಕೊಡುವ ಮೂಲಕ ಕುಟುಂಬ ನಡೆಸುವಷ್ಟು ಆದಾಯ ಇದೆ.

ವಿವಿಧ ಶೈಲಿಗಳು

ಧಾರವಾಡದ ಈ ಕಲೆಯಲ್ಲಿ ಮುಖ್ಯವಾಗಿ ಮುರಗಿ, ನೇಯ್ಗಿ, ಮೆಂತೆ ಹಾಗೂ ಗಾಂವಟಿ ಎಂಬ ಪ್ರಮುಖ ಕಸೂತಿ ಶೈಲಿಗಳಿವೆ. ಅದರಲ್ಲೂ ಕಸೂತಿ ನಂತರ ಸೀರೆಯ ಮೇಲ್ಭಾಗ ಹಾಗೂ ಕೆಳಗೆ ವಿನ್ಯಾಸ ಒಂದೇ ರೀತಿಯಲ್ಲಿ ಕಂಡು ಬರುವ ಗಾಂವಟಿ (ಈಗ ಇದನ್ನು ಗಾವಂತಿ ಎಂದೂ ಕರೆಯಲಾಗುತ್ತದೆ) ವಿನ್ಯಾಸದ ಸೀರೆಗಳು ಹೆಚ್ಚು.

ನೇಯ್ಗೆಯಲ್ಲಿ ನೂಲುಗಳು ಅಷ್ಟಾಗಿ ಒತ್ತೊತ್ತಾಗಿರದ ಲಿನೆನ್‌ ಹೊರತುಪಡಿಸಿದರೆ, ಉಳಿದ ಎಲ್ಲಾ ರೀತಿಯ ಬಟ್ಟೆಗಳ ಮೇಲೂ ಕಸೂತಿಯನ್ನು ಕೂರಿಸಬಹುದು. ಅದರಲ್ಲೂ ಕೆಂಪು ಅಂಚಿನ ಕಪ್ಪು ಸೀರೆಗಳು ಈ ಕಸೂತಿಯ ಅಂದ ಹೆಚ್ಚಿಸುತ್ತವೆ. ಚಂದ್ರಕಾಳಿ ಸೀರೆ ಎಂದೇ ಅಂದು ಜನಪ್ರಿಯವಾಗಿದ್ದ ಕಪ್ಪು ಸೀರೆ ಹಾಗೂ ಕಸೂತಿ ವಿನ್ಯಾಸ ಇಂದಿಗೂ ಅದಕ್ಕೇ ಬೇಡಿಕೆ ಹೊಂದಿದೆ.

ಕಸೂತಿ ಸಲ್ವಾರ್‌ಗೂ ಬೇಡಿಕೆ

ಇಲ್ಲಿ ಸೀರೆಯಷ್ಟೇ ಅಲ್ಲದೆ, ಕಸೂತಿ ಇರುವ ಕಣದ ವಸ್ತ್ರ, ಸಲ್ವಾರ್, ಪುರುಷರಿಗೆ ಜುಬ್ಬಾ ಹಾಗೂ ಬಂದ್‌ ಗಲಾ ಕೋಟ್‌, ಗೋಡೆಗೆ ಹಾಕುವ ಆಲಂಕಾರಿಕ ವಸ್ತ್ರ, ಬಾಗಿಲಿಗೆ ಹಾಕುವ ಕಣದ ತೋರಣ, ಕಸೂತಿ ಇರುವ ಪರ್ಸ್ ಹಾಗೂ ವ್ಯಾನಿಟಿ ಬ್ಯಾಗ್‌, ಯುವತಿಯರು ಜೀನ್ಸ್ ಮೇಲೆ ತೊಡುವ ಆಧುನಿಕ ಟಾಪ್‌ ಮೇಲೂ ಕಸೂತಿಯ ಚಿತ್ತಾರಗಳನ್ನು ಬಿಡಿಸುವ ಮೂಲಕ ಹೊಸ ಪೀಳಿಗೆಗೂ ಕಸೂತಿ ದಾಟಿಸುವ ಕೆಲಸ.

ಹಳೇ ವಿನ್ಯಾಸವೇ ಈಗ ಟ್ರೆಂಡ್‌

‘ಹತ್ತಿಕಾಳು ಬುಟ್ಟ, ಗಂಡೋಳಿ ಬಟ್ಟ, ಗೋಪುರ, ತೇರು, ಬಾಸಿಂಗ, ತೊಟ್ಟಿಲು, ಪಲ್ಲಕ್ಕಿ, ಬಾಗಿದ ನವಿಲು, ಕುಣಿಯುವ ನವಿಲು, ಹೀಗೆ ಅಂದು ತಮ್ಮ ಸುತ್ತಮುತ್ತ ಕಾಣುವ ಚಿತ್ರಣಗಳನ್ನೇ ಬಣ್ಣ ಬಣ್ಣದ ನೂಲಿನಿಂದ ಚಿತ್ರಗಳ ರೂಪ ನೀಡುತ್ತಿದ್ದ ಕಸೂತಿ ಕಲೆಯು ಆಧುನಿಕತೆಯ ಕಾಲದಲ್ಲೂ ತಮ್ಮ ಸ್ವರೂಪಗಳನ್ನು ಬದಲಿಸಲಾರದಷ್ಟು ಬೇಡಿಕೆಯನ್ನು ಪಡೆದುಕೊಂಡಿವೆ.

‘ಆದರೆ ಕೈಯಿಂದ ಹಾಕುವ ಕಸೂತಿ ವಿನ್ಯಾಸವನ್ನೇ ಹೋಲುವ, ಯಂತ್ರಗಳಿಂದ ಸಿದ್ಧಗೊಂಡ ಅಥವಾ ಪ್ರಿಂಟ್ ಹಾಕಿರುವ ಸೀರೆಗಳು ಸಾಕಷ್ಟು ಬಂದಿವೆ. ನಿರ್ಮಲಾ ಸೀತಾರಾಮನ್ ಅವರು ಕಸೂತಿ ಸೀರೆ ತೊಟ್ಟಿದ್ದು ಸುದ್ದಿಯಾದ ನಂತರ, ಆನ್‌ಲೈನ್‌ನಲ್ಲಿ ನೈಜ ಕಸೂತಿ ಸೀರೆಯ ಚಿತ್ರದ ಕೆಳಗೆ ಅದೇ ವಿನ್ಯಾಸ ಹೊಂದಿರುವ ಸೀರೆಗಳು ₹2ಸಾವಿರಕ್ಕೆ ಲಭ್ಯ ಎಂಬ ಜಾಹೀರಾತುಗಳು ಹರಿದಾಡುತ್ತಿವೆ. ಅಸಲಿ ವಿನ್ಯಾಸ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ನಕಲು ಮಾಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಹೀಗಿದ್ದರೂ ಕೈ ಕಸೂತಿಗೆ ಬೇಡಿಕೆ ಹೆಚ್ಚು ಇದೆ.

ಯಂತ್ರದಿಂದ ಮಾಡಿದ ಕಸೂತಿಗೆ ಕೆಳಗೆ ಒಂದು ಪಫ್ ನೀಡಲಾಗಿರುತ್ತದೆ. ಆದರೆ ಕೈಯಲ್ಲಿ ಹಾಕಲಾದ ಕಸೂತಿಯಲ್ಲಿ ಇದು ಇರದು. ಕೈಯಲ್ಲಿ ಹಾಕಿರುವ ಕಸೂತಿ ನೀಡುವ ಅನುಭೂತಿಯೇ ಅನನ್ಯ. ಅದನ್ನು ಅನುಭವಿಸಿದವರು ಕಸೂತಿಯನ್ನು ಎಂದೂ ಬಿಡರು. ಹಿಂದಿನ ಕಸೂತಿ ಶೈಲಿಯನ್ನೇ ಅಳವಡಿಸಿಕೊಂಡು ಅವುಗಳನ್ನು ಜೋಡಿಸುವ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅದಕ್ಕೂ ಉತ್ತಮ ಬೇಡಿಕೆ ಇದೆ.

ಹೆಚ್ಚಿದ ಬೇಡಿಕೆ

ಉತ್ತರ ಭಾರತದಿಂದ ಬೇಡಿಕೆ ಹೆಚ್ಚಿದೆ. ಅಮೆರಿಕ, ಸಿಂಗಪೂರ್‌ಗಳಿಂದಲೂ ಬೇಡಿಕೆ ಸಾಕಷ್ಟಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿಂದ ಪ್ರತಿ ವರ್ಷ ವಿದ್ಯಾರ್ಥಿಗಳ ತಂಡ ಕಸೂತಿ ಕಲಿಯಲು ಬರುತ್ತಾರೆ. ಹೀಗೆ ಹಿಂದೆ ಬಂದಿದ್ದ ತಂಡವೊಂದು ಫೇಸ್‌ಬುಕ್ ಪುಟ ತೆರೆದು, ಮಾರುಕಟ್ಟೆ ವಿಸ್ತರಿಸುವ ಕೌಶಲ ಕಲಿಸಿದ್ದರು. ಅದಾದ ನಂತರ ಮೇಳಗಳಿಗೆ ಹೋಗಿ ಸೀರೆ ಪ್ರದರ್ಶನ ಹಾಗೂ ಮಾರಾಟ ಮಾಡುವುದನ್ನು ನಿಲ್ಲಿಸಿದ್ದೇವೆ. ಅತಿ ಶೀಘ್ರದಲ್ಲಿ ಅಂತರ್ಜಾಲ ತಾಣದ ಮೂಲಕವೂ ಕಸೂತಿ ವಸ್ತ್ರಗಳ ಮಾರಾಟ ಆರಂಭಿಸಲಾಗುವುದು ಎನ್ನುತ್ತಾರೆ ಧಾರವಾಡದ ಆರತಿ ಹಿರೇಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT