ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಜಿಟಲ್’ ತಂತ್ರಕ್ಕೆ ‘ಮಾನವಿಕ’ ಸ್ಪರ್ಶ

Last Updated 10 ಆಗಸ್ಟ್ 2022, 3:09 IST
ಅಕ್ಷರ ಗಾತ್ರ

ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಮ್ಮನ್ನು ನಿಬ್ಬೆರಗಾಗಿಸುವ ಅನೇಕ ಬೆಳವಣಿಗೆಗಳಾಗುತ್ತಿವೆ. ಬೇಕಾದರೆ ಒಮ್ಮೆ ಆಟೊಮೊಬೈಲ್ ಕ್ಷೇತ್ರವನ್ನು ಗಮನಿಸಿ ನೋಡಿ. ಅಲ್ಲಿ ಕಂಪನಿಗಳು ಮಾನವನ ನಡವಳಿಕೆಯನ್ನು ಗ್ರಹಿಸಿ, ಅದಕ್ಕನುಗುಣವಾಗಿ ಸುರಕ್ಷಿತ, ಸ್ವಯಂ-ಚಾಲನಾ ಕಾರುಗಳನ್ನು ನಿರ್ಮಿಸುತ್ತಿವೆ. ಇದಕ್ಕೆ ಮಾನವಿಕ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಪ್ರಸ್ತುತ ಅನೇಕ ವಲಯಗಳಲ್ಲಿ ತಂತ್ರಜ್ಞಾನದ ಶಕ್ತಿಗೆ, ಮಾನವಿಕ ವಿಜ್ಞಾನದ ಅರ್ಥಪೂರ್ಣ ಒಳನೋಟಗಳನ್ನು ಒದಗಿಸುವ ಮೂಲಕ, ಆಟೊಮೇಷನ್‌ನ ಉತ್ಕೃಷ್ಟತೆ ವೃದ್ಧಿಯಾಗುತ್ತಿದೆ. ಹಾಗಾಗಿ, ಗ್ರಾಹಕರ ಅಪೇಕ್ಷೆಗಳು, ಆದ್ಯತೆಗಳು ಮತ್ತು ಪ್ರಚೋದನೆಗಳ ಒಳನೋಟಗಳನ್ನು ಪಡೆಯಲು ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು ಮತ್ತು ಭಾಷಾಶಾಸ್ತ್ರಜ್ಞರು ಸೇರಿದಂತೆ ಮಾನವಿಕ ವಿಷಯ ತಜ್ಞರ ಸೇವೆಯನ್ನು ಅಗಾಧವಾಗಿ ಬಳಸುತ್ತಿರುವ ಉದಾಹರಣೆಗಳಿವೆ. ಹೀಗೆ, ಗ್ರಾಹಕರ ಬಗ್ಗೆ ಹೆಚ್ಚಿನ ತಿಳಿವಳಿಕೆಯೊಂದಿಗೆ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ತಮ್ಮದೇ ಆದ ವಿಶಿಷ್ಟತೆಯೊಂದಿಗೆ ದೀರ್ಘಾವಧಿಯ ಯಶಸ್ಸನ್ನು ಕಾಣಬಹುದು. ಈ ಕುತೂಹಲಕಾರಿ ಬೆಳವಣಿಗೆಗಳಿಂದ ಮಾನವಿಕ ವಿಷಯಕ್ಕೆ ಸಂಬಂಧಿಸಿದ ಉದ್ಯೋಗಗಳಿಗೊಂದು ಮರುಜೀವ ಬಂದಂತಾಗಿದೆ.

ಮಾನವಿಕ ವಿಭಾಗದ ವಿಷಯಗಳೆಂದರೆ ಚರಿತ್ರೆ, ಮನಃಶಾಸ್ತ್ರ, ತತ್ವಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜ ಶಾಸ್ತ್ರ, ಸಾಹಿತ್ಯ, ಭಾಷೆ, ಕಾನೂನು ವಿಷಯಗಳು ಸೇರುತ್ತವೆ. ಇದೊಂದು ಸವಿಸ್ತಾರ ಕ್ಷೇತ್ರ. ಈ ಮಾನವಿಕ ವಿಷಯಕ್ಕೆ ಸಂಬಂಧಿಸಿದಂತೆ ಜಗತ್ತಿನ ಹೆಸರಾಂತ ಲೇಖಕ ಸ್ಕಾಟ್ ಹಾರ್ಟ್ಲಿ ರಚಿಸಿರುವ ‘ದಿ ಫಝೀ ಆ್ಯಂಡ್ ಟೆಕೀ-ವಿಲ್ ಲಿಬರಲ್ ಆರ್ಟ್ಸ್ ರೂಲ್ ದಿ ಡಿಜಿಟಲ್ ವರ್ಲ್ಡ್?’ ಎಂಬಪುಸ್ತಕ, ಜಗತ್ತಿನಾದ್ಯಂತ ಆರೋಗ್ಯಕಾರಿ, ಚಿಂತನಾಶೀಲ ಚರ್ಚೆಯನ್ನು ಹುಟ್ಟುಹಾಕಿದೆ.

ಹಲವಾರು ಉದ್ಯಮಗಳ ಯಶಸ್ಸಿನ ಹಿಂದೆ ತಂತ್ರಜ್ಞಾನದ ಜೊತೆಗೆ ಮಾನವಿಕ ವಿಷಯ ತಜ್ಞರ ನೆರವೂ ಇದೆ ಎನ್ನುವುದೇ ಹಾರ್ಟ್ಲಿ ಅವರ ಪ್ರಮುಖ ಸಿದ್ಧಾಂತ. ಇದಕ್ಕೆ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಸ್ಲಾಕ್‌ನ ಸ್ಟೀವರ್ಟ್ ಬಟರ್‌ಫೀಲ್ಡ್, ಅಲಿಬಾಬಾದ ಜ್ಯಾಕ್ ಮಾ, ಯೂಟ್ಯೂಬ್‌ನ ಸುಸಾನ್ ವೊಜ್ಸಿಕ್ಕಿ, ಏರ್‌ಬಿಎನ್‌ಬಿಯ ಬ್ರಿಯಾನ್ ಚೆಸ್ಕಿಯಂತಹವರು ಓದಿರುವ ವಿಷಯಗಳೂ ಕೂಡ ಸಾಕ್ಷಿಯಾಗುತ್ತವೆ. ಈ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಓದಿರುವ ವಿಷಯಗಳೆಂದರೆ, ಹಿನ್ನೆಲೆ ಭಾಷೆಗಳು, ಮಾನವಿಕ ಶಾಸ್ತ್ರ ಎಂದು ಹಾರ್ಟ್ಲಿ ಮನದಟ್ಟು ಮಾಡುತ್ತಾರೆ. ಮಾನವಿಕ ವಿಷಯಗಳ ಅಧ್ಯಯನದಿಂದ ಮಾನವನ ನಡವಳಿಕೆಯ ಹಿನ್ನೆಲೆ, ಪ್ರಚೋದನೆಯ ಬಗೆಗಿನ ಒಳನೋಟವನ್ನು ಪಡೆದು, ಗ್ರಾಹಕರ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಬಹುದು ಎನ್ನುವುದೇ ತಜ್ಞರ ಅಭಿಪ್ರಾಯ.

ಜ್ಞಾನ–ಕೌಶಲದಲ್ಲಿ ವ್ಯತ್ಯಾಸ

ಇಂದಿನ ಅತ್ಯಂತ ಬೇಡಿಕೆಯ ಉದ್ಯೋಗಗಳು ಕೆಲವು ವರ್ಷಗಳ ಹಿಂದೆ ಇರಲಿಲ್ಲ; ಒಂದು ಅಂದಾಜಿನಂತೆ, ಈಗಿರುವ ಕೆಲವು ಉದ್ಯೋಗಗಳು ಮುಂದೆ ಇರಲಾರವು. ಹೀಗಿದ್ದರೂ, ನಮ್ಮ ವಿದ್ಯಾರ್ಥಿಗಳು ಪೂರ್ವ-ನಿರ್ಧರಿತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವೃತ್ತಿ ಮಾರ್ಗಗಳನ್ನೇ ಅರಸುತ್ತಿದ್ದಾರೆ. ಶೇ 80ರಷ್ಟು ಎಂಜಿನಿಯರಿಂಗ್ ಪದವೀಧರರಲ್ಲಿ ಉದ್ಯೋಗಗಳಿಗೆ ಬೇಕಾದ ಕೌಶಲಗಳಿಲ್ಲರುವುದಿಲ್ಲ ಎಂದು ಅನೇಕ ಸಮೀಕ್ಷೆಗಳು ವರದಿ ಮಾಡಿದ ನಂತರವೂ, ಎಂಜಿನಿಯರಿಂಗ್‌ ಪದವಿಯ ವ್ಯಾಮೋಹ ಇಂದಿಗೂ ಕುಗ್ಗಿಲ್ಲ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಿಶ್ವದಾದ್ಯಂತ, ಪ್ರಸಿದ್ಧ ಉದ್ಯಮಿಗಳು, ಅರ್ಥಶಾಸ್ತ್ರಜ್ಞರು ಮತ್ತು ಲೇಖಕರು ಹಾರ್ಟ್ಲಿಯನ್ನು ಬೆಂಬಲಿಸುತ್ತಿದ್ದಾರೆ. ಸಾಮಾಜಿಕ ಕೌಶಲಗಳ ಮಹತ್ವದ ಬಗ್ಗೆ ಸಂಶೋಧನೆ ನಡೆಸಿದ ಹಾರ್ವರ್ಡ್ ಅರ್ಥಶಾಸ್ತ್ರಜ್ಞ ಡೇವಿಡ್ ಡೆಮಿಂಗ್ ಹೇಳುವಂತೆ, ‘ಅಲ್ಗಾರಿದಮ್ ಆಗಿ ಪರಿವರ್ತಿಸಲು ಆಗದಿರುವುದನ್ನು ನಿಭಾಯಿಸುವ ಸಾಮರ್ಥ್ಯ, ಮತ್ತು ವಿನೂತನ ಸಮಸ್ಯೆಗಳು ಮತ್ತು ಸನ್ನಿವೇಶಗಳನ್ನು ನೀವು ಎಷ್ಟು ಚೆನ್ನಾಗಿ ನಿಭಾಯಿಸುತ್ತೀರಿ ಎನ್ನುವುದೇ ಯಶಸ್ಸನ್ನು ನಿರ್ಧರಿಸುವ ಪ್ರಮುಖ ಅಂಶ‘.

ಹಾರ್ಟ್ಲಿ ಮತ್ತು ಇತರರು ವಾದಿಸುವಂತೆ, ‘ಭವಿಷ್ಯದ ಉದ್ದಿಮೆಗಳು, ತಂತ್ರಜ್ಞರು ಮತ್ತು ಮಾನವಿಕ ವಿಷಯ ತಜ್ಞರ ನಡುವಿನ ಸಹಯೋಗವಾಗಿರುತ್ತದೆ. ಇದೇ ನಿಟ್ಟಿನಲ್ಲಿ, ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳುತ್ತಾರೆ, ‘ಹಾರ್ಟ್ಲಿ ಇಂದಿನ ಕೋಡರ್ ಮತ್ತು ಎಂಜಿನಿಯರ್ ಯುಗದಲ್ಲಿ ಮಾನವೀಯತೆಯ ಪರವಾಗಿ ಸಕಾಲಿಕವಾದ ಮತ್ತು ಬಲವಾದ ವಾದವನ್ನು ಮಂಡಿಸುತ್ತಾರೆ. ಈ ವಾದವನ್ನು ಒಪ್ಪುವ ಇನ್ಫೊಸಿಸ್‌ ಮಾಜಿ ಸಿಇಒ ಮತ್ತು ಸಹ ಸಂಸ್ಥಾಪಕ ಎಸ್.ಡಿ.ಶಿಬುಲಾಲ್, ‘ತಂತ್ರಜ್ಞಾನದ ಮುಖ್ಯ ಗುರಿ ಮಾನವನ ಅಗತ್ಯಗಳನ್ನು, ಕಾಳಜಿಗಳನ್ನು ಪರಿಹರಿಸುವುದು. ಹಾಗೆ ಮಾಡುವಂತಾಗಲು, ಟೆಕ್ಕಿಯು ಮೊದಲು ಮಾನವತಾವಾದಿಯಾಗಿರಬೇಕು ಮತ್ತು ಮಾನವನ ಅಗತ್ಯಗಳನ್ನು ಅರ್ಥಮಾಡಿ ಕೊಳ್ಳಬೇಕು. ಲಿಬರಲ್ ಆರ್ಟ್ಸ್ ಶಿಕ್ಷಣ, ಇದಕ್ಕೆ ಅನುವು ಮಾಡುತ್ತದೆ’ ಎಂದು ಹೇಳುತ್ತಾರೆ.

ಮುಂದಿನ ಹಾದಿ

ಹೀಗೆ ಬರಲಿರುವ ಭವಿಷ್ಯದ ಉದ್ಯೋಗಗಳಿಗೆ, ಆಮೂಲಾಗ್ರವಾಗಿ ಬದಲಾದ ಜ್ಞಾನ ಮತ್ತು ಕೌಶಲಗಳ ಅಗತ್ಯ ಕಡ್ಡಾಯವೆಂದೇ ಹೇಳಬೇಕು. ಆದ್ದರಿಂದ, ವಿದ್ಯಾರ್ಥಿಗಳು ಪೂರ್ವ-ನಿರ್ಧರಿತ ಸ್ಟೆಮ್ (STEM- Science, Technology, Engineering, Mathematics) ಕೋರ್ಸ್‌ಗಳಾಚೆ ಇರುವಇನ್ನಿತರ ಕೋರ್ಸ್‌ಗಳು ಮತ್ತು ಸಂಬಂಧಿತ ಉದ್ಯೋಗಗಳತ್ತ ಗಮನವನ್ನು ಹರಿಸಿ, ಮಾನವಿಕ ಶಾಸ್ತ್ರ ಸೇರಿದಂತೆ ಸ್ಟೀಮ್ (STEAM- Science, Technology, Engineering, Arts and Mathematics) ಕೋರ್ಸ್‌ಗಳನ್ನು ಪರಿಗಣಿಸಿ ತಮ್ಮ ಮುಂದಿನ ಭವಿಷ್ಯಕ್ಕೊಂದು ಭದ್ರ ಬುನಾದಿಯನ್ನು ಹಾಕಿಕೊಳ್ಳಬಹುದು. ಯಾವುದೇ ಕೋರ್ಸ್‌ನೊಂದಿಗೆ, ತಮ್ಮ ಇಚ್ಛೆಯ ಅನುಸಾರ, ಬೇರೊಂದು ವಿಷಯವನ್ನು ಓದುವ ಅವಕಾಶ, ಈಗ ನೂತನ ಶಿಕ್ಷಣ ನೀತಿ(NEP)ಯ ಅನ್ವಯ ಸಾಧ್ಯವಿದೆ.

ಒಟ್ಟಾರೆ ಹೇಳುವುದಾದರೆ, ಭವಿಷ್ಯದ ಉದ್ದಿಮೆಗಳಲ್ಲಿ ತಂತ್ರಜ್ಞರ ಜೊತೆಗೆ ಮಾನವಿಕ ಶಾಸ್ತ್ರಜ್ಞರ ಸಹಕಾರ ಮತ್ತು ಸಹಯೋಗದ ಅಗತ್ಯ ಕಂಡುಬರುತ್ತಿದೆ. ಹಾಗಾಗಿ, ಈ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ಗುರುತಿಸಿ, ತಮ್ಮ ಸ್ವಾಭಾವಿಕ ಆಸಕ್ತಿ ಮತ್ತು ಪ್ರತಿಭೆಯಂತೆ ತಮ್ಮ ವೃತ್ತಿಜೀವನದ ಯೋಜನೆಯನ್ನು ರೂಪಿಸಿಕೊಳ್ಳಬೇಕು.

(ಲೇಖಕರು ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT