ಬುಧವಾರ, ಮೇ 18, 2022
29 °C

ನಕಲಿ ಆ್ಯಪ್‌: ವಂಚನೆಯ ಇನ್ನೊಂದು ದಾಳ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ನಿತ್ಯವೂ ಬಳಸುವು ಆ್ಯಪ್‌ಗಳಂತೆಯೇ ವಿನ್ಯಾಸ, ಬಣ್ಣ, ಕಾರ್ಯವೈಖರಿಯಲ್ಲಿ ಯಥಾವತ್ತಾಗಿ ಕಾಣುವ ಹಲವು ನಕಲಿ ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ನುಸುಳಿಕೊಂಡಿರುತ್ತವೆ. ಹೀಗಾಗಿ ಡೌನ್‌ಲೋಡ್‌ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ ಮುಂದುವುರಿಯುವುದು ಒಳಿತು.

ಇದು ಆ್ಯಪ್‌ಗಳ ಲೋಕ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌, ಲ್ಯಾಪ್‌ಟಾಪ್‌, ಟಿವಿ - ಹೀಗೆ ಎಲ್ಲೆಡೆಯೂ ಆ್ಯಪ್‌ಗಳು ಆವರಿಸಿಕೊಂಡಿವೆ. ಆಂಡ್ರಾಯ್ಡ್‌ ಫೋನ್‌ ಅಥವಾ ಐಫೋನ್‌ ಇಲ್ಲವೇ ವಿಂಡೋಸ್‌ ಆಗಿರಲಿ, ಬಹಳಷ್ಟು ಆ್ಯಪ್‌ಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ರೀತಿ ಉಚಿತವಾಗಿ ಸಿಗುವ ಆ್ಯಪ್‌ಗಳ ನಕಲಿ ಆ್ಯಪ್‌ಗಳನ್ನು ರೂಪಿಸಿ ವಂಚಿಸುವ ಮಾರ್ಗ ಕಂಡುಕೊಳ್ಳಲಾಗಿದೆ.

ನಕಲಿ ಆ್ಯಪ್‌ಗಳನ್ನು ಗುರುತಿಸಿ ಪ್ಲೇಸ್ಟೋರ್‌ನಿಂದ ತೆಗೆಯಲು ಗೂಗಲ್‌ ಹಲವು ಸುರಕ್ಷತಾ ಪರೀಕ್ಷೆಗಳನ್ನು ನಡೆಸುತ್ತಲೇ ಇರುತ್ತದೆ. ಹೀಗಿದ್ದರೂ ವಂಚಕರು ನಾನಾ ದಾರಿಗಳ ಮೂಲಕ ನುಸುಳುತ್ತಲೇ ಇರುತ್ತಾರೆ. ಪ್ಲೇಸ್ಟೋರ್‌ನಲ್ಲಿ ಇರುವ ನಕಲಿ ಆ್ಯಪ್‌ಗಳನ್ನು ಗುರುತಿಸಲು ಗೂಗಲ್‌ ಕಂಪನಿಯು ಹಲವು ಸುರಕ್ಷತಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

65 ಸಾವಿರ ಫೋನ್‌ಗಳಲ್ಲಿ 5 ಸಾವಿರ ನಕಲಿ ಆ್ಯಪ್‌ಗಳಿವೆ ಎನ್ನುವುದನ್ನು ವೈಟ್‌ ಆಪ್ಸ್‌ ಸ್ಟೊರೇ ಕಂಪನಿಯ ಸಂಶೋಧಕರ ತಂಡವು ಪತ್ತೆ ಮಾಡಿದೆ. ಈ ನಕಲಿ ಆ್ಯಪ್‌ಗಳು ಅಕ್ರಮವಾಗಿ ಉಚಿತ ಚಂದಾದಾರಿಕೆ, ಉತ್ಪನ್ನಗಳ ಮೇಲೆ ವಿನಾಯಿತಿ, ಉಚಿತ ಕೊಡುಗೆಗಳನ್ನು ನೀಡುತ್ತೇವೆ ಎಂದು ಹೇಳಿರುತ್ತವೆ. ಆದರೆ ಹೇಳಿಕೊಂಡಂತೆ ಯಾವುದೇ ಕೊಡುಗೆ, ವಿನಾಯಿತಿ ನೀಡದೇ, ಬಳಕೆದಾರರ ಮಾಹಿತಿಗಳನ್ನು ಕದಿಯುತ್ತವೆ ಎಂದು ಸಂಶೋಧಕರ ತಂಡ ತಿಳಿಸಿದೆ.

‘ಅಧಿಕೃತ ಎಂದು ನಂಬುವ ರೀತಿಯಲ್ಲಿ ನಕಲಿ ಆ್ಯಪ್‌ಗಳನ್ನು ವಿನ್ಯಾಸಗೊಳಿಸಿ, ವಂಚಿಸಲಾಗುತ್ತಿದೆ. ವಂಚನೆಯ ಉದ್ದೇಶ ಭಿನ್ನವಾಗಿರುತ್ತವೆ. ಕೆಲವು ನಕಲಿ ಆ್ಯಪ್‌ಗಳು ಕಿರಿಕಿರಿ ಅಥವಾ ಮುಜುಗರ ಉಂಟುಮಾಡುವ ಜಾಹೀರಾತುಗಳನ್ನು ನೀಡಿದರೆ, ಕೆಲವು ನಮ್ಮ ಚಟುವಟಿಕೆಗಳನ್ನು ಗಮನಿಸುತ್ತವೆ, ಮಾಲ್‌ವೇರ್‌ ಇನ್‌ಸ್ಟಾಲ್‌ ಮಾಡುತ್ತವೆ ಹಾಗೂ ವೈಯಕ್ತಿಕ ಮಾಹಿತಿ ಕದಿಯುತ್ತವೆ’ ಎಂದು ತಂಡವು ವಿವರಿಸಿದೆ.

ಈಚಿನ ದಿನಗಳಲ್ಲಿ ನಕಲಿ ಆ್ಯಪ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಈ ಆ್ಯಪ್‌ಗಳು ಸೆಕ್ಯುರಿಟಿ ಅಪ್‌ಡೇಟ್‌ ನೀಡುವುದಾಗಿ ನೋಟಿಫಿಕೇಷನ್‌ ಕಳುಹಿಸುತ್ತವೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಮಾಹಿತಿ ಕಳುವಾಗುವ ಸಾಧ್ಯತೆ ಇರುತ್ತದೆ’ ಎಂದು ನಾರ್ಟನ್‌ ಲೈಫ್‌ಲಾಕ್‌ ಕಂಪನಿಯ ಭಾರತ ಮತ್ತು ಸಾರ್ಕ್‌ ದೇಶಗಳ ಮಾರಾಟ ವಿಭಾಗದ ನಿರ್ದೇಶಕ ರಿತೇಶ್‌ ಚೋಪ್ರಾ ಮಾಹಿತಿ ನೀಡಿದರು.

‘ನಕಲಿ ಆ್ಯಪ್‌ಗಳು ನೋಡಲಷ್ಟೇ ಅಲ್ಲ, ಕೆಲಸ ಮಾಡುವುದರಲ್ಲಿಯೂ ನಿಜವಾದ ಆ್ಯಪ್‌ ಅನ್ನು ಅನುಕರಿಸುತ್ತವೆ. ಹೀಗಾಗಿ ಸುಲಭಕ್ಕೆ ಗುರುತಿಸಲು ಕಷ್ಟ. ಮಾಲ್‌ವೇರ್‌ಗಳು ಅಡಗಿಕೊಂಡಿರುವುದರಿಂದ ಹೆಚ್ಚು ಜಾಗರೂಕರಾಗಿರಬೇಕು. ನಿಜವಾದ ಆ್ಯಪ್‌ನ ಹೆಸರಿನಲ್ಲಿಯೇ ಸಣ್ಣಪುಟ್ಟ ಸ್ಪೆಲ್ಲಿಂಗ್‌ ಬದಲಾವಣೆ, ಲೋಗೊದ ಬಣ್ಣ, ವಿನ್ಯಾಸ, ಅಕ್ಷರದ ಗಾತ್ರದಲ್ಲಿ ವ್ಯತ್ಯಾಸ... ಹೀಗೆ ಇನ್ನೂ ಕೆಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರವೇ ನಕಲಿ ಎಂದು ತಿಳಿಯಬಹುದು’ ಎಂದು ಅವರು ಸಲಹೆ ನೀಡುತ್ತಾರೆ.

ಮುನ್ನೆಚ್ಚರಿಕೆ ಹೀಗಿರಲಿ

*ಡೌನ್‌ಲೋಡ್‌ ಮಾಡುವ ಮುನ್ನ ತುಸು ಯೋಚಿಸಿ. ಅಗತ್ಯ ಇರುವ ಆ್ಯಪ್‌ಗಳನ್ನಷ್ಟೇ ಡೌನ್‌ಲೋಡ್‌ ಮಾಡಿ

*ಅಧಿಕೃತ ಆ್ಯಪ್‌ ಸ್ಟೋರ್‌ನಿಂದಲೇ (Play Store/iOS) ಡೌನ್‌ಲೋಡ್‌ ಮಾಡಿ. ಜಾಲತಾಣಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಅದೇ ಕಂಪನಿಯ ಜಾಲತಾಣವೇ ಎನ್ನುವುದು ಖಚಿತಪಡಿಸಿಕೊಳ್ಳಿ

*ಡೌನ್‌ಲೋಡ್‌ ಮಾಡುವಾಗ ನಿರ್ದಿಷ್ಟ ಆ್ಯಪ್‌ ಕೇಳುವ ಅನುಮತಿಗಳನ್ನು (permissions) ಸರಿಯಾಗಿ ಓದಿ

*ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಕೆಲಸ ಮಾಡದಿರಿ.

*ನಿರ್ದಿಷ್ಟ ಆ್ಯಪ್‌ನ ಹೆಸರು, ಲೋಗೊ ಇತ್ಯಾದಿಗಳನ್ನು ಸರಿಯಾಗಿ ಗಮನಿಸಿ.

*ಕಾಲಕಾಲಕ್ಕೆ ಮೊಬೈಲ್‌ ಸಾಫ್ಟ್‌ವೇರ್‌ (ಒಎಸ್) ಅಪ್‌ಡೇಟ್‌ ಮಾಡುತ್ತಿರಿ.

ಯಾವೆಲ್ಲಾ ಆ್ಯಪ್‌ಗಳು ದಾಳಿಗೆ ಒಳಗಾಗುತ್ತವೆ?

*ಬ್ಯಾಂಕಿಂಗ್‌

* ಗೇಮಿಂಗ್‌

*ಕೋವಿಡ್‌–19


ರಿತೇಶ್‌ ಚೋಪ್ರಾ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು