ಶುಕ್ರವಾರ, ಆಗಸ್ಟ್ 19, 2022
27 °C
ಜೂಜಾಟಕ್ಕೆ ಪ್ರೋತ್ಸಾಹದ ಆರೋಪ

ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ತೆಗೆದುಹಾಕಿದ ಗೂಗಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Paytm out from Google Play Store

ಅಚ್ಚರಿಯ ಬೆಳವಣಿಗೆಯಲ್ಲಿ, ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಹಣಕಾಸು ವ್ಯವಹಾರಗಳಿಗೆ ಬಳಕೆಯಾಗುತ್ತಿದ್ದ ಪೇಟಿಎಂ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.

ತನ್ನ ವೇದಿಕೆಯಲ್ಲಿ ಜೂಜು ಪ್ರಚೋದಿಸುವ ಯಾವುದೇ ಆ್ಯಪ್‌ಗಳಿಗೆ ಅವಕಾಶವಿಲ್ಲ. ಈ ಕುರಿತು ಪೇಟಿಎಂ ಜೊತೆಗೆ ಮಾತುಕತೆ ನಡೆದಿದ್ದು, ಅವರಿಂದ ಸ್ಪಷ್ಟನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಗೂಗಲ್ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

"ಭಾರತದಲ್ಲಿ ಪ್ಲೇ ಸ್ಟೋರ್‌ನ ಜೂಜಾಟದ ನೀತಿಗಳ ಅರ್ಥ ಮಾಡಿಕೊಳ್ಳುವಿಕೆ" ಶೀರ್ಷಿಕೆಯಲ್ಲಿ ಶುಕ್ರವಾರ ಗೂಗಲ್ ಈ ಕುರಿತು ಬ್ಲಾಗ್ ಬರಹ ಪ್ರಕಟಿಸಿದೆ. ಭಾರತದಲ್ಲಿ ಜೂಜಾಟವನ್ನು ಉತ್ತೇಜಿಸುವ ಅಥವಾ ಬೆಂಬಲಿಸುವ ಇಂತಹಾ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಹಕರಿಗೆ ಸುರಕ್ಷಿತ ಅನುಭವವನ್ನು ಒದಗಿಸುವಲ್ಲಿ ಗೂಗಲ್ ಪ್ಲೇ ಬದ್ಧವಾಗಿದ್ದು, ಡೆವಲಪರ್‌ಗಳು ಮತ್ತು ಗ್ರಾಹಕರೆಲ್ಲರಿಗೂ ಒಳಿತಾಗುವಂತಹಾ ಜಾಗತಿಕ ನೀತಿಯನ್ನು ನಾವು ಪಾಲಿಸುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.

ಆ್ಯಪ್ ಮೂಲಕ ಲಭ್ಯವಿರುವ ಆನ್‌ಲೈನ್ ಕ್ಯಾಸಿನೋಗಳ ಕುರಿತು ಬೆಳಕು ಚೆಲ್ಲಿರುವ ಗೂಗಲ್‌ನ ಉತ್ಪನ್ನ ವಿಭಾಗದ ಉಪಾಧ್ಯಕ್ಷೆ ಸುಝಾನೆ ಫ್ರೇ, "ನಾವು ಆನ್‌ಲೈನ್ ಕ್ಯಾಸಿನೋಗಳಿಗೆ ಅನುಮತಿ ನೀಡುವುದಿಲ್ಲ ಅಥವಾ ಕ್ರೀಡೆಯಲ್ಲಿ ಬೆಟ್ಟಿಂಗ್‌ಗೆ ಅನುಕೂಲ ಮಾಡಿಕೊಡುವ ಜೂಜಾಟದ ಯಾವುದೇ ಆ್ಯಪ್‌ಗಳನ್ನು ಬೆಂಬಲಿಸುವುದಿಲ್ಲ. ಒಂದು ಆ್ಯಪ್ ಮೂಲಕವಾಗಿ, ಹಣ ಪಾವತಿಸಬೇಕಾದ ಟೂರ್ನಮೆಂಟುಗಳಲ್ಲಿ ಭಾಗವಹಿಸುವಂತೆ (ನಗದು ಅಥವಾ ನಗದು ಬಹುಮಾನಗಳ ಆಮಿಷದೊಂದಿಗೆ) ಬೇರೊಂದು ವೆಬ್ ಸೈಟಿಗೆ ಕರೆದೊಯ್ಯುವುದಕ್ಕೂ ನಮ್ಮಲ್ಲಿ ಅವಕಾಶವಿಲ್ಲ. ಇದು ನಮ್ಮ ನೀತಿಗಳಿಗೆ ವಿರುದ್ಧ." ಎಂದು ಗೂಗಲ್ ಹೇಳಿದೆ.

ಪೇಟಿಎಂ ಇತ್ತೀಚೆಗೆ ಭಾರತದಾದ್ಯಂತ ಜನಪ್ರಿಯವಾಗುತ್ತಿರುವ ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಆಗಿದ್ದು, ಇದು ಆನ್‌ಲೈನ್ ಖರೀದಿ ಮಳಿಗೆಯಾಗಿಯೂ, ಆನ್‌ಲೈನ್ ವ್ಯಾಲೆಟ್ ಆಗಿಯೂ ಜನರ ಗಮನ ಸೆಳೆದಿದೆ. ಇದರ ವ್ಯಾಲೆಟ್‌ನಲ್ಲಿ ನಾವು ಸೇರಿಸಿದ ಹಣವನ್ನು ಬಳಸಿ ಯಾವುದೇ ಆನ್‌ಲೈನ್ ಅಥವಾ ಆಫ್‌ಲೈನ್ ಮಳಿಗೆಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ.

ಬಳಕೆದಾರರನ್ನು ಯಾವುದೇ ತೊಂದರೆಗಳಿಂದ ರಕ್ಷಿಸುವುದಕ್ಕಾಗಿಯೇ ಇಂತಹಾ ನೀತಿಗಳನ್ನು ರೂಪಿಸಲಾಗಿದೆ ಎಂದಿರುವ ಗೂಗಲ್ ಉಪಾಧ್ಯಕ್ಷೆ, ಆ್ಯಪ್ ಈ ನೀತಿಗಳನ್ನು ಉಲ್ಲಂಘಿಸಿದಾಗ, ನಾವು ಅದರ ಡೆವಲಪರ್‌ಗಳಿಗೆ ನೋಟಿಸ್ ನೀಡುತ್ತೇವೆ ಮತ್ತು ನೀತಿಗೆ ಬದ್ಧವಾಗಿರುವಂತೆ ಸೂಕ್ತ ಬದಲಾವಣೆ ಮಾಡಿಕೊಳ್ಳುವವರೆಗೂ ಅದನ್ನು ಗೂಗಲ್ ಪ್ಲೇ ಸ್ಟೋರ್‍‌ನಿಂದ ತೆಗೆದುಹಾಕುತ್ತೇವೆ. ಪದೇ ಪದೇ ನೀತಿ ಉಲ್ಲಂಘನೆಯಾದಲ್ಲಿ, ಗೂಗಲ್ ಪ್ಲೇ ಡೆವಲಪರ್ ಖಾತೆಯನ್ನೇ ಮುಚ್ಚುವಂತಹಾ ಗಂಭೀರ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ನಮ್ಮ ನೀತಿಗಳು ಎಲ್ಲ ಡೆವಲಪರ್‌ಗಳಿಗೂ ಸಮಾನವಾಗಿ ಅನ್ವಯವಾಗುತ್ತವೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು