ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಅರ್ಥ್‌ನಲ್ಲಿ ಹೊಸ ವೈಶಿಷ್ಟ್ಯ: 2.4 ಕೋಟಿ ಉಪಗ್ರಹ ಚಿತ್ರಗಳ ಸಂಗ್ರಹ

‘ಟೈಮ್‌ಲ್ಯಾಪ್ಸ್‌’ ಪರಿಚಯ: 2.4 ಕೋಟಿ ಉಪಗ್ರಹ ಚಿತ್ರಗಳ ಸಂಗ್ರಹ
Last Updated 16 ಏಪ್ರಿಲ್ 2021, 10:20 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಗೂಗಲ್‌ ಅರ್ಥ್‌ನಲ್ಲಿ ’ಟೈಮ್‌ಲ್ಯಾಪ್ಸ್‌’ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಎಂದು ಗೂಗಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಂದರ್‌ ಪಿಚೈ ತಿಳಿಸಿದ್ದಾರೆ.

ಈ ವಿಶಿಷ್ಟವಾದ ಕಾರ್ಯಕ್ಕಾಗಿ ಗೂಗಲ್‌ ಅಪಾರ ಶ್ರಮವಹಿಸಿದೆ. ಕಳೆದ 37 ವರ್ಷಗಳಲ್ಲಿನ 2.4 ಕೋಟಿ ಉಪಗ್ರಹ ಚಿತ್ರಗಳನ್ನು ಸಂಗ್ರಹಿಸಿದೆ. ‘4ಡಿ’ ಅನುಭವವನ್ನು ಇದು ನೀಡುತ್ತದೆ.

‘ನಮ್ಮ ಭೂಮಿಯು ಕಳೆದ ಅರ್ಧ ಶತಮಾನದಲ್ಲಿ ವ್ಯಾಪಕ ಪರಿಸರ ಬದಲಾವಣೆಗಳನ್ನು ಕಂಡಿದೆ. ಭೂಮಿಯು ಯಾವ ರೀತಿಯ ಬದಲಾವಣೆಯನ್ನು ಕಂಡಿದೆ ಎನ್ನುವ ವಿಶ್ಲೇಷಣೆಯನ್ನು ಇಲ್ಲಿ ಮಾಡಲಾಗಿದೆ. ಜನರು ಹೊಸ ದೃಷ್ಟಿಕೋನದೊಂದಿಗೆ ನಮ್ಮ ಗ್ರಹವನ್ನು ನೋಡಬಹುದಾಗಿದೆ’ ಎಂದು ಗೂಗಲ್‌ ಅರ್ಥ್‌ ನಿರ್ದೇಶಕ ರೆಬೆಕ್ಕಾ ಮೂರೆ ವಿವರಿಸಿದ್ದಾರೆ.

‘ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಸಹಕಾರ ನೀಡಿದ್ದರಿಂದ ಈ ಕಾರ್ಯ ಸಾಧ್ಯವಾಗಿದೆ. ನಾಸಾ, ಅಮೆರಿಕದ ಜಿಯಾಲಜಿಕಲ್‌ ಸರ್ವೇ, ಯುರೋಪಿಯನ್‌ ಆಯೋಗ ಮತ್ತು ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಚಿತ್ರಗಳನ್ನು ಒದಗಿಸಿವೆ’ ಎಂದು ಅವರು ತಿಳಿಸಿದ್ದಾರೆ.

‘ಇದೇ ರೀತಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜತೆಯೂ ಒಪ್ಪಂದ ಮಾಡಿಕೊಳ್ಳಲು ಗೂಗಲ್‌ ಮುಕ್ತ ಆಯ್ಕೆಗಳನ್ನು ಹೊಂದಿದೆ. ಕಳೆದ 15 ವರ್ಷಗಳಿಂದ ಕೋಟ್ಯಂತರ ಜನರು ಗೂಗಲ್‌ ಅರ್ಥ್‌ನಲ್ಲಿ ವಿವಿಧ ರೀತಿಯ ಮಾಹಿತಿಗಾಗಿ ಹುಡುಕಾಟ ನಡೆಸಿದ್ದಾರೆ. ಗೂಗಲ್‌ ಮ್ಯಾಪ್‌ ಮೂಲಕ ನಿಮ್ಮ ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ. ಗೂಗಲ್‌ ಅರ್ಥ್‌ ಮೂಲಕ ಇದಕ್ಕೂ ಭಿನ್ನವಾದ ವಿಶೇಷ ಮಾಹಿತಿಗಳನ್ನು ಪತ್ತೆ ಮಾಡಬಹುದಾಗಿದೆ. ಡಿಜಿಟಲ್‌ ರೂಪದಲ್ಲಿ ಗ್ರಹವನ್ನು ಪ್ರಸ್ತುತಪಡಿಸುವ ಪ್ರಯತ್ನ ಮಾಡಲಾಗಿದೆ. ಇದು ಮನರಂಜನೆ ನೀಡುವ ಜತೆಗೆ ಜನರಿಗೆ ಜ್ಞಾನವನ್ನು ಒದಗಿಸುತ್ತದೆ’ ಎಂದು ವಿವರಿಸಿದ್ದಾರೆ.

2017ರ ಬಳಿಕ ಇದೇ ಮೊದಲ ಬಾರಿ ಅತಿ ದೊಡ್ಡ ಪ್ರಮಾಣದಲ್ಲಿ ಗೂಗಲ್‌ ಅರ್ಥ್‌ನಲ್ಲಿ ಅಪ್‌ಡೇಟ್‌ ಮಾಡಲಾಗಿದೆ. ಇದರಿಂದ, ನಾಲ್ಕು ದಶಕಗಳಲ್ಲಿನ ಭೂಮಿಯ ಬದಲಾವಣೆಗಳನ್ನು ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT