ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ

Last Updated 24 ಜನವರಿ 2018, 11:06 IST
ಅಕ್ಷರ ಗಾತ್ರ

ಮಾಯಕೊಂಡ: ‘ಅನ್ಯ ಪಕ್ಷಗಳ ಹಂಗಿಲ್ಲದೇ ಸ್ವಂತ ಬಲದಿಂದ ಸರ್ಕಾರ ರಚಿಸಲು ಜನ ಅವಕಾಶ ನೀಡಿದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಕುಮಾರಸ್ವಾಮಿ ಬದ್ಧರಿದ್ದಾರೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು. ಸಮೀಪದ ಆನಗೋಡಿನಲ್ಲಿ ಮಂಗಳವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷ ಸಂಕಷ್ಟ ಎದುರಿಸುತ್ತಿತ್ತು. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಅವರ ಮೇಲೆ ₹ 150 ಕೋಟಿ ಪಡೆದ ಆರೋಪ ಹೊರಿಸಿದ್ದರು. ಕೆಲವೇ ತಿಂಗಳ ಅಧಿಕಾರಾವಧಿಯಲ್ಲೂ ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲಮನ್ನಾದಂಥ ಉತ್ತಮ ಕೆಲಸಗಳನ್ನು ಮಾಡಿದರು ಎಂದು ಬಣ್ಣಿಸಿದರು.

‘ನೀವೆಲ್ಲರೂ ಬೆಜೆಪಿಯ ಐದು ವರ್ಷದ ಆಡಳಿತ ನೋಡಿದ್ದೀರಿ, ಈ ಸರ್ಕಾರವೂ 2 ತಿಂಗಳಲ್ಲಿ ಕೊನೆಗೊಳ್ಳಲಿದೆ. ಯಾವ ಪಕ್ಷದ ಮನೆ ಬಾಗಿಲಿಗೆ ಹೋಗದಂತೆ ಸ್ವಂತ ಶಕ್ತಿಯಿಂದ ಸರ್ಕಾರ ರಚಿಸಲು ಅವಕಾಶ ನೀಡಿ, ಅಧಿಕಾರಕ್ಕೆ ಬಂದ ಕೂಡಲೇ ಕುಮಾರ ಸ್ವಾಮಿ ರೈತರ ಎಲ್ಲಾ ವಿಧದ ಸಾಲಮನ್ನಾ ಮಾಡುವುದು ಖಚಿತ ಎಂದರು.

ಪೌಷ್ಟಿಕ ಆಹಾರವಿಲ್ಲದೇ ಪ್ರಸವ ಕಾಲದಲ್ಲಿ ಗರ್ಭಿಣಿ ಮತ್ತು ಶಿಶುಗಳು ಮರಣಕ್ಕೀಡಾಗುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ತಾಯಂದಿರಿಗೆ ಹೆರಿಗೆಗೆ ಮೂರು ತಿಂಗಳು ಮುಂಚೆ ಮತ್ತು ಹೆರಿಗೆ ನಂತರ 3 ತಿಂಗಳು ಪ್ರತಿ ತಿಂಗಳು ₹ 6,000 ಪ್ರೋತ್ಸಾಹ ಧನ ನೀಡಲಾಗುವುದು. ಜಾತಿ ಧರ್ಮ ಭೇದವೆಣಿಸದೆ 70 ವರ್ಷ ತುಂಬಿದ ಎಲ್ಲಾ ರೈತರಿಗೆ ಪ್ರತಿ ತಿಂಗಳು ₹ 5,000 ಮಾಸಾಶನ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ಗಮನಿಸಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಅವರಿಗೆ ಮಾಸಿಕ ₹ 10,000  ಗೌರವಧನ ನೀಡಲಾಗುವುದು ಎಂದು ಭರವಸೆ ನೀಡಿದರು.

ಯಾವುದೇ ಯೋಜನೆಯಲ್ಲೂ ಎಂದೂ ಜಾತಿ, ಧರ್ಮ ಅಡ್ಡ ತರಬಾರದು. ಈ ಸರ್ಕಾರ ಜಾತಿ ಆಧರಿಸಿ ಭಾಗ್ಯ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್, ಬಿಜೆಪಿ ಆಡಳಿತ ನೋಡಿದ್ದೀರಿ, ಜೆಡಿಎಸ್‌ಗೂ ಒಂದು ಅವಕಾಶ ಕೊಡಿ ಎಂದು ಅವರು ಮನವಿ ಮಾಡಿದರು.

ಶೀಲಾನಾಯ್ಕ್ ದಂಪತಿ ಕಳೆದ ಎರಡೂವರೆ ವರ್ಷದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಂತ ಕೆಲಸ ಬಿಟ್ಟು ದುಡಿದಿದ್ದಾರೆ. ನಾನೇ ಯಾವುದಾದರೂ ಕ್ಷೇತ್ರದಲ್ಲಿ ಕೆಲಸ ಮಾಡಲು ಅವರಿಗೆ ತಿಳಿಸಿದ್ದೆ. ಇದರಲ್ಲಿ ತಪ್ಪು ಭಾವನೆ ಬೇಡ. ಶಾಸಕ ಶಿವಶಂಕರ್, ಚಂದ್ರಪ್ಪ ಮತ್ತು ದಾಸಕರಿಯಪ್ಪ ಸೇರಿ ಯಾರಿಗೂ ಗೊಂದಲ ಬೇಡ ಎಂದರು.

ಜೆಡಿಎಸ್ ಟಿಕೆಟ್ ಆಕಾಂಕ್ಷಿ ಶೀಲಾನಾಯ್ಕ್ ಮಾತನಾಡಿ, ‘ಜನ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿದರೆ ಕ್ಷೇತ್ರದ ಕೆಲಸ ಮಾಡಿ ನಿಮ್ಮ ಋಣ ತೀರಿಸುವೆ. ದೇವೆಗೌಡರು ದೇಶ ಕಂಡ ಅಪರೂಪದ ರಾಜಕಾರಣಿ’ ಎಂದು ಬಣ್ಣಿಸಿದರು.

ಲತಾ ಸಂಗಡಿಗರು ಪ್ರಾರ್ಥಿಸಿದರು. ಚಿನ್ನಸಮುದ್ರ ಉಮೇಶ್ ನಾಡಗೀತೆ ಹಾಡಿದರು. ಎನ್. ಸಿದ್ದಲಿಂಗಪ್ಪ ಸ್ವಾಗತಿಸಿದರು. ಗೋಣಿವಾಡ ಮಂಜುನಾಥ, ನಾಗರಾಜ ನಿರೂಪಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಶಾಸಕ ಶಿವಶಂಕರ್, ಜಿಲ್ಲಾ ಪಂಚಾಯ್ತಿ ಸದಸ್ಯ ಫಕ್ಕೀರಪ್ಪ, ಮುಖಂಡರಾದ ದಾಸ ಕರಿಯಪ್ಪ, ಹೂವಿನಮಡು ಚಂದ್ರಪ್ಪ, ಕುರ್ಕಿ ಕೊಟ್ರಪ್ಪ, ಎಚ್. ಸಿ. ಗುಡ್ಡಪ್ಪ, ಶೀಲಾಕುಮಾರಿ, ಅಮಾನುಲ್ಲಾ ಖಾನ್, ಅನೀಸ್ ಪಾಷಾ, ಆಂಜನೇಯ, ಅಣ್ಣಾಪುರ ಪರುಶುರಾಂ, ಮಾಯಕೊಂಡ ಬಸವರಾಜಪ್ಪ, ಹುಚ್ಚವನಹಳ್ಳಿ ಮೂರ್ತಿ ಇದ್ದರು.

‘ಅವಸರದಲ್ಲಿದ್ದೇನೆ, ಕ್ಷಮಿಸಿ...’

ಪಕ್ಷದ ಆಕಾಂಕ್ಷಿ ಶೀಲಾನಾಯ್ಕ್ ಅವರಿಗೆ ಭಾಷಣ ಮೊಟಕುಗೊಳಿಸಲು ಸೂಚಿಸಿದ ದೇವೆಗೌಡರು ಕೇವಲ ಹತ್ತೇ ನಿಮಿಷ ಮಾತನಾಡಿ, ‘ಅವಸರವಿದ್ದ ಕಾರಣ ಹೆಲಕಾಪ್ಟರ್‌ನಲ್ಲಿ ಓಡಿ ಬಂದಿದ್ದೇನೆ. ಜಗಳೂರು ತರಳಬಾಳು ಹುಣ್ಣಿಮೆಗೆ ಹೋಗಬೇಕು. ಗುರುಗಳು ಬೇಜಾರಾಗುತ್ತಾರೆ, ಮತ್ತೊಮ್ಮೆ ಬಂದು ಎಲ್ಲಾ ಚರ್ಚಿಸುವೆ’ ಎಂದು ಅವಸರದಿಂದಲೇ ತೆರಳಿದರು.

ಬೆಳಿಗ್ಗೆ 11ರ ಬದಲು ಸಂಜೆ 5ಕ್ಕೆ ಆರಂಭ

ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ದೇವೆಗೌಡರು ವೇದಿಕೆಗೆ ಬಂದಾಗ ಸಂಜೆ 5 ಗಂಟೆ ಮೀರಿತ್ತು. ಅಭಿಮಾನಿಗಳು ಕಾರ್ಯಕರ್ತರು ಕಾದು ಕಂಗೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT