ಭಾನುವಾರ, ಆಗಸ್ಟ್ 1, 2021
27 °C

5ಜಿ ಬಂದಾಗ ಅಂತರ್ಜಾಲ ವೇಗ ಎಷ್ಟಾಗುತ್ತದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ವರ್ಷದ ಕೊನೆಯ ಭಾಗದಲ್ಲಿ ಅಥವಾ 2021ರ ಆರಂಭದಲ್ಲಿ ಭಾರತದಲ್ಲಿ 5ಜಿ ಮೊಬೈಲ್‌ ಸೇವೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಕೆಲವು ಸಮಯದ ಹಿಂದೆ ಇತ್ತು. ಆದರೆ, ಕೋವಿಡ್–19 ಸಾಂಕ್ರಾಮಿಕ ತಂದಿತ್ತ ತಲೆನೋವು ಸೇರಿದಂತೆ ಕೆಲವು ಕಾರಣಗಳಿಂದಾಗಿ ದೇಶದಲ್ಲಿ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ಮುಂದಕ್ಕೆ ಹೋಗುವುದು ಖಚಿತವಾಗಿದೆ. ಒಂದು ವರದಿಯ ಪ್ರಕಾರ 2021ರ ಕೊನೆಯ ಭಾಗದಲ್ಲಿ ಅಥವಾ 2022ರಲ್ಲಿ ದೇಶದಲ್ಲಿ 5ಜಿ ಸೇವೆಗಳು ಲಭ್ಯವಾಗಬಹುದು.

ಅದಿರಲಿ, 5ಜಿ ಸೇವೆ ಶುರುವಾದ ನಂತರ ಮೊಬೈಲ್‌ ಮೂಲಕ ಪಡೆಯುವ ಇಂಟರ್ನೆಟ್‌ ಸಂಪರ್ಕದ ವೇಗ ಹೆಚ್ಚಲಿದೆಯೇ? ಹೌದು, ಅದು ಹೆಚ್ಚಾಗಲಿದೆ. ಅದರಲ್ಲಿ ಅನುಮಾನ ಇಲ್ಲ. 1 ಜಿಬಿಪಿಎಸ್‌ ವೇಗದ ಇಂಟರ್ನೆಟ್‌ ಸಂಪರ್ಕ 5ಜಿ ಸೇವೆ ಆರಂಭವಾದ ನಂತರ ಸಿಗಬಹುದು.

ಅಂದರೆ, 5 ಜಿಬಿ ಗಾತ್ರದ ಸಿನಿಮಾವೊಂದನ್ನು ಡೌನ್‌ಲೋಡ್‌ ಮಾಡಿಕೊಳ್ಳಲು 5ಜಿ ಸೇವೆಗಳು ಆರಂಭವಾದ ನಂತರ 40 ಸೆಕೆಂಡುಗಳಷ್ಟು ಕಾಲ ಸಾಕು ಎನ್ನುತ್ತಾರೆ ಕಂಪ್ಯೂಟರ್‌ ಪರಿಣತರು!

ದೇಶದಲ್ಲಿ ಸರಿಸುಮಾರು 2001ನೆಯ ಇಸವಿಯವರೆಗೂ ಚಾಲ್ತಿಯಲ್ಲಿ ಇದ್ದಿದ್ದು 2ಜಿ ಸೇವೆಗಳು. ಆ ಕಾಲದಲ್ಲಿ ಇಷ್ಟೇ ಗಾತ್ರದ ಒಂದು ಸಿನಿಮಾ ಅಥವಾ ಸಾಕ್ಷ್ಯಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ದಿನಗಳ ಕಾಲ ಕಾಯಬೇಕಿತ್ತು! ವಾಸ್ತವದಲ್ಲಿ, ಅಷ್ಟೊಂದು ಗಾತ್ರದ ಕಡತಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಆಗ ಬಹುತೇಕರಿಂದ ಆಗುತ್ತಿರಲಿಲ್ಲ ಕೂಡ.

5ಜಿ ಸೇವೆಗಳನ್ನು ಪಡೆಯಲು, ಅದಕ್ಕೆ ಸೂಕ್ತವಾದ ಸ್ಮಾರ್ಟ್‌ ಫೋನ್‌ ಬೇಕು. ಇಂತಹ ಸ್ಮಾರ್ಟ್‌ ಫೋನ್‌ಗಳು ಭಾರತದ ಮಾರುಕಟ್ಟೆಯನ್ನು ಈಗಾಗಲೇ ಪ್ರವೇಶಿಸಿ ಆಗಿದೆ. ಆದರೆ 5ಜಿ ಸೇವೆಗಳು ಲಭ್ಯವಾಗಬೇಕಷ್ಟೆ. 5ಜಿ ತಂತ್ರಜ್ಞಾನವು ಅಂತರ್ಜಾಲ ಸಂಪರ್ಕದ ವೇಗವನ್ನು ಹೆಚ್ಚಿಸುವ ಕಡೆ ಹೆಚ್ಚು ಗಮನ ನೀಡುತ್ತದೆ, ಕರೆಗಳ ಗುಣಮಟ್ಟವನ್ನು ಸುಧಾರಿಸುವತ್ತ ಹೆಚ್ಚಿನ ಗಮನ ನೀಡಿಲ್ಲ ಎನ್ನುತ್ತಾರೆ ಕೆಲವು ತಜ್ಞರು.

ಹಾಗಾಗಿ, 5ಜಿ ಸೇವೆಗಳು ದೇಶದಲ್ಲಿ ಲಭ್ಯವಾದ ನಂತರವೂ, ಕರೆಗಳ ಕಡಿತದ ಕರಕರೆಗೆ ಪೂರ್ಣ ವಿರಾಮ ಸಿಗಲಿಕ್ಕಿಲ್ಲವೇನೋ... 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು