ಗುರುವಾರ , ಆಗಸ್ಟ್ 6, 2020
28 °C

ನಿಮ್ಮ ಫೋನ್‌ ಕದ್ದಾಲಿಕೆ ಆಗುತ್ತಿರುವ ಶಂಕೆಯೇ? ಹೀಗೆ ತಿಳಿಯಿರಿ..

ಪ್ರಜಾವಾಣಿ ವೆಬ್ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೋನ್‌ ಕದ್ದಾಲಿಕೆ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಗರದ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಅವರ ಫೋನ್‌ ಕದ್ದಾಲಿಕೆ ಪ್ರಕರಣದಿಂದಾಗಿ ಈ ವಿಷಯ ಮುನ್ನಲೆಗೆ ಬಂದಿದೆ. ಫೋನ್‌ ಟ್ಯಾಪಿಂಗ್‌ ಹೇಗಾಗುತ್ತದೆ? ಅದನ್ನು ಪತ್ತೆ ಹಚ್ಚುವುದು ಹೇಗೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. 

ಫೋನ್‌ ಟ್ಯಾಪಿಂಗ್‌ ಸಾಧನಗಳ ನೆರವಿನಿಂದ ಇಬ್ಬರ ನಡುವಿನ ಸಂಭಾಷಣೆಯನ್ನು ಆಲಿಸುವುದಕ್ಕೆ ಫೋನ್‌ ಕದ್ದಾಲಿಕೆ ಎನ್ನಲಾಗುತ್ತದೆ. ಫೋನ್‌ ಕದ್ದಾಲಿಕೆಗೆ ಕಾನೂನಿನಡಿ ಅವಕಾಶವಿದೆ. ಆದರೆ ಇದಕ್ಕೆ ನಿರ್ದಿಷ್ಟ ರೀತಿ ನೀತಿಗಳಿವೆ. ಅದು ಹೊರತಾಗಿ ಕದ್ದಾಲಿಸಿದರೆ ಅದು ಅಕ್ರಮ.

ಸಂಭಾಷಣೆಗಳನ್ನು ಕದ್ದಾಲಿಸಲೆಂದೇ ಹೊಸ ಹೊಸ ಸಾಧನಗಳು ಸಿದ್ದವಾಗಿವೆ. ಸಿಂಗಾಪುರ್‌ನಿಂದ ಈ ಸಾಧನಗಳು ಅಕ್ರಮವಾಗಿ ದೇಶದೊಳಗೆ ನುಸುಳಿವೆ. ₹1.5 ಕೋಟಿ ಮೌಲ್ಯದ ಈ ಸಾಧನಗಳನ್ನು ಗುಪ್ತಚರ ಸಂಸ್ಥೆಗಳು ಬಳಸುತ್ತಿವೆ. ಇಂಡಿಯನ್‌ ಟೆಲಿಗ್ರಾಫ್ ಕಾಯ್ದೆ 1885ರ ಸೆಕ್ಷನ್‌ 5 (2)ರಲ್ಲಿ 419ನೇ ಮತ್ತು 419ಎ ನಿಬಂಧನೆಗಳಲ್ಲಿ ಫೋನ್‌ ಕರೆಗಳ ಮಾಹಿತಿ ಪಡೆಯುವ, ಕೇಳುವ ಬಗ್ಗೆ ವಿವರಿಸಲಾಗಿದೆ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ, ಭದ್ರತೆಗೆ ತೊಂದರೆಯಾಗುವ ವಿಚಾರಗಳಲ್ಲಿ ಫೋನ್‌ ಕದ್ದಾಲಿಕೆಗೆ ಅವಕಾಶವಿದೆ.

ನಿಮ್ಮ ಫೋನ್‌ ಟ್ಯಾಪ್‌ ಆಗಿರುವುದನ್ನು ತಿಳಿಯುವುದು ಹೇಗೆ?

ನೀವು ಫೋನ್‌ನಲ್ಲಿ ಮಾತನಾಡುತ್ತಿರುವಾಗ ಯಾವಾಗಲಾದರೂ ವಿಚಿತ್ರ ಶಬ್ದ ಕೇಳಿದ್ದೀರಾ? (ಉದಾಹರಣೆಗೆ: ಫೋನ್‌ ಬಟನ್‌ ಕ್ಲಿಕ್‌ ಆದಾಗ ಬರುವಂತಹ ಶಬ್ದ ಅಥವಾ ಕೀ.. ಎನ್ನುವ ಸ್ಥಿರ ಶಬ್ದ) ಮತ್ತು ನಿಮ್ಮ ಫೋನ್‌ ಕದ್ದಾಲಿಕೆಯಾಗುತ್ತಿದೆ ಎಂದು ಅಚ್ಚರಿಗೊಂಡಿದ್ದೀರಾ? ಹಾಗಿದ್ದಲ್ಲಿ, ನೀವೊಬ್ಬರೆ ಅಲ್ಲ. ಸಾಕಷ್ಟು ಮಂದಿ ತಮ್ಮ ಖಾಸಗಿ ಮತ್ತು ಉದ್ಯಮದ ಸಂಭಾಷಣೆಗಳು ಖಾಸಗಿಯಾಗಿ ಉಳಿದಿಲ್ಲ ಎನ್ನುವ ಬಗ್ಗೆ ಚಿಂತಿಸುತ್ತಿದ್ದಾರೆ. ಅದರಲ್ಲೂ ಈಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಭಾಷಣೆಯನ್ನು ಸುಲಭವಾಗಿ ಕದ್ದಾಲಿಸಬಹುದಾಗಿದೆ. ಕೆಲವೇ ಕೆಲವು ಸುಲಭ ಮಾರ್ಗಗಳ ಮೂಲಕ ನಿಮ್ಮ ಫೋನ್‌ ಟ್ಯಾಪ್‌ ಆಗಿದೆಯೇ ಎನ್ನುವುದನ್ನು ನೀವು ತಿಳಿಯಬಹುದು.

ಸಂಭಾಷಣೆ ವೇಳೆ ಹಿನ್ನಲೆಯಲ್ಲಿ ಶಬ್ದ

ಫೋನ್‌ನಲ್ಲಿ ಸಂಭಾಷಿಸುತ್ತಿರುವಾಗ ಹಿನ್ನಲೆಯಲ್ಲಿ ಸ್ಥಿರ ಶಬ್ದ, ಕಿ... ಎನ್ನುವ ರೀತಿಯಲ್ಲಿ ಜೋರು ಶಬ್ದ ಅಥವಾ ಇತರೆ ವಿಚಿತ್ರ ಶಬ್ದ ಕೇಳುತ್ತಿದ್ದರೆ, ಅದು ನಿಮ್ಮ ಫೋನ್‌ ಕದ್ದಾಲಿಕೆಯಾಗುತ್ತಿರುವುದರ ಸಂಕೇತ.

* ಕೆಲವೊಮ್ಮೆ ಸಿಗ್ನಲ್‌ ತೊಂದರೆಗಳಿಂದಲೂ ಹೀಗೆ ಶಬ್ದ ಬರುತ್ತದೆ. ಹಾಗಾಗಿ ವಿಚಿತ್ರ ಶಬ್ದ ಕೇಳಿದ ಕೂಡಲೇ ಫೋನ್‌ ಕದ್ದಾಲಿಕೆಯಾಗುತ್ತಿದೆ ಎಂದು ಹೇಳಲು ಆಗುವುದಿಲ್ಲ. ನಿಮ್ಮ ಫೋನ್‌ನಲ್ಲಿನ ಇತರೆ ಚಟುವಟಿಕೆಗಳ ಬಗ್ಗೆಯೂ ನೀವು ಪರಿಶೀಲಿಸಬೇಕಾಗುತ್ತದೆ.

* ಫೋನ್‌ ಬಳಕೆಯಾಗದ ಸಂದರ್ಭದಲ್ಲಿ ಅದು ನಿಶಬ್ದವಾಗಿರಬೇಕು. ಒಂದು ವೇಳೆ ನೀವು ಸಂಭಾಷಣೆಯಲ್ಲಿ ಇಲ್ಲದಿದ್ದಾಲೂ ಬೀಪ್‌, ಕ್ಲಿಕಿಂಗ್‌ ಅಥವಾ ಸ್ಥಿರ ಶಬ್ದ ಕೇಳಿದರೆ, ಫೋನ್‌ ಟ್ಯಾಪ್‌ ಆಗಿರುವ ಸಾಧ್ಯತೆ ಇರುತ್ತದೆ.

* ಶಬ್ದ- ಆವರ್ತನ ಶ್ರೇಣಿ (ಬ್ಯಾಂಡ್‌ವಿಡ್ತ್‌) ಸಂವೇದಕ ಬಳಿಸಿಕೊಂಡು ನಿಮ್ಮ ಫೋನ್‌ನಲ್ಲಿ ಕೇಳಿಸದ ಶಬ್ದಗಳನ್ನು ಪರಿಶೀಲಿಸಬಹುದು. ಒಂದು ನಿಮಿಷದಲ್ಲಿ ಅನೇಕ ಬಾರಿ ಶಬ್ದ ಕೇಳಿದರೆ, ಫೋನ್‌ ಟ್ಯಾಪ್‌ ಆಗಿರುವ ಸಾಧ್ಯತೆ ಇರುತ್ತದೆ.

* ನಿಮ್ಮಲ್ಲಿ ಸ್ಥಿರ ದೂರವಾಣಿ ಇದ್ದರೆ: ಸ್ಥಿರ ದೂರವಾಣಿ ಬಳಸದಿದ್ದ ಸಂದರ್ಭದಲ್ಲೂ ಅದರಿಂದ ಡಯಲ್‌ ಟೋನ್‌ ಕೇಳಿ ಬರುತ್ತಿದ್ದರೆ, ಯಾರೊ ನಿಮ್ಮ ಫೋನ್‌ ಅನ್ನು ಟ್ಯಾ‍ಪ್‌ ಮಾಡಿದ್ದಾರೆ ಎನ್ನಬಹುದು. 

ಫೋನ್‌ ಬ್ಯಾಟರಿ ಬಾಳಿಕೆ ಅವಧಿ ಪರೀಕ್ಷಿಸಿ

ನಿಮ್ಮ ಫೋನ್‌ನ ಬ್ಯಾಟರಿ ಬಾಳಿಕೆ ಅವಧಿಯು ಸಾಮಾನ್ಯವಾಗಿ ಇರುವುದಕ್ಕಿಂತ ಶೀಘ್ರವಾಗಿ ಕಡಿಮೆಯಾಗುತ್ತಿದ್ದರೆ ಮತ್ತು ನಿಯಮಿತವಾಗಿ ನೀವು ಫೋನ್‌ ಚಾರ್ಜ್‌ ಮಾಡುವುದಕ್ಕಿಂತ ಹೆಚ್ಚು ಬಾರಿ ಚಾರ್ಜ್‌ ಮಾಡಬೇಕಾಗಿ ಬಂದರೆ ಫೋನ್‌ ಟ್ಯಾಪಿಂಗ್‌ ಸಾಫ್ಟ್‌ವೇರ್‌ ನಿಮಗೇ ಗೊತ್ತಿಲ್ಲದೆ ಚಾಲನೆಯಲ್ಲಿರುವ ಸಾಧ್ಯತೆ ಇದೆ. ಅದರಿಂದ ನಿಮ್ಮ ಫೋನ್‌ ಚಾರ್ಜ್‌ ಬೇಗ ಕಡಿಮೆಯಾಗುತ್ತಿರಬಹುದು. 

*  ಐಫೋನ್‌ ಅಥವಾ ಆ್ಯಂಡ್ರಾಯಿಡ್ ಫೋನ್‌ ಯಾವುದಾದರೂ, ಬ್ಯಾಟರಿ ಚಾರ್ಜ್‌ ಶೀಘ್ರ ಏಕೆ ಕಡಿಮೆಯಾಗುತ್ತಿದೆ ಎನ್ನುವುದನ್ನು ವಿವರವಾಗಿ ತಿಳಿಸಲು ಕೆಲವು ಮಾರ್ಗಗಳಿವೆ. ಅವುಗಳನ್ನು ಬಳಸಿ ನೀವು ಸಮರ್ಪಕ ಮಾಹಿತಿ ಪಡೆಯಬಹುದಾಗಿದೆ. ಬ್ಯಾಟರಿ ಸೆಟ್ಟಿಂಗ್‌ಗೆ ಹೋಗಿ ಯಾವ ಆ್ಯಪ್‌ ಹೆಚ್ಚು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ತಿಳಿಯಬಹುದು.

* ನಿಮ್ಮ ಫೋನ್‌ ಬ್ಯಾಟರಿ ಹಳೆಯದ್ದಾಗಿದ್ದರೆ, ಜಾರ್ಜ್‌ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಹೀಗಿರುವ ಬ್ಯಾಟರಿಗಳನ್ನು ಬಾಳಿಕೆ ಅವಧಿಯನ್ನು ಸುಧಾರಿಸಲು ಮಾರ್ಗಗಳಿವೆ.

* ಬಳಸುತ್ತಿದ್ದಾಗ ನಿಮ್ಮ ಫೋನ್‌ ಬ್ಯಾಟರಿ ಬಿಸಿಯಾಗುತ್ತದೆ. ನೀವು ಬಳಸಿದಿದ್ದಾಗಲೂ ಸಾಮಾನ್ಯಕ್ಕಿಂತ ನಿಮ್ಮ ಬ್ಯಾಟರಿ ಹೆಚ್ಚು ಬಿಸಿಯಾಗಿದ್ದರೆ, ಅಲ್ಲಿ ಏನಾದರೂ ತಪ್ಪು ನಡೆಯುತ್ತಿದೆ ಎಂಬುದರ ಸಂಕೇತವಾಗಿರಬಹುದು.

ನಿಮ್ಮ ಫೋನ್‌ ಆಫ್‌ ಮಾಡಲು ಯತ್ನಿಸಿ

ಫೋನ್‌ ಇದ್ದಕ್ಕಿದ್ದ ಹಾಗೆ ಸ್ಟ್ರಕ್‌ ಆದರೆ ಅಥವಾ ಆಫ್ ಮಾಡಲು ಕಷ್ಟವಾದರೆ, ನಿಮ್ಮ ಫೋನ್‌ ಅನ್ನು ಯಾರೋ ಅನಧಿಕೃತವಾಗಿ ವೀಕ್ಷಿಸುತ್ತಿರುವ ಸಾಧ್ಯತೆ ಇದೆ.

* ಫೋನ್‌ ಅನ್ನು ಸ್ವಿಚ್‌ ಆಫ್‌ ಮಾಡಲು ಸಾಧ್ಯವಾಗದಿದ್ದರೆ, ಸ್ವಿಚ್‌ ಆಫ್‌ ಮಾಡಿದ ನಂತರವೂ ಫೋನ್‌ನ ಬೆಳಕು ಹಾಗೆ ಇದ್ದರೆ ಬೇರೆಲ್ಲೊ ಒಬ್ಬರು ನಿಮ್ಮ ಫೋನ್‌ ಅನ್ನು ನಿಯಂತ್ರಿಸುತ್ತಿರಬಹುದು. ಇದಲ್ಲದೆಯೂ ಫೋನ್‌ ಸ್ವಿಚ್‌ ಆಫ್‌ ಆಗದಿರುವುದಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ.

ನಿಮ್ಮ ಫೋನ್‌ನಲ್ಲಿನ ಅನುಮಾನಾಸ್ಪದ ಚಟುವಟಿಕೆ ಬಗ್ಗೆ ಎಚ್ಚರದಿಂದಿರಿ

ನಿಮ್ಮ ಫೋನ್‌ ಅದರಷ್ಟಕ್ಕೆ ಆಫ್‌– ಆನ್‌ ಆಗುತ್ತಿದ್ದರೆ, ತನ್ನಷ್ಟಕ್ಕೆ ಆ್ಯಪ್‌ ಇನ್‌ಸ್ಟಾಲ್‌ ಆಗುತ್ತಿದ್ದರೆ ಯಾರೋ  ಫೋನ್‌ ಹ್ಯಾಕ್‌ ಮಾಡಿ, ಗೂಢಾಚಾರಿಕೆ ಆ್ಯಪ್‌ಗಳ ಸಹಾಯದಿಂದ ನಿಮ್ಮ ಫೋನ್‌ ಕಾಲ್‌ಗಳನ್ನು ಟ್ಯಾಪ್‌ ಮಾಡಲು ಯತ್ನಿಸುತ್ತಿರಬಹುದು.

* ಅನಾಮಿಕ ಸಂಖ್ಯೆಯಿಂದ ವಿಚಿತ್ರ ಸಂದೇಶ (ಅಕ್ಷರಗಳು ಮತ್ತು ಸಂಖ್ಯೆಗಳಿಂದ ಕೂಡಿದ) ಬಂದರೆ, ನಿಮ್ಮ ಫೋನ್‌ ಅನ್ನು ಟ್ಯಾಪ್‌ ಮಾಡಲು ಯಾರೋ ಯತ್ನಿಸುತ್ತಿದ್ದಾರೆ ಎನ್ನುವುದರ ಪ್ರಮುಖ ಕುರುಹು ಅದಾಗಿದೆ. ಕೆಲವು ಟ್ಯಾಪಿಂಗ್‌ ಆ್ಯಪ್‌ಗಳು ಎಸ್‌ಎಂಎಸ್‌ ಕೋಡ್‌ಗಳ ಮೂಲಕ ಕಮಾಂಡ್‌ ಪಡೆಯುತ್ತವೆ.

ಎಲೆಕ್ಟ್ರಾನಿಕ್ ಹಸ್ತಕ್ಷೇಪಕ್ಕಾಗಿ ಪರಿಶೀಲಿಸಿ 

ನಿಮ್ಮ ಸುತ್ತವಿರುವ ಎಲೆಕ್ಟ್ರಾನಿಕ್‌ ಸಾಧನಗಳ ಪ್ರಭಾವ ನಿಮ್ಮ ಫೋನ್‌ ಮೇಲೆ ಆಗುತ್ತಿರುತ್ತದೆ. ಲ್ಯಾಪ್‌ಟಾಪ್‌, ಕಾನ್ಫರೆನ್ಸ್‌ ಫೋನ್‌ ಅಥವಾ ಟೆಲಿವಿಷನ್‌ ಬಳಿಯಿದ್ದಾಗ ವಿಚಿತ್ರ ಶಬ್ದವಾಗುತ್ತದೆ. ನೀವು ಫೋನ್‌ ಬಳಸದಿದ್ದಾಗ ಈ ರೀತಿ ಆಗಬಾರದು. ಒಂದು ವೇಳೆ ಹಾಗಾಗುತ್ತಿದೆ ಎಂದರೆ, ನಿಮ್ಮ ಫೋನ್‌ ಟ್ಯಾಪ್‌ ಆಗಿದೆ ಎಂದು ಹೇಳಬಹುದು.

* ಎಲೆಕ್ಟ್ರಾನಿಕ್‌ ಸಾಧನವೊಂದರ ಪಕ್ಕದಲ್ಲಿ ನಿಮ್ಮ ಫೋನ್‌ ಇಟ್ಟು ಫೋನ್‌ ಟ್ಯಾಪ್‌ ಆಗಿದೆಯೇ ಎನ್ನುವುದನ್ನು ಪರೀಕ್ಷಿಸಬಹುದು. ಕೆಲವೊಂದು ವಿಚಿತ್ರ ಶಬ್ದಗಳು ನಿಮಗೆ ಕೇಳಿಸಿದರೆ, ಯಾರೊ ನಿಮ್ಮ ಫೋನ್‌ ಕರೆಗಳನ್ನು ಕದ್ದು ಆಲಿಸುತ್ತಿದ್ದಾರೆ ಎನ್ನುವುದನ್ನು ಅದು ಸೂಚಿಸುತ್ತದೆ.

* ಕೆಲವೊಂದು ಟ್ಯಾಪಿಂಗ್‌ ಸಾಧನಗಳು ಹತ್ತಿರದಲ್ಲಿರುವ ಎಫ್‌.ಎಂ ರೆಡಿಯೊ ಶ್ರೇಣಿಯ (ರೆಡಿಯೊ ಬ್ಯಾಂಡ್‌) ತರಂಗಾಂತರಗಳನ್ನು ಬಳಸಿಕೊಳ್ಳುತ್ತವೆ. ನಿಮ್ಮ ರೆಡಿಯೊ ಕರ್ಕಶ ಶಬ್ದ ಹೊರಹೊಮ್ಮಿಸಿದರೆ, ನಿಮ್ಮ ಫೋನ್‌ ಕದ್ದಾಲಿಕೆಯಾಗುತ್ತಿದೆ ಎಂದು ಹೇಳಬಹುದು.

ಫೋನ್‌ ಬಿಲ್‌ ಪರಿಶೀಲಿಸಿ

ನಿಮ್ಮ ಫೋನ್‌ ಬಿಲ್‌ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಸಾಮಾನ್ಯವಾಗಿ ನೀವು ಬಳಸಿದ್ದಕ್ಕಿಂತ ಹೆಚ್ಚಾಗಿ ಸಂದೇಶ ಅಥವಾ ಡಾಟಾ ಬಳಕೆಯಾಗಿದ್ದರೆ, ಯಾರೊ ನಿಮ್ಮ ಫೋನ್‌ ಅನ್ನು ಹ್ಯಾಕ್‌ ಮಾಡಿರುವ ಸಂಭವವಿರುತ್ತದೆ.

ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವಾಗ ಎಚ್ಚರದಿಂದಿರಿ

ಆ್ಯಪ್‌ ಸ್ಟೋರ್‌ ಅಥವಾ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡರೆ ಅಪಾಯಗಳು ಕಡಿಮೆ. ಅಂತಹ ಆ್ಯಪ್‌ಗಳು ಸುರಕ್ಷಿತವಾಗಿರುತ್ತವೆ. ಹೀಗಿದ್ದು ಕೆಲವೊಮ್ಮೆ ಅಪಾಯಕಾರಿ ಆ್ಯಪ್‌ಗಳು ಅದರಲ್ಲಿ ಬಂದುಬಿಡುತ್ತವೆ. ಹೀಗಾಗಿ ಆ್ಯಪ್‌ಗಳನ್ನು ಅದರಲ್ಲಿಯೂ ಗೇಮಿಂಗ್‌ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮುನ್ನ ಎಚ್ಚರವಹಿಸಿ.

ಈ ಮೇಲಿನ ಯಾವುದಾದರು ಒಂದು ಅಂಶವನ್ನು ನಿಮ್ಮ ಫೋನ್‌ನಲ್ಲಿ ಗಮನಿಸಿದರೆ, ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮ ಫೋನ್‌ ಯಾವುದೇ ಗೂಢಾಚಾರಿಕೆ ಅಥವಾ ಟ್ಯಾಪಿಂಗ್ ಸಾಧನಕ್ಕೆ ಒಳಪಟ್ಟಿರುವುದಿಲ್ಲ. ಒಂದು ವೇಳೆ ಈ ಮೇಲಿನ ಬಹುತೇಕ ಅಂಶಗಳು ನಿಮ್ಮ ಫೋನ್‌ನಲ್ಲಿ ಕಾಣಿಸಿಕೊಂಡರೆ ಯಾರೊ ಒಬ್ಬರು ನಿಮ್ಮ ಕರೆಗಳುನ್ನು ಕದ್ದು ಕೇಳುತ್ತಿದ್ದಾರೆ ಎಂದೇ ಅರ್ಥ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು