ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್‌ ಸ್ವಾತಂತ್ರ್ಯ

Last Updated 9 ಫೆಬ್ರುವರಿ 2020, 2:19 IST
ಅಕ್ಷರ ಗಾತ್ರ

ಅಬಿದ್‌ ರಶೀದ್ ಲೋನೆ ಜಮ್ಮು–ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ತನ್ನದೇ ಕಿರು ಐಟಿ ಸೇವಾ ಉದ್ದಿಮೆ ನಡೆಸುತ್ತಿದ್ದ 28ರ ಹರೆಯದ ಯಶಸ್ವಿ ತರುಣ. ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಕೂಡಲೇ ಲೋನೆ ನಿರುದ್ಯೋಗಿಯಾದ!

ಯಾಕೆಂದರೆ, ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನಕ್ಕಿದ್ದ ಸಾಂವಿಧಾನಿಕ ರಕ್ಷಣೆಯನ್ನು ರದ್ದು ಮಾಡಿ, ಅವೆರಡು ರಾಜ್ಯಗಳ ಜೊತೆಗೆ ಲಡಾಖ್‌ ಅನ್ನೂ ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿ ತನ್ನ ತೆಕ್ಕೆಗೆ ತೆಗೆದುಕೊಂಡ ಸರ್ಕಾರ, ರಾಜ್ಯದ ಎಲ್ಲ ಪ್ರಮುಖ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿರಿಸಿ, ಅಲ್ಲಿನ ಇಂಟರ್‌ನೆಟ್, ಫೋನ್ ಮುಂತಾಗಿ ಸಕಲ ಸಂವಹನ ಸೌಕರ್ಯಗಳ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿತ್ತು. ಪರಿಣಾಮವಾಗಿ ತನ್ನ ಕಸುಬಿಗೆ ಇಂಟರ್‌ನೆಟ್‌ ಅನ್ನೇ ನೆಚ್ಚಿಕೊಂಡಿದ್ದ ಅಬಿದ್ ರಶೀದ್ ಏಕಾಏಕಿ ತನ್ನ ಜೀವನೋಪಾಯ ಕಳೆದುಕೊಂಡು ಮನೆಯಲ್ಲಿ ಕೂರಬೇಕಾಯಿತು.

ಎಷ್ಟು ದಿನ ಹೀಗೇ ಕೂರುವುದು? ಅಬಿದ್ ರಶೀದ್ ಕಡೆಗೆ ಆಗಸ್ಟ್ ಮಧ್ಯಭಾಗದಲ್ಲಿ ದಿಲ್ಲಿಗೆ ಸ್ಥಳಾಂತರಗೊಂಡು ಹೊಸದಾಗಿ ಜೀವನ ಕಟ್ಟಿಕೊಳ್ಳಲು ಯತ್ನಿಸಿದ. ಇಲ್ಲಿ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿತ್ತು. ಸಹಜವಾಗಿಯೇ ಸುಲಭವಿರಲಿಲ್ಲ ಎನ್ನುತ್ತಾನೆ ಆತ. ಈಗ ಅಂದರೆ ಜನವರಿ 10ರಂದು ಸುಪ್ರೀಂ ಕೋರ್ಟ್ ಅನುಕೂಲದ ತೀರ್ಪು ಕೊಟ್ಟಿದೆಯಲ್ಲ? ಈಗ ಎಲ್ಲ ಸರಿಹೋಗಿರಬೇಕಲ್ಲವೇ? ಈಗ ಮತ್ತೆ ಶ್ರೀನಗರಕ್ಕೆ ಮರಳುತ್ತೀರಾ? ಎಂದು ಕೇಳಿದರೆ ಇಲ್ಲವಂತೆ! ಅಬಿದ್‌ಗಿನ್ನೂ ಅಷ್ಟು ಧೈರ್ಯ ಬಂದಿಲ್ಲ. ಯಾಕೆಂದರೆ ಈಗ, ಸರಿಸುಮಾರು ಆರು ತಿಂಗಳ ಸುದೀರ್ಘ ದಿಗ್ಬಂಧನದ ನಂತರ ಕಾಶ್ಮೀರದಲ್ಲಿ ಮತ್ತೆ ಇಂಟರ್‌ನೆಟ್ ಸೇವೆ ಸಿಗುತ್ತಿದ್ದರೂ, ಕೊಟ್ಟಿರುವುದೆಲ್ಲ ಮಂದಗತಿಯ 2ಜಿ ಸಂಪರ್ಕ ಮಾತ್ರ. ಅದೂ ಸರ್ಕಾರದ ಕಣ್ಗಾವಲಿನ 301 ವೆಬ್‌ಸೈಟ್‌ಗಳಿಗೆ ಮಾತ್ರ ಕಾಲಿಕ್ಕಬಹುದು, ಪರಿಪೂರ್ಣ ಮುಕ್ತ ಅಂತರ್ಜಾಲ ಸೌಲಭ್ಯವೇನಲ್ಲ. ಸೋಷಿಯಲ್ ಮೀಡಿಯಾಗಳಂತೂ ಇಲ್ಲವೇ ಇಲ್ಲ. ಹಾಗಾಗಿ ಅಬಿದ್‌ಗೆ ಸದ್ಯದಲ್ಲಿ ಶ್ರೀನಗರಕ್ಕೆ ಮರಳುವ ಉತ್ಸಾಹವೇನಿಲ್ಲ.

ದಿಗ್ಬಂಧನ ಹೇರಿದ ದಿನ

ಕಳೆದ ಆಗಸ್ಟ್ 5ರಂದು ಕಾಶ್ಮೀರದಲ್ಲಿ ಒಂದು ಐಟಿ ಸಂಸ್ಥೆಯ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಲಂಡನ್‌ನ ತಮ್ಮ ಕಕ್ಷಿದಾರರಿಗೆ ಮುಗಿಸಿಕೊಡುವುದಾಗಿ ಒಪ್ಪಿಕೊಂಡಿದ್ದ ಕೆಲಸದಲ್ಲಿ ಅರ್ಧದಿನ ಹಿಂದೆ ಬಿದ್ದರು; ಒಂದು ಹೋಟೆಲ್ ತನ್ನ ಸಿಬ್ಬಂದಿಗೆ ಸಂಬಳ ಕೊಡುವುದನ್ನು ಮುಂದೂಡಿತು. ಹೋಟೆಲ್ ಕೊಠಡಿಗಳಿಗೆ ಗ್ರಾಹಕರಿಂದ ಆನ್‌ಲೈನ್ ಬುಕಿಂಗ್ ಕೂಡ ತೆಗೆದುಕೊಳ್ಳಲಾಗಲಿಲ್ಲ; ರಾಜಧಾನಿಯ ಮತ್ತೊಂದು ಪ್ರಮುಖ ಆಸ್ಪತ್ರೆ ಕೂಡ ಸಿಬ್ಬಂದಿಗೆ ಸಂಬಳ ನಿಲ್ಲಿಸಿಕೊಂಡಿತಷ್ಟೇ ಅಲ್ಲ, ಹೊರರೋಗಿಗಳು ಮತ್ತು ತುರ್ತುಸೇವೆ ಹೊರತು ಬೇರೆಲ್ಲ ಸೇವೆಗಳನ್ನೂ ನಿಲ್ಲಿಸಬೇಕಾಯಿತು. ಕಾಶ್ಮೀರ ಬೆಳವಣಿಗೆಗಳಲ್ಲಿ ಕಣ್ಣಿಗೆ ಬೀಳದ ಇಂಥ ಸಹಸ್ರ ಪರಿಪಾಟಲುಗಳ ಕಥೆಗಳಿವೆ.

ಈಗ ಸುಪ್ರೀಂ ಕೋರ್ಟಿನ ತೀರ್ಪು ಈ ಎಲ್ಲ ಗೊಂದಲವನ್ನು ನಿವಾರಿಸಿ ಜನಜೀವನವನ್ನು ಹಳಿಗೆ ತರಬಹುದೇ? ಅಷ್ಟಕ್ಕೂ ಈ ತೀರ್ಪಿನ ತಿರುಳಾದರೂ ಏನು?

ಕಾಶ್ಮೀರದಲ್ಲಿ 370ನೇ ವಿಧಿಯನ್ವಯ ವಿಶೇಷ ಸ್ಥಾನಮಾನ ತೆಗೆದು ಹಾಕಿದ ಬೆನ್ನಲ್ಲೇ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿದ ಕ್ರಮವನ್ನು ಪ್ರಶ್ನಿಸಿ ‘ಕಾಶ್ಮೀರ್ ಟೈಮ್ಸ್‌’ನ ಸಂಪಾದಕಿ ಅನುರಾಧಾ ಭಾಸಿನ್ ಮತ್ತು ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಭಾರತವು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಷ್ಟೇ ಅಲ್ಲ, ನಿರ್ಬಂಧಗಳನ್ನು ಹೇರುವುದರಲ್ಲೂ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ರಾಷ್ಟ್ರ ಕೂಡ! 2019ರ ಒಂದೇ ವರ್ಷದಲ್ಲಿ ಇಂಟರ್‌ನೆಟ್ ಸೇವೆಗಳ ಮೇಲೆ ಭಾರತ 106 ಬಾರಿ ದಿಗ್ಬಂಧನ ಹೇರಿದೆ. ಅದರಲ್ಲೂ ಜಮ್ಮು–ಕಾಶ್ಮೀರದಲ್ಲೇ 55 ಬಾರಿ. ಈ ಸಲದ ನಿರ್ಬಂಧವಂತೂ ಸುಮಾರು ಆರು ತಿಂಗಳ ಸುದೀರ್ಘ ಅವಧಿಯದ್ದು- ಜಗತ್ತಿನ ಜನತಾಂತ್ರಿಕ ದೇಶಗಳಲ್ಲಿ ಇದೇ ಒಂದು ಸಾರ್ವಕಾಲಿಕ ದಾಖಲೆ.

ಈ ದಿಗ್ಬಂಧನಗಳಿಂದಾಗಿಯೇ ಭಾರತ ಕಳೆದ ವರ್ಷ, ಕೊನೆ ಪಕ್ಷ ₹ 9,100 ಕೋಟಿ ನಷ್ಟ ಅನುಭವಿಸಿದೆ ಎಂದು ಲಂಡನ್‌ನ ‘ಟಾಪ್ 10 ವಿಪಿಎನ್ ವೆಬ್‌ಸೈಟ್’ ಅಂದಾಜು ಮಾಡಿದೆ. 2012ರಿಂದ 2017ರ ಅವಧಿಯಲ್ಲಿ ಈ ಬಗೆಯ ದಿಗ್ಬಂಧನಗಳಿಂದಲೇ ದೇಶ ಅನುಭವಿಸಿದ ನಷ್ಟದ ಪ್ರಮಾಣ ಸುಮಾರು 300 ಕೋಟಿ ಡಾಲರ್- ಅಂದರೆ ₹ 20 ಸಾವಿರ ಕೋಟಿ ಎಂಬುದು ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಭಾರತೀಯ ಅಧ್ಯಯನ ಸಂಸ್ಥೆಯ ಅಂದಾಜು!

ಸರ್ಕಾರವೊಂದು ಹೀಗೆ ಏಕಾಏಕಿ ಯಾವುದೇ ವಿವರಣೆ ನೀಡದೆ, ಯಾರಿಗೂ ಉತ್ತರ ಹೇಳದೆ ಮನಸ್ಸಿಗೆ ಬಂದಂತೆ, ಮನಬಂದಷ್ಟು ಕಾಲ, ದಿಗ್ಬಂಧನಗಳನ್ನು ವಿಧಿಸಬಹುದೇ? ಹಾಗಾದರೆ ನಮ್ಮ ಸಂವಿಧಾನ ನೀಡುವ ವ್ಯಕ್ತಿ ಸ್ವಾತಂತ್ರ್ಯ ಮತ್ತಿತರ ಹಕ್ಕುಗಳ ಕಥೆಯೇನು? ವ್ಯಕ್ತಿ ಸ್ವಾತಂತ್ರ್ಯ ಎಷ್ಟು ಮಹತ್ವದ್ದು? ಇನ್ನೊಂದು ಮಗ್ಗುಲಲ್ಲಿ ದೇಶದ ಭದ್ರತೆಯ ಪ್ರಶ್ನೆಗಳು ಎಷ್ಟು ಮುಖ್ಯ? ಕಾಶ್ಮೀರ ವಿಚಾರದ ಅರ್ಜಿಗಳನ್ನು ಮುಂದಿರಿಸಿಕೊಂಡು ಸುಪ್ರೀಂ ಕೋರ್ಟು ಪರಿಶೀಲನೆಗೆ ಎತ್ತಿಕೊಂಡಿದ್ದು ಇದೇ ಪ್ರಶ್ನೆಗಳನ್ನು.

ನಮ್ಮ ಸಂವಿಧಾನ ನಮಗೆಲ್ಲ ಕೆಲವು ಶುದ್ಧಾಂಗ ಮೂಲಭೂತ ಹಕ್ಕುಗಳನ್ನು ನೀಡುತ್ತದೆ. ಸಮಾನತೆ- ಅಂಥದೊಂದು ಶುದ್ಧಾಂಗ ಹಕ್ಕು. ಅಂದರೆ ಬೇಷರತ್ತಾದ ಹಕ್ಕು. ಅದಕ್ಕೆ ಯಾರೂ ಬೇಲಿಗಳನ್ನು ಹಾಕುವಂತಿಲ್ಲ. ಮತ್ತು ಅದು ಭಾರತೀಯ ನಾಗರಿಕರಿಗೆ ಮಾತ್ರ ಸೀಮಿತವೂ ಅಲ್ಲ. ಅದು ಪ್ರತಿಯೊಬ್ಬ ಮನುಷ್ಯನ ಜನ್ಮಸಿದ್ಧ ಹಕ್ಕು. ಭಾರತದಲ್ಲಿಯೇ ನೆಲೆಸಿದ್ದರೂ, ದೇಶದ ಕಾನೂನುಬದ್ಧ ಪ್ರಜೆ ಆಗದೆ ಇರುವವನಿಗೂ ಲಭಿಸುವ ಹಕ್ಕು. ಸಮಾನತೆಯಷ್ಟೇ ಮುಖ್ಯವಾದದ್ದು ಬದುಕುವ ಹಕ್ಕು. ಅದಕ್ಕೂ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ. ಅಂದರೆ ಮಾನವ ಹಕ್ಕುಗಳು ಎಂದು ಗುರುತಾದ ಹಕ್ಕುಗಳಿಗೆ ಸಂವಿಧಾನ ಪರಿಪೂರ್ಣವಾದ ಅಭಯ ನೀಡುತ್ತದೆ.

ಆದರೆ ಸ್ವಾತಂತ್ರ್ಯದ ಹಕ್ಕು ಹಾಗಲ್ಲ. ವಾಕ್ ಸ್ವಾತಂತ್ರ್ಯವಿರಲಿ, ಮತ್ತಿತರ ಸ್ವಾತಂತ್ರ್ಯಗಳಿರಲಿ, ಅವುಗಳ ಮೇಲೆ ಅನಿವಾರ್ಯ ಸಂದರ್ಭಗಳಲ್ಲಿ ಸಕಾರಣ ನಿರ್ಬಂಧಗಳನ್ನು ಹೇರಲು ಸಂವಿಧಾನವೇ ಅವಕಾಶ ಕೊಡುತ್ತದೆ. ದೇಶದ ಆಂತರಿಕ ಭದ್ರತೆ ಅಥವಾ ಪರರಾಷ್ಟ್ರಗಳೊಂದಿಗಿನ ಸಂಬಂಧದ ವಿಚಾರದಲ್ಲಿ ಅಥವಾ ದೇಶದ ಸಾರ್ವಭೌಮತ್ವದ ಪ್ರಶ್ನೆ ಬಂದಾಗ, ಸರ್ಕಾರ ತನ್ನ ವಿವೇಚನೆ ಬಳಸಿ ನಿರ್ದಿಷ್ಟ ಅವಧಿಗೆ, ಹಲವು ನಿರ್ಬಂಧಗಳನ್ನು ಹೇರಬಹುದು. 1975ರಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ರಾಜಕೀಯ ತುರ್ತುಸ್ಥಿತಿ ಹೇರಿದಾಗ ಭಾರತೀಯರು ಇಂಥವೇ ನಿರ್ಬಂಧಗಳನ್ನು ಅನುಭವಿಸಿದ್ದಾರೆ.

ಕಾಶ್ಮೀರದ ತಕರಾರು ಅರ್ಜಿಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಬಂಧಗಳ ಚೌಕಟ್ಟನ್ನೇ ಪರಿಶೀಲನೆಗೊಡ್ಡಿತು:
ಒಂದನೆಯದು- ಸೆಕ್ಷನ್ 144ರ ಅಡಿ ಹೇರುವ ಪ್ರತಿಬಂಧಕಾಜ್ಞೆ. ಮತ್ತೊಂದು- ಬ್ರಿಟಿಷರ ಕಾಲದ 1885ರ ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು 2017ರ ಟೆಲಿಕಾಂ ಸೇವೆಗಳ ನಿಯಮಾವಳಿ ಅಡಿ ಸಂವಹನ ಸೌಕರ್ಯಗಳ ಮೇಲೆ ಹೇರುವ ನಿರ್ಬಂಧ. ಈ ಪ್ರಶ್ನೆಗಳನ್ನು ಪರಿಶೀಲಿಸಿ ಉನ್ನತ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳ ಪೀಠ ಜನವರಿ 10ರಂದು ನೀಡಿದ ತೀರ್ಪು ಹಾಗೂ ಮಾಡಿದ ವ್ಯಾಖ್ಯಾನಗಳು ಐತಿಹಾಸಿಕ, ಮೈಲಿಗಲ್ಲು ತೀರ್ಪು ಎಂದೆಲ್ಲ ಪ್ರಶಂಸೆ ಪಡೆಯುತ್ತಿದ್ದರೂ, ಆ ತೀರ್ಪಿನ ಪರಿಣಾಮಗಳನ್ನು ಸರಿಯಾಗಿ ಅರಿಯಲು ನಿಕಟವಾಗಿ ಗಮನಿಸಬೇಕಿದೆ.

ಸೂಕ್ತ ವಿವರಣೆ ನೀಡದೆ ಅನಿರ್ದಿಷ್ಟ ಅವಧಿಗೆ ಹೇರುವ ಯಾವ ನಿರ್ಬಂಧವೂ ಕಾನೂನುಸಮ್ಮತವಲ್ಲ ಎಂದು ಆ ತೀರ್ಪು ಹೇಳಿದರೂ, ಕೋರ್ಟು ಕಾಶ್ಮೀರದಲ್ಲಿ ಕೂಡಲೇ ಈ ಕಟ್ಟುಪಾಡುಗಳನ್ನು ಸಡಿಲಿಸುವಂತೆ ಸ್ಪಷ್ಟ ನಿರ್ದೇಶನ ಕೊಟ್ಟಿಲ್ಲ. ಬದಲು, ನಾವು ಒಂದು ಕಡೆ ವ್ಯಕ್ತಿ ಸ್ವಾತಂತ್ರ್ಯ, ಮತ್ತೊಂದು ಕಡೆ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳನ್ನು ಇಟ್ಟುಕೊಂಡು ತೀರ್ಮಾನಿಸಬೇಕು ಎಂಬ ಸಮತೋಲ ಸಾಧಿಸಲು ಯತ್ನಿಸಿದೆ.

ಕೋರ್ಟಿನ ಮುಖ್ಯ ತೀರ್ಮಾನ

ಸೆಕ್ಷನ್ 144ರ ಅಡಿ ಹೇರುವ ಪ್ರತಿಬಂಧಕಾಜ್ಞೆ ವಿವೇಚನಾರಹಿತ ಆಗಿರಬಾರದು; ಪ್ರತಿಬಾರಿ ಆದೇಶ ಹೊರಡಿಸುವಾಗಲೂ, ನಿರ್ಬಂಧದ ಅಗತ್ಯವೇನು ಎಂಬುದನ್ನು ಸ್ಪಷ್ಟವಾಗಿ ಲಿಖಿತವಾಗಿ ವಿವರಿಸಬೇಕು ಮತ್ತು ಅದು ನ್ಯಾಯಾಂಗದ ಪರಿಶೀಲನೆಗೂ ಒಳಪಡುವಂತಿರಬೇಕು. ಅನಿರ್ದಿಷ್ಟವಾಗಿ ನಿರ್ಬಂಧ ವಿಧಿಸುವುದು ಕಾನೂನುಬಾಹಿರ.

ಇಷ್ಟೆಲ್ಲ ಹೇಳಿದರೂ ಇವೆಲ್ಲ ಕೋರ್ಟಿನ ಅಭಿಪ್ರಾಯಗಳಾಗಿ ವ್ಯಕ್ತವಾದವೇ ಹೊರತು ಆದೇಶಗಳಾಗಿ ಅಲ್ಲ. ಅಂದರೆ ಆಗಲೇ ಹೇಳಿದಂತೆ, ನಿರ್ಬಂಧಗಳನ್ನು ತೆರವುಗೊಳಿಸುವಂತೆ ಕೋರ್ಟ್ ನೇರ ನಿರ್ದೇಶನ ನೀಡಲಿಲ್ಲ. ಅದರ ಬದಲು, ಕಾಶ್ಮೀರದ ಎಲ್ಲ ಕಟ್ಟಲೆಗಳ ಪರಾಮರ್ಶೆಗೂ ಟೆಲಿಗ್ರಾಫ್ ಕಾಯ್ದೆ ಅಡಿ ಸಮಿತಿಯೊಂದನ್ನು ರಚಿಸಬೇಕು. ಆ ಸಮಿತಿ ವಾರಕ್ಕೊಮ್ಮೆ ಎಲ್ಲ ಆದೇಶಗಳನ್ನೂ ಪರಿಶೀಲಿಸಿ ವರದಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಅಷ್ಟಾದರೂ, ಈ ತೀರ್ಪು ಹೇಗೆ ಮುಖ್ಯವೆಂದರೆ ಸರ್ಕಾರ, ವಿಶೇಷವಾಗಿ ಕಾಶ್ಮೀರದ ವಿಷಯದಲ್ಲಿ ಭಯೋತ್ಪಾದನೆಯ ನೆಪ ಹೇಳುತ್ತ ಒಟ್ಟಾರೆಯಾಗಿ ಉತ್ತರ ಹೇಳುವ ಜವಾಬ್ದಾರಿಯಿಂದಲೇ ನುಣುಚಿಕೊಳ್ಳುತ್ತಿತ್ತು. ಪ್ರಶ್ನಾತೀತವಾಗಿ ಉಳಿಯಲು ಹವಣಿಸುತ್ತಿತ್ತು. ಕೋರ್ಟ್ ಎಷ್ಟು ಬಾರಿ ಕೇಳಿದರೂ ತನ್ನ ಆದೇಶಗಳ ಪ್ರತಿ ಒದಗಿಸಲು ಮುಂದಾಗುತ್ತಿರಲಿಲ್ಲ. ಈಗ ಕೋರ್ಟು ಉತ್ತರ ಹೇಳುವುದನ್ನು ಕಡ್ಡಾಯಗೊಳಿಸಿದೆ.

ಇಲ್ಲಿ ಬೆಂಗಳೂರಿನಲ್ಲೇ (ಇತರೆ ಕಡೆಗಳಲ್ಲೂ) ಪೌರತ್ವ ವಿರೋಧಿ ಪ್ರತಿಭಟನೆಗಳಿಗೆ ಅನುಮತಿ ನೀಡಿಯೂ ನಂತರ ಇದ್ದಕ್ಕಿದ್ದಂತೆ 144ರ ಸೆಕ್ಷನ್ ಅನ್ವಯ ಸಗಟು ನಿರ್ಬಂಧ ಹೇರಿದ ಪೊಲೀಸ್ ಕಮಿಷನರರ ಆದೇಶ ಪ್ರಶ್ನಿಸಲು ಕೂಡ ಸುಪ್ರೀಂ ಕೋರ್ಟಿನ ಈ ತೀರ್ಪು ಊರುಗೋಲಾಗಲಿದೆ. ಯಾಕೆಂದರೆ ಕೋರ್ಟು ಸ್ಪಷ್ಟವಾಗಿ ಹೇಳಿದ್ದು: ಸೆಕ್ಷನ್ 144ರ ಅಡಿ ಪ್ರಾಪ್ತವಾದ ಅಧಿಕಾರವನ್ನು ಸರ್ಕಾರ/ ಅಧಿಕಾರಿಗಳು, ಪ್ರಜೆಗಳ ಜನತಾಂತ್ರಿಕ ಹಕ್ಕುಗಳ ನ್ಯಾಯಬದ್ಧ ಮಂಡನೆ ಅಥವಾ ಪ್ರತಿಭಟನಾ ಸ್ವಾತಂತ್ರ್ವದ ವಿರುದ್ಧ ಬಳಸುವುದು ಅಧಿಕಾರದ ದುರ್ಬಳಕೆಯಾಗುತ್ತದೆ.

ಇಷ್ಟೇ ಮಹತ್ವದ ತೀರ್ಪಿನ ಮತ್ತೊಂದು ಭಾಗ ಇಂಟರ್‌ನೆಟ್ ಬಳಕೆ ಸ್ವಾತಂತ್ರ್ಯ ಕುರಿತದ್ದು. ಪ್ರಜಾಪ್ರಭುತ್ವದಲ್ಲಿ ಮಾಹಿತಿಯ ಮುಕ್ತ ಹರಿವು, ಪ್ರಜೆಗಳ ನಿತ್ಯ ಎಚ್ಚರಕ್ಕೆ ಅಂದರೆ ಪ್ರಜಾತಂತ್ರದ ಉಸಿರಾಟಕ್ಕೇ ಅತ್ಯಗತ್ಯವಾದ ಪ್ರಾಣವಾಯು. ಈ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆಗಳಂಥ ಕ್ರಮಗಳು ಕೂಡ ಕೋರ್ಟ್ ಆದೇಶಗಳ ಮೇಲೇ ರೂಪುಗೊಂಡಿದ್ದನ್ನು ಮರೆಯುವಂತಿಲ್ಲ. ಹಾಗಿರುವಾಗ ಆಧುನಿಕಯುಗದಲ್ಲಿ ಮಾಹಿತಿ ಹರಿವಿನ ಅತಿಮುಖ್ಯ ಸಾಧನವಾಗಿ ಬೆಳೆದಿರುವ ಇಂಟರ್‌ನೆಟ್ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೆಂದೇ ಪರಿಗಣಿಸಬೇಕಲ್ಲವೇ? ಇದೇ ದಿಕ್ಕಿನಲ್ಲಿ ಕೇರಳ ಹೈಕೋರ್ಟು ತೀರಾ ಇತ್ತೀಚೆಗೆ (2019ರಲ್ಲಿ) ಫಹೀಮಾ ಶಿರೀನ್ ಮೊಕದ್ದಮೆಯಲ್ಲಿ ಒಂದು ಮಹತ್ವದ ತೀರ್ಪು ಕೊಟ್ಟಿತ್ತು. ಇಂಟರ್‌ನೆಟ್ ಬಳಕೆ ಸ್ವಾತಂತ್ರ್ಯವನ್ನೂ ಮೂಲಭೂತ ಹಕ್ಕೆಂದೇ ಪರಿಗಣಿಸಬೇಕು ಎಂಬುದೇ ಆ ತೀರ್ಪು. ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆಯುವುದು ಶಿಕ್ಷಣ, ಆರೋಗ್ಯಗಳಂಥ ಮೂಲ ಅಗತ್ಯವೆಂದೇ 2012ರ ರಾಷ್ಟ್ರೀಯ ಟೆಲಿಕಾಂ ನೀತಿಯೂ ಹೇಳುತ್ತದೆ. ಕಾಶ್ಮೀರದ ಕಕ್ಷಿದಾರರು ಈ ಎರಡು ಪ್ರಕರಣಗಳನ್ನೂ ಸುಪ್ರೀಂ ಅಂಗಳದಲ್ಲಿಟ್ಟಿದ್ದರು.

ಅವೆಲ್ಲವನ್ನೂ ಪರಿಶೀಲಿಸಿದ ಕೋರ್ಟು ನೇರವಾಗಿ, ಇಂಟರ್‌ನೆಟ್ ಸ್ವಾತಂತ್ರ್ಯವೂ ಮೂಲಭೂತ ಹಕ್ಕು ಎಂದು ಘೋಷಿಸದಿದ್ದರೂ, ಅದು ಕೂಡ ಸಂವಿಧಾನದ 19ನೇ ವಿಧಿಯನುಸಾರ ಮೂಲಭೂತ ಹಕ್ಕುಗಳ ಪರಿಧಿಗೇ ಬರುವುದೆಂಬ ನಿಲುವು ತಾಳಿತು. ಜೊತೆಗೆ ಆ ಸ್ವಾತಂತ್ರ್ಯದ ಮೇಲೆ ಕಟ್ಟುಪಾಡು ವಿಧಿಸುವಾಗಲೂ ಸರ್ಕಾರಿ ವೆಬ್‌ಸೈಟುಗಳು, ಆಸ್ಪತ್ರೆ. ಬ್ಯಾಂಕುಗಳಂಥ ಅಗತ್ಯ ಸೇವೆಗಳನ್ನು ಈ ನಿರ್ಬಂಧದಿಂದ ಹೊರಗಿಟ್ಟರೆ ಉತ್ತಮ ಎಂಬ ಅಭಿಪ್ರಾಯ ಕೊಟ್ಟಿದೆ.

ಸದ್ಯದ ಪರಿಸ್ಥಿತಿಯಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಆದೇಶವಿದು ಎಂದೇ ಹೇಳಬೇಕು. ಇವುಗಳ ಜಾರಿ ಸಂದರ್ಭದಲ್ಲಿ ವ್ಯಾಖ್ಯಾನದಲ್ಲಿ ಅನಿಶ್ಚಯತೆ ತಲೆದೋರಬಹುದು. ಎಲ್ಲವೂ ಪರಾಮರ್ಶೆ ಸಮಿತಿ ಮತ್ತು ನಂತರ ಕೋರ್ಟ್‌ಗಳ ಪರಿಶೀಲನೆಗೆ ಒಳಪಟ್ಟು ಸ್ಫುಟಗೊಳ್ಳಬೇಕಾಗಬಹುದು.ಹಾಗಾಗಿ, ಇದು ಸ್ವಾತಂತ್ರ್ಯಪ್ರೇಮಿಗಳಿಗೆ ಸಂದ ಪರಿಪೂರ್ಣ ಗೆಲುವು ಅನ್ನಲಾಗದಿದ್ದರೂ, ಸ್ವಾತಂತ್ರ್ಯದ ದಿಕ್ಕಿನಲ್ಲಿಟ್ಟ ಮಹತ್ವದ ಹೆಜ್ಜೆ ಅನ್ನಲಂತೂ ಅಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT