ಗುರುವಾರ , ಅಕ್ಟೋಬರ್ 6, 2022
26 °C

ಅಂತರಿಕ್ಷದಲ್ಲಿ ಕೇಳಿ ಬಂದ ಲಬ್‌ ಡಬ್‌... ಲಬ್‌ ಡಬ್‌...

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

ಅನ್ಯಗ್ರಹ ಜೀವದ ಶೋಧದ ಪ್ರಯತ್ನ ಹೊಸತೇನಲ್ಲ. ಭೂಮಿಯನ್ನು ಬಿಟ್ಟು ಬೇರೆ ಕಡೆಯೂ ಜೀವಿಗಳು ಇರಬಹುದೇ ಎಂಬ ಮಾನವನ ಕುತೂಹಲಕ್ಕೇ ಈಗ ಸಾವಿರಾರು ವರ್ಷಗಳ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ‘ನಾಸಾ’ ಮಾದರಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅಂತರಿಕ್ಷಕ್ಕೇ ಬೂದುಗಾಜು ತೊಡಿಸಿ ನಿರಂತರವಾಗಿ ಶೋಧಿಸುತ್ತಿವೆ. ಜೀವಶೋಧದ ಈ ಪ್ರಯತ್ನಕ್ಕೆ ಬೆನ್ನುತಟ್ಟುವಂತೆ ಈಗ ಹೊಸತೊಂದು ಶೋಧವಾಗಿದೆ. ಬಲುದೂರದ ಅಂತರಿಕ್ಷದಿಂದ ಮಾನವನ ಹೃದಯದ ಬಡಿತವನ್ನು ಹೋಲುವ ರೇಡಿಯೊ ಸಂದೇಶವೊಂದು ಭೂಮಿಯನ್ನು ತಲುಪಿದೆ!

ಹಾಲಿವುಡ್‌ ಸಿನೆಮಾಗಳಲ್ಲಿ ನೀವು ನೋಡಿರಬಹುದು. ರೊನಾಲ್ಡ್‌ ಎಮ್ರಿಚ್ ನಿರ್ದೇಶನದ ‘ದಿ ಇನ್‌ಡಿಪೆಂಡೆನ್ಸ್‌ ಡೇ’ ಸಿನಿಮಾದಲ್ಲೂ ಇದೇ ಮಾದರಿಯ ಅಪರಿಚಿತ ರೇಡಿಯೊ ಸಂದೇಶವೊಂದು ಭೂಮಿಯನ್ನು ತಲುಪಿರುತ್ತದೆ. ಅದು ಅನ್ಯಗ್ರಹಜೀವಿಗಳು ಕಳುಹಿಸಿದ್ದ ಸಂದೇಶ. ಅದನ್ನು ಹಿಂಬಾಲಿಸಿ ಬಳಿಕ ಅನ್ಯಗ್ರಹಜೀವಿಗಳೂ ಭೂಮಿಗೆ ದಾಳಿ ಇಡುತ್ತವೆ. ಆದರೆ, ಅದು ಕೇವಲ ಸಿನೆಮಾ. ವಾಸ್ತವದಲ್ಲಿ ಲಕ್ಷಾಂತರ ಜ್ಯೋತಿರ್ವಷಗಳನ್ನು ದಾಟಿ ಭೂಮಿಗೆ ಅಗ್ಯಗ್ರಹ ಜೀವಿಯೊಂದು ಬರುವುದಕ್ಕೆ ಸಾಕಷ್ಟು ಇತಿಮಿತಿಗಳಿರುತ್ತವೆ. ಅದೂ ಅಲ್ಲದೇ, ಅನ್ಯಗ್ರಹಜೀವಿಗಳು ಇರುವುದೇ ಈವರೆಗೂ ಸಾಬೀತಾಗಿಲ್ಲದೇ ಇರುವುದು ಈ ಬಗೆಯ ಕಲ್ಪನೆಗಳಿಗೆಲ್ಲಾ ಕೇವಲ ಸಿನಿಮೀಯ ರೂಪವನ್ನು ಮಾತ್ರ ನೀಡಿವೆ.

ಜೊತೆಗೆ, ಇದು ಮೊದಲನೇ ಬಾರಿ ಸಿಕ್ಕಿರುವ ರೇಡಿಯೋ ಸಂದೇಶವೇನಲ್ಲ. ಈ ಹಿಂದೆಯೂ ರೇಡಿಯೊ ಸಂದೇಶಗಳು ನಮಗೆ ದೊರೆತಿವೆ. ರೇಡಿಯೊ ಸಂದೇಶಗಳೆಂದರೆ ಅವನ್ನು ಬುದ್ಧಿಮತ್ತೆ ಇರುವ ಜೀವಿಗಳೇ ಸೃಷ್ಟಿಸಬೇಕು ಎಂದೇನಿಲ್ಲ. ಬಲುದೂರದ ಗ್ಯಾಲಕ್ಸಿ(ನಕ್ಷತ್ರಪುಂಜ)ಗಳಲ್ಲಿ ಇರುವ ‘ನ್ಯೂಟ್ರಾನ್‌ ಸ್ಟಾರ್‌’ಗಳಿಂದ ಈ ಬಗೆಯ ರೇಡಿಯೊ ಸಂದೇಶಗಳು ಹೊರಹೊಮ್ಮುತ್ತವೆ. ಇವನ್ನು ರೇಡಿಯೊ ಪಲ್ಸಾರ್ ಹಾಗೂ ಮ್ಯಾಗ್ನೆಟಾರ್‌ ಎಂದು ಕರೆಯಲಾಗುತ್ತದೆ. ಅತಿ ದೊಡ್ಡ ಗಾತ್ರವನ್ನು ಹೊಂದಿರುವ ನಕ್ಷತ್ರಗಳಲ್ಲಿನ ಜಲಜನಕವೆಲ್ಲಾ ಮುಗಿದ ಮೇಲೆ ಆ ನಕ್ಷತ್ರದ ಆಯಸ್ಸು ಬಹುತೇಕ ಮುಗಿದಂತೆಯೇ. ಆಗ ಅದರ ಗುರುತ್ವಬಲ ಹೆಚ್ಚಾಗಿ ಅದರ ತಿರುಳು ತನಗೆ ತಾನೇ ಕುಸಿಯಲು ಆರಂಭವಾಗುತ್ತದೆ. ಅದರ ಗಾತ್ರ ಕುಗ್ಗುತ್ತಾ ಸಾಂದ್ರತೆ ಹೆಚ್ಚಲು ಶುರುವಾಗುತ್ತದೆ. ಆ ಹಂತದ ನಕ್ಷತ್ರವನ್ನು ‘ನ್ಯೂಟ್ರಾನ್ ಸ್ಟಾರ್’ ಎನ್ನಲಾಗುತ್ತದೆ. ಈ ‘ನ್ಯೂಟ್ರಾನ್‌ ಸ್ಟಾರ್‌’ಗಳ ಪರಿಭ್ರಮಣೆಯ ವೇಗವೂ ಹೆಚ್ಚು. ಈ ನಕ್ಷತ್ರದ ಅಧಿಕ ಸಾಂದ್ರತೆ ಹಾಗೂ ಪರಿಭ್ರಮಣೆಯ ಫಲವಾಗಿ ಅತಿ ಪ್ರಬಲವಾದ ರೇಡಿಯೊ ಸಂದೇಶಗಳು ಹೊರಹೊಮ್ಮುತ್ತವೆ. ಅದೇ ಈಗ ನಮಗೆ ಸಿಕ್ಕಿರುವ ರೇಡಿಯೊ ಸಂದೇಶ.

ಇದುವರೆಗೂ ಇಂತಹ ಅನೇಕ ರೇಡಿಯೊ ಸಂದೇಶಗಳು ನಮಗೆ ಸಿಕ್ಕಿವೆ. ಆದರೆ, ಈಗ ಸಿಕ್ಕಿರುವುದು ಕೊಂಚ ವಿಶೇಷವಾಗಿದೆ. ಹಾಗಾಗಿಯೇ, ಇದು ಸಂಚಲನ ಮೂಡಿಸಿದೆ. ಅಮೆರಿಕದ ಮಷಾಸುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಹಾಗೂ ವಿಶ್ವದ ಹಲವು ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳ ಸೇರಿ ಈ ಸಂಶೋಧನೆಯನ್ನು ನಡೆಸಿದ್ದಾರೆ. ಈ ಬಗೆಯ ರೇಡಿಯೊ ಸಂದೇಶಗಳನ್ನು ‘ಫಾಸ್ಟ್ ರೇಡಿಯೊ ಬರ್ಸ್ಟ್‌’ (ಎಫ್‌ಆರ್‌ಬಿ) ಎನ್ನುತ್ತಾರೆ. ಈವರೆಗೆ ಸಿಕ್ಕಿರುವ ರೇಡಿಯೊ ಸಂದೇಶಗಳಿಗಿಂತ ಇದು ಬಹುಪಾಲು ಒಂದು ಸಾವಿರ ಪಟ್ಟು ಹೆಚ್ಚು ಬಲಶಾಲಿಯಾಗಿದೆ. 0.2 ಸೆಕೆಂಡ್‌ಗಳ ಅಂತರದಲ್ಲಿ ಈ ರೇಡಿಯೊ ಸಂದೇಶ ಪ್ರಸಾರವಾಗುತ್ತಿದ್ದು, ಮಾನವನ ಹೃದಯದ ಬಡಿತವನ್ನೇ ಹೋಲುವಂತಿರುವುದು ಕುತೂಹಲ ಕೆರಳಿಸಲು ಕಾರಣವಾಗಿದೆ.


–ಚಿಲಿಯಲ್ಲಿರುವ ಆಲ್ಮಾ ದೂರದರ್ಶಕ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯನ್ನೂ ಸೇರಿದಂತೆ ಅನೇಕ ರೇಡಿಯೊ ದೂರದರ್ಶಕಗಳು ಕಾರ್ಯನಿರ್ವಹಿಸುತ್ತಿವೆ. ಅಮೆರಿಕದ ‘ನಾಸಾ’ ಅಂತರಿಕ್ಷದಲ್ಲೇ ಹಲವು ಕೃತಕ ಉಪಗ್ರಹಗಳು ಹಾಗೂ ದೂರದರ್ಶಕಗಳನ್ನು ಪ್ರತಿಷ್ಠಾಪಿಸಿದೆ. ಭೂಮಿಗೆ ಅತಿ ಸನಿಹವಾಗಿರುವ ನಕ್ಷತ್ರಪುಂಜ ‘ಆಂಡ್ರಾಮಿಡಾ’. ಅದು ಭೂಮಿಯಿಂದ 2.537 ಮಿಲಿಯನ್ ಜ್ಯೋತಿವರ್ಷ ದೂರದಲ್ಲಿದೆ. ಆದರೆ, ಈಗ ಸಿಕ್ಕಿರುವ ಈ ರೇಡಿಯೊ ಸಂದೇಶ ಹಲವು ಬಿಲಿಯನ್ ಜ್ಯೋತಿವರ್ಷ ದೂರದಲ್ಲಿರುವ ನ್ಯೂಟ್ರಾನ್‌ ಅಥವಾ ಮಾಗ್ನೆಟಾರ್‌ನಿಂದ ಬಂದಿರುವಂಥದ್ದು. ರೇಡಿಯೊ ಸಂದೇಶವೊಂದು ಅಷ್ಟು ದೂರದಿಂದ ಭೂಮಿಯನ್ನು ತಲುಪಬೇಕಾದರೆ ಹಾಗೂ ಅದು ಅಷ್ಟು ಪ್ರಬಲವಾಗಿರಬೇಕು ಎಂದಾದರೆ ಅದು ಬಹುದೈತ್ಯ ನಕ್ಷತ್ರವೊಂದರಿಂದಲೇ ಹೊಮ್ಮಿರಬೇಕು. ಅಥವಾ ಬುದ್ಧಿಮತ್ತೆ ಇರುವ, ತಾಂತ್ರಿಕವಾಗಿ ಬಲು ಸುಧಾರಿಸಿರುವ ಜೀವಿಗಳು ಆ ರೇಡಿಯೋ ಸಂದೇಶವನ್ನು ಸೃಷ್ಟಿಸಿ ಕಳುಹಿಸಿರಬಹುದು ಎನ್ನುವುದು ವಿಜ್ಞಾನಿಗಳ ವಾದ.

‘ನಾವು ಹೇಗೆ ಅನ್ಯಗ್ರಹಜೀವಿಗಳ ಶೋಧದಲ್ಲಿ ಉತ್ಸುಕರಾಗಿದ್ದೇವೆಯೋ; ಅಂತೆಯೇ ಅನ್ಯಗ್ರಹಜೀವಿಗಳು ಅದೇ ಪ್ರಯತ್ನದಲ್ಲಿರಬಹುದು. ಅದರ ಫಲವಾಗಿ ಈ ಬಗೆಯ ಸಂದೇಶವೊಂದು ನಮಗೆ ತಲುಪಿರಬಹುದು. ಮಾನವನ ಹೃದಯದ ಬಡಿತವನ್ನು ಹೋಲುವುದು ಕಾಳತಾಳೀಯವೂ ಆಗಿರಬಹುದು ಅಥವಾ ಉದ್ದೇಶಪೂರ್ವಕವೂ ಆಗಿರಬಹುದು. ಆದರೆ, ಸಾಧ್ಯತೆಯನ್ನು ಅಲ್ಲಗಳೆದು ಜೀವಶೋಧ ನಿಲ್ಲಿಸಲಾಗದು. ಈ ನಿಟ್ಟಿನಲ್ಲಿ ಇದು ಬಹುದೊಡ್ಡ ಸುಳಿವು’ ಎಂದು ಅಮೆರಿಕದ ಬಾಹ್ಯಾಕಾಶ ವಿಜ್ಞಾನಿ ನೀಲ್ ಡಿಗ್ರಾಸ್ ಟೈಸನ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಶೋಧನೆಯು ಹಲವು ಹೊಸ ಸಂಶೋಧನೆಗಳಿಗೆ ದಾರಿ ಮಾಡಿಕೊಡಬಲ್ಲದು. ನಕ್ಷತ್ರಗಳವರೆಗಿನ ಈವರೆಗಿನ ಅಧ್ಯಯನಗಳು ಏರುಪೇರಾಗಬಹುದು. ರೇಡಿಯೊ ಸಂದೇಶದ ಕೂಲಂಕಷವಾಗಿ ಅಧ್ಯಯನ ಈಗಾಗಲೇ ನಡೆದಿದೆ. ಅದರಿಂದ ಹೊಸ ಸುಳಿವುಗಳೂ ಸಿಗಬಹುದು. ಜ್ಞಾನದ ಪರಿಧಿ ವಿಸ್ತರಿಸಲು ಇದು ಮಾರ್ಗಸೂಚಿಯೂ ಆಗಬಹುದು.


ಕಲಾವಿದನ ಕಲ್ಪನೆಯಲ್ಲಿ ರೇಡಿಯೊ ಅಲೆ ಅಂತರಿಕ್ಷದಿಂದ ಭೂಮಿಯನ್ನು ತಲುಪುವ ಚಿತ್ರ. ನೀಲಿ ಚುಕ್ಕಿ ಭೂಮಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು