ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರ ಹೊಸ ತಂತ್ರಜ್ಞಾನಗಳು

Last Updated 21 ಜನವರಿ 2020, 9:26 IST
ಅಕ್ಷರ ಗಾತ್ರ
ADVERTISEMENT
""
""
""
""

ಅಭಿವೃದ್ಧಿಯ ಪಥದಲ್ಲಿ ಶರವೇಗವಾಗಿ ಮುನ್ನುಗ್ಗುತ್ತಿರುವ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಗ್ರಸ್ಥಾನದಲ್ಲಿದೆ. ಮನುಷ್ಯನ ಜೀವನ ನಿರ್ವಹಣೆಯನ್ನು ಸಲೀಸು ಮಾಡುವ ಕೆಲವು ಸಾಧನಗಳು ಮತ್ತು ತಂತ್ರಜ್ಞಾನಗಳು ಈ ವರ್ಷವೂ ಬಳಕೆಗೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಒಂದಿಷ್ಟು ಮಾಹಿತಿ .

5ಜಿ ತಂತ್ರಜ್ಞಾನ

ಈವರೆಗೂ 4ಜಿ ತಂತ್ರಜ್ಞಾನಕ್ಕೆ ತಂತ್ರಜ್ಞಾನ ಪ್ರಿಯರು ಸಮಾಧಾನಪಟ್ಟುಕೊಂಡಿದ್ದಾರೆ. ಈ ವರ್ಷ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುವ 5ಜಿ ತಂತ್ರಜ್ಞಾನ ಬಳಕೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಆ್ಯಪಲ್‌ ಸಂಸ್ಥೆ 5ಜಿ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಮೊಬೈಲ್‌ಫೋನ್‌ಗಳನ್ನು ಮಾರುಕಟ್ಟೆಗೆ ತರುವ ನಿರೀಕ್ಷೆ ಇದೆ. ಈಗಾಗಲೇ ಸ್ಯಾಮ್‌ಸಂಗ್ ಸಂಸ್ಥೆ 5ಜಿ ಮೊಬೈಲ್‌ಫೋನ್‌ ಬಳಕೆಗೆ ತಂದಿದೆ. ಇನ್ನೂ ಕೆಲವು ಸಂಸ್ಥೆಗಳು ಕೂಡ ಇದೇ ಕೆಲಸದಲ್ಲಿ ಮಗ್ನವಾಗಿವೆ. ಅತಿದೊಡ್ಡ ವೈರ್‌ಲೆಸ್ ಕಮ್ಯುನಿಕೇಷನ್ ಸಂಸ್ಥೆಗಳಲ್ಲಿ ಒಂದದ ವೆರಿಜೋನ್‌, ಅಮೆರಿಕದ ಶೇ 50ಕ್ಕೂ ಹೆಚ್ಚಿನ ಜನರಿಗೆ 5ಜಿ ಒದಗಿಸುತ್ತೇವೆ ಎಂದು ಹೇಳಿದೆ.

ಪೆಟ್ ಟ್ರಾನ್ಸ್‌ಲೇಟರ್‌

ನಾವು ಸಾಕಿಕೊಳ್ಳುತ್ತಿರುವ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳು ನಮ್ಮೊಂದಿಗೆ ಮಾತನಾಡಿದರೆ ಹೇಗಿರುತ್ತದೆ ಒಮ್ಮೆ ಯೋಚಿಸಿ. ಇದು ಅಸಾಧ್ಯವಾದರೂ ಅವು ನಿಮಗೆ ಏನು ಹೇಳಲು ಬಯಸುತ್ತಿವೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟವೇನಲ್ಲ ಎನ್ನುತ್ತಿದ್ದಾರೆ ತಂತ್ರಜ್ಞರು.

ಈಗಾಗಲೇ ಕೆಲವು ಸಂಸ್ಥೆಗಳು ಮೂಕ ಜೀವಿಗಳ ಭಾವನೆಗಳನ್ನು ಮನುಷ್ಯರಿಗೆ ಅರ್ಥ ಮಾಡಿಸುವ ಗ್ಯಾಜೆಟ್‌ಗಳ ತಯಾರಿಯಲ್ಲಿ ನಿರತವಾಗಿವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಈ ಗ್ಯಾಜೆಟ್‌ಗಳನ್ನು ತಯಾರಿಸುವುದಾಗಿ ಹೇಳುತ್ತಿವೆ.

ಮೂಕ ಪ್ರಾಣಿಗಳು ಹೊರಡಿಸುವ ಶಬ್ದಗಳು, ಚೀರಾಟ, ಮುಖ ಮತ್ತು ದೇಹದ ಚಲನೆಗಳನ್ನು ಅಧ್ಯಯನ ಮಾಡಿ ಅದನ್ನು ಇಂಗ್ಲಿಷ್‌ ಭಾಷೆಗೆ ಪರಿವರ್ತಿಸಿ ಈ ಸಾಧನಗಳು ವಿವರಿಸಲಿವೆ. ಈ ನಿಟ್ಟಿನಲ್ಲಿ ನಾರ್ತನ್ ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರು ಹೆಚ್ಚು ಮಗ್ನರಾಗಿದ್ದಾರೆ.

ವರ್ಚುವಲ್ ಕೀಬೋರ್ಡ್‌

ಈ ವರ್ಷ ವರ್ಚುವಲ್ ಕೀಬೋರ್ಡ್‌ಗಳು ಬಳಕೆಗೆ ಬರುವ ಸಾಧ್ಯತೆ ಇದೆ. ಕಣ್ಣಿಗೆ ಕಾಣಿಸುತ್ತಿದ್ದರೂ ಕೈಯಿಂದ ತಾಕಲು ಸಾಧ್ಯವಾಗದಂತಹ ವಿಶೇಷ ಕೀಬೋರ್ಡ್‌ಗಳು ಇವು. ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ಗೆ ಜೋಡಿಸಿ, ಪ್ರೊಜೆಕ್ಟರ್ ಸಹಾಯದಿಂದ ಇದನ್ನು ಬಳಸಬಹುದು.

ಈ ಪ್ರೊಜೆಕ್ಟರ್‌ನಿಂದ ಹೊಮ್ಮುವ ಬೆಳಕು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮುಂದೆ ಕೀ ಬೋರ್ಡ್‌ ಆಕಾರವನ್ನು ಮೂಡಿಸುತ್ತದೆ. ಈ ಕೀಬೋರ್ಡ್‌ ಮೇಲೆ ಕೈ ಆಡಿಸಿದರೆ ಸೆನ್ಸರ್‌ಗಳು ಚಲನೆಯನ್ನು ಗ್ರಹಿಸಿ ಅಕ್ಷರಗಳನ್ನು ಪರದೆ ಮೇಲೆ ಮೂಡಿಸುತ್ತವೆ. ವರ್ಚುವಲ್ ಮೌಸ್‌ ಸಹ ಬಳಕೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಮಡಚುವ ಕೀಬೋರ್ಡ್‌ಗಳು ತಂತ್ರಜ್ಞಾನ ಪ್ರಿಯರ ಮನಸೂರೆ ಮಾಡಿವೆ. ವರ್ಚುವಲ್ ಕೀಬೋರ್ಡ್‌ಗಳು ಕೂಡ ಇದೇ ರೀತಿ ಸದ್ದು ಮಾಡಬಹುದು.

ಮಾತ್ರೆಗಳಲ್ಲಿ ಸೆನ್ಸರ್

ಹುಷಾರಿಲ್ಲ ಎಂದು ವೈದ್ಯರ ಬಳಿಗೆ ಹೋದರೆ, ಕೆಲವೊಮ್ಮೆ ವಿವಿಧ ಪರೀಕ್ಷೆಗಳನ್ನು ಮಾಡಿಸುವಂತೆ ಸೂಚಿಸುತ್ತಾರೆ. ಪರೀಕ್ಷೆಗಳ ವರದಿ ಕೈಗೆ ಸೇರುವುದಕ್ಕೆ ಕೆಲವು ಗಂಟೆಯಾದರೂ ಕಾಯಬೇಕು. ಇನ್ನು ಕೆಲವೇ ದಿನಗಳಲ್ಲಿ ಇಂತಹ ಸಮಸ್ಯೆಗಳು ದೂರವಾಗಲಿವೆ ಎನ್ನುತ್ತಿದ್ದಾರೆ ವೈದ್ಯ ವಿಜ್ಞಾನಿಗಳು.

ವೇರಿಯೇಬಲ್ ಡಿವೈಸ್‌ಗಳ ರೂಪದಲ್ಲಿ ಹಲವು ಗ್ಯಾಜೆಟ್‌ಗಳು ಈ ವರ್ಷ ಬರುವ ಸಾಧ್ಯತೆ ಇದೆ. ಇವನ್ನು ಶರೀರದ ಭಾಗಗಳಿಗೆ ಅಂಟಿಸಿಕೊಂಡು, ಮಾತ್ರೆ ರೂಪದಲ್ಲಿ ಸೆನ್ಸರ್‌ಗಳನ್ನು ನುಂಗಿದರೆ ಸಾಕು. ದೇಹದ ಎಲ್ಲ ಸ್ಥಿತಿ–ಗತಿಗಳ ಬಗ್ಗೆ ಸೆನ್ಸರ್‌ಗಳು ಗ್ಯಾಜೆಟ್‌ಗೆ ಮಾಹಿತಿ ನೀಡುತ್ತವೆ. ಕರುಳು ಸಮಸ್ಯೆ, ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳು... ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಬಹುದು.

ಮಡಚುವ ಟ್ಯಾಬ್ಲೆಟ್‌

ಮಡಚಬಹುದಾದ ಫೋನ್‌ಗಳ ಸುದ್ದಿ ಈಗಾಗಲೇ ಸದ್ದು ಮಾಡುತ್ತಿದೆ. ಸ್ಯಾಮ್‌ಸಂಗ್ ಸಂಸ್ಥೆ ಈಗಾಗಲೇ ಮಡಚುವ ಫೋನ್ ಬಿಡುಗಡೆ ಮಾಡಿದೆ. ಹೆಚ್ಚಿನ ಪ್ರಮಾಣದಲ್ಲಿ ಈ ಫೋನ್‌ ಬಳಕೆಗೆ ಬರುವ ಮುನ್ನವೇ ಮಡಚಬಹುದಾದ ಟ್ಯಾಬ್ಲೆಟ್‌ಗಳ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಟ್ಯಾಬ್ಲೆಟ್‌ಗಳು ದೊಡ್ಡದಾಗಿರುತ್ತವೆ, ಬಳಕೆ ಕಷ್ಟ ಎನ್ನುವವರು ಅವನ್ನು ಮಡಚಿಕೊಂಡು ಮೊಬೈಲ್‌ಫೋನ್‌ನಂತೆ ಕಿಸೆಯಲ್ಲಿ ಇಟ್ಟುಕೊಂಡು ಓಡಾಡಬಹುದು. ಕೆಲವು ಮೊಬೈಲ್ ತಯಾರಿಕಾ ಸಂಸ್ಥೆಗಳು ಮಡಚಬಹುದಾದ ಸಾಧನಗಳ ಕಡೆಗೆ ಕಣ್ಣು ಹಾಯಿಸಿವೆ. ಈಗಾಗಲೇ ಇವುಗಳ ಪ್ರೊಟೊಟೈಪ್‌ಗಳನ್ನು ಬಿತ್ತರಿಸಿರುವುದರಿಂದ ಈ ವರ್ಷ ಮಡಚಬಹುದಾದ ಟ್ಯಾಬ್ಲೆಟ್‌ಗಳು ಬಳಕೆಗೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT