ಸೋಮವಾರ, ಆಗಸ್ಟ್ 8, 2022
22 °C

PV Web Exclusive | ಕಾಡುವ ನೋಮೊಫೋಬಿಯಾ

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ಮೊಬೈಲ್ ಫೋನ್‌‌ ಆಗಾಗ ಕೇಳುವ ಅಪ್‌ಡೇಟ್‌ನಿಂದ ಒಂದು ಬಗೆಯ ಆತಂಕ ಕಾಡುತ್ತಾ? ಎಲ್ಲ ಡೇಟಾಗಳು ಎಲ್ಲಿ ಕಳೆದು ಹೋಗಿ ಬಿಡುತ್ತೋ ಅನ್ನೋ ವ್ಯರ್ಥ ಆಲೋಚನೆ ಮೂಡುತ್ತಾ? ಇದ್ದಕಿದ್ದ ಹಾಗೆ ಮೊಬೈಲ್ ಕಳೆದುಕೊಂಡ ಹಾಗೇ ಯೋಚನೆ ಸುಳಿದಾಡುತ್ತಾ?, ಕಳೆದೇ ಹೋಯಿತು ಅನ್ನುವಷ್ಟರ ಮಟ್ಟಿಗೆ ಚಿಂತೆಗೆ ಒಳಗಾಗ್ತೀರಾ? ಇಂಟರ್‌ನೆಟ್‌ ಪ್ಲಾನ್‌ ಮುಗಿದು, ಎಲ್ಲ ಸಂಪರ್ಕ ಕಡಿತಗೊಂಡು ಬಾಹ್ಯ ಜಗತ್ತಿನಿಂದ ದೂರಗೊಂಡೆ ಎನ್ನುವ ಅಭದ್ರತಾ ಭಾವ ಕಾಡುತ್ತಾ? ಸ್ವಿಚ್‌ ಆಫ್‌ ಆಗಿಬಿಟ್ರೆ ಅಂತ ಅವಧಿಗೂ ಮೊದಲೇ ಚಾರ್ಜರ್‌ ಅಳವಡಿಸಲು ಪ್ರಯತ್ನಿಸ್ತೀರಾ...

ಹಾಗಿದ್ರೆ ಸಂಶಯವೇ ಬೇಡ. ಇವೆಲ್ಲವೂ ನೋಮೊಪೋಬಿಯಾ ಎಂಬ ಹೊಸ ಬಗೆಯ ಫೋಬಿಯಾದ ಸ್ಪಷ್ಟ ಲಕ್ಷಣಗಳು. 

ಮನುಷ್ಯ ಜಗತ್ತು ಗ್ಯಾಡ್ಜೆಟ್‌ಗಳಿಗೆ ಎಷ್ಟರ ಮಟ್ಟಿಗೆ ಒಗ್ಗಿ ಹೋಗಿದೆ ಅಂದರೆ, ಅವುಗಳಿಲ್ಲದೆ ಜೀವನ ಬಹಳ ನೀರಸ ಅಂತ ವ್ಯಾಖ್ಯಾನ ಮಾಡುವಷ್ಟು. ನಿತ್ಯ ಬದುಕಿನ ಭಾಗವೇ ಆಗಿರುವ ಈ ಗ್ಯಾಡ್ಜೆಟ್‌ಗಳು‌ ಅದರಲ್ಲೂ  ಮೊಬೈಲ್ ಫೋನ್‌ ಇಲ್ಲದ ಪರಿಸ್ಥಿತಿಯನ್ನೇ ಸದ್ಯಕ್ಕೆ ಶೂನ್ಯ ಸ್ಥಿತಿಗೆ ಹೋಲಿಸಿಕೊಳ್ಳುವಂಥ ಸ್ಥಿತಿ ಉಂಟಾಗಿದೆ. 

ನೋಮೊಫೋಬಿಯಾ ಅಂದರೆ, ‘ನೋ ಮೊಬೈಲ್‌ ಪೋನ್‌‘ ಫೋಬಿಯಾ. ಮೊಬೈಲ್‌ ಫೋನಿನ ಸಂಪರ್ಕವೇ ಇರದ ಸ್ಥಿತಿ. ಈ ಸ್ಥಿತಿ ಯಾವ ಗಳಿಗೆಯಲ್ಲಿಯಾದರೂ ಎದುರಾಗಬಹುದು ಎಂದು ಪದೇ ಪದೇ ಯೋಚಿಸುತ್ತ ಆತಂಕಕ್ಕೆ ಒಳಗಾಗುವುದು. 

ಈ ನೋಮೊಫೋಬಿಯಾ ಪದವು ಮೊದಲ ಬಾರಿಗೆ 2007ರಲ್ಲಿ ಲಂಡನ್ನಿನಲ್ಲಿ ಬಳಕೆಯಾಯಿತು. 2019ರಲ್ಲಿ  ’ಫ್ಯಾಮಿಲಿ ಮೆಡಿಸಿನ್‌ ಆ್ಯಂಡ್‌ ಪ್ರೈಮರಿ ಕೇರ್‌‘ ಜರ್ನಲ್‌ನಲ್ಲಿ ಪ್ರಕಟಗೊಂಡ ಅಧ್ಯಯನದ ವರದಿ ಹೇಳುವಂತೆ,  ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಧದಷ್ಟು ಮಂದಿ ’ಮೊಬೈಲ್‌ ಫೋನ್‌ ಇಲ್ಲದೇ ಇದ್ದಾಗ ಒಂದು ಬಗೆಯ ಆತಂಕದ ಸ್ಥಿತಿ ಇರುತ್ತದೆ‘  ಅಂತ ಹೇಳಿಕೊಂಡಿದ್ದಾರೆ. 

2020ರಲ್ಲಿ ’ಸ್ಲೀಪ್‌‘ ಜರ್ನಲ್‌ನಲ್ಲಿ ಪ್ರಕಟವಾದ ಮಾಹಿತಿಯ ಅನುಸಾರ,  ಅಧ್ಯಯನಕ್ಕೆ ಒಳಪಟ್ಟ ವಿಶ್ವವಿದ್ಯಾಲಯಗಳ 327 ವಿದ್ಯಾರ್ಥಿಗಳಲ್ಲಿ ಶೇ 90ರಷ್ಟು ಮಂದಿ ಸಾಮಾನ್ಯ ಮಟ್ಟದಿಂದ ತೀವ್ರ ಸ್ವರೂಪದ ನೋಮೊಫೋಬಿಯಾದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರಲ್ಲಿ ನಿದ್ರಾಹೀನತೆ ಮತ್ತು ಹಗಲಿನಲ್ಲಿ ಅತಿಯಾದ ನಿದ್ರೆ ಮಾಡುವಂಥ ಸಮಸ್ಯೆಗಳು ಹೆಚ್ಚಾಗಿವೆ. 

ದೀಪ ಆರಿಸಿ, ನಿದ್ರೆಗೆ ಜಾರುವ ಮುನ್ನ ಪದೇ ಪದೇ ಇಮೇಲ್‌, ವಾಟ್ಸ್‌‌ ಆ್ಯಪ್‌, ಸಾಮಾಜಿಕ ಜಾಲತಾಣಗಳ ಮೆಸೇಜ್‌ಗಳನ್ನು ಚೆಕ್‌ ಮಾಡುವ ಅಭ್ಯಾಸವನ್ನು ಇವರೆಲ್ಲ ಹೊಂದಿದ್ದಾರೆ.  ಮಧ್ಯರಾತ್ರಿ ದಿಢೀರ್‌ ಅಂತ ಎದ್ದು ಮೊಬೈಲ್‌ಗಾಗಿ ತಡಕಾಡಿ, ಮತ್ತೊಮ್ಮೆ ಮೆಸೇಜ್‌ಗಳನ್ನು ಚೆಕ್‌ ಮಾಡಿ ಅವೆಲ್ಲವೂ ಭದ್ರವಾಗಿವೆ ಎಂದು ಖಾತ್ರಿಪಡಿಸಿಕೊಳ್ಳುವುದಾಗಿಯೂ ಹೇಳ್ಕೊಂಡಿದ್ದಾರೆ. 

ಕಾರಣ ಏನು?

ಈ ಫೋಬಿಯಾ ಹುಟ್ಟಲು ನಿರ್ದಿಷ್ಟ ಕಾರಣ ಇಲ್ಲದೇ ಇದ್ದರೂ ಏಕಾಂಗಿತನ ಹಾಗೂ ಪ್ರೀತಿ, ವಾತ್ಸಲ್ಯದ ಕೊರತೆಯೂ ಕಾರಣ ಆಗಿರಬಹುದು. ಅಭದ್ರತಾ ಭಾವದಿಂದಲೂ ಈ ಸಮಸ್ಯೆ ಉಂಟಾಗಬಹುದು. ಗ್ಯಾಡ್ಜೆಟ್‌ಗಳ ಮೇಲಿನ ಅತಿಯಾದ ಅವಲಂಬನೆಯೂ ಇಂಥ ಒತ್ತಡವನ್ನು ಹುಟ್ಟುಹಾಕಬಹುದು. 

ಯಾರನ್ನು ಹೆಚ್ಚು ಕಾಡುತ್ತೆ?

ಹದಿಹರೆಯದವರಲ್ಲಿ, ವಿದ್ಯಾರ್ಥಿ ಸಮೂಹದಲ್ಲಿ ಮತ್ತು  30 ವರ್ಷದ ಒಳಗಿನವರಲ್ಲಿ ನೋಮೊಫೋಬಿಯಾ ವ್ಯಾಪಕವಾಗಿದೆ. 

ಏನೆಲ್ಲ ಸಮಸ್ಯೆಯಾಗಬಹುದು?

ಈ ಫೋಬಿಯಾ ಕೇವಲ ಭಾವಾನಾತ್ಮಕವಾಗಿ ತೊಂದರೆ ಉಂಟುಮಾಡುವುದಲ್ಲದೇ ದೈಹಿಕವಾಗಿಯೂ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡಬಹುದು. ನಡವಳಿಕೆಯಲ್ಲಿ ತೀವ್ರತರದ ಬದಲಾವಣೆಯಾಗಬಹುದು. 

*ಎಲ್ಲಿ ಕಳೆದು ಹೋಗುವುದೆಂಬ ಭಯಕ್ಕೆ ಸದಾ ಮೊಬೈಲ್‌ನೊಂದಿಗೆ ಇರಲು ಬಯಸುವುದು. ಎಲ್ಲೇ ಹೋಗಲಿ;  ಸ್ನಾನದ ಮನೆ, ಶೌಚಾಲಯ, ನಿದ್ರಾಕೋಣೆ ಹೀಗೆ ಎಲ್ಲ ಕಡೆಗಳಲ್ಲಿಯೂ ಮೊಬೈಲ್‌ ಅನ್ನು ತೆಗೆದುಕೊಂಡು ಹೋಗುವುದು. 

*ಅತಿ ಹೆಚ್ಚು ಸಮಯವನ್ನು ಮೊಬೈಲ್‌ ಬಳಕೆಯಲ್ಲಿ ವ್ಯರ್ಥ ಮಾಡುವುದು

* ಮೊಬೈಲ್‌ ಒಂದು ಕ್ಷಣ ಇಲ್ಲವೆಂದರೆ ಅಸಹಾಯಕ ಭಾವ ಆವರಿಸುವುದು.

ಈ ಫೋಬಿಯಾದಿಂದ ಉಂಟಾಗುವ ದೈಹಿಕ ಸಮಸ್ಯೆಗಳು

*ಎದೆಯ ಭಾಗದಲ್ಲಿ ಬಿಗಿತ ಉಂಟಾಗುವುದು.

*ಸಹಜ ಉಸಿರಾಟ ಕಷ್ಟ.

*ನಡುಕ

*ಬೆವರು ಬರುವುದು. 

*ಹೃದಯ ವೇಗವಾಗಿ ಹೊಡೆದುಕೊಳ್ಳುವುದು.

ಫೋಬಿಯಾದಿಂದ ಹೊರಗೆ ಬರೊದು ಹೇಗೆ?

ನೋಮೊಫೋಬಿಯಾವನ್ನು  ಮನೋರೋಗ ಅಂತ ಪರಿಗಣಿಸದೇ ಇದ್ದರೂ, ಈ ಫೋಬಿಯಾ ಮಾನಸಿಕವಾಗಿ ಘಾಸಿ ಮಾಡುತ್ತದೆ ಅನ್ನೊದರಲ್ಲಿ ಎರಡು ಮಾತಿಲ್ಲ. ಈ ಫೋಬಿಯಾಗೆ ತುತ್ತಾಗಿರುವವರಿಗೆ ಏಕಾಗ್ರತೆಯ ಕೊರತೆಯ ಜತೆಗೆ ಗುರಿಯ ಕಡೆಗೆ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಸಮರ್ಪಕ ಚಿಕಿತ್ಸೆಯ ಅಗತ್ಯವಿರುತ್ತದೆ. 

ಕಾಗ್ನಿನಿಟಿವ್‌ ಬಿಹೇವಿಯರಲ್‌ ಥೆರಫಿ (ಸಿಬಿಟಿ): ನಡವಳಿಕೆ ಬಗ್ಗೆ ಅರಿವು ಮೂಡಿಸುವ ಒಂದು ಥೆರಪಿ ಇದು.

ಉದಾಹರಣೆಗೆ; ಮೊಬೈಲ್‌ ಕಳೆದುಕೊಂಡರೆ, ನೆಚ್ಚಿನ ಗೆಳೆಯ ಹಾಗೂ ಗೆಳತಿಯ ಸಂಪರ್ಕ ಕಳೆದು ಹೋಗಬಹುದು ಎಂದು ಪದೇ ಪದೇ ನಕಾರಾತ್ಮಕ ಆಲೋಚನೆ  ಬರುತ್ತಿದ್ದರೆ, ಆಗ ಆತಂಕಕ್ಕೆ ಒಳಗಾಗುತ್ತಾರೆ. 

ಸಿಬಿಟಿ ಮೂಲಕ ಇಂಥ ನಕಾರಾತ್ಮಕ ಆಲೋಚನೆಯನ್ನು ವಾಸ್ತವದ ದೃಷ್ಟಿಕೋನದಲ್ಲಿ ತರ್ಕಕ್ಕೆ ಒಳಪಡಿಸುವುದು. 

ಫೋನ್‌ ಕಳೆದು ಹೋದರೆ ಏನಂತೆ; ತಾಂತ್ರಿಕ ಬ್ಯಾಕ್‌ ಅಪ್‌ನಿಂದಾಗಿ ಎಲ್ಲ ಸಂಪರ್ಕಗಳನ್ನು ಮರು ಹೊಂದಲು ಸಾಧ್ಯವಿದೆ ಎಂಬ ತರ್ಕದ ಮೂಲಕ ನಕಾರಾತ್ಮಕ ಆಲೋಚನೆಯನ್ನು ಹೊಡೆದೋಡಿಸುವುದು. ‌

ಸವಾಲು ಎದುರಿಸುವ ಥೆರಪಿ

ಸಾಮಾನ್ಯವಾಗಿ ಫೋಬಿಯಾಗಳೆಲ್ಲವೂ ಎಂದೋ ಏನೋ ಆಗಿ ಬಿಡುತ್ತದೆ ಎಂಬುದರ ಸುತ್ತವೇ ಸುತ್ತಿಕೊಂಡಿರುತ್ತವೆ. ಹಾಗಾಗಿ, ಮನಸ್ಸು ಹೆದರುವ ಸಮಸ್ಯೆಗೆ ಮುಖಾಮುಖಿಯಾಗಿಸುವ ಪ್ರಯತ್ನ ಮಾಡುವುದು. ಸವಾಲನ್ನು ಎದುರಿಸುವಂತೆ ಮನಸ್ಸನ್ನು ಸಿದ್ಧಗೊಳಿಸುವುದು. 

ಫೋನ್‌, ಹೊರಜಗತ್ತಿನ ಸಂಪರ್ಕ ಇವುಗಳು ಇಲ್ಲದೇ ಹೋದರೂ ಆತ್ಮವಿಶ್ವಾಸದಲ್ಲಿ ಬದುಕನ್ನು ರೂಪಿಸಿಕೊಳ್ಳಬಹುದು. ಎಲ್ಲದ್ದಕ್ಕೂ ದಾರಿ ಇದ್ದೇ ಇದೆ ಎಂಬುದನ್ನು ಮನಸ್ಸಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸುವುದೇ ಈ ಥೆರಪಿಯ ಉದ್ದೇಶ.  ಆಪ್ತಸಮಾಲೋಚನೆಯ ಮೂಲಕ ಈ ಥೆರಪಿಯನ್ನು ಸಾಧ್ಯವಾಗಿಸಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು