ಶನಿವಾರ, ಸೆಪ್ಟೆಂಬರ್ 18, 2021
27 °C

ಕೋವಿಡ್‌ ಪತ್ತೆಗೆ ಮಾಸ್ಕ್‌; 90 ನಿಮಿಷಗಳಲ್ಲಿ ಫಲಿತಾಂಶ

ಪಿಟಿಐ Updated:

ಅಕ್ಷರ ಗಾತ್ರ : | |

ಎಂಐಟಿ ಮತ್ತು ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿರುವ ಮಾಸ್ಕ್– ಚಿತ್ರ ಕೃಪೆ: ಎಂಐಟಿ ಟ್ವಿಟರ್‌ ಖಾತೆ

ಬಾಸ್ಟನ್‌: ಕೊರೊನಾ ವೈರಸ್‌ ಸೋಂಕು ತಗುಲಿರುವುದನ್ನು ಪತ್ತೆ ಮಾಡಲು, ಗಂಟಲು ದ್ರವ ಮಾದರಿ ಕೊಟ್ಟು ಆರ್‌ಟಿಪಿಸಿಆರ್‌ ಪರೀಕ್ಷೆ ವರದಿಗಾಗಿ ಇಡೀ ದಿನ ಕಾಯುವುದು ಬೇಕಿಲ್ಲ.... ಒಂದು ಮಾಸ್ಕ್‌ ಮತ್ತು 90 ನಿಮಿಷಗಳ ಸಮಯ ಇದ್ದರೆ ಸಾಕು, ನೀವು ಇರುವ ಕಡೆಯೇ ಕೋವಿಡ್‌–19 ಪರೀಕ್ಷೆ ಸಾಧ್ಯವಾಗಲಿದೆ.

ಎಂಐಟಿ ಮತ್ತು ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿರುವ ಸೆನ್ಸರ್‌ ಒಳಗೊಂಡ ಮುಖದ ಮಾಸ್ಕ್‌, 'ಸಾರ್ಸ್‌–ಕೋವ್‌–2' ವೈರಸ್‌ ಸೋಂಕು ಪತ್ತೆ ಮಾಡುತ್ತದೆ. ಒಮ್ಮೆ ಮಾತ್ರ ಬಳಸಬಹುದಾದ ಸೆನ್ಸರ್‌ಗಳನ್ನು ಯಾವುದೇ ಮಾಸ್ಕ್‌ಗೆ ಅಳವಡಿಸಬಹುದಾಗಿದೆ ಹಾಗೂ ಇತರೆ ವೈರಸ್‌ಗಳ ಪತ್ತೆಗೂ ಬಳಸಬಹುದಾಗಿದೆ. ನೇಚರ್‌ ಬಯೋಟೆಕ್ನಾಲಜಿ ಪತ್ರಿಕೆಯಲ್ಲಿ ಈ ಕುರಿತು ವಿವರ ಪ್ರಕಟಿಸಲಾಗಿದೆ.

ಮಾಸ್ಕ್‌ ಅಷ್ಟೇ ಅಲ್ಲದೆ, ಪ್ರಯೋಗಾಲಯಗಳಲ್ಲಿ ಬಳಸುವ ಕೋಟ್‌ಗಳಿಗೂ ಸೆನ್ಸರ್‌ಗಳನ್ನು ಅಳವಡಿಸಬಹುದಾಗಿದೆ. ಇದರಿಂದಾಗಿ ಆರೋಗ್ಯ ಕಾರ್ಯಕರ್ತರು ಹಲವು ರೀತಿಯ ವೈರಾಣುಗಳಿಗೆ ಎದುರಾಗಿರುವುದನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ.

'ಧರಿಸಬಹುದಾದ ಬಯೋಸೆನ್ಸರ್‌ಗಳಿಂದ ವೈರಸ್‌ ಅಥವಾ ಬ್ಯಾಕ್ಟೀರಿಯಾದ ನ್ಯೂಕ್ಲಿಕ್‌ ಆ್ಯಸಿಡ್‌ ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ಪತ್ತೆ ಮಾಡುವುದು ಸಾಧ್ಯವಾಗಲಿದೆ. ಆರೋಗ್ಯ ಕಾರ್ಯಕರ್ತರು, ಮಿಲಿಟರಿ ಸಿಬ್ಬಂದಿ ಹಾಗೂ ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಿಸುವ ಸಿಬ್ಬಂದಿಗೆ ಇದರಿಂದ ಅನುಕೂಲವಾಗಲಿದೆ' ಎಂದು ಎಂಐಟಿಯ ಪ್ರೊಫೆಸರ್‌ ಜೇಮ್ಸ್‌ ಕಾಲಿನ್ಸ್‌ ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌: ಕೋವಿಡ್‌ ಲಸಿಕೆ ಅಭಿಯಾನ ಸಂಪೂರ್ಣ ಯಶಸ್ವಿ, ಮಾಸ್ಕ್‌ಗೆ ವಿದಾಯ

ವೈರಸ್‌ ಪತ್ತೆ ಮಾಡುವ ಸೆನ್ಸರ್‌ ಉಪಕರಣಗಳನ್ನು ಸಿಲಿಕೋನ್‌ ಅಂಟು ಹಿಡಿದಿಟ್ಟಿರುತ್ತದೆ. ಮಾಸ್ಕ್‌ ಧರಿಸುವ ವ್ಯಕ್ತಿ ಪರೀಕ್ಷೆ ಆರಂಭಿಸಲು ಬಯಸಿದಾಗ, ಸೆನ್ಸರ್‌ ಕಾರ್ಯಾಚರಣೆಗೆ ಚಾಲನೆ ಕೊಡಬಹುದು. ಸಣ್ಣ ಪ್ರಮಾಣದಲ್ಲಿ ನೀರಿನ ಸಂಗ್ರಹ ಇರಲಿದ್ದು, ಒಂದು ಬಟನ್‌ ಒತ್ತುವ ಮೂಲಕ ಅದಕ್ಕೆ ಚಾಲನೆ ಸಿಗುತ್ತದೆ. ವ್ಯಕ್ತಿಯ ಉಸಿರಾಟದೊಂದಿಗೆ ಸುಳಿಯುವ ವೈರಸ್ ಕಣಗಳನ್ನು ಸೆನ್ಸರ್‌ ಪತ್ತೆ ಮಾಡುತ್ತದೆ ಹಾಗೂ 90 ನಿಮಿಷಗಳಲ್ಲಿ ಫಲಿತಾಂಶವು ಮಾಸ್ಕ್ ಧರಿಸುವ ವ್ಯಕ್ತಿಗೆ ತಿಳಿಯುತ್ತದೆ.

ಇನ್ನಷ್ಟು ಓದು...

Covid-19 Karnataka Update: 3,382 ಹೊಸ ಪ್ರಕರಣ, 111 ಮಂದಿ ಸೋಂಕಿತರು ಸಾವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು